ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಎಂಬುದೆಲ್ಲ ಸುಳ್ಳು

ಪ್ಯಾಕೇಜ್ಡ್‌ ನೀರು: ಪರವಾನಗಿ ಪಡೆಯದ ಕಳಪೆ ಗುಣಮಟ್ಟದ ದಂಧೆ
Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಪರವಾನಗಿ­ಯನ್ನೂ ಪಡೆಯದೆ ರಾಜ್ಯದಲ್ಲಿ ಪ್ಯಾಕೇಜ್ಡ್‌ ಕುಡಿಯುವ ನೀರು ತಯಾ­ರಿಸಿ ಮಾರಾಟ ಮಾಡುವ 3,500ಕ್ಕೂ ಅಧಿಕ ಘಟಕಗಳಿದ್ದು, ಅವುಗಳನ್ನು ಬಂದ್‌ ಮಾಡಿಸಲು ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (ಬಿಐಎಸ್‌) ಕಾರ್ಯಾಚರಣೆ ಆರಂಭಿಸಿದೆ.

‘ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ 1954ರ ಪ್ರಕಾರ ಪ್ಯಾಕೇಜ್ಡ್‌ ಕುಡಿಯುವ ನೀರು ತಯಾರಿಸುವ ಮುನ್ನ ಬಿಐಎಸ್‌ನಿಂದ ‘ಐಎಸ್‌ 14543’ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ದೇಶದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಬಾಟಲಿ ನೀರು ತಯಾರಿಕಾ ಘಟಕಗಳು ರಾಜ್ಯದಲ್ಲಿ­ದ್ದರೂ ಅವುಗಳು ಇದುವರೆಗೆ ಪರವಾನಗಿ ಪಡೆದಿಲ್ಲ’ ಎಂದು ಬಿಐಎಸ್‌ನ ಬೆಂಗಳೂರು ಶಾಖೆ ಮುಖ್ಯಸ್ಥ ಎ.ಕೆ. ಭಟ್ನಾಗರ್‌ ಮಾಹಿತಿ ನೀಡಿದರು. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಸಾವಿರಾರು ಘಟಕಗಳು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳಲು ಬಾಟಲಿ ‘ಸೀಲ್‌’ ಮಾಡದೆ ನಮ್ಮ ಉತ್ಪಾದನೆ ಪ್ಯಾಕೇಜ್ಡ್‌ ಕುಡಿಯುವ ನೀರಲ್ಲ ಎಂಬ ವಾದವನ್ನು ಮಾಡುತ್ತಿದ್ದವು. ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿದ್ದು, ‘ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ವಿಧದ ನೀರೂ ಪ್ಯಾಕೇಜ್ಡ್‌ ಕುಡಿಯುವ ನೀರೇ ಆಗಿದೆ’ ಎನ್ನುವ ವ್ಯಾಖ್ಯಾನ ನೀಡಲಾಗಿದೆ’ ಎಂದು ವಿವರಿಸಿದರು.

‘ಬಾಟಲಿಗಳ ಮೇಲೆ ‘ಇದು ಕುಡಿಯುವ ನೀರಲ್ಲ’ ಎಂಬ ವಾಕ್ಯವನ್ನು ದಪ್ಪಕ್ಷರದಲ್ಲಿ ಮುದ್ರಿಸಿದರೆ ಮಾತ್ರ ಅಂತಹ ನೀರಿನ ಮಾರಾಟಕ್ಕೆ ಕಾನೂನಿನ ವಿನಾಯ್ತಿ ಇದೆ’ ಎಂದರು. ‘ರಾಜ್ಯದಲ್ಲಿ ಪ್ಯಾಕೇಜ್ಡ್‌ ನೀರು ಉತ್ಪಾದನೆ ಮಾಡುವ 4,000ಕ್ಕೂ ಅಧಿಕ ಘಟಕಗಳು ಇದ್ದು, ಅದರಲ್ಲಿ 415 ಘಟಕಗಳು ಮಾತ್ರ ಪರವಾನಗಿ ಪಡೆದಿವೆ. ಇನ್ನೂ 80 ಘಟಕಗಳಿಂದ ಅರ್ಜಿ ಬಂದಿದ್ದು, ತಪಾಸಣಾ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

‘ಬಿಐಎಸ್‌ ಪರವಾನಗಿ ಇಲ್ಲದೆ ನಡೆಸುತ್ತಿರುವ ಘಟಕಗಳನ್ನು ಬಂದ್‌ ಮಾಡುವ ಹೊಣೆಯನ್ನು ಭಾರತೀಯ ಆಹಾರ ಭದ್ರತೆ ಹಾಗೂ ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ವಹಿಸಲಾಗಿದೆ. ಹೀಗಾಗಿ ಅಕ್ರಮ ಘಟಕಗಳ ಮಾಹಿತಿ ಪಡೆದು ಅದನ್ನು ಎಫ್‌ಎಸ್‌ಎಸ್‌ಎಐಗೆ ಕಳಿಸಲಾಗುತ್ತಿದೆ. ಅದು ಅಂತಹ ಘಟಕಗಳನ್ನು ಬಂದ್‌ ಮಾಡಿಸುತ್ತಿದೆ’ ಎಂದು ವಿವರಿಸಿದರು.

‘ಪ್ಯಾಕೇಜ್ಡ್‌ ನೀರು ಮಾರಾಟಕ್ಕೆ ಪರವಾನಗಿ ನೀಡುವ ಮುನ್ನ 104 ಮಾನದಂಡಗಳಿಂದ ತಪಾಸಣೆಗೆ ಒಳಪಡಿಸಲಾಗುತ್ತದೆ. 30ಕ್ಕೂ ಅಧಿಕ ರಾಸಾಯನಿಕ ಹಾಗೂ ಆರು ವಿಧದ ಜೈವಿಕ ಪರೀಕ್ಷೆ ಅದರಲ್ಲಿ ಸೇರಿದೆ. ತೃಪ್ತಿಕರ ಫಲಿತಾಂಶ ಬಂದಲ್ಲಿ ಮಾತ್ರ ‘ಐಎಸ್‌ 14543’ ಪರವಾನಗಿ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಉತ್ಪನ್ನಗಳಿಗೆ ಪರವಾನಗಿ ನೀಡು­ವುದು ಮಾತ್ರವಲ್ಲದೆ ಪರವಾನಗಿ ನೀಡ­ಲಾದ ಉತ್ಪನ್ನಗಳು ಗುಣಮಟ್ಟ ಕಾಯ್ದು­ಕೊಂಡಿವೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಬಿಐಎಸ್‌ ವರ್ಷದುದ್ದಕ್ಕೂ ತಪಾಸಣೆ ನಡೆಸುತ್ತದೆ. ಈ ಉದ್ದೇಶ­ಕ್ಕಾಗಿ ಘಟಕ ಹಾಗೂ ಮಾರುಕಟ್ಟೆ ಎರಡೂ ಕಡೆಯಿಂದ ಉತ್ಪನ್ನಗಳ ಮಾದರಿ ಸಂಗ್ರಹ ಮಾಡಲಾಗುತ್ತದೆ’ ಎಂದು ಭಟ್ನಾಗರ್‌ ವಿವರಿಸಿದರು.

‘ಪರವಾನಗಿ ಪಡೆಯದಿದ್ದರೂ ‘ಐಎಸ್‌ಐ’ ಮುದ್ರೆ ಹಾಕಿ, ಪ್ಯಾಕೇಜ್ಡ್‌ ನೀರು ಮಾರಾಟ ಮಾಡುತ್ತಿದ್ದ ಮೂರು ಘಟಕಗಳನ್ನು ಪತ್ತೆ ಹಚ್ಚಲಾಗಿದ್ದು, ದಂಡ ವಿಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.ಹಾಲ್‌ಮಾರ್ಕ್‌: ಚಿನ್ನಾಭರಣಗಳ ಗುಣಮಟ್ಟ ಖಚಿತ ಮಾಡಿಕೊಳ್ಳಲು ಬಿಐಎಸ್‌ ಹಾಲ್‌ಮಾರ್ಕ್‌ ವ್ಯವಸ್ಥೆ ಆರಂಭಿಸಿದೆ. ಬಿಐಎಸ್‌ ಚಿಹ್ನೆ, ಆಭರಣ ತಯಾರಿಕಾ ಘಟಕ ಮತ್ತು ತಯಾರಕರ ಚಿಹ್ನೆ, ಗುಣಮಟ್ಟದ ಶ್ರೇಯಾಂಕ ಮತ್ತು ಆಭರಣ ಸಿದ್ಧಪಡಿಸಿದ ವರ್ಷವನ್ನು ಈ ಹಾಲ್‌ಮಾರ್ಕ್‌ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ 4.50 ಲಕ್ಷ ಆಭರಣ ತಯಾರಕರು ಹಾಗೂ 1 ಲಕ್ಷಕ್ಕೂ ಅಧಿಕ ಆಭರಣ ಮಾರಾಟಗಾರರು ಇದ್ದರೂ ಇದುವರೆಗೆ 10 ಸಾವಿರ ಜನ ಮಾತ್ರ ಹಾಲ್‌ಮಾರ್ಕ್‌ ಹಾಕಲು ಪರವಾನಗಿ ಪಡೆದಿದ್ದಾರೆ. ಈ ಪರವಾನಗಿ ಕಡ್ಡಾಯವಾಗಿರದ ಕಾರಣ ಹೆಚ್ಚಿನ ಜನ ಒಲವು ತೋರಿಲ್ಲ’ ಎಂದು ಹೇಳಿದರು.

‘ಪ್ಯಾಕೇಜ್ಡ್‌ ನೀರು ಬಿಟ್ಟರೆ ಸಿಮೆಂಟ್‌, ಸ್ಟೀಲ್‌, ಆಟೊಮೊಬೈಲ್‌, ವೈದ್ಯಕೀಯ, ಮನೆಬಳಕೆ ಉತ್ಪನ್ನಗಳಿಗೆ ಹೆಚ್ಚಿನ ಪರವಾನಗಿ ಪಡೆಯಲಾಗಿದೆ. ರಾಜ್ಯದಲ್ಲಿ ಬಿಐಎಸ್‌ ಇದುವರೆಗೆ 1,100 ಪರವಾನಗಿ ನೀಡಿದೆ’ ಎಂದು ವಿವರಿಸಿದರು. ‘ದೇಶದಾದ್ಯಂತ 950 ಉತ್ಪನ್ನಗಳಿಗೆ ಸಂಬಂಧಿಸಿದಂತೆ 26,000 ಪರವಾನಗಿ ನೀಡಲಾಗಿದೆ’ ಎಂದು ತಿಳಿಸಿದರು.

ಐಎಸ್‌ಐ, ಬಿಐಎಸ್‌ ಪ್ರತ್ಯೇಕವೇ?
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷದಲ್ಲೇ (1947) ಸ್ಥಾಪನೆ ಆಗಿದ್ದು ಭಾರತೀಯ ಗುಣಮಟ್ಟ ಮಾನಕ ಸಂಸ್ಥೆ (ಐಎಸ್‌ಐ). ಆಗಿನಿಂದಲೂ ಸಾಮಗ್ರಿಗಳ ಗುಣಮಟ್ಟ ಖಾತರಿಗೆ ಐಎಸ್‌ಐ ಮುದ್ರೆ ಹಾಕಲಾಗುತ್ತಿದೆ. 1987ರಲ್ಲಿ ಐಎಸ್‌ಐ ಅನ್ನು ಬಿಐಎಸ್‌ ಆಗಿ ಬದಲಾವಣೆ ಮಾಡಲಾಗಿದೆ. ಆದರೆ, ಐಎಸ್‌ಐ ಮುದ್ರೆಯನ್ನು ಮಾತ್ರ ಹಾಗೇ ಉಳಿಸಿಕೊಳ್ಳಲಾಗಿದೆ. ಐಎಸ್‌ಐ ಮುದ್ರೆ ಇರುವ ಉತ್ಪನ್ನದ ಗುಣಮಟ್ಟವನ್ನು ಬಿಐಎಸ್‌ ಖಚಿತಪಡಿಸುತ್ತದೆ.

ಏನಿದು ಐಎಸ್‌ 14543?
ಬಿಐಎಸ್‌ ಪ್ರತಿಯೊಂದು ಉತ್ಪನ್ನಕ್ಕೂ ಗುಣಮಟ್ಟ ಖಚಿತಪಡಿಸಲು ಕೋಡ್‌ ಸಂಖ್ಯೆ ಮೂಲಕ ಮಾನದಂಡ ನಿಗದಿ ನೀಡುತ್ತದೆ. ಪ್ಯಾಕೇಜ್ಡ್‌ ಕುಡಿಯುವ ನೀರಿನ ಗುಣಮಟ್ಟ ಖಚಿತಪಡಿಸಲು ಹಾಗೆ ಬಳಸುವ ಕೋಡ್‌ ಸಂಖ್ಯೆಯೇ ಇಂಡಿಯನ್‌ ಸ್ಟ್ಯಾಂಡರ್ಡ್‌ (ಐಎಸ್‌) 14543. ನೀರನ್ನು ಸಂಸ್ಕರಿಸಿ ಪ್ಯಾಕ್‌ ಮಾಡುವ ವಿಧಾನ, ಅದನ್ನು ಸಂಗ್ರಹಿಸುವ ಸಾಧನದ ಗುಣಮಟ್ಟ ಮೊದಲಾದ ಮಾನದಂಡಗಳು ಈ ಕೋಡ್‌ ಸಂಖ್ಯೆಯ ದಾಖಲೆಯಲ್ಲಿ ಇರುತ್ತವೆ. ಇದೊಂದು ಕಾನೂನುಬದ್ಧ ದಾಖಲೆ. ಈ  ಪರವಾನಗಿ ಪತ್ರ ಪಡೆದ ಸಂಸ್ಥೆಗಳಷ್ಟೇ ದೇಶದಲ್ಲಿ ಪ್ಯಾಕೇಜ್ಡ್‌ ನೀರು ಮಾರಾಟ ಮಾಡುವ ಅವಕಾಶ ಹೊಂದಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT