ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿನ ಗಾಂಧಿವಾದದ ಮತ್ತೊಂದು ಕೊಂಡಿ ಕಳಚಿ ಹೋಗಿದೆ. ಅತ್ಯಂತ ನಿಸ್ಪೃಹ, ಪ್ರಾಮಾಣಿಕ, ಸರಳ, ಸಜ್ಜನಿಕೆಯ ನಡವಳಿಕೆಯಿಂದಾಗಿ ‘ಮಲೆನಾಡ ಗಾಂಧಿ’ಯೆಂಬ ಬಿರುದಾವಳಿಯಿಂದಲೇ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಮಾಜಿ ಸಚಿವ ಎಚ್.ಜಿ.ಗೋವಿಂದೇಗೌಡರು ಇನ್ನು ನೆನಪು ಮಾತ್ರ.

ರಾಜಕಾರಣದಲ್ಲಿ ಸೂಕ್ಷ್ಮತೆಗೆ, ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ ಎನ್ನುವುದು ಮನದಟ್ಟಾಗುತ್ತಿದ್ದಂತೆ ಅಧಿಕಾರದಲ್ಲಿದ್ದಾಗಲೇ ರಾಜಕೀಯ ನಿವೃತ್ತಿ ಪಡೆದ ಅಪರೂಪದ ರಾಜಕಾರಣಿ ಎನಿಸಿದ್ದರು ಗೌಡರು. ಒಂದೂವರೆ ದಶಕದ ಹಿಂದೆಯೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ಅವರನ್ನು ಕಾಣಲು, ಈವರೆಗೂ ರಾಜ್ಯದ ಮೂಲೆ ಮೂಲೆಯಿಂದ ಅವರ ಅಭಿಮಾನಿಗಳು, ಅನುಯಾಯಿಗಳು, ಶಿಷ್ಯರು ಅವರನ್ನು ಹುಡುಕಿಕೊಂಡು ಕೊಪ್ಪ ತಾಲ್ಲೂಕಿನ ಗುಣವಂತೆಯ ಅವರ ‘ಮಣಿಪುರ ಎಸ್ಟೇಟ್’ಗೆ ಬರುತ್ತಲೇ ಇದ್ದರು.

90 ವರ್ಷ ಕಾಲ ಬಾಳಿದ ಗೌಡರ ವೈಯಕ್ತಿಕ ಬದುಕು, ಮಾಡಿದ ರಾಜಕಾರಣ, ನಿಭಾಯಿಸಿದ ಅಧಿಕಾರ ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದೆ, ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಅವರು ನಡೆದು ಬಂದ ಸಾರ್ವಜನಿಕ ಬದುಕಿನ ಹಾದಿ ಈಗಿನ ಮತ್ತು ಮುಂದಿನ ತಲೆಮಾರಿಗೂ ಒಂದು ಊರುಗೋಲಿನಂತೆ ಕಾಣಿಸುತ್ತಿದೆ.

1926ರ ಮೇ 25ರಂದು ನರಸಿಂಹರಾಜಪುರ ತಾಲ್ಲೂಕಿನ ಕಾನೂರು ಗ್ರಾಮದ ಹಿಣಚಿ ಗಿಡ್ಡೇಗೌಡ ಮತ್ತು ಬೋಬಮ್ಮ ದಂಪತಿಗೆ ಏಕೈಕ ಪುತ್ರರಾಗಿ ಗೋವಿಂದೇಗೌಡ ಜನಿಸಿದರು. ಇವರಿಗೆ ಸೀತಮ್ಮ ಎಂಬ ಸಹೋದರಿ ಇದ್ದಾರೆ. ಗೌಡರು ಚಿಕ್ಕ ಮಗುವಾಗಿದ್ದಾಲೇ ತಾಯಿ ಕಳೆದುಕೊಂಡು, ಬೆಳೆಯಬೇಕಾಯಿತು. ಗೌಡರ ಬಾಲ್ಯ ಅಂತಹ ಮಧುರವಾಗಿಯೇನೂ ಇರಲಿಲ್ಲ. ಹೆಚ್ಚು ವಿದ್ಯಾವಂತರಲ್ಲದ ತಂದೆ ಮತ್ತು ಬಡತನ ಗೌಡರನ್ನು ಬಾಲ್ಯದಲ್ಲೇ ಮಹತ್ವಾಕಾಂಕ್ಷೆಯಿಂದ ದೂರ ಇಟ್ಟಿತು.

ಕಷ್ಟದಲ್ಲೇ ಕಾನೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಚಿಕ್ಕಮಗಳೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ ಪಡೆದರು. ಅದಾಗಲೇ ಗಾಂಧೀಜಿಯವರ ಪ್ರಭಾವಕ್ಕೆ ಸಿಲುಕಿದ್ದ ಗೌಡರು, ಕ್ವಿಟ್ ಇಂಡಿಯಾ ಚಳವಳಿ, ಸ್ವಾತಂತ್ರ್ಯ ಚಳವಳಿ ಹಾಗೂ ಮೈಸೂರು ಚಲೋ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಲೆನಾಡಿನಲ್ಲಿ ಜೆ.ಪಿ. ಚಳವಳಿ ಮತ್ತು ರೈತ ಚಳವಳಿಗಳಿಗೂ ನಾಯಕತ್ವ ವಹಿಸಿ ಬಲ ತುಂಬಿದರು.

ಇಂಟರ್ಮೀಡಿಯಟ್ ಪಾಸು ಮಾಡಿದ್ದ ಗೌಡರಿಗೆ ಯಾವುದಾದರೂ ಸರ್ಕಾರಿ ನೌಕರಿ ಹಿಡಿಯುವುದು ಕಷ್ಟವಿರಲಿಲ್ಲ. ಆದರೆ, ಗಾಂಧೀಜಿಯವರ ಪ್ರಭಾವಕ್ಕೆ ಸಿಲುಕಿ ಹಳ್ಳಿಗೆ ಹಿಂತಿರುಗಿದರು. ಕಿರಾಣಿ ಅಂಗಡಿ ವ್ಯಾಪಾರ, ಕೃಷಿ ಆರಂಭಿಸಿದರು. ಕೊಪ್ಪದಲ್ಲಿ ನೆಲೆ ನಿಂತು, ಶಾಂತಾ ಅವರನ್ನು ಕೈಹಿಡಿದು ಬದುಕು ಕಟ್ಟಿಕೊಂಡರು. ಅವರದು ಒಬ್ಬ ಪುತ್ರ ಮತ್ತು ಐವರು ಪುತ್ರಿಯರು ಇದ್ದ ಸಂಸಾರ.

ಅವರಲ್ಲಿದ್ದ ಪ್ರಾಮಾಣಿಕತೆ, ಜನಪರ ನಿಲುವು, ಮಾನವೀಯ ಸ್ಪಂದನೆಯಿಂದಾಗಿ ಅವರಲ್ಲಿ ಒಬ್ಬ ನಾಯಕನನ್ನು ಕೊಪ್ಪ ಜನತೆ ಅದಾಗಲೇ ಕಾಣಲಾರಂಭಿಸಿದ್ದರು. 1952ರಲ್ಲಿ ಗೌಡರನ್ನು ಕೊಪ್ಪ ಪುರಸಭೆ ಸದಸ್ಯರಾಗಿ ಜನರು ಅವಿರೋಧ ಆಯ್ಕೆ ಮಾಡಿದರು. 10 ವರ್ಷ ಕಾಲ ಪುರಸಭೆ ಅಧ್ಯಕ್ಷರಾಗಿದ್ದರು. ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಸ್ಥಳೀಯ ರಾಜಕಾರಣದಲ್ಲಿ ಬಲವಾದ ಛಾಪು ಮೂಡಿಸಿದ್ದರು.

ಕಡಿದಾಳ್ ಮಂಜಪ್ಪ ಅವರ ಅಂತರಂಗದ ಶಿಷ್ಯರಾಗಿದ್ದ ಇವರಿಗೆ ಎರಡು ಬಾರಿ ವಿಧಾನಸಭೆಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. 1977ರಲ್ಲಿ ಇಂದಿರಾಗಾಂಧಿ ಅವರ ಧೋರಣೆ ವಿರೋಧಿಸಿ ಕಾಂಗ್ರೆಸ್ಗೆ ವಿದಾಯ ಹೇಳಿದರು. ಕಡಿದಾಳ್ ಮಂಜಪ್ಪ ಅವರನ್ನು ಅನುಸರಿಸಿ ಸಿಎಫ್ಡಿ ಪಕ್ಷ ಸೇರಿದರು.

ಆದರೆ, ಗೌಡರು 1983ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಗುಂಡೂರಾವ್ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಬೇಗಾನೆ ರಾಮಯ್ಯ ಅವರನ್ನು ಸೋಲಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆ ಕಾಲದಲ್ಲೇ ಗೌಡರ ಮೇಲಿನ ಅಭಿಮಾನಕ್ಕೆ ‘ಮಲೆನಾಡ ಗಾಂಧಿ’ ಎಂಬ ಬಿರುದಿನ ಗೋಡೆ ಬರಹಗಳು ಕ್ಷೇತ್ರದಲ್ಲಿ ರಾರಾಜಿಸುತ್ತಿದ್ದವು.

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಕೆ.ಶಾಮಣ್ಣ ವಿರುದ್ಧ ಗೋವಿಂದೇಗೌಡರು ಒಮ್ಮೆ ಸೋಲನ್ನು ಕಾಣಬೇಕಾಯಿತು. ಸೋಲಿನ ನಂತರ ಮೂಲೆ ಸೇರಲಿಲ್ಲ. ತಮ್ಮ ಸೋಲಿಗೆ ಮತ್ತೊಬ್ಬರನ್ನು ದೂಷಿಸಲು ಇಲ್ಲ. ಅಧಿಕಾರದ ವ್ಯಾಮೋಹ ಕಾಡಲು ಬಿಟ್ಟುಕೊಳ್ಳಲಿಲ್ಲ. ಕೊಪ್ಪದ ಮಣಿಪುರ ಎಸ್ಟೇಟ್ನಲ್ಲಿ ತೋಟದ ಕೆಲಸದ ಕಡೆಗೆ ಹೆಚ್ಚು ಗಮನ ಹರಿಸಿದರು.

ಮತ್ತೆ 1994ರ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಮತ್ತು ಎಚ್.ಡಿ.ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಜಿಡ್ಡು ಹಿಡಿದಿದ್ದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದರು.

ಯಾವುದೇ ಹಂತದಲ್ಲಿಯೂ ಭ್ರಷ್ಟಾಚಾರ ನುಸುಳಲು ಆಸ್ಪದ ನೀಡದೆ, ಒಂದೂವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕ ಹುದ್ದೆಗಳನ್ನು ಪಾರದರ್ಶಕವಾಗಿ ನೇಮಕ ಮಾಡಿ, ರಾಜ್ಯದ ಜನತೆ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದರು. ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಟಿಸಿಎಚ್, ಬಿ.ಇಡಿ ತರಬೇತಿ ಕೋರ್ಸ್ಗಳಿಗೆ ಆಕರ್ಷಣೆ ಬರುವಂತೆ ಮಾಡಿದರು. ಶಿಕ್ಷಕರ ವರ್ಗಾವಣೆ ವ್ಯವಸ್ಥೆ ಸರಳಗೊಳಿಸಿದರು.

ಪ್ರತಿಭಾವಂತರು, ಸ್ನಾತಕೋತ್ತರ ಪದವೀಧರರು ‘ನಾನೊಬ್ಬ ಶಾಲೆ ಮಾಸ್ತರ್ ಆದರೆ ಸಾಕು’ ಎನ್ನುವ ಪರಮ ಗುರಿ ಇಟ್ಟುಕೊಂಡು ಓದುವ ವಾತಾವರಣ ನಿರ್ಮಿಸಿದ್ದರು. ಶಿಕ್ಷಕರ ನೇಮಕದಲ್ಲಿ ಜಾರಿಗೆ ತಂದ ರೋಸ್ಟರ್ ಮತ್ತು ಮೆರಿಟ್ ಪದ್ಧತಿ ಮೆಚ್ಚುಗೆಗೆ ಕಾರಣವಾಯಿತು. ಜಾತಿ ಮತ್ತು ಹಣದ ಪ್ರಭಾವವಿಲ್ಲದೆ ಯಾರು ಬೇಕಾದರೂ ಶಿಕ್ಷಕರಾಗಬಹುದು ಎನ್ನುವುದನ್ನು ಆ ಕಾಲಕ್ಕೆ ಸಾಧ್ಯವಾಗಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ 50 ಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯಕ್ಕೂ ಮುನ್ನುಡಿ ಬರೆದರು. ಟಿಸಿಎಚ್ ಮತ್ತು ಬಿ.ಇಡಿ ಪದವಿ ಸೇರುವವರಿಗೆ ಪ್ರವೇಶ ಪರೀಕ್ಷೆ, 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಪರಿಚಯಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕೆ ಸುಧಾರಣೆಗೂ ನಾಂದಿ ಹಾಡಿದರು. ಅಧಿಕಾರದಲ್ಲಿದ್ದಾಗಲೇ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಜೀವಿತದ ಕೊನೆವರೆಗೂ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳಲೂ ಇಲ್ಲ.

ಗೋವಿಂದೇ ಗೌಡ ಇನ್ನಿಲ್ಲ
ಚಿಕ್ಕಮಗಳೂರು: ‘ಮಲೆನಾಡ ಗಾಂಧಿ’ ಎಂದೇ ಹೆಸರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇ ಗೌಡ (90) ಅವರು ತೀವ್ರ ಅನಾರೋಗ್ಯದಿಂದ ಬುಧವಾರ ನಿಧನರಾದರು.

ಮಧ್ಯಾಹ್ನ 2.45ರ ಹೊತ್ತಿಗೆ ಕೊಪ್ಪ ಪಟ್ಟಣದ ಹೊರವಲಯದ ಗುಣವಂತೆಯ ತಮ್ಮ ‘ಮಣಿಪುರ ಎಸ್ಟೇಟ್’ನ ಮನೆಯಲ್ಲಿ ಅವರು ಕೊನೆ ಉಸಿರೆಳೆದರು. ಅವರ ಎರಡೂ ನೇತ್ರಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಮೃತರಿಗೆ ಪತ್ನಿ ಶಾಂತಾ, ಪುತ್ರ ಜಿ.ಎಚ್.ವೆಂಕಟೇಶ್ ಹಾಗೂ ಐವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ‘ಮಣಿಪುರ ಎಸ್ಟೇಟ್’ನಲ್ಲಿ ಗುರುವಾರ ಸಂಜೆ 4 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉಸಿರಾಟದ ತೊಂದರೆ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಒಂದು ತಿಂಗಳಿಂದಲೂ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.