ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಲೀಕೃತ ಅಭಿನಯದ ಉತ್ತಮ ಪ್ರಯೋಗ

Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಸುಮಾರು ಏಳೆಂಟು ದಶಕಗಳ ಹಿಂದೆಯೇ ಅತ್ಯಂತ ಪ್ರಗತಿಪರ ಧೋರಣೆಯಿಂದ ಶ್ರೇಷ್ಠಕವಿ ಹಾಗೂ ನಾಟಕಕಾರ ದ.ರಾ.ಬೇಂದ್ರೆಯವರು ರಚಿಸಿದ ‘ಉದ್ಧಾರ’ ನಾಟಕವು ರಂಗದ ಮೇಲೆ ಸಾಕಷ್ಟು ಪ್ರಯೋಗಗಳನ್ನು ಕಂಡಿರದ ಕಾರಣ ನೋಡುಗರಿಗೆ ಅಷ್ಟು ಪರಿಚಿತವಲ್ಲ.

ಇಂಥ ಒಂದು ಉತ್ತಮ, ಮಾರ್ಮಿಕ, ಅರ್ಥವಂತಿಕೆಯ ನಾಟಕವನ್ನು ‘ಅಭಿನಯತರಂಗ’ದ ವಿದ್ಯಾರ್ಥಿಗಳಿಂದ ರಂಗದ ಮೇಲೆ ಪ್ರದರ್ಶನಕ್ಕೆ ತಂದವರು ಗೌರಿದತ್ತು. ಇತ್ತೀಚೆಗೆ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನ ಕಂಡ ಈ ನಾಟಕದ ಗಹನತೆಯನ್ನು ತಮ್ಮ ವಿಶಿಷ್ಟಶೈಲಿಯ ಆಕರ್ಷಕ ವಿನ್ಯಾಸದಿಂದ ಅದ್ಭುತ ನಾಟಕವಾಗಿಸಿದವರು ನಿರ್ದೇಶಕ ಮಂಜುನಾಥ ಬಡಿಗೇರ.

ಮಹಾತ್ಮ ಗಾಂಧೀಜಿಯವರು ಹರಿಜನೋದ್ಧಾರದ ವಿಚಾರಗಳನ್ನು, ಚಿಂತನೆಯನ್ನು ಜನಮಾನಸದಲ್ಲಿ ಬಿತ್ತಲು ಪ್ರಯತ್ನಿಸುತ್ತಿದ್ದ ಕಾಲದಲ್ಲೇ ರಚಿತವಾದ ಈ ನಾಟಕ ಇಂದಿಗೂ ಬಹು ಪ್ರಸ್ತುತ. ಸಮಾಜದ ಓರೆಕೋರೆಗಳನ್ನು ಬೇಂದ್ರೆಯವರು ಒಂದು ದೃಷ್ಟಾಂತದ ಮೂಲಕ ಬಹು ಮಾರ್ಮಿವಾಗಿ ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.

ಊರಿನ ಭೈರವೇಶ್ವರ ದೇವಾಲಯದ ಶಿವಲಿಂಗವನ್ನು ಯಾರೋ ಕಿಡಿಗೇಡಿಗಳು ಭಗ್ನಗೊಳಿಸಿದ ಸಂಗತಿಯನ್ನು ಕುರಿತು ವಕೀಲ, ಅರ್ಚಕ ಭಟ್ಟ ಮತ್ತು ಶರಣ ರುದ್ರಯ್ಯ ಚರ್ಚೆ ನಡೆಸುತ್ತಾರೆ. ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಅವರ ಅನಾಸಕ್ತಿಯನ್ನು ಕಂಡ ವಕೀಲ ಕೆರಳಿ, ಆರ್ಯಸಮಾಜದ ಸನ್ಯಾಸಿಯ ಕುಮ್ಮಕ್ಕಿನಂತೆ, ತಮ್ಮ ದೇವರಗುಡಿಯನ್ನು ಕಟ್ಟಲು ಜಾಗಸಿಗದೆ ಹತಾಶರಾಗಿದ್ದ ಊರಹೊರಗಿನ ಅಂತ್ಯಜರ ಕೇರಿಗೆ ಹೋಗಿ, ಭಗ್ನಗೊಂಡ ದೇವಾಲಯದ ಶಿವಲಿಂಗವನ್ನು ತೆಗೆದು, ಆ ಜಾಗದಲ್ಲಿ ಅವರು ತಮ್ಮ ದೇವರನ್ನು ಪ್ರತಿಷ್ಠಾಪಿಸುವಂತೆ ಉತ್ತೇಜನ ಕೊಡುತ್ತಾನೆ.

ಉಮೇದಿನಿಂದ ಮೇಲೆದ್ದ ಆ ಯುವಜನರನ್ನು ತಡೆಯಲು ಪ್ರಯತ್ನಿಸಿದ ಕೇರಿಯ ಹಿರಿಯಜ್ಜ ಪೆಟ್ಟುತಿಂದು ಕೆಳಗುರುಳುತ್ತಾನೆ. ತಮ್ಮ ದೇವಾಲಯವನ್ನು ಅಂತ್ಯಜರು ವಶಪಡಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಕೇಳಿ ಭಟ್ಟ ಮತ್ತು ರುದ್ರಯ್ಯ ಗಾಬರಿಗೊಂಡು ತಮ್ಮ ಜನಗಳನ್ನು ಒಗ್ಗೂಡಿಸಲು ಶತಾಯಗತಾಯ ಪ್ರಯತ್ನಿಸುತ್ತಾರೆ.

ತಮ್ಮೊಳಗಿನ  ಒಳಜಾತಿಯ ವ್ಯರ್ಥತಿಕ್ಕಾಟದಿಂದ ಯಾವ ಬ್ರಾಹ್ಮಣ, ವೀರಶೈವರೂ ಬೆಂಬಲಕ್ಕೆ ಬಾರದಾಗ, ಅವರಿಬ್ಬರೇ ದೇವಾಲಯದ ಪ್ರವೇಶದ್ವಾರದಲ್ಲಿ ಅಡ್ಡಲಾಗಿ ಮಲಗಿ ಪ್ರತಿಭಟಿಸುತ್ತಾರೆ.

ಆದರೆ ಹೆಂಡ ಕುಡಿದು ತೂರಾಡುತ್ತ ಬಂದ ಯುವಕರು ಅವರನ್ನು ತುಳಿದುಕೊಂಡು ದೇವಾಲಯ ಪ್ರವೇಶಿಸಿ ತಮ್ಮ ದೇವರನ್ನು ಪ್ರತಿಷ್ಠಾಪಿಸುತ್ತಾರೆ. ಅಡ್ಡ ಬಂದ ಹಿರಿಯಜ್ಜ, ಭಟ್ಟ ಮತ್ತು ರುದ್ರಯ್ಯನನ್ನು ಬಡಿದು ಕೊಲ್ಲುತ್ತಾರೆ. ಭಗ್ನಲಿಂಗವನ್ನು ಹೊರಗೆ ಬಿಸಾಡಲು ಹೋದ ಯುವನಾಯಕ ಹಾವು ಕಚ್ಚಿ ಸಾಯುತ್ತಾನೆ. ಇದು  ಕಥೆ.

‘ಉದ್ಧಾರ’ ಎಂಬ ನಾಟಕದ ಶೀರ್ಷಿಕೆ ಇಲ್ಲಿ ಬಹು ವಿಸ್ತಾರದ ಅರ್ಥವೈವಿಧ್ಯವನ್ನು ಒಳಗೊಂಡಿದೆ. ದೇವರ ವಿಗ್ರಹವನ್ನು ಪ್ರತಿಷ್ಠಾಪಿಸುವುದಕ್ಕಿಂತ ಈ ಪ್ರಕರಣದಲ್ಲಿ ಇಲ್ಲಿಯ ಜನಗಳ ಹುಸಿಪ್ರತಿಷ್ಠೆಯೇ ಹೆಚ್ಚಾಗಿದೆ. ಉದ್ಧಾರ ಮಾಡಲೆತ್ನಿಸುವವರು, ಉದ್ಧಾರ ಹೊಂದಬಯಸುವವರು ಇಬ್ಬರಿಗೂ ಗಟ್ಟಿ ನಿಲುವಿಲ್ಲ.

ಹಳೆಯ ಪರಂಪರೆಯಲ್ಲಿ ಬೆಳೆದು ಬಂದ ಮಾಗಿದ ಹಿರಿಯಜ್ಜನ ಭಯ, ತಮ್ಮನ್ನು ಉಪಯೋಗಿಸಿಕೊಳ್ಳುವವರ ಅಸ್ತ್ರವಾದ ಯುವಕರ ದುಡುಕು, ವಿಗ್ರಹಾರಾಧನೆಯಲ್ಲಿ ನಂಬಿಕೆಯಿರದ ಆರ್ಯಸಮಾಜದ ಸನ್ಯಾಸಿಯ ವಿಘ್ನಸಂತೋಷೀ ಮನೋಭಾವ, ವಕೀಲನ ಹಟ ಮತ್ತು ಭಟ್ಟ-ಶರಣರ ಜಾತಿ ವ್ಯಾಮೋಹ, ಸಂಕುಚಿತ ಮನೋಭಾವಗಳನ್ನು ನಾಟಕ ಎಳೆಎಳೆಯಾಗಿ ಬಿಚ್ಚಿಡುತ್ತದೆ.

ಬ್ರಾಹ್ಮಣ ಮತ್ತು ವೀರಶೈವರ ನಡುವಿನ ಜಾತಿಭೇದದ ಸೂಕ್ಷ್ಮ ವಿರೋಧಗಳ ನಡುವೆ, ದ್ವೈತ ಮತ್ತು ಅದ್ವೈತರ ಸಿದ್ಧಾಂತಗಳ ವೈಪರೀತ್ಯಗಳು ಅನಾವರಣಗೊಳ್ಳುತ್ತ ಹೋಗುವ ವಿಡಂಬನೆ ನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ.

ಸಣ್ಣ ವ್ಯತ್ಯಾಸಗಳನ್ನೇ ಸಹಿಸಿಕೊಳ್ಳದ ಜನರಲ್ಲಿ ಒಗ್ಗಟ್ಟು ಎಷ್ಟು ಕಷ್ಟಸಾಧ್ಯವೆಂಬ ಮುಖ್ಯ ತಿರುಳನ್ನು ನಾಟಕ ತೀಕ್ಷ್ಣವಾಗಿ ವಿಡಂಬಿಸುತ್ತದೆ. ಅಸಹಿಷ್ಣುತೆ ಎಂಬ ಅಲೆ ಈಗಿನದಲ್ಲ, ಅದು ಎಂದಿನಿಂದಲೂ ಇದ್ದದ್ದೇ ಎಂಬ ಸಂಗತಿ ವೇದ್ಯಗೊಳ್ಳುತ್ತ, ಬಹು ಮಾರ್ಮಿಕಾರ್ಥದ ಪರಿಣಾಮವನ್ನು ನಾಟಕ ನೋಡುಗನೆದೆಯಲ್ಲಿ ಎರಕ ಹೊಯ್ಯುತ್ತದೆ.

ಉತ್ತರ ಕರ್ನಾಟಕದ ಶಕ್ತಿಶಾಲಿಯಾದ ಭಾಷಾ ಸೊಗಡು, ಸಂಭಾಷಣೆಗಳು ಮೆಲುಕು ಹಾಕುವಂತಿವೆ. ಜಾತಿಯ ಒಳಜಗಳಗಳನ್ನು, ಮನುಷ್ಯರ ನಡುವಿನ ಪರಸ್ಪರ ಮೇಲಾಟ, ಹೆಚ್ಚುಗಾರಿಕೆಯ ಆಷಾಢಭೂತಿತನವನ್ನು, ತಂದಿಕ್ಕಿ ತಮಾಷೆ ನೋಡುವ ಇಲ್ಲಿಯ ಅಲ್ಪಬುದ್ಧಿಯ ಜನಗಳ್ಯಾರಿಗೂ ನಿಜವಾದ ಉದ್ಧಾರ ಬೇಕಿಲ್ಲ. ಶೋಷಿತರಿಗೂ ತಮ್ಮ ಉದ್ಧಾರದ ಬಗ್ಗೆ ಕನಸುಗಳಿಲ್ಲ. 

ಸಮಾಜದ ಕಟ್ಟಕಡೆಯ ಮನುಷ್ಯನ ಬಗೆಗೆ ಮಾನವೀಯ ಸ್ಪಂದನೆಯಾಗಲೀ, ಸೌಹಾರ್ದ ಭಾವವಾಗಲೀ, ಸಮಾಜದ ಸ್ವಾಸ್ಥ್ಯ ಉಳಿಸುವ ನೈಜ ಕಳಕಳಿಯಾಗಲೀ ಕಿಂಚಿತ್ತೂ ಇಲ್ಲದಿರುವ ವಿಪರ್ಯಾಸದ ಸುತ್ತ ಗಮನಸೆಳೆವ ಈ ನಾಟಕ ಮನಸ್ಸನ್ನು ಕಲಕುತ್ತದೆ.

ನಾಟಕಕಾರನ ಆಶಯವನ್ನು ಚೆಂದಗಾಣಿಸಿದ್ದರಲ್ಲಿ ನಿರ್ದೇಶಕರಿಗೆ ಹಿರಿಪಾಲು ಸಲ್ಲಬೇಕು. ಪ್ರತಿಯೊಂದು ಪಾತ್ರಗಳೂ ಪರಕಾಯ ಪ್ರವೇಶ ಮಾಡಿ ಬಹು ನೈಜಾಭಿನಯ ನೀಡಿದ್ದು ನಾಟಕದ ಪರಿಣಾಮವನ್ನು ಎತ್ತಿಹಿಡಿಯಿತು.

ಬೇಂದ್ರೆಯವರು ನಾಟಕಕ್ಕೇ ರಚಿಸಿದ ಹಾಡನ್ನು ಪ್ರಾರಂಭದಿಂದ ಕೊನೆಯವರೆಗೂ, ಆಯಾ ದೃಶ್ಯದ ಕಡೆಯಲ್ಲಿ ಪಾತ್ರಗಳೆಲ್ಲ ಒಂದೊಂದು ಚರಣವನ್ನು ಹಾಡುತ್ತ, ಮುಂದಿನ ದೃಶ್ಯಕ್ಕೆ ರಂಗವನ್ನು ಅಣಿಗೊಳಿಸುತ್ತ ಸಾಗಿದ್ದು, ಶಿಸ್ತಿನಿಂದ ಹೆಜ್ಜೆ ಕುಣಿಸುತ್ತ ದೃಶ್ಯದೊಳಗೆ ಒಂದಾದದ್ದು ತುಂಬ ಆಪ್ಯಾಯಮಾನವಾಗಿತ್ತು.

ಇಡೀ ನಾಟಕವನ್ನು ಆಕರ್ಷಕಗೊಳಿಸಿದ್ದು ನಿರ್ದೇಶಕರ ಅಪೂರ್ವ ವಿನ್ಯಾಸ. ಶೈಲೀಕೃತ ನಟನೆಯಲ್ಲಿ ನಟರನ್ನು ಎರಕಗೊಳಿಸಿದ್ದು ನಿಜಕ್ಕೂ ವಿಶಿಷ್ಟವೆನಿಸಿ ನಾಟಕ ಅನನ್ಯ ಅನುಭವ ನೀಡಿತು. ಪರಾಕಾಷ್ಠೆಯ ಹಂತದಲ್ಲಿ ಗುಂಪಿನ ‘ಸ್ಲೋ ಮೋಷನ್ ಮತ್ತು ಮೈಮ್’ ಚಲನೆಗಳು ಮತ್ತು ಪ್ರತಿ ದೃಶ್ಯದಲ್ಲಿ ನಟರ ಆಗಮನ, ನಿರ್ಗಮನ ಹಾಗೂ ನಿಂತುಕೊಳ್ಳುವ, ಚಲಿಸುವ ವಿಶಿಷ್ಟ ಶೈಲಿಯಲ್ಲಿ ನಿರ್ದೇಶಕರ ವಿಭಿನ್ನತೆಯ ಹೊಳಪು ಪ್ರೇಕ್ಷಕರಿಗೆ ಖುಷಿನೀಡಿತು.

ಹೀಗೆ ಪ್ರತಿಯೊಂದು ದೃಶ್ಯ ಸಂಯೋಜನೆಯಲ್ಲೂ ಪ್ರತಿಭಾವಂತ ನಿರ್ದೇಶಕ ಮಂಜುನಾಥ ಬಡಿಗೇರರ ವಿಶಿಷ್ಟ ಸ್ಪರ್ಶವಿತ್ತು. ಬೇಂದ್ರೆಯವರ ಈ ಗಟ್ಟಿಕಥೆಗೆ ಹೇಳಿ ಮಾಡಿಸಿದ ಚೆಲುವಿನ ವಿನ್ಯಾಸದ ಚೌಕಟ್ಟು ಅನುರೂಪವಾಗಿತ್ತು.

ನಟರ ನುರಿತ ನಟನೆಯನ್ನು ಕಂಡಾಗ ಇವರೆಲ್ಲ ಅಭಿನಯ ತರಂಗದ ನಾಟಕಾಭ್ಯಾಸಿಗಳು ಅನಿಸಲೇ ಇಲ್ಲ. ತಯಾರಿ ಚೆನ್ನಾಗಿರುವ ಜೊತೆಗೆ ಈ ಹುಡುಗರ ಸುಪ್ತಪ್ರತಿಭೆ, ಚೈತನ್ಯ ಸುವ್ಯಕ್ತವಾಗಿತ್ತು. ಭಟ್ಟನ ಪಾತ್ರ ನಿರ್ವಹಿಸಿದ್ದ ವಿಶಾಲ್ ಪಾಟೀಲ್ ಥೇಟ್ ಅರ್ಚಕನೇ ಆಗಿ ಸೊಗಸಾದ ಹಾವಭಾವ- ಆಂಗಿಕ ಅಭಿನಯ, ಸ್ಫುಟವಾದ ಮಾತಾಡುವ ಶೈಲಿಯಲ್ಲಿ ಮನಸೂರೆಗೊಂಡರು.

ಹಿರಿಯಜ್ಜನಾಗಿ ವಿಕ್ರಂ ಅನುಭವಸ್ಥನಂತೆ ಮಾಗಿದ ನಟನೆ ತೋರಿದರು. ವಕೀಲ(ರಘು), ರುದ್ರಯ್ಯ (ಶರದ್), ಮತ್ತು ಯುವನಾಯಕನಾಗಿ ಸಚಿನ್    ಇನಾಂದಾರ್ ಪಾತ್ರವೇ ತಾವಾಗಿ ಸಹಜಾಭಿನಯದಿಂದ ಗಮನ ಸೆಳೆದರು. ಸನ್ಯಾಸಿ-ಅಜಯ್‌ ಶರ್ಮ ಸೌಮ್ಯವಾಗಿ ನಟಿಸಿದ್ದು ಹದವಾಗಿತ್ತು. ಉಳಿದ ಪ್ರತಿಯೊಬ್ಬ ನಟರದೂ ಮನನೀಯ ಅಭಿನಯ.

ಅಂತ್ಯಜರ ಕೇರಿಯ ದೃಶ್ಯದ ಸುಂದರ ಸಂಯೋಜನೆ ಮತ್ತು ದೇವರನ್ನು ಹೊತ್ತ ಹುಡುಗರು ಕುಣಿಯುವ ಸನ್ನಿವೇಶ ವಿಶೇಷವಾಗಿ ಮನತಟ್ಟಿತು. ಪಾತ್ರಗಳಿಗೆ ಜೀವತುಂಬಿದ ಪ್ರಸಾಧನ, ಸರಳ ರಂಗಸಜ್ಜಿಕೆ (ಹೇಮಂತ್ ಕುಮಾರ್), ಸಮರ್ಥ ಬೆಳಕನ್ನು ಹಾಯಿಸಿದ ಮಧುಸೂದನ್ ಅಭಿನಂದನೀಯರು. ಹಿತವಾದ ಲಯಪೂರ್ಣ ಹಿನ್ನೆಲೆಯ ಸಂಗೀತ (ವೀರೇಶ್) ನಾಟಕದ ಸತ್ವವನ್ನು ಹೆಚ್ಚಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT