ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆಗೆ ಸ್ವಂತ ನೆಲೆ ಇಲ್ಲ!

ಆಟದ ಮೈದಾನ, ಶೌಚಾಲಯ ವ್ಯವಸ್ಥೆಯಿಂದ ವಂಚಿತ ಮಕ್ಕಳು
Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನೂರು ವರ್ಷಗಳ ಹಿಂದೆ ಆರಂಭವಾಗಿದ್ದ ನಗರದ ಸವಾಯಿ ಪಾಳ್ಯದ ಉರ್ದು ಶಾಲೆಗೆ ಇಂದಿಗೂ ಸ್ವಂತ ನೆಲೆ ಇಲ್ಲ!
ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ಈ ಶಾಲೆ ಶತಮಾನ ಕಳೆದರೂ ಬಾಡಿಗೆ ಕಟ್ಟಡದಲ್ಲೇ ಮುಂದುವರಿದುಕೊಂಡು ಬಂದಿದೆ.

ಶಿವಮೊಗ್ಗ ನಗರದಿಂದ ಭದ್ರಾವತಿ ಕಡೆಗೆ ಸಾಗುವ ಹೊರವಲಯ ರಸ್ತೆಯ ತುಂಗಾನದಿಯ ಹೊಸ ಸೇತುವೆಯ ಮಗ್ಗುಲಲ್ಲಿ, ನದಿ ತಟದ ಮೇಲೆ ಇರುವ ಸ್ಥಳೀಯ ಮಸೀದಿಯೊಂದರ ಹಳೆಯ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ.

ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ 1915–16ನೇ ಸಾಲಿನಲ್ಲಿ ಸ್ಥಾಪಿತವಾದ ಶಾಲೆಯಲ್ಲಿ ಪ್ರತಿ ವರ್ಷ ನೂರಾರು ಮಕ್ಕಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದರು. ನಂತರದ ದಿನಗಳಲ್ಲಿ ಮಕ್ಕಳ ಹಾಜರಾತಿ ಕಡಿಯಾಗುತ್ತಾ ಬಂತು. ಈ ಸಂಖ್ಯೆ 2010–11ನೇ ಸಾಲಿನಿಂದ ನಿರಂತರವಾಗಿ ಕುಸಿಯುತ್ತಾ ಸಾಗಿದೆ.

2010–11ನೇ ಸಾಲಿನಲ್ಲಿ 75, 11–12ರಲ್ಲಿ 66, 12–13ರಲ್ಲಿ 58, 14–15ರಲ್ಲಿ 54 ಹಾಗೂ ಈ ಶೈಕ್ಷಣಿಕ ಸಾಲಿನಲ್ಲಿ 30 ಬಾಲಕಿಯರು ಸೇರಿದಂತೆ 52 ಮಕ್ಕಳು ಕಲಿಯುತ್ತಿದ್ದಾರೆ.

ಸಾವು ತಂದ ನೋವು: ನಗರದ ಮಂಡ್ಲಿ, ಮುರಾದ್‌ನಗರ, ಮೆಹಬೂಬ್‌ ನಗರ, ಸುಲ್ತಾನ್ ಪಾಳ್ಯಗಳಿಂದ ನಿತ್ಯವೂ ಶಾಲೆಗೆ ಮಕ್ಕಳು ಬರುತ್ತಾರೆ. ಬೆಂಗಳೂರು–ಹೊನ್ನಾವರ ರಸ್ತೆಯ ಹೊರ ಹೊಲಯದ ರಸ್ತೆ ದಾಟಿ ಮಕ್ಕಳು ಶಾಲೆಗೆ ಬರಬೇಕಿದ್ದು, ವೇಗವಾಗಿ ಬರುವ ವಾಹನಗಳನ್ನು ಅಂದಾಜಿಸಿ, ರಸ್ತೆ ದಾಟುವಾಗ ಹಲವು ಮಕ್ಕಳು ಅಪಘಾತಕ್ಕೆ ಒಳಗಾಗಿದ್ದಾರೆ. ಕಳೆದ 5 ವರ್ಷದಲ್ಲಿ ಹೀಗೆ ರಸ್ತೆ ದಾಟುವಾಗ 6 ಮಕ್ಕಳು ಪ್ರಾಣ ತೆತ್ತಿದ್ದಾರೆ. ಹಾಗಾಗಿ, ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಾರೆ.

ಅಲ್ಲದೇ, ನದಿ ತೀರಕ್ಕೆ ಹೊಂದಿಕೊಂಡು ಶಾಲೆ ಇರುವ ಕಾರಣ ಮಕ್ಕಳು ಶಾಲೆಯ ಹಿಂಭಾಗಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿನ ಶಿಕ್ಷಕರಿಗೆ ಮಕ್ಕಳು ಹಿಂಭಾಗಕ್ಕೆ ಹೋಗದಂತೆ ತಡೆಯುವುದೇ ಬಹುದೊಡ್ಡ ಕಾಯಕ.

ಬಾಡಿಗೆ ಕಟ್ಟದಲ್ಲಿ ಒಂದು ಹಾಲ್‌ ಹಾಗೂ ಒಂದು ಕೊಠಡಿ ಇದೆ. ಇದರಲ್ಲೇ 1ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕಲಿಸಬೇಕಿದೆ. 2–3 ತರಗತಿ ಒಟ್ಟಿಗೆ ನಡೆಯುತ್ತವೆ. ಮಧ್ಯಾಹ್ನದ ಬಿಸಿಯೂಟ ತಯಾರಿಕೆಯೂ ಅದರಲ್ಲೇ ನಡೆಯುತ್ತದೆ. 52 ಮಕ್ಕಳಿಗೆ ಕುಳಿತುಕೊಳ್ಳಲು ಇರುವುದು ಮೂರೇ ಡೆಸ್ಕ್‌. ಆಟಕ್ಕೆ ಒಂದಡಿಯೂ ಜಾಗವಿಲ್ಲ. ಮಕ್ಕಳಿಗೆ ರಸ್ತೆಯೇ ಶೌಚಾಲಯ.

ಪ್ರಭಾರ ಮುಖ್ಯ ಶಿಕ್ಷಕಿ, ಕನ್ನಡ ಶಿಕ್ಷಕಿ ಸೇರಿದಂತೆ ನಾಲ್ವರು ಶಿಕ್ಷಕರು ಇದ್ದಾರೆ. ಅಲ್ಪ ಸಂಖ್ಯಾತರ ಶಾಲೆಗಳಲ್ಲಿ ಮಕ್ಕಳು–ಶಿಕ್ಷಕರ ಅನುಪಾತ 25:1 ಇರುವ ಕಾರಣ ಮೂವರು ಶಿಕ್ಷಕರು ಅಲ್ಲೇ ಉಳಿದುಕೊಂಡಿದ್ದಾರೆ.

ಇಂತಹ ನ್ಯೂನತೆಯ ನಡುವೆಯೇ ಅಲ್ಲಿನ ಮಕ್ಕಳು ಪ್ರತಿಭಾ ಕಾರಂಜಿ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ತವರು ಜಿಲ್ಲೆಯಲ್ಲೇ ಐತಿಹಾಸಿಕ ಶಾಲೆಗೆ ಇಂತಹ ದುಸ್ಥಿತಿ ಬಂದಿರುವುದು ನೋವಿನ ಸಂಗತಿ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಕೇವಲ ಅಧಿಕಾರಿಗಳ ಪರಿಶೀಲನೆಗೆ ಪ್ರಕ್ರಿಯೆ ಸೀಮಿತವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಶಾಲೆಗೆ ಸ್ವಂತ ಕಟ್ಟಡ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಜಿಲ್ಲಾ ಉರ್ದು ಶಾಲೆಗಳ ಸಂಚಾಲಕ   ಅಕ್ಬರ್‌ ಶರೀಫ್.

* ಅಪಾಯಕಾರಿ ಪರಿಸರದಲ್ಲಿ ಇರುವ ಶಾಲೆಯನ್ನು ಉತ್ತಮ ವಾತಾವರಣ ಇರುವ ಜಾಗಕ್ಕೆ ಸ್ಥಳಾಂತರಿಸಬೇಕು.
-ಅಕ್ಬರ್‌ ಶರೀಫ್
ಜಿಲ್ಲಾ ಉರ್ದು ಶಾಲೆಗಳ ಸಂಚಾಲಕ


ಮುಖ್ಯಾಂಶಗಳು

* ನದಿ ತೀರ, ಹೆದ್ದಾರಿ ಮಧ್ಯೆ ನಲುಗುವ ಮಕ್ಕಳು

*  52ಕ್ಕೆ ಕುಸಿದ ಮಕ್ಕಳ ಹಾಜರಾತಿ
*  ಶಾಲೆಯಲ್ಲಿ ಕಾಣದ ಶತಮಾನದ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT