ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಕೊರತೆ, ಸ್ವಚ್ಛತೆಯದೇ ಸಮಸ್ಯೆ

Last Updated 24 ನವೆಂಬರ್ 2014, 9:54 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರಿ ಒಡೆತನದ ನರ­ಸಿಂಹರಾಜ ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದ್ದು, ವೈದ್ಯರ ಕೊರತೆ, ಕುಡಿ­ಯುವ ನೀರು ಮತ್ತು ಸ್ವಚ್ಛತೆಯದೇ ದೊಡ್ಡ ಸಮಸ್ಯೆಯಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಇರುವ ನ­ರ­ಸಿಂಹರಾಜ ಆಸ್ಪತ್ರೆ ಒಟ್ಟು 400 ಹಾಸಿಗೆ­ಗಳನ್ನು ಹೊಂದಿದ್ದು, ನಿತ್ಯ 800ರಿಂದ 900 ಹೊರ ರೋಗಿಗಳು ವಿವಿಧ ವಿಭಾಗ­ಗಳಲ್ಲಿ ಚಿಕಿತ್ಸೆ ಪಡೆಯಲು ಬರು­ತ್ತಾರೆ. ಆದರೆ ಎಲ್ಲ ವಿಭಾಗಗಳು ಸೇರಿ ಇಲ್ಲಿರುವ ವೈದ್ಯರ ಸಂಖ್ಯೆ ಕೇವಲ 25.
1937ರಲ್ಲಿ ಈ ಆಸ್ಪತ್ರೆ ಪ್ರಾರಂಭ­ವಾದಾಗ 265 ಹಾಸಿಗೆಗಳು ಇದ್ದವು. ಆಗ ಮಂಜೂರಾದ ವೈದ್ಯರ ಹುದ್ದೆಗಳ ಸಂಖ್ಯೆ 36. ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ 2003ರಲ್ಲಿ ಇದನ್ನು 400 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದ­ರ್ಜೆಗೆ ಏರಿಸಲಾಗಿದೆ. ಆದರೆ ಮಂಜೂ­ರಾದ ವೈದ್ಯರ ಹುದ್ದೆಗಳ ಸಂಖ್ಯೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ.

ಆಸ್ಪತ್ರೆ ಪ್ರಾರಂಭವಾದಾಗ 36 ವೈದ್ಯರ ಹುದ್ದೆಗಳು ಮಂಜೂ­ರಾ­ಗಿ­ದ್ದರೂ ಇದುವರೆಗೆ ಪೂರ್ಣ ಪ್ರಮಾಣ­ದಲ್ಲಿ ಆ ಹುದ್ದೆಗಳು ಭರ್ತಿಯಾದ ನಿದರ್ಶನ ಇಲ್ಲ. ಈಗಲೂ 11 ಹುದ್ದೆ­ಗಳು ಖಾಲಿ ಇವೆ. ಹಾಲಿ ಇರುವ ವೈದ್ಯ­ರಲ್ಲಿ ಹಲವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಕಿಮ್ಮತ್ತಿಲ್ಲ: ಆಸ್ಪತ್ರೆ ಮೇಲ್ದರ್ಜೆಗೇರಿರುವ ಕಾರಣ, ಅಖಿಲ ಭಾರತ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮಾವಳಿ ಪ್ರಕಾರ ವೈದ್ಯರ ಸಂಖ್ಯೆಯನ್ನು ಜಾಸ್ತಿ ಮಾಡಬೇಕು. ಹೊಸದಾಗಿ ಹುದ್ದೆ­ಗಳನ್ನು ಸೃಜಿಸಬೇಕು ಎಂದು ಕೋರಿ ಅನೇಕ ಬಾರಿ ರಾಜ್ಯ ಸರ್ಕಾರಕ್ಕೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಇದಕ್ಕೆ ಸೂಕ್ತ ಸ್ಪಂದನೆ ದೊರೆತಿಲ್ಲ.

ಫಿಜಿಷಿಯನ್‌, ಮೆಡಿಸಿನ್‌, ಯುರಾ­ಲಜಿ, ಸ್ತ್ರೀರೋಗ ಮೊದಲಾದ ವಿಭಾಗ­ಗಳಲ್ಲಿ ವೈದ್ಯರ ಕೊರತೆ ಇದೆ. ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ಫಿಜಿಷಿಯನ್‌, ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್‌, ಸರ್ಜನ್‌ ಇದ್ದಾರೆ. ಅವರು ರಜೆ ಮೇಲೆ ತೆರಳಿದಾಗ ಪರ್ಯಾಯ ವ್ಯವಸ್ಥೆ ಮಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ.

ಸೌಲಭ್ಯಗಳೇ ಇಲ್ಲ: ಜಿಲ್ಲಾ ಆಸ್ಪತ್ರೆ­ಯಾದರೂ ಸಿಟಿ ಸ್ಕ್ಯಾನಿಂಗ್‌, ವೆಂಟಿ­ಲೇಟರ್‌ ಸೌಲಭ್ಯ ಇಲ್ಲ. ತುರ್ತಾಗಿ ಸಿಟಿ ಸ್ಕ್ಯಾನಿಂಗ್‌ ಮಾಡಿಸಲು ಯಾರಾದರೂ ಬಂದರೆ ಅವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆ­ಯಲ್ಲಿ ಈ ಸೌಲಭ್ಯ ಇಲ್ಲದೆ ಬಡ ರೋಗಿಗಳು ಅನ್ಯ ಮಾರ್ಗವಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಭರಿಸುವಂತಾಗಿದೆ.

ಕುಡಿಯುವ ನೀರು: ಆಸ್ಪತ್ರೆಗೆ ನೀರು ಪೂರೈಸುತ್ತಿದ್ದ ಮೂರೂ ಕೊಳವೆ­ಬಾವಿ­ಗಳು ಬತ್ತಿ ಹೋಗಿದ್ದು, ನಗರಸಭೆ­ಯವರು ಈಗ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಇದನ್ನು ಆಸ್ಪತ್ರೆ ಬಳಕೆಗೆ ಉಪಯೋಗಿಸ­ಬಹುದು. ಆದರೆ ಕುಡಿಯುವುದಕ್ಕೆ ಶುದ್ಧೀಕರಿಸಿದ ನೀರಿನ ವ್ಯವಸ್ಥೆ ಇಲ್ಲ. ಸ್ತ್ರೀರೋಗ ವಿಭಾಗದ ಬಳಿ ಮಾತ್ರ ಕುಡಿಯುವ ನೀರು ದೊರೆಯುತ್ತಿದ್ದು, ಎಲ್ಲ ವಿಭಾಗದವರು ಅಲ್ಲಿಗೇ ಬಂದು ಬಾಟಲಿಗೆ ನೀರು ತುಂಬಿಸಿಕೊಳ್ಳುತ್ತಾರೆ. ಆಸ್ಪತ್ರೆ ಆವರಣದಲ್ಲಿ ಫಿಲ್ಟರ್‌ ಅಳ­ವಡಿಸುವಂತೆ ಕೋರಿ ರೋಟರಿ, ಲಯನ್ಸ್‌ ಸಂಸ್ಥೆಯ ಮೊರೆ ಹೋಗ­ಲಾಗಿದೆ. ಅವರು ಇದಕ್ಕೆ ಸ್ಪಂದಿಸಿದರೆ ಶುದ್ಧ ಕುಡಿಯುವ ನೀರು ದೊರೆಯ­ಲಿದೆ ಎನ್ನುತ್ತವೆ ಆಸ್ಪತ್ರೆ ಮೂಲಗಳು.

ಅರ್ಧಕ್ಕೆ ನಿಂತ ನವೀಕರಣ ಕಾರ್ಯ: ಆಸ್ಪತ್ರೆ ಕಟ್ಟಡದ ನವೀಕರಣ, ಫ್ಲೋರಿಂಗ್‌ ಬದಲಾಯಿಸುವುದು, ವಿದ್ಯುತ್‌, ನೀರು, ರಸ್ತೆ, ಉದ್ಯಾನದ ಸ್ವಚ್ಛತೆ ಇತ್ಯಾದಿ ಕಾಮಗಾರಿಗಳನ್ನು ₨ 3.5 ಕೋಟಿ ವೆಚ್ಚದಲ್ಲಿ ಕೈಗೆತ್ತಿ­ಕೊಳ್ಳ­ಲಾಗಿತ್ತು. ಆದರೆ ಈ ಕೆಲಸ ಪೂರ್ಣ ಪ್ರಮಾಣ­ದಲ್ಲಿ ಆಗಿಲ್ಲ. ಮಾಡಿರುವ ಕೆಲಸವೂ ಸರಿಯಾಗಿಲ್ಲ.

ಆಸ್ಪತ್ರೆ ಆವರಣದ ಒಳಗೆ ವಿಶಾಲ­ವಾದ ಜಾಗವಿದೆ. ಅಲ್ಲಿ ಉದ್ಯಾನ ಬೆಳೆಸಿದರೆ ಶುದ್ಧವಾದ ಗಾಳಿ ದೊರೆ­ಯುವ ಜತೆಗೆ ರೋಗಿಗಳೊಂದಿಗೆ ಬರುವ ಸಂಬಂಧಿಗಳು, ಸಹಾಯಕರಿಗೆ ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶ ದೊರೆಯುತ್ತದೆ. ಆದರೆ ಈ ನಿಟ್ಟಿನಲ್ಲಿ ಗಮನವನ್ನೇ ಹರಿಸಿಲ್ಲ. ಆಸ್ಪತ್ರೆ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕುಳಿತುಕೊಳ್ಳಲು ಮಾಡಿದ್ದ 2–3 ಆಸನ­ಗಳೂ ಹಾಳಾಗಿವೆ.

ಕಾಮಗಾರಿ ಸಂದರ್ಭ­ ಹಾಕಿದ ಸಿಮೆಂಟ್‌, ಇಟ್ಟಿಗೆ ಚೂರುಗಳನ್ನು ಇದುವರೆಗೂ ತೆಗೆದಿಲ್ಲ. ಸುಂದರವಾದ ಉದ್ಯಾನ ನಿರ್ಮಿಸಿ ಎಲ್ಲ ಕಡೆ ಗೇಟ್‌ಗಳು, ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಿದರೆ ನಾಯಿಗಳು ಒಳಗೆ ಬರುವುದನ್ನು ತಡೆಯಬಹುದು. ಅಲ್ಲದೆ ಆವರಣ ಸ್ವಚ್ಛವಾಗಿಯೂ ಇರುತ್ತದೆ ಎನ್ನುತ್ತಾರೆ ಶಿಕ್ಷಕ ನಾಗರಾಜ್‌.

ನಾಯಿಗಳ ವಾಸಸ್ಥಾನ: ಆಸ್ಪತ್ರೆ ಒಳಗೆ ಮತ್ತು ಹೊರಗೆ ಬೀದಿ ನಾಯಿ­ಗಳು ರಾಜಾರೋಷವಾಗಿ ಓಡಾಡು­ತ್ತವೆ. ಅವುಗಳಿಗೆ ಆಸ್ಪತ್ರೆಯೇ ವಾಸ­ಸ್ಥಾನ. ಕನಿಷ್ಠ ಪಕ್ಷ ಅವುಗಳನ್ನು ಆಸ್ಪತ್ರೆ ಒಳಗೆ ಬಾರದಂತೆ ತಡೆಯುವ ಪ್ರಯ­ತ್ನವೂ ಆಗಿಲ್ಲ ಎಂಬುದು ರೋಗಿಗಳ ಅಸಮಾಧಾನ. ಕುಡಿಯುವ ನೀರಿನ ಸಮಸ್ಯೆ ಇದೆ. ಹಾಸಿಗೆ ಬಟ್ಟೆಗಳನ್ನು ನಿತ್ಯ ಬದ­ಲಾಯಿ­ಸುವುದಿಲ್ಲ. ಹೀಗೆ ಕೆಲ ಸಣ್ಣ–ಪುಟ್ಟ ಸಮಸ್ಯೆ ಇವೆ. ಆದರೂ ಪರವಾಗಿಲ್ಲ ಎನ್ನುತ್ತಾರೆ ಚಿಕಿತ್ಸೆ ಪಡೆಯಲು ಬಂದಿದ್ದ ಶಾಂತಮ್ಮ.

ಕೆಲ ಕಿಟಕಿ ಗಾಜುಗಳು, ತಂತಿ ಹಾಳಾ­ಗಿವೆ. ಕೆಲ ವಿಭಾಗಗಳಿಗೆ ಮೂಗು ಮುಚ್ಚಿ­ಕೊಂಡೇ ಹೋಗಬೇಕು. ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಇದಕ್ಕೆ ಆಸ್ಪತ್ರೆಯ ಆಡಳಿತ ವರ್ಗವನ್ನು ಮಾತ್ರ ದೂರುವುದರಲ್ಲಿ ಅರ್ಥವಿಲ್ಲ. ಇದರಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ಎಲೆ– ಅಡಿಕೆ ಜಗಿಯುವ ಮಂದಿ ಎಲ್ಲೆಂದರಲ್ಲಿ ಉಗಿಯುತ್ತಾರೆ. ನಿರುಪ­ಯುಕ್ತ ವಸ್ತುಗಳನ್ನು ಕಸದ ಬುಟ್ಟಿ­ಯಲ್ಲಿ ಹಾಕುವ ಬದಲು ಕಿಟಕಿಯಿಂದ ಬಿಸಾಡುವುದು, ಕಾರಿಡಾರ್‌ಗಳಲ್ಲಿ ಎಸೆ­ಯುವುದನ್ನು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಸ್ವಚ್ಛತೆ ಕಾಪಾಡು­ವುದು ತಲೆನೋವಾಗಿ ಪರಿಣಮಿಸು­ತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿ­ಕೊಳ್ಳಬೇಕು ಎನ್ನುತ್ತಾರೆ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT