ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ–ಬಿಜೆಪಿ ಮತ್ತೆ ಮಾತುಕತೆ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮೈತ್ರಿ ಪಕ್ಷ­ದೊಂದಿ­ಗಿನ ಭಿನ್ನಮತ ಬದಿಗಿರಿಸಿ, ನಾಲ್ಕು ವಾರ­ಗಳಷ್ಟು ಹಳೆಯದಾದ ಮಹಾರಾಷ್ಟ್ರ ಸರ್ಕಾರ ಸೇರುವಂತೆ ಶಿವಸೇನಾದ ಮನ­ವೊಲಿಕೆಗೆ ಮತ್ತೆ ಮಾತುಕತೆ ಆರಂಭಿ­­ಸು­ವು­ದಾಗಿ ಬಿಜೆಪಿ ಗುರುವಾರ ಪ್ರಕಟಿಸಿದೆ.

ಬಿಜೆಪಿ ನಾಯಕರಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಮಹಾ­ರಾಷ್ಟ್ರ ಸಚಿವ ಚಂದ್ರ­ಕಾಂತ್‌ ಪಾಟೀಲ್‌ ಶುಕ್ರವಾರ­ದಿಂದ ಶಿವಸೇನಾ ನಾಯಕ­ರೊಡನೆ ಮಾತು­ಕತೆ ನಡೆಸಲಿ­ದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸುದ್ದಿಗಾರರಿಗೆ ತಿಳಿಸಿದರು.
‘ಶಿವಸೇನಾವು ಬಿಜೆಪಿ ನೇತೃತ್ವದ ಸರ್ಕಾರ ಸೇರಬೇಕು ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ನಿಲುವು ಮಾತ್ರ­ವಲ್ಲದೆ, ಮಹಾರಾಷ್ಟ್ರ ಜನರ ಅಭಿಪ್ರಾ­ಯವೂ ಆಗಿದೆ’ ಎಂದು ಹೇಳಿದರು.

‘ಇತ್ತೀಚಿನ ವಿಧಾನಸಭಾ ಚುನಾವಣೆ­ಯನ್ನು ಎರಡೂ ಪಕ್ಷಗಳು ಪ್ರತ್ಯೇಕವಾಗಿ ಎದುರಿಸಿದರೂ, ಕಳೆದ 25 ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿವೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವ ಸರ್ಕಾರ­ದಲ್ಲಿ ಶಿವಸೇನಾ ಪಾಲುದಾರ ಪಕ್ಷ­ವಾಗಿದೆ’ ಎಂದು ಅವರು ನುಡಿದರು.

‘ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರೊಡನೆ ಕಳೆದ ವಾರ ಮಾತ­ನಾಡಿ­ರುವೆ. ಮಾತು­ಕತೆ ಯಶಸ್ವಿ­ಯಾಗುವ ವಿಶ್ವಾಸವಿದೆ. ಶಿವಸೇನಾವು ರಾಜ್ಯ ಸರ್ಕಾ­ರವನ್ನು ಸೇರ­ಬೇಕೆಂಬುದು ನಮ್ಮೆಲ್ಲರ ಇಚ್ಛೆ’ ಎಂದು ಫಡ್ನವೀಸ್‌ ಹೇಳಿದರು.

ವರದಿಗಳ ಪ್ರಕಾರ, ಅಲ್ಪ ಬಹು­ಮತದ ಫಡ್ನವೀಸ್‌ ಸರ್ಕಾರ ಡಿಸೆಂಬರ್‌ 8ರಿಂದ ಆರಂಭವಾಗುವ ಚಳಿಗಾಲದ ಅಧಿ­ವೇಶ­ನಕ್ಕೂ ಮುನ್ನ ಸಂಪುಟ ವಿಸ್ತರಿ­ಸಲು ಬಯಸಿದೆ. ಈ ಕಾರಣ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಒಪ್ಪಂ­ದ­­ವೊಂ­ದಕ್ಕೆ ಬಂದಿ­ದ್ದಾರೆ. ಇದರನ್ವಯ ರಾಜ್ಯ ಸರ್ಕಾರ­ದಲ್ಲಿ ನಾಲ್ಕು ಸಂಪುಟ ದರ್ಜೆ ಸೇರಿ­ದಂತೆ ಒಟ್ಟು 10 ಸಚಿವ ಸ್ಥಾನ­ಗಳನ್ನು ಶಿವಸೇನಾ ಗಳಿಸಲಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT