ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದಿಕ ವಿರೋಧಿ ನಿಲುವೇ ವಚನಕಾರರ ಮೂಲ ಗುರಿ

Last Updated 25 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಬ್ರಾಹ್ಮಣ ವಿರೋಧಿ ಚಳವಳಿ ಕುರಿತು ವಚನಗಳಲ್ಲಿ ಸರಿಯಾದ ಅಭಿವ್ಯಕ್ತಿಯೇ ಇಲ್ಲವೆನ್ನುವುದಾದರೆ ವಚನ ಚಳವಳಿಯಾದರೂ ಹುಟ್ಟಿಕೊಂಡಿದ್ದೇಕೋ? ಮಾನ್ಯ ಝಳಕಿ ಹಾಗೂ ಬಾಲಗಂಗಾಧರರು ತಮ್ಮ ವಾದಕ್ಕೆ ಬೇಕಾದ ವಚನಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ವಿಶ್ಲೇಷಿಸಲು ಹೊರಟಿದ್ದರ ಹಿನ್ನೆಲೆ ಏನಿರಬಹುದು? ಯಾರನ್ನೋ ಸಂತೈಸಲು ಶರಣರ ಮೂಲ ಆಶಯಕ್ಕೇ ಕೊಡಲಿ ಏಟು ಹಾಕ ಹೊರಟಿದ್ದು ಹುನ್ನಾರವೋ, ಸನಾತನಿಗಳ ಮೇಲಿನ ವ್ಯಾಮೋಹವೋ, ಆ ಕಾಲದ ದಲಿತ ಚಳವಳಿಗಾರರ ಮೂಲಭೂತವಾದವನ್ನೇ ಹುಸಿಗೊಳಿಸುವ ಸನ್ನಾಹವೋ ಅಥವಾ ಇವೆಲ್ಲವೋ ಚರ್ಚಿಸಿ ಖಂಡಿಸಲೇಬೇಕಿದೆ.

ವೈದಿಕ ಧರ್ಮದ ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಮಾನವೀಯ ಮಡಿ ಮೈಲಿಗೆಗಳನ್ನು ವಿರೋಧಿಸಿಯೇ ಅಲ್ಲವೆ ಬೌದ್ಧಧರ್ಮ ಹುಟ್ಟಿಕೊಂಡಿದ್ದು. ನಂತರ ಹುಟ್ಟಿ ಬಂದ ಜೈನಧರ್ಮ ಕೂಡ ಹುಟ್ಟಿದ್ದೇ ವೈದಿಕ ಧರ್ಮವನ್ನು ವಿರೋಧಿಸಿ. ಆದರೆ, ತನ್ನ ವಿಪರೀತ ಅಹಿಂಸಾ ಪ್ರತಿಪಾದನೆ ಮೂಢನಂಬಿಕೆಗಳಿಂದ ಸರ್ವರನ್ನೂ ಆಕರ್ಷಿಸದಾಯಿತು. ಮಧ್ಯೆ ಬಂದ ಚಾರ್ವಾಕ ಧರ್ಮ ಸ್ವಚ್ಛಂದ ಜೀವನವೇ ಮುಕ್ತಿ ಮಾರ್ಗವೆಂದು ಇಂದಿನ ಬುದ್ಧಿಜೀವಿಗಳಂತೆ ಸೆಡ್ಡು ಹೊಡೆಯಿತಾದರೂ ಸೋತಿತು. ವೀರಶೈವ ಧರ್ಮವಾದರೂ ಹುಟ್ಟಿದ್ದೇಕೆ? ವೈದಿಕ ಧರ್ಮವನ್ನು ಅದರ ಪೊಳ್ಳುತನ ಡಾಂಭಿಕತೆ ಜಾತೀಯತೆಯನ್ನು ನಾಶಮಾಡಲೆಂದೇ ಹೊರತು ರಾಜಿ ಮಾಡಿಕೊಳ್ಳುವುದಕ್ಕಲ್ಲವೆಂಬುದಕ್ಕೆ ವಚನಗಳಿಗಿಂತ ಆಧಾರ ಬೇಕೆ?

ಹುಟ್ಟಿನಿಂದ ಬ್ರಾಹ್ಮಣನಾದ ಬಸವಣ್ಣ ತನ್ನ ಜನರ ಜಾತೀಯತೆಯಿಂದ ಬೇಸತ್ತು, ಅಸ್ಪೃಶ್ಯ ಆಚರಣೆಗೆ ಅಸಹ್ಯಿಸಿ ಡಾಂಭಿಕತೆಗೆ ವ್ಯಥಿಸಿ ಜನಿವಾರ ಕಿತ್ತೆಸೆದು ಸರ್ವಸಮಾನತೆಯ ಶಿವದಾರವನ್ನು ಸರ್ವರಿಗೂ ಹಾಕಿ ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರನ್ನು `ಇಂವಾ ನಮ್ಮವ ಇಂವಾ ನಮ್ಮವ' ಎಂದು ತಬ್ಬಿ ಮೈದಡವಿ ಮುಟ್ಟಿ ಸಂತೈಸಿ ಸಮಾನತೆಯನ್ನು ಸಹಬಾಳ್ವೆಯಲ್ಲಿ ತರಲು 12ನೇ ಶತಮಾನದಲ್ಲೇ ಯತ್ನಿಸಿದ್ದಲ್ಲದೇ, `ಅನುಭವ ಮಂಟಪ'ವನ್ನೇ ಕಟ್ಟಿ ಅದರಲ್ಲಿ ದಲಿತರು ಶೂದ್ರರು ಮಹಿಳೆಯರನ್ನು ಒಗ್ಗೂಡಿಸಿ ಅವರಿಗೆ ಅರಿವು ನೀಡುತ್ತಲೇ `ಕುಳಿತುಣ್ಣದೆ ಕಾಯಕ ಮಾಡಿ ಉಣ್ಣೆಂದು, ಯಾರೂ ಮೇಲಲ್ಲ ಕೀಳಲ್ಲ'ವೆಂದು ಪ್ರತಿಪಾದಿಸಿದ. ಇತರ ಶರಣ ಶರಣೆಯರಿಂದಲೂ ಖಡಕ್ಕಾದ ವಚನಗಳನ್ನು ಬರೆಸಿದ ಮಹಾನುಭಾವ.

ಇಷ್ಟೆಲ್ಲಾ ಇರುವಾಗ ವೀರಶೈವ ಚಳವಳಿಯನ್ನೇ ಅಳ್ಳಕಗೊಳಿಸಲು ಹೊರಟಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ದಲಿತ, ಶೂದ್ರರ ಮೇಲೆ ಅಥವಾ ಅವರಿಗೆ ದೊರಕುತ್ತಿರುವ ಮೀಸಲಾತಿಯ ಮೇಲಿನ ಪ್ರಹಾರಕ್ಕೆ ಪೂರ್ವಸಿದ್ಧತೆಯಂತೆ ಭಾಸವಾಗುತ್ತಿದೆ. ಸ್ಪಷ್ಟವಾಗಿ ವಚನಗಳ ಮೂಲಕ, ತಮ್ಮ ನೇರ ನಡವಳಿಕೆಗಳ ಮೂಲಕ ಶರಣರು ನಿರ್ದಾಕ್ಷಿಣ್ಯವಾಗಿಯೇ ಬ್ರಾಹ್ಮಣ್ಯವನ್ನು ವಿರೋಧಿಸಿರುವುದನ್ನು ಕೇವಲ ವಚನಗಳ ಅಂಕೆಸಂಖ್ಯೆಗಳ ಮೂಲಕ ಅಲ್ಲಗಳೆಯಲು ಹೊರಟಿರುವುದು ಅಪಕ್ವತೆಯೋ ಜ್ಞಾನದ ಕೊರತೆಯೋ ಯಾರನ್ನೋ ಓಲೈಸಬೇಕೆಂಬ ಹೊಯ್ದೊಟವೋ ಎಂಬ ಜಿಜ್ಞಾಸೆ ಕಾಡದಿರದು.

`ನೀರ ಕಂಡಲ್ಲಿ ಮುಳುಗುವರಯ್ಯ / ಮರ ಕಂಡಲ್ಲಿ ಸುತ್ತುವರಯ್ಯ / ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು / ನಿನ್ನನೆತ್ತಬಲ್ಲರು ಕೂಡಲ ಸಂಗಮದೇವ'ನೆಂದು ಬಸವಣ್ಣ ಮಾರ್ಮಿಕವಾಗಿ ತನ್ನ ಪೂರ್ವಾಶ್ರಮದ ಕುಲಜರನ್ನೇ ಕೀಟಲೆ ಮಾಡಿಲ್ಲವೆ?  `ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಬಡವನು / ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ'ವೆಂಬ ಆತನ ಮಾತಲ್ಲಿ ಗುಡಿ ಸಂಸ್ಕೃತಿಯ ಬಗ್ಗೆ ವಿರೋಧವಿಲ್ಲವೆ? ಅಷ್ಟೇಕೆ `ವೇದಕ್ಕೆ ಬರೆಯ ಕಟ್ಟುವೆ / ಶಾಸ್ತ್ರಕ್ಕೆ ನಿಗಳವನಿಕ್ಕುವೆ / ತರ್ಕದ ಬೆನ್ನ ಬಾರನೆತ್ತುವ ಆಗಮದ ಮೂಗ ಕೊಯ್ಯುವೆ ನೋಡಯ್ಯೊ' ಎನ್ನುವ ಬಸವಣ್ಣ ಬ್ರಾಹ್ಮಣರ ಮೂಲಭೂತ ಸರಕ್ಕನ್ನೇ ನೇರವಾಗಿ ಲೇವಡಿ ಮಾಡಿಲ್ಲವೆ? ` ವೇದ ಶಾಸ್ತ್ರ ಪುರಾಣಗಳೆಂಬ ಕೊಟ್ಟಣ ಕುಟ್ಟುತ್ತಾ ನುಚ್ಚು ತೌಡು ಕಾಣಿರೋ' ಎಂದು ಅವುಗಳ ನಿರರ್ಥಕತೆಯನ್ನು ಅಕ್ಕ ಘೋಷಿಸಿದ್ದಾಳೆ.

`ವೇದವನೋದಿದರೇನು, ಶಾಸ್ತ್ರವ ಕೇಳಿದರೇನು' ಎಂಬುದೇ ವಚನಕಾರರ ಮುಖ್ಯ ಧೋರಣೆಯಾಗಿತ್ತು. ವೇದೋಕ್ತವಾದ ಸನಾತನ ಧರ್ಮ ತನ್ನ ವರ್ಣ ವ್ಯವಸ್ಥೆಯಿಂದ ವ್ಯಕ್ತಿಗಳಲ್ಲಿ ಶ್ರೇಷ್ಠ ಕನಿಷ್ಠರೆಂಬ ತಾರತಮ್ಯವನ್ನು ಕಲ್ಪಿಸುತ್ತಾ ಯಜ್ಞಯಾಗಾದಿಗಳಿಂದ ಪ್ರಾಣಿವಧೆಯನ್ನು ಸಮರ್ಥಿಸುತ್ತಾ `ಸರ್ವಂ ಖಲಿಧ್ವಂ ಬ್ರಹ್ಮಾ' ಎಂದು ಉದ್ಘೋಷಿಸಿರುವುದು ವಚನಕಾರರಿಗೆ ವಿಲಕ್ಷಣವೆನ್ನಿಸಿರಬಹುದು. ಇನ್ನು ಅಂಬಿಗರ ಚೌಡಯ್ಯ ದೇವಸ್ಥಾನಕ್ಕೆ ಹೋಗುವವರನ್ನು ಕುರಿತು, `ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆಯಡಿಯಾಗಿ ಬೀಳುವ ಲೊಟ್ಟೆ ಮೂಗನ ಕಂಡರೆ ಮೆಟ್ಟಿದ ಎಡಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆ' ಎನ್ನುತ್ತಾನೆ.

`ಗುಡಿ ಸಂಸ್ಕೃತಿ'ಯನ್ನು ಬಸವಣ್ಣ ಮತ್ತು ಚೌಡಯ್ಯ ಖಂಡಿಸಿರುವ ಪರಿಯಲ್ಲೇ ಪೆಟ್ಟು ತಿಂದ ಶೂದ್ರನಿಗಿರಬೇಕಾದ ರೋಷ ಕಾಣುತ್ತದಲ್ಲವೆ?  ಹಿಂದೆಲ್ಲಾ ವೃತ್ತಿಯಿಂದಲೇ ಅವರ ಜಾತಿಯನ್ನು ಗುರುತಿಸಿ ಕೀಳಾಗಿ ಕಾಣುವ ಪ್ರವೃತ್ತಿ ಬೆಳದಿದ್ದರಿಂದ ಶರಣರು ಅದಕ್ಕೆ `ಕಾಯಕ'ವೆಂದು ಕರೆದು `ಕಾಯಕವೇ ಕೈಲಾಸ'ವೆಂದು ಗೌರವಿಸಿ ಕಾಯಕದಿಂದ ಸರ್ವರನ್ನೂ ಗುರುತಿಸಿ ಜಾತಿಯನ್ನು ತೊಳೆದ ಪರಿ ಅನನ್ಯ.

`ಏನನರಿತು ನುಡಿದಡೂ ಕುಲಛಲ ಮಲಂ ನಾಸ್ತಿಯಾಗಿರಬೇಕು' ಅನ್ನುತ್ತಾನೆ ಅರಿವಿನ ಮಾರಿತಂದೆ. ` ಕಲ್ಲಮನೆಯಡಿ ಕಲ್ಲದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ?' - ಹೀಗೆ ದೇವರ ಗುಡಿಯ ಸ್ಥಾವರಲಿಂಗದ ಭಂಗುರವನ್ನು ತೋರಿಸಿ ನಗುವ ಅಲ್ಲಮನನ್ನೇ ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಕೂರಿಸಿದ ಬಸವಣ್ಣ ಹಾಗೂ ಇತರ ಶರಣರು ಅಸ್ಪೃಶ್ಯನೊಬ್ಬನನ್ನು ಗೌರವಿಸಿ ಮೇಲುಜಾತಿ ಡಾಂಭಿಕರನ್ನು ಕೆಣಕಿ ಅಣಕಿಸಿದ್ದಾರಲ್ಲವೆ? `ನೆಲವೊಂದೇ ಹೊಲಗೇರಿ, ಶಿವಾಲಯಕ್ಕೆ, ಜಲವೊಂದೇ ಶೌಚಾಚಮನಕ್ಕೆ.  ಕುಲವೊಂದೇ ತನ್ನತಾನರಿದವಂಗೆ' ಎನ್ನುವ ಬಸವಣ್ಣನಿಗೆಲ್ಲಿಯ ಬ್ರಾಹ್ಮಣ್ಯದ ದಾಕ್ಷಿಣ್ಯ!

ಡಂಕನ್ ಝಳಕಿ, ಎನ್.ಎಸ್. ಬಾಲಗಂಗಾಧರರೇಕೆ ಪೂರ್ವಗ್ರಹ ಪೀಡಿತರಾದರೋ?  ಬಸವಣ್ಣನವರು ಬ್ರಾಹ್ಮಣರ ಗೋತ್ರಗಳನ್ನೇ ಮುಲಾಜಿಲ್ಲದೆ ಹೇಳುತ್ತಾ ಅವರೆಲ್ಲರೂ ಶೂದ್ರ ಸಂಜಾತರೆಂಬುದನ್ನು ಹೇಗೆ ಪಟ್ಟಿ ಮಾಡುತ್ತಾರೆ ವೀಕ್ಷಿಸಿ: `ವಸಿಷ್ಠ ದಾಸಿಯ ಮಗ ಮಾರ್ಕಂಡೇಯ ಮಾತಂಗಿಯ ಮಗ ದುರ್ವಾಸ ಚಮ್ಮೋರ ಕಶ್ಯಪ ಕಮ್ಮೋರ ಕೌಂಡಿಣ್ಯ ಕಾರಿಕ ವಿಶ್ವಾಮಿತ್ರ ಕ್ಷತ್ರಿಯ'. ಕೀಳು ಕುಲವಾದರೇನು ತಮ್ಮ ಯೋಗ್ಯತೆಯಿಂದ ಲೋಕವಂದಿತರಾಗಲಿಲ್ಲವೆ ಎಂಬ ಮಾರ್ಮಿಕ ಧ್ವನಿ ಇಲ್ಲಿದೆಯಲ್ಲವೆ? ಹಾಗೆ `ಕಾಸಿ ಕಮ್ಮೋರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ ವೇದವನೋದಿ ಬ್ರಾಹ್ಮಣನಾದ, ಲಿಂಗಸ್ಥಲನರಿದವನೇ ಕುಲಜನೆಂಬೋ' ಎಂಬ ಬಸವಣ್ಣನ ವಿಚಾರವಾದದೆದುರು ಮೇಲುಕೀಳು ನಿಲ್ಲುವುದೇ ಇಲ್ಲ.

`ಕೊಲುವವನೆ ಮಾದಿಗ ಹೊಲಸು ತಿಂಬುವವನೇ ಹೊಲೆಯ'  ನೆಂಬ ಅಣ್ಣನ ಆಂತರ್ಯದಲ್ಲಿ `ಹಿಂಸಿಸುವನೇ ಮಾದಿಗ, ಮಾನಸಿಕವಾಗಿ ಹಿಂಸೆಗೀಡುಮಾಡುವವನೇ (ಜಾತಿವಾದಿ) ಹೊಲೆಯ'ನೆಂಬ ಪ್ರತಿಧ್ವನಿ ಕೇಳುವುದಿಲ್ಲವೆ?' ಕುಲವೇನೋ ಆವಂದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನು ಬಯಸುವವನೇ ಕುಲಜ' ನೆಂಬ ಆತ ಅಂದು ತಾವೇ ಮೇಲೆಂದು ಬೊಬ್ಬೆಯಿಡುತ್ತಿದ್ದ ಮನುಧರ್ಮಿಗಳ ಅಟ್ಟಹಾಸವನ್ನು ಮಟ್ಟ ಹಾಕದೆ ಬಿಟ್ಟವನೇ ಅಲ್ಲ. ಆದರೇನು ಎಲ್ಲಾ ಧರ್ಮಗಳನ್ನು ಕಾಲಕ್ರಮೇಣ ಜಾತಿಗಳನ್ನಾಗಿ ಮಾರ್ಪಡಿಸಿಕೊಂಡ ಪಾಪಿಗಳಾದ ನಾವು, ವೀರಶೈವ ಧರ್ಮವನ್ನು ಜಾತಿಯೆಂದೇ ಪರಿಗಣಿಸಿ ಅವನಿಗೇ ದೇವಾಲಯ ಕಟ್ಟಿ ಕೂರಿಸಿ ಅವನ ವಚನವನ್ನು ಹಾಡುತ್ತಾ ಅವನನ್ನೇ ಮರೆತವರು ನಾವು.

ಈವತ್ತೇನಾಗಿದೆ, ಜಾಗತೀಕರಣದಲ್ಲಿ ಮನುಷ್ಯ ಮತ್ತು ಯಂತ್ರ ಬಿಟ್ಟರೆ ಮತ್ತೇನಿದೆ?ಇಲ್ಲಿ ಜೀವ ಪ್ರೀತಿ ಗೌಣ.  ಹಳೆಮಂದಿ ಅವಿಭಕ್ತತೆಗೆ ಇಂಬುಕೊಟ್ಟರೆ ವಿಭಕ್ತತೆಗೆ ಒತ್ತು ಕೊಡುವುದು ಜಾಗತೀಕರಣ. ಒಂದೇ ಕಂಪೆನಿಯಲ್ಲಿ ಗಂಡ ಹೆಂಡತಿ ಮಗ ಮಗಳು ಅಳಿಯ ದುಡಿಯುತ್ತಿದ್ದು ಅವರೆಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತೇವೆಂದರೆ ಅದಕ್ಕೂ ಹೌಸ್‌ರೆಂಟ್ ಅಲೋಯೆನ್ಸ್ ಕೊಡುತ್ತೇವೆ ಎಂಬ ಕಂಪೆನಿಗಳಿವೆ. ಜಾಗತೀಕರಣದ್ದು ಬೆಂಕಿಯ ಬೆಳಕು.  ಅಂದರೆ ಅಲ್ಲಿ ಬೆಳಕೂ ಇಲ್ಲ.  ಬರೀ ಸುಡುವ ಗುಣ.  ಐಟಿಬಿಟಿಯವರು ದವಸಧಾನ್ಯ ಬೆಳೆಯಲುಂಟೆ?  ನಾವೀಗ ಬೆಟ್ಟಗುಡ್ಡ ನದಿನೆಲ ಅರಣ್ಯ ಎಲ್ಲವನ್ನೂ ಅಗೆದು ಬಗೆದು ಕಡಿದು ಮಾರಿಕೊಳ್ಳುತ್ತಿದ್ದೇವೆ.  ನಾಡು ನುಡಿ ನೆಲ ಜಲ ಧರ್ಮ ಭಾಷೆಯ ಬಗ್ಗೆ ನಿರ್ಮೋಹಿಗಳಾಗುತ್ತಿದ್ದೇವೆ. ಆದರೆ ಶರಣರು ಇಂತಹ ಧರ್ಮಲಂಡರ, ಭಂಡರ ದಾರಿ ತುಳಿದವರಲ್ಲವೇ ಅಲ್ಲ.  ದುಡಿದುಣ್ಣಬೇಕೆಂದರು. ಸಹಬಾಳ್ವೆಗೆ ಒತ್ತುಕೊಟ್ಟರು. ಪರಸತಿ ಪರಧನವ ಒಲ್ಲೆನೆಂದರು.

ಜಗತ್ತಿನ ಪ್ರವಾದಿಗಳಲ್ಲೆೀ ಬಸವಣ್ಣನವರಿಗೆ ಪರಮೋಚ್ಚ ಸ್ಥಾನ ಇದೆ.  ಅವರು ನಿರ್ಮಿಸಿದ ಸಮಾಜದಲ್ಲಿ ಹಾರವರೂ ಇರಲಿಲ್ಲ,  ಸ್ವಪಚರೂ ಇರಲಿಲ್ಲವೆಂದಾಗ 850 ವರ್ಷಗಳ ಹಿಂದೆಯೇ ಬ್ರಾಹ್ಮಣರನ್ನು ಬಸವಣ್ಣ ಅಥವ ವಚನಕಾರರು ವಿರೋಧಿಸಲೇ ಇಲ್ಲವೆಂಬುದು ಹಾಸ್ಯಾಸ್ಪದವಲ್ಲವೆ?  `ಹೊಲೆಯ ಹೊಲಬಿಗನಾದೊಡೆ ಅವನ ಹೊರೆಯಲ್ಲಿಪ್ಪುದು ಲೇಸು ಕಂಡಯ್ಯ' ಎಂಬ ಅಣ್ಣ ಬದುಕಿದ ದಾರಿ ತೋರುವ ಶಕ್ತಿ ಅಸ್ಪೃಶ್ಯನಿಗಿದ್ದಾಗ ಅವನ ಜೊತೆಗಿರಬೇಕೆನ್ನುತ್ತಾರೆ. ಎಂತಹ ಉದಾತ್ತ ಭಾವ!  ವರ್ಣಸಂಕರ ವಿವಾಹಕ್ಕೆ ಎಡೆಕೊಟ್ಟ ಬಸವಣ್ಣನವರನ್ನು ನಾವು ಅಂದೇ ಅನುಸರಿಸಿ ಅಂತರ್ಜಾತೀಯ ವಿವಾಹಗಳಿಗೆ ಮುಂದಾಗಿದ್ದಿದ್ದರೆ ಇಂದು ಜಾತಿಯೂ ಇರುತ್ತಿರಲಿಲ್ಲ - ಮೀಸಲಾತಿಯೂ ಇರುತ್ತಿರಲಿಲ್ಲ. ಬಸವಣ್ಣನವರನ್ನು ಅವರ ಅನುಯಾಯಿಗಳೇ ಅನುಸರಿಸದೆ ತಾವೂ ಬ್ರಾಹ್ಮಣರ ನಕಲಿನಂತಾದದ್ದು ಮಾತ್ರ ಈ ದೇಶದ ದೊಡ್ಡ ದುರಂತ.

ಸ್ತ್ರೀ ಕುಲಕ್ಕೂ ಶರಣರು `ಹೆಣ್ಣು ಹೆಣ್ಣಲ್ಲ ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ'  (ಸಿದ್ಧರಾಮಣ್ಣ) ಎನ್ನುತ್ತಾರೆ. ಆಗಿನಿಂದಲೂ ನಾವು ಸ್ತ್ರೀಯರನ್ನು ಸರಿಸಮನಾಗಿ ನಡೆಸಿಕೊಂಡಿದ್ದರೆ ಗೌರವಿಸಿದ್ದರೆ ವರದಕ್ಷಿಣೆಯ ಭೂತ ಜನ್ಮತಾಳುತ್ತಿರಲಿಲ್ಲ.  (ಬ್ರಾಹ್ಮಣರು ಅವರ ಸ್ತ್ರೀಯರನ್ನು ಶೂದ್ರರೆಂದೇ ಭಾವಿಸಿ ಪೂಜೆ ಪುರಸ್ಕಾರಗಳಿಂದ ನಿಷೇಧಿಸಿದ್ದರು)   ಆ ಕಾಲದಲ್ಲಿ ಸೂಳೆಯರಿಗೂ ಗೌರವ ಸ್ಥಾನಮಾನವಿತ್ತೆಂಬುದಕ್ಕೆ ಸೂಳೆ ಸಂಕವ್ವನೇ ಸಾಕ್ಷಿ.  ಆದರೆ ಇಂದು ನಮ್ಮ ಮಹಿಳೆಯರಿಗೆ ಜಾತ್ಯತೀತ ರಾಷ್ಟ್ರದಲ್ಲಿ  ರಕ್ಷಣೆಯೇ ಇಲ್ಲದಂತಾಗಿದೆ ಎಂದರೆ ಇದಕ್ಕೆ ಯಾರು ಹೊಣೆ?

ನಾವೀಗ ಅಸ್ಪೃಶ್ಯತೆ ಜಾತ್ಯತೀತತೆ ಸ್ತ್ರೀಸಮಾನತೆಯನ್ನು ನಿಜ ಅರ್ಥದಲ್ಲಿ ತರಬೇಕೆಂದರೆ ಬಸವ ತತ್ವವನ್ನು ತತ್ವಶಃ ಪಾಲಿಸಬೇಕಿದೆ.  ಈ ನಿಟ್ಟಿನಲ್ಲಿ ಜಾತಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ಮಠಾಧೀಶರುಗಳ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ.  ಹೀಗೆ ಹೇಳುವಾಗ ವಚನಗಳಲ್ಲಿ ವೈದಿಕ ವಿರೋಧಿ ನಿಲುವನ್ನು ನಿಷ್ಠುರವಾಗಿಯೇ ಶರಣರಿಂದ ಪ್ರತಿಪಾದಿಸಲಾಗಿದೆ ಎಂಬುದನ್ನು ಮರೆಮಾಚಲೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT