ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಜಿತ್‌ ಪ್ರಯೋಗಶಾಲೆ

Last Updated 8 ಮೇ 2015, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಎನ್‌.ಪಿ.ಸಿಂಗ್‌, ರಾನಿ ಲಾಹಿರಿ, ಸ್ನೇಹಾ ರಜಿನಿ
ನಿರ್ದೇಶಕ: ಶೂಜಿತ್‌ ಸರ್ಕಾರ್‌
ತಾರಾಗಣ: ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಇರ್ಫಾನ್‌ ಖಾನ್‌, ಮೌಸಮಿ ಚಟರ್ಜಿ ಮತ್ತಿತರರು.

ಇಂಥ ಸಿನಿಮಾ ಪ್ರಯೋಗಶಾಲೆ ಪ್ರವೇಶಿಸಿದ ದೀಪಿಕಾ ಪಡುಕೋಣೆ, ವಯೋಸಹಜ ಪಾತ್ರವನ್ನು ಅಪ್ಪಿಕೊಂಡ ಅಮಿತಾಭ್‌ ಬಚ್ಚನ್‌ ಇಬ್ಬರಿಗೂ ಹೆಚ್ಚು ಅಂಕಗಳು ಸಲ್ಲಬೇಕು.

ಈ ಕಮರ್ಷಿಯಲ್‌ ಸಿನಿಮಾಗಳ ನಟಿ–ನಟರನ್ನು ನಿರ್ದೇಶಕ ಶೂಜಿತ್‌ ಸರ್ಕಾರ್‌ ತಮ್ಮತನದಲ್ಲಿ ಅದ್ದಿ ತೆಗೆದಿದ್ದಾರೆ. ‘ವಿಕಿ ಡೋನರ್‌’ ಹಾಗೂ ‘ಮದ್ರಾಸ್‌ ಕೆಫೆ’ ಸಿನಿಮಾಗಳಲ್ಲಿ ಭಿನ್ನ ಎನ್ನಿಸುವ ವಸ್ತುಗಳನ್ನು ಸಿನಿಮಾ ಆಗಿಸಿ ಸೈ ಎನ್ನಿಸಿಕೊಂಡಿದ್ದ ಶೂಜಿತ್‌, ಖುದ್ದು ಹೊಸ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿರುವ ಮಲಬದ್ಧತೆಯ ಸಮಸ್ಯೆಯ ಕಥೆಯೇ ಇದಕ್ಕೆ ಸಾಕ್ಷಿ.

ಮನುಷ್ಯನ ಬದುಕಿನ ಸಣ್ಣ ಸಮಸ್ಯೆಯೂ ಸಹಜವೇ.  ಅನ್ಯರಿಗೆ ಸಣ್ಣದಾಗಿ ಕಾಣುವ ಸಮಸ್ಯೆಯೇ ದೊಡ್ಡದಾಗಬಹುದಾದ ಸಾಧ್ಯತೆ ಇದೆ. ಸಿನಿಮಾ ಮಾಧ್ಯಮ ಇಂಥ ಸೂಕ್ಷ್ಮಗಳನ್ನು ಮೀರಿ, ಮನರಂಜನೆಯನ್ನಷ್ಟೇ ಒದಗಿಸುವುದು ಹೆಚ್ಚು ಒಪ್ಪಿತ ಕ್ರಮ. ಶೂಜಿತ್‌ ಸರ್ಕಾರ್‌ ಈ ಕ್ರಮವನ್ನೇ ಪ್ರಶ್ನಿಸುವಂತೆ ಸಿನಿಮಾ ಮಾಡುತ್ತಾರೆ. ಅದು ಪ್ರಜ್ಞಾಪೂರ್ವಕವಾಗಿಯೇ ಇದ್ದರೂ ಅತಿ ಸಹಜವೂ, ಆಪ್ಯಾಯಮಾನವೂ ಆಗಬಹುದಾದ ದಾರಿ.

ಸಿನಿಮಾದಲ್ಲಿ ಅಮಿತಾಭ್‌ ಬಚ್ಚನ್‌ ಪಾತ್ರದ ರೂಹು ಅಪರೂಪದ್ದು. ತಮ್ಮ ಮಲಬದ್ಧತೆಯ ಸಮಸ್ಯೆಯ ಕುರಿತು ತುಸುವೂ ಬೇಸರವಿಲ್ಲದೆ ನಿರರ್ಗಳವಾಗಿ, ನಿಸ್ಸಂಕೋಚವಾಗಿ ಊಟ ಮಾಡುವಾಗಲೂ ಮಾತನಾಡಬಲ್ಲ ನೇರ ವ್ಯಕ್ತಿ ಅವರು. ವೈದ್ಯಕೀಯ ಸೌಕರ್ಯವನ್ನು ವಿಪರೀತ ನೆಚ್ಚಿಕೊಂಡವರು. ತಾನು ಬೆಳೆಸಿದ ಮಗಳು ಮದುವೆಯಾಗದೆ ತನ್ನನ್ನೇ ಮಗುವಿನಂತೆ ನೋಡಿಕೊಳ್ಳಬೇಕು ಎಂದು ಆಣತಿ ಮಾಡುವಷ್ಟು ಭಿನ್ನವಾದ ತಂದೆ. ಕಡ್ಡಿ ತುಂಡುಮಾಡಿದಂಥ ಮಾತು. ನಡುರಸ್ತೆಯಲ್ಲೂ ಹಟಕ್ಕೆ ನಿಲ್ಲುವ ಠಾಕು. ಇಂಥ ಅಪ್ಪ, ಮಗಳ ನಡುವೆ ಟ್ಯಾಕ್ಸಿ ಕಂಪೆನಿಯ ಒಡೆಯನೊಬ್ಬ ಡ್ರೈವರ್‌ ಆಗಬೇಕಾದ ಅನಿವಾರ್ಯ ಪ್ರಸಂಗವನ್ನು ಶೂಜಿತ್‌ ಸೃಷ್ಟಿಸಿದ್ದಾರೆ. ಕಥೆಯೇ ಇಲ್ಲದೆ ಸ್ವಪ್ರತಿಷ್ಠೆ, ತಾಕಲಾಟಗಳ ಮೂಲಕವೇ ಅವರು ಸಮಸ್ಯೆಯೊಂದನ್ನು ಸಿನಿಮಾ ಆಗಿ ತೋರಿಸಿರುವ ಪರಿ ಅಪರೂಪದ್ದು.

ಹೊಸ ತಲೆಮಾರಿನ ಕುರಿತು ಸಿನಿಕತನದಿಂದ ಮಾತನಾಡುವ ಮಂದಿಯಿಂದ ಹಿಡಿದು, ಹಳೆ ತಲೆಮಾರಿನವರ ಧೋರಣೆಯನ್ನು ಕೇವಲ ಭಾವನಾತ್ಮಕ ಎಂದು ಬಣ್ಣಿಸುವವರೆಗೆ ಎಲ್ಲರೂ ನೋಡಬೇಕಾದ ಸಿನಿಮಾ ಇದು. ಗಂಭೀರವಾದರೂ ಸಿನಿಮಾದಲ್ಲಿ ಅಲ್ಲಲ್ಲಿ ಮಾತಿನ ಕಚಗುಳಿ ಇದೆ. ಸಿದ್ಧಾಂತಗಳ ಮಂಥನವಿದೆ. ಬೋರ್‌ ಹೊಡೆಸುತ್ತಲೇ ನೋಡಿಸಿಕೊಳ್ಳುತ್ತಾ, ಆಗಾಗ ನಗಿಸುತ್ತಾ, ಕೊನೆಗೆ ಕಣ್ಣಲ್ಲಿ ಹನಿಯೊಂದನ್ನು ಉಳಿಸುವ ಗುಣವೂ ಇದೆ.

ಬಂಗಾಳಿ ಅಜ್ಜನ ಪಾತ್ರದಲ್ಲಿ ಅಮಿತಾಭ್‌  ಕಾಡುತ್ತಾರೆ. ದೀಪಿಕಾ ಅಭಿನಯ ಕೌಶಲದ ಜಿಗಿತಕ್ಕೆ ಶಹಬ್ಬಾಸ್‌ಗಿರಿ ಹೇಳಲೇಬೇಕು. ಇರ್ಫಾನ್‌ ಖಾನ್‌ ಫಾರ್ಮ್‌ ಮುಂದುವರಿದಿದೆ. ರಂಜನೆ ಬೆರೆತ ಅವರ ಪಾತ್ರ ನೋಡುಗರಿಗೆ ಬೋನಸ್ಸು. 
ಶೂಜಿತ್‌ ಅವರಿಗೆ ಸಲ್ಲುವಷ್ಟೇ ಅಂಕ ಇಂಥದೊಂದು ವಸ್ತು ಇಟ್ಟುಕೊಂಡು ಚಿತ್ರಕಥೆ ಬರೆದ ಜೂಹಿ ಚತುರ್ವೇದಿ ಅವರಿಗೂ ಸಲ್ಲಬೇಕು. ಬಹುಶಃ ಅವರ ಹೆಣ್ಣುಮನಸ್ಸು ದೀಪಿಕಾ ಪಾತ್ರದ ತೂಕವನ್ನು ಹೆಚ್ಚಿಸಿದೆ. ಅನುಪಮ್‌ ರಾಯ್‌ ಹಿನ್ನೆಲೆ ಸಂಗೀತ, ಕಮಲ್‌ಜಿತ್‌ ನೇಗಿ ಛಾಯಾಗ್ರಹಣ ಔಚಿತ್ಯಪೂರ್ಣ. 

ಬಾಲಿವುಡ್‌ನ ಜನಪ್ರಿಯ ಕ್ರಮಕ್ಕೆ ಹೊರತಾದ ಯತ್ನ ಎಂದು ‘ಪೀಕು’ ಸಿನಿಮಾವನ್ನು ನಿಸ್ಸಂಶಯವಾಗಿ ಗುರುತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT