ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಇಲ್ಲದ ರಾಜ್ಯದ 61 ಶಾಲೆಗಳು

ವಿದ್ಯಾರ್ಥಿನಿಯರಿಗೆ ಬಯಲೇ ಗತಿ
Last Updated 28 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ಬಯಲು ಶೌಚ ವಿಸರ್ಜನೆಯ ಅಪಾಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರಿ ಪ್ರಚಾರಾಂದೋಲನವನ್ನೇ ನಡೆಸುತ್ತಿವೆ. ವಿಪರ್ಯಾಸವೆಂದರೆ, ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾದ ಬಳಿಕವೂ ರಾಜ್ಯದ 61 ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಈಗಲೂ ಬಯಲು ಶೌಚಾಲಯವನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ! ರಾಜ್ಯದ 43 ಪ್ರಾಥಮಿಕ ಶಾಲೆಗಳಲ್ಲಿ ಹಾಗೂ 18 ಪ್ರೌಢಶಾಲೆಗಳಲ್ಲಿ ಈಗಲೂ ಹುಡುಗಿಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ!

ಸರ್ವಶಿಕ್ಷಣ ಅಭಿಯಾನದ ಅಡಿ ನಡೆಯುವ ಜಿಲ್ಲಾ ಶೈಕ್ಷಣಿಕ ಮಾಹಿತಿ ವರದಿ ಈ ಕೊರತೆಗಳನ್ನು ಬಹಿರಂಗಪಡಿಸಿದೆ.

ಕೊಪ್ಪಳ ಹಿಂದೆ: ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸದ ಅತಿ ಹೆಚ್ಚು ಪ್ರಾಥಮಿಕ ಶಾಲೆಗಳಿರುವುದು ಕೊಪ್ಪಳ ಜಿಲ್ಲೆಯಲ್ಲಿ. ಇಲ್ಲಿನ 932 ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ವ್ಯಾಸಂಗ ನಡೆಸುತ್ತಿದ್ದು, ಈ ಪೈಕಿ 33 ಶಾಲೆಗಳಲ್ಲಿ ಹುಡುಗಿಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ! ಉಳಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂರು, ಬಳ್ಳಾರಿ ಜಿಲ್ಲೆಯ ಏಳು ಪ್ರಾಥಮಿಕ ಶಾಲೆಗಳಲ್ಲಿ ಈ ವ್ಯವಸ್ಥೆ ಇಲ್ಲ.

ವಿದ್ಯಾರ್ಥಿನಿಯರು ಪ್ರೌಢಾವಸ್ಥೆಗೆ ಬರುವುದು ಹೆಚ್ಚಾಗಿ ಪ್ರೌಢಶಾಲಾ ಹಂತದಲ್ಲಿ. ಈ ಹಂತದಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ತೀರಾ ಅನಿವಾರ್ಯ. ರಾಜ್ಯದ 18 ಪ್ರೌಢಶಾಲೆಗಳ (ವಿಜಾಪುರ ಜಿಲ್ಲೆಯ 11 ಪ್ರೌಢಶಾಲೆಗಳಲ್ಲಿ, ಕೊಪ್ಪಳ ಜಿಲ್ಲೆಯ 7) ವಿದ್ಯಾರ್ಥಿನಿಯರು ಶೌಚಾಲಯ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. 

ಸರ್ಕಾರವು ಬಾಲಕರ ಶೌಚಾಲಯ ನಿರ್ಮಾಣಕ್ಕೂ ಮಹತ್ವ ನೀಡಿಲ್ಲ. ರಾಜ್ಯದ 31 ಪ್ರೌಢಶಾಲೆಗಳಲ್ಲಿ ಹಾಗೂ 126 ಪ್ರಾಥಮಿಕ ಶಾಲೆಗಳಲ್ಲಿ ಈಗಲೂ ಬಾಲಕರಿಗೆ ಶೌಚಾಲಯ ಇಲ್ಲ. ಇಂಥ ವ್ಯವಸ್ಥೆ ಕಲ್ಪಿಸದ ಅತಿ ಹೆಚ್ಚು ಪ್ರಾಥಮಿಕ ಶಾಲೆಗಳು ಇರುವುದೂ ಕೊಪ್ಪಳ (108 ಶಾಲೆಗಳು) ಜಿಲ್ಲೆಯಲ್ಲಿ. ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಒಂಬತ್ತು, ಚಿಕ್ಕಮಗಳೂರು ಮತ್ತು ಬೆಂಗಳೂರು (ದಕ್ಷಿಣ) ಜಿಲ್ಲೆಗಳಲ್ಲಿ ತಲಾ ಮೂರು ಹಾಗೂ ತುಮಕೂರು ಜಿಲ್ಲೆಯ ಒಂದು  ಪ್ರಾಥಮಿಕ ಶಾಲೆಗಳು ಈ ಸೌಲಭ್ಯ ವಂಚಿತವಾಗಿವೆ.

ರಾಜ್ಯದ 31 ಪ್ರೌಢಶಾಲೆಗಳಲ್ಲಿ ಬಾಲಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಅಚ್ಚರಿ ಎಂದರೆ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ನಾಲ್ಕು ಪ್ರೌಢಶಾಲೆಗಳಲ್ಲಿಯೂ ಬಾಲಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಕೊಪ್ಪಳ ಜಿಲ್ಲೆಯ ಒಂಬತ್ತು, ವಿಜಾಪುರ ಜಿಲ್ಲೆಯ ಎಂಟು, ಯಾದಗಿರಿ ಜಿಲ್ಲೆಯ ಮೂರು, ಚಿಕ್ಕಮಗಳೂರು ಜಿಲ್ಲೆಯ 2, ಬೆಂಗಳೂರು ಉತ್ತರ, ಚಾಮರಾಜನಗರ, ಬಳ್ಳಾರಿ ಮತ್ತು ಮೈಸೂರು ಜಿಲ್ಲೆಯ ತಲಾ ಒಂದು ಪ್ರೌಢಶಾಲೆಗಳು ಬಾಲಕರಿಗೆ ಶೌಚಾಲಯ ಹೊಂದಿಲ್ಲ.

ಬಳಕೆ ಆಗುತ್ತಿಲ್ಲ: `ಹೆಚ್ಚಿನ ಶಾಲೆಗಳಲ್ಲಿ ಶೌಚಾಲಯದ ಶುಚಿತ್ವ ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಮಕ್ಕಳು ಶೌಚಾಲಯ ಬಳಸುವುದಕ್ಕೆ ಹಿಂದೇಟು ಹಾಕುತ್ತಾರೆ. ಶಾಲೆಗಳ ಶೌಚಾಲಯಗಳ ಪೈಕಿ ಶೇ 50 ರಷ್ಟು ಕೂಡ ಬಳಕೆಯಾಗುತ್ತಿಲ್ಲ. ಸರ್ಕಾರ ಶೌಚಾಲಯಗಳನ್ನು ಕಟ್ಟಿಸಿದರೆ ಮಾತ್ರ ಸಾಲದು. ಅವುಗಳು ಸದ್ಬಳಕೆ ಆಗುವಂತೆಯೂ ನೋಡಿಕೊಳ್ಳಬೇಕು' ಎನ್ನುತ್ತಾರೆ ಮಕ್ಕಳ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಮಂಗಳೂರಿನ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ.

`ರಾಜ್ಯದ ಗ್ರಾಮೀಣ ಶಾಲೆಗಳಲ್ಲಿರುವ ಶೇ 38ರಷ್ಟು ಶೌಚಾಲಯಗಳು ಬಳಕೆಯಾಗುತ್ತಿಲ್ಲ. ರಾಜ್ಯದ ಶೇ 8ರಷ್ಟು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಹುಡುಗಿಯರ ಶೌಚಾಲಯಗಳ ಪೈಕಿ ಶೇ 28ರಷ್ಟು ಶೌಚಾಲಯಗಳಿಗೆ ಸದಾ ಬೀಗ ಬಿದ್ದಿರುತ್ತದೆ.

ಶೇ 10ರಷ್ಟು ಶೌಚಾಲಯಗಳು ಬಳಕೆ ಮಾಡುವ ಸ್ಥಿತಿಯಲ್ಲೇ ಇರುವುದಿಲ್ಲ ಎಂಬ ಅಂಶಗಳನ್ನು  2012ನೇ ಸಾಲಿನ ಅಸರ್ (ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ) ವರದಿ ಬಹಿರಂಗಪಡಿಸಿದೆ. ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿ ಇರದಿದ್ದರೆ ಪ್ರೌಢಾವಸ್ಥೆಗೆ ಬಂದ ಹುಡುಗಿಯರು ಬಹಳಷ್ಟು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಮಕ್ಕಳು ಶಾಲೆ ತೊರೆಯುವ ಪ್ರಸಂಗಗಳೂ ಇವೆ' ಎನ್ನುತ್ತಾರೆ ರೆನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT