ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಕಲಾ ಜಗತ್ತಿನಲ್ಲಿ...

ಕಲಾಪ
Last Updated 8 ಮೇ 2015, 19:30 IST
ಅಕ್ಷರ ಗಾತ್ರ

ವಿವಿಧ ವಯೋಮಾನದವರ ಕುಂಚದಲ್ಲಿ ಅರಳಿದ ವಿಭಿನ್ನ ಕಲಾಕೃತಿಗಳ ವಿಭಿನ್ನ ಲೋಕವೇ ಅಲ್ಲಿ ತೆರೆದುಕೊಂಡಿತ್ತು. ಪುಟ್ಟ ಹುಡುಗಿಯ ಕುಂಚದಲ್ಲಿ ದಾಸವಾಳ ಅರಳಿದರೆ, ಹಿರಿಯರೊಬ್ಬರ ಕೈಯಲ್ಲಿ ಚಿತ್ತಾರಗೊಂಡಿರುವ ತಾಯಿ ಮಗು... ಹೀಗೆ ಒಂದಕ್ಕಿಂದ ಒಂದು ಸುಂದರ ಚಿತ್ರಕಲೆಗಳಿಗೆ ಸಾಕ್ಷಿಯಾಗಿದ್ದು ನಗರದ ಚಿತ್ರಕಲಾ ಪರಿಷತ್ತು.

ಎಕೆಆರ್‌ ಕಲಾ ಶಾಲೆಯ ವತಿಯಿಂದ ಆಯೋಜಿಸಿದ್ದ ನಾಲ್ಕು ದಿನಗಳ ಕಲಾಪ್ರದರ್ಶನದಲ್ಲಿ ಒಟ್ಟು 12 ವಿದ್ಯಾರ್ಥಿಗಳ ಕಲಾಕೃತಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

‘ನಮ್ಮ ಶಾಲೆಯಲ್ಲಿ ಎಲ್ಲಾ ವಯೋಮಾನದವರು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಪ್ರತಿ ವರ್ಷ ಈ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಇಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ ಉತ್ತಮ ಅವಕಾಶ ದೊರಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರದರ್ಶನಕ್ಕೆ ಚಿತ್ರಕಲೆಗಳನ್ನು ನಾನೇ ಆಯ್ಕೆ ಮಾಡುತ್ತೇನೆ. ವಿಭಿನ್ನತೆ ಮತ್ತು ನಾವೀನ್ಯದ ಆಧಾರದ ಮೇಲೆ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಆಯ್ದುಕೊಳ್ಳಲಾಗುತ್ತದೆ’ ಎಂದು ಎಕೆಆರ್‌ ಕಲಾ ಶಾಲೆಯ ಸಂಸ್ಥಾಪಕ ಅಶೋಕ್‌ ಕುಮಾರ್‌ ಆರ್‌. ಹೇಳಿದರು.

‘ಚಿತ್ರಕಲೆ ನನ್ನ ಹವ್ಯಾಸ. ಚಿಕ್ಕವಳಿದ್ದಾಗಿನಿಂದ ನಾನು ಐದನೇ ತರಗತಿಯಿಂದಲೇ  ಚಿತ್ರಕಲೆಯನ್ನು ಪ್ರಾರಂಭಿಸಿದೆ. ಅಬ್‌ಸ್ಟ್ರಾಕ್ಟ್‌ (ಅಮೂರ್ತ) ಅಂತ ವಿಭಿನ್ನ ವಿಷಯ ದೊರಕಿತು. ಅದರಲ್ಲೇ ಏನಾದರೂ ಸಾಧಿಸುವ ಬಯಕೆಯಿಂದ ಚಿತ್ರಕಲೆ ಅಭ್ಯಾಸದಲ್ಲಿ ತೊಡಗಿದ್ದೇನೆ. ಇದು ನನ್ನ ಮೊದಲ ಪ್ರದರ್ಶನ. ಹೇಗೆ ರಚಿಸಿದ್ದೀರಿ, ಏನೆಲ್ಲ ಬಳಸಿದ್ದೀರಿ? ಎಂದು ಎಲ್ಲರೂ ನನ್ನ ಕಲೆ ಬಗ್ಗೆ ಕುತೂಹಲದಿಂದ ಕೇಳುತ್ತಿದ್ದಾರೆ. ಇದರಿಂದ ನನಗೆ ಖುಷಿಯಾಗುತ್ತಿದೆ. ಕಲಾ ಜಗತ್ತಿನೊಂದಿಗೆ ಗುರುತಿಸಿಕೊಳ್ಳಲು ಇದು ಸಹಾಯವಾಗಿದೆ. ಹವ್ಯಾಸವಾಗಿದ್ದ ಚಿತ್ರಕಲೆಯನ್ನು ಈಗ ವೃತ್ತಿಯಾಗಿಸಿಕೊಳ್ಳಲು ಯೋಚಿಸುತ್ತಿದ್ದೇನೆ’ ಎಂದು ಪ್ರದರ್ಶನಲ್ಲಿ ಭಾಗವಹಿಸಿರುವ ರತಿ ಪಟಂಗ್ಯಾ ಅವರು ತನ್ನ ಪ್ರದರ್ಶನದ ಅನುಭವವನ್ನು ವಿವರಿಸಿದರು.

‘ನನ್ನದು ನಾಲ್ಕು ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಾನು ಫ್ಯಾಷನ್‌ ಡಿಸೈನಿಂಗ್‌ ಕಲಿಸುತ್ತಿದ್ದೇನೆ. ನನ್ನ ವೃತ್ತಿಗೆ ಚಿತ್ರಕಲೆ ಸಹಾಯವಾಗುತ್ತದೆ ಎಂದು ಮೂರು ವರ್ಷದಿಂದ ಚಿತ್ರಕಲೆ ಕಲಿಯುತ್ತಿದ್ದೇನೆ. ಇದಕ್ಕೂ ಮೊದಲು ನನ್ನ ಚಿತ್ರಕಲೆಯೊಂದು ಪ್ರದರ್ಶನಗೊಂಡಿತ್ತು. ಈ ಶಾಲೆಯಿಂದ ಇದು ನನ್ನ ಮೊದಲ ಪ್ರದರ್ಶನ’ ಎಂದು ನಾಗದಿವ್ಯಾ ಪಚ್ಚಿಪುಲುಸು ಅಭಿವ್ಯಕ್ತಿಸಿದರು.

‘ಡೆಲ್ಲಿ ಪಬ್ಲಿಕ್‌ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದೇನೆ. ಚಿತ್ರಕಲೆ ನನ್ನ ಹವ್ಯಾಸ. ಇದು ನನ್ನ ಮೊದಲ ಪ್ರದರ್ಶನ ಬಹಳ ಸಂತೋಷವಾಗುತ್ತಿದೆ. ನಾನು ಜಲವರ್ಣದಿಂದ ಬಿಡಿಸಿರುವ ದಾಸವಾಳದ ಚಿತ್ರ ಇಲ್ಲಿ ಪ್ರದರ್ಶನಗೊಂಡಿದೆ’ ಎಂದು ಖುಷಿಯಿಂದ ತಮ್ಮ ಕಲಾಕೃತಿಯನ್ನು ತೋರುತ್ತಾರೆ ಮೃದುಪ್ರಶಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT