ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾ ಸೇತುವೆಯ ಅಭಿವೃದ್ಧಿ: ಕಾಗೋಡು ಭರವಸೆ

Last Updated 12 ಜೂನ್ 2014, 6:26 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಗಡಿಭಾಗದಲ್ಲಿರುವ ನಿಸರ್ಗ ನಿರ್ಮಿತ ಶಿಲಾ ಸೇತುವೆ(ಕಲ್ಲುಸಂಕ)ಯನ್ನು ಅಭಿವೃದ್ಧಿ ಪಡಿಸುವ ಭರವಸೆಯನ್ನು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನೀಡಿದ್ದಾರೆ.

ಮಂಗಳವಾರ ಸಂಜೆ ಈ ಅಪರೂಪದ ನಿಸರ್ಗ ಕಲಾಕೃತಿ ಯನ್ನು ವೀಕ್ಷಿಸಿದ  ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಇದು ನಿಸರ್ಗದ ಅಪರೂಪದ ನಿರ್ಮಾಣ. ಇಂತಹ ಸ್ಥಳವನ್ನು ಮುಂದಿನ ತಲೆಮಾರಿಗೆ ಉಳಿಸುವ ಜವಾಬ್ದಾರಿ ಸಮಾಜದ್ದು. ಜೋಗ ಜಲಪಾತಕ್ಕೆ ಸಮೀಪ ವಿರುವ ಈ ಸ್ಥಳ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಗೊಳ್ಳಲು ಪೂರಕ ವಾತಾವರಣ ಹೊಂದಿದೆ. ಇಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ. ಜೋಗ ಹಾಗೂ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡುತ್ತಿರುವ ಈ ಸಂದರ್ಭದಲ್ಲಿ ಕಲ್ಲುಸಂಕವನ್ನೂ ಅಭಿವೃದ್ಧಿಗೊಳಿಸಬೇಕಿದೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ, ಉಪತಹಶೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್, ಸ್ಥಳೀಯರಾದ ಕಲಗಾರು ಲಕ್ಷ್ಮೀನಾರಾಯಣ ಹೆಗಡೆ, ಮಲವಳ್ಳಿ ಗುರುಮೂರ್ತಿ ಹೆಗಡೆ, ಸುಧಾಕರ ಕೊಳಗದ್ದೆ ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಯದ ರಚನೆ: ಸ್ಥಳೀಯರು ‘ಕಲ್ಲುಸಂಕ’ ಎಂದು ಕರೆಯುವ ಈ ಶಿಲಾ ಸೇತುವೆ ವಿಸ್ಮಯಕಾರಕ  ರಚನೆ ಎಂದೇ ಪರಿಗಣಿಸಲ್ಪಟ್ಟಿದೆ. ತಾಲ್ಲೂಕಿನ ಕಲಗಾರಿನಲ್ಲಿ ಹುಟ್ಟಿ,ಅಲ್ಲಿಂದ ವರದಾನದಿಗೆ ಸೇರುವ  ಹೊಳೆಗೆ ಪ್ರಕೃತಿಯೇ ನಿರ್ಮಿಸಿದ ನೈಸರ್ಗಿಕ ಸೇತುವೆಯೇ ಈ ಕಲ್ಲುಸಂಕ. ಹೊಳೆಗೆ ಅಡ್ಡವಾಗಿರುವ ಶಿಲಾ ಪದರದ ತಳಭಾಗದ ಮಣ್ಣು ಸ್ವಾಭಾವಿಕವಾಗಿ ಕೊಚ್ಚಿ ಹೋಗಿದ್ದರಿಂದ ಈ ರೀತಿ ಸೇತುವೆಯ ರಚನೆ ಇಲ್ಲಿ ಉಂಟಾಗಿದೆ. ಈ ಶಿಲಾ ಸೇತುವೆ ಸಾಕಷ್ಟು ಭದ್ರವಾಗಿ ನಿರ್ಮಿಸಲ್ಪಟ್ಟಿದ್ದು, ಜಾನುವಾರುಗಳಲ್ಲದೆ ಜನರು ಎಷ್ಟೋ ವರ್ಷಗಳಿಂದ ಇದರ ಮೇಲೆ ಓಡಾಡುತ್ತಿದ್ದಾರೆ. ದೇಶದ ಭೂರೂಪಶಾಸ್ತ್ರದ ನಕ್ಷೆಯಲ್ಲಿ ಈ ಶಿಲಾಸೇತುವೆ ನಮೂದಾಗಿದ್ದು, ವಿಶ್ವದಲ್ಲಿರುವ ಎರಡೇ ಪ್ರಕೃತಿ ನಿರ್ಮಿತ ಸೇತುವೆಗಳಲ್ಲಿ ಇದೂ ಒಂದು  ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT