ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ.ಗಳಲ್ಲಿ ಸಂಶೋಧನೆ ಗುಣಮಟ್ಟ ಕುಸಿತ

ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅಭಿಮತ
Last Updated 4 ಫೆಬ್ರುವರಿ 2015, 7:04 IST
ಅಕ್ಷರ ಗಾತ್ರ

ಸಾಗರ: ‘ವಿಶ್ವವಿದ್ಯಾಲಯಗಳಲ್ಲಿನ ಯಜಮಾನಿಕೆ ಸಂಸ್ಕೃತಿ, ಆಧಾರ ಬದ್ಧತೆಯ ಹಾಗೂ ಜನತಾಂತ್ರಿಕ ಮೌಲ್ಯಗಳ ಕೊರತೆಯಿಂದಾಗಿ ಅಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟದಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ’ ಎಂದು ಕುವೆಂಪು ವಿ.ವಿ. ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ್ ಸ್ನಾತಕೋತ್ತರ ವಿಭಾಗ ಮಂಗಳವಾರ ಏರ್ಪಡಿಸಿದ್ದ ‘ಸಂಶೋಧನೆಯ ಅನುಸಂಧಾನ ಮತ್ತು ಸಂಶೋಧನೆಯ ವಿಧಾನಗಳು’   ವಿಷಯದ ಕುರಿತ ವಿಚಾರ ಸಂಕಿರಣ  ಉದ್ಘಾಟಿಸಿ ಅವರು ಆಶಯ ಭಾಷಣ ಮಾಡಿದರು.

‘ಸಂಶೋಧನೆ ಎಂದರೆ ವಿಸ್ತೃತವಾದ ಓದು ಮತ್ತು ವಿಷಯದ ವಿಶ್ಲೇಷಣೆ ಎಂದರ್ಥ. ಓದಿನೊಂದಿಗೆ ಪಠ್ಯದ ಜೊತೆ ಮುಖಾಮುಖಿಯಾದಾಗ ಮಾತ್ರ ಸಂಶೋಧನೆಗೆ ದಾರಿ ದೊರಕುತ್ತದೆ. ಕಲಿಕೆ, ಬೋಧನೆಯ ಮುಂದುವರಿಕೆಯ ಮತ್ತು ಪೂರಕವಾದ ಭಾಗ ಸಂಶೋಧನೆ’ ಎಂದು ವ್ಯಾಖ್ಯಾನಿಸಿದರು.

ಶಿಕ್ಷಣದ ನಿಜವಾದ ಉದ್ದೇಶ ಜ್ಞಾನದ ಪುನರ್‌ರಚನೆಯೆ ಹೊರತು ಜ್ಞಾನವನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವುದಲ್ಲ. ಸಂಶೋಧನೆ ಯಿಂದ ಜ್ಞಾನದ ವಿಸ್ತರಣೆ, ಕಲಿಕೆಯಲ್ಲಿ ಸ್ವಾಯತ್ತತೆ, ಚಿಂತನೆಯಲ್ಲಿ ಸ್ವತಂತ್ರತೆ, ಹೊಸ ದೃಷ್ಟಿಕೋನ ಮೂಡುವ ಅವಕಾಶ ಇರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿ ಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗುವುದರಿಂದ ಅವರ ‘ಸ್ವಂತಿಕೆ’ ಪ್ರದರ್ಶನಕ್ಕೆ ಅವಕಾಶ ಕಡಿಮೆ ಆಗುತ್ತದೆ. ಅದನ್ನು ಬಿಟ್ಟು ಸಂಶೋಧನೆ ಕಡೆ ಹೊರಳಿದಾಗ ಪಠ್ಯಕ್ಕೆ ಇರುವ ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ರೀತಿಯ ಆಯಾಮಗಳ ಪರಿಚಯ ಅವರಿಗೆ ಆಗುತ್ತದೆ. ಇದರಿಂದ ಓದಿನ ಖುಷಿ ಇಮ್ಮಡಿಗೊಳ್ಳುವ ಜೊತೆಗೆ ಓದಿನ ಮಿತಿಯನ್ನು ಕೂಡ ವಿದ್ಯಾರ್ಥಿಗಳು ದಾಟಲು ಸಾಧ್ಯ ಎಂದು ವಿಶ್ಲೇಷಿಸಿದರು.

ಸಂಶೋಧನೆಯ ಸಂದರ್ಭದಲ್ಲಿ ಯಾವುದೇ ಒಂದು ಸಿದ್ಧಾಂತಕ್ಕೆ ಕಟ್ಟುಬೀಳುವುದು ಅನಿವಾರ್ಯವೇನಲ್ಲ. ಸಿದ್ಧಾಂತದ ನೆರಳಿನಲ್ಲಿ ಸಾಗಿದರೆ ಸಂಶೋಧನೆ ಸಿದ್ಧ ಮಾದರಿಯ ಚೌಕಟ್ಟಿಗೆ ಸಿಲುಕುವ ಅಪಾಯ ವಿರುತ್ತದೆ. ಈ ಕಾರಣದಿಂದಲೇ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯು ತ್ತಿರುವ ಅನೇಕ ಸಂಶೋಧನೆಗಳು ಒಂದರ ನಕಲಿನಂತೆ ಮತ್ತೊಂದು ಕಾಣುತ್ತಿವೆ ಎಂದು ಅಭಿಪ್ರಾಯಪಟ್ಟರು.

ಸಂಶೋಧನೆಗೆ ಸಂಬಂಧಿಸಿದ ವಸ್ತುಗಳ ಆಯ್ಕೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸ್ಪಷ್ಟತೆ ಮತ್ತು ಎಚ್ಚರ ಇರಬೇಕು. ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯವೇ ಅವರ ಆಯ್ಕೆ ಆಗಬೇಕಿಲ್ಲ.

ಸಿನಿಮಾ, ಸಾಕ್ಷ್ಯಚಿತ್ರ, ಜಾಹಿರಾತು, ಚಳವಳಿ ಹೀಗೆ ಪಠ್ಯಕ್ಕೆ ಪೂರಕವಾದ ಮತ್ತು ಸಾಮಾಜಿಕ ಉಪಯುಕ್ತತೆ ಇರುವ ಹತ್ತು ಹಲವು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಸಂಶೋಧನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ಷೇತ್ರಕಾರ್ಯದ ಬಗ್ಗೆ ಅತ್ಯುತ್ಸಾಹ ತೋರುತ್ತಾರೆ. ಆದರೆ, ಅದಕ್ಕೂ ಮುನ್ನ ಅಗತ್ಯವಾದ ಪೂರ್ವ ತಯಾರಿ ಇಲ್ಲದೆ ಇದ್ದರೆ ಕ್ಷೇತ್ರ ಕಾರ್ಯ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಸ್.ಶಿವೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ.ಮೇಟಿ ಮಲ್ಲಿಕಾರ್ಜುನ, ಬಿ.ಆರ್.ವಿಜಯ ವಾಮನ್‌, ಡಾ.ಕೆ.ಪ್ರಭಾಕರ್‌ರಾವ್, ರಾಜು.ಬಿ.ಎಲ್. ಹಾಜರಿದ್ದರು. ಚಂದ್ರಕಲಾ.ವೈ. ಪ್ರಾರ್ಥಿಸಿದರು. ಪ್ರೊ.ಅಮರ್‌ನಾಥ್.ಎಚ್.ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮಿತಾ.ಎಸ್. ವಂದಿಸಿದರು. ರೀಟಾ ಧವಳೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT