ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧೆಯ ಬ್ಲ್ಯಾಕ್‌ಮಾರ್ಕೆಟ್‌ ಅಂಧಶ್ರದ್ಧೆ!

ಟಿ.ವಿಗಳಲ್ಲಿ ಬರುವ ಜ್ಯೋತಿಷ ಕಾರ್ಯಕ್ರಮ ನಿಷೇಧಿಸಬೇಕು: ಮುಕ್ತಾ ದಾಭೋಲ್ಕರ್‌
Last Updated 24 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರದ್ಧೆ ಮತ್ತು ಅಂಧಶ್ರದ್ಧೆಯ ನಡುವೆ ಅತ್ಯಂತ ಕಿರಿದಾದ ಗೆರೆ ಇದೆ. ಶ್ರದ್ಧೆಯ ಬ್ಲ್ಯಾಕ್‌ ಮಾರ್ಕೆಟ್‌ ಎಂದರೆ ಅಂಧಶ್ರದ್ಧೆ. ಇದನ್ನು ಜನರಿಗೆ ತಿಳಿಸುವುದು ನಮ್ಮ ಗುರಿ. ನನ್ನ ತಂದೆ ಅದಕ್ಕಾಗಿಯೇ ಹೋರಾಟ ಮಾಡಿ ಜೀವ ತೆತ್ತರು. ಅವರ ಹೋರಾಟವನ್ನು ನಾವು ಈಗ ಮುಂದುವರಿಸಿದ್ದೇವೆ.’

–ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ರಚಿಸಿಕೊಂಡು ಮಹಾರಾಷ್ಟ್ರದಲ್ಲಿ ಹೋರಾಟ ನಡೆಸಿ ಆಗಂತುಕರ ಗುಂಡಿಗೆ ಬಲಿಯಾದ ನರೇಂದ್ರ ದಾಭೋಲ್ಕರ್‌ ಅವರ ಪುತ್ರಿ ಮುಕ್ತಾ  ಅವರ ಸ್ಪಷ್ಟ ಮಾತುಗಳಿವು. ತಂದೆಯ ಹತ್ಯೆಯಿಂದ ಅವರು ಧೃತಿಗೆಟ್ಟಿಲ್ಲ. ಹೋರಾಟದ ಕೆಚ್ಚು ಅವರಲ್ಲಿ ಇನ್ನಷ್ಟು ಹೆಚ್ಚಾಗಿದೆ. ಅದು ಅವರ ಮಾತಿನಲ್ಲಿ ಪ್ರತಿಫಲನವಾ ಗುತ್ತದೆ.

ಕಾನೂನು ಪದವೀಧರರಾಗಿರುವ ಮುಕ್ತಾ ಈಗ ತಮ್ಮನ್ನು ಸಂಪೂರ್ಣವಾಗಿ ಅಂಧಶ್ರದ್ಧೆ ವಿರೋಧಿ ಚಳವಳಿಗಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಅಂಗವಾಗಿಯೇ ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ ಜೊತೆಗೆ ಮಾತುಕತೆ ನಡೆಸಿದರು.

ನಿಮ್ಮ ಬೆಂಗಳೂರು ಭೇಟಿಯ ಉದ್ದೇಶ?
ಮುಕ್ತಾ : ನನ್ನ ತಂದೆಯನ್ನು ಹತ್ಯೆ ಮಾಡಿ ಎರಡು ತಿಂಗಳಾಗಿದೆ. ಇನ್ನೂ ಆರೋಪಿಗಳ ಬಂಧನವಾಗಿಲ್ಲ. ತಂದೆಯ ಹತ್ಯೆ ನಂತರ ಮಹಾರಾಷ್ಟ್ರ ಸರ್ಕಾರ ತರಾತುರಿಯಲ್ಲಿ ಅಂಧಶ್ರದ್ಧೆ ವಿರೋಧಿ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಆದರೆ ಈ ಸಂಬಂಧ ಮಸೂದೆಯನ್ನು ಇನ್ನೂ ವಿಧಾನ ಮಂಡಲದಲ್ಲಿ ಮಂಡಿಸಿಲ್ಲ. ಈ ಬಗ್ಗೆ ಒತ್ತಡ ಹೇರುವಂತೆ ಇಲ್ಲಿನ ಪ್ರಮುಖರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಡಾ.ಯು.ಆರ್‌. ಅನಂತಮೂರ್ತಿ ಮುಂತಾದ ಸಾಹಿತಿಗಳನ್ನೂ ಭೇಟಿ ಮಾಡಿ ಈ ಸಂಬಂಧ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲು ವಿನಂತಿಸಿಕೊಂಡಿದ್ದೇನೆ.

ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ನಿಮ್ಮ ತಂದೆ ಅವರ ಹೋರಾಟಕ್ಕೆ ಪೂರಕವಾಗಿಲ್ಲವೇ?
ಇಲ್ಲ. ನಮ್ಮ ತಂದೆ 2000 ದಲ್ಲಿಯೇ ಕರಡು ಮಸೂದೆಯನ್ನು ಸಿದ್ಧಪಡಿಸಿ ದ್ದರು. ಅದರಲ್ಲಿ 27 ಅಂಶಗಳಿದ್ದವು. ಜನರಲ್ಲಿ ಮೌಢ್ಯವನ್ನು ಬಿತ್ತುವ ಟಿ.ವಿ ಕಾರ್ಯಕ್ರಮಗಳನ್ನೂ ನಿಷೇಧಿಸುವ ಪ್ರಸ್ತಾಪ ಇತ್ತು.

ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಒತ್ತಡ ಹೆಚ್ಚಾದಾಗ 2003ರಲ್ಲಿ ಒಂದು ಜಾಹೀರಾತು ನೀಡಿತು ಅಷ್ಟೆ. 2013ರ ಆಗಸ್ಟ್ 20ರಂದು ತಂದೆಯ ಹತ್ಯೆಯಾದಾಗ ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಲಾಯಿತು. ಅದರಲ್ಲಿ ಕೇವಲ 12 ಅಂಶಗಳು ಮಾತ್ರ ಇವೆ.

ಮರಾಠಿ ಚಾನೆಲ್‌ಗಳಲ್ಲಿಯೂ ಜ್ಯೋತಿಷ ಕಾರ್ಯಕ್ರಮಗಳು ಪ್ರಸಾರವಾಗುತ್ತವೆಯೇ?
ಎಲ್ಲ ಚಾನೆಲ್‌ಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ಬರುತ್ತವೆ. ಜನರಲ್ಲಿ ಮೌಢ್ಯವನ್ನು ಬಿತ್ತುತ್ತವೆ. ಅವನ್ನು ತಕ್ಷಣ ನಿಷೇಧಿಸಬೇಕು.

ನರೇಂದ್ರ ದಾಭೋಲ್ಕರ್‌ ಹೋರಾಟದ ಫಲವಾಗಿ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ವಿರೋಧಿ ಸುಗ್ರೀವಾಜ್ಞೆ ಜಾರಿಯಾಗಿದೆ. ಇದು ಇತರ ರಾಜ್ಯಗಳಿಗೆ ಮಾದರಿಯಲ್ಲವೇ?
ಹಾಗೆ ಆಲೋಚಿಸಿದರೆ ಕರ್ನಾಟಕವೇ ಇತರ ರಾಜ್ಯಗಳಿಗೆ ಮಾದರಿ. ಮಹಾರಾಷ್ಟ್ರದಲ್ಲಿ 13 ವರ್ಷಗಳ ಹೋರಾಟದ ನಂತರ, ಅದೂ ನನ್ನ ತಂದೆಯ ಹತ್ಯೆಯ ನಂತರ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆದರೆ ಇಲ್ಲಿ ಮುಖ್ಯಮಂತ್ರಿಯೇ ಇಂತಹ ಮಸೂದೆ ಜಾರಿಗೆ ಆಸಕ್ತಿ ವಹಿಸಿದ್ದಾರೆ. ಕರಡು ಮಸೂದೆ ಸಿದ್ಧಪಡಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಕಾನೂನು ಶಾಲೆಗೆ ವಹಿಸಿದ್ದು ಕೂಡ ಸ್ವಾಗತಾರ್ಹ ನಿರ್ಧಾರ.

ಯಾರ ವಿರುದ್ಧ ನಿಮ್ಮ ಹೋರಾಟ?
ನಾವು ಜನರ ನಂಬಿಕೆಯನ್ನು ಪ್ರಶ್ನೆ ಮಾಡುವುದಿಲ್ಲ. ಧರ್ಮ, ದೇವರು, ನಂಬಿಕೆ ಎಲ್ಲವೂ ನೈತಿಕ ಜೀವನವನ್ನು ನಡೆಸಲು ಸಹಕಾರಿಯಾಗಿದ್ದರೆ ನಮ್ಮ ತಕರಾರು ಏನೂ ಇಲ್ಲ. ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧ ಮಾತ್ರ ನಮ್ಮ ಹೋರಾಟ.

ಮೂಢ ನಂಬಿಕೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಮಹಿಳೆಯ ಸಹಭಾಗಿತ್ವ ಹೇಗಿದೆ?
ನಮ್ಮ ಹೋರಾಟದಲ್ಲಿ ಶೇ 10ರಷ್ಟು ಮಹಿಳೆಯರು ಸಕ್ರಿಯರಾಗಿದ್ದಾರೆ. ಇನ್ನೂ ಹೆಚ್ಚಿನ ಮಹಿಳೆಯರನ್ನು ಜಾಗೃತಿಗೊಳಿಸುವ ಯತ್ನ ನಡೆಯುತ್ತಲೇ ಇದೆ.

ಹೋರಾಟದಲ್ಲಿ ನಿಮಗೆ ಇರುವ ಸವಾಲುಗಳೇನು?
ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನಬದ್ಧ ಅಧಿಕಾರ ನಮ್ಮ ದೇಶದ ನಾಗರಿಕರಿಗೆ ಇದೆ. ಆದರೆ ಕೆಲವರು ಅಂಧಶ್ರದ್ಧೆ, ಮೂಢನಂಬಿಕೆಯನ್ನೂ ನಮ್ಮ ಹಕ್ಕು ಎಂದು ಪ್ರತಿಪಾದಿಸುತ್ತಾರೆ. ಇದು ನಮ್ಮ ಪರಂಪರೆ ಎನ್ನುತ್ತಾರೆ! ಇದನ್ನು ತೊಡೆದು ಹಾಕುವುದು ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಇದು ನಿಧಾನಕ್ಕೆ ಆಗುವ ಪರಿವರ್ತನೆ. ಎಷ್ಟೇ ತಡವಾದರೂ ಬೆಳಕು ಬಂದೇ ಬರುತ್ತದೆ ಎಂಬ ವಿಶ್ವಾಸ ನಮಗೆ ಇದೆ.

ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನಾ ಸಮಿತಿಯ ಕಾರ್ಯಕ್ರಮಗಳು ಹೇಗೆ ನಡೆಯುತ್ತಿವೆ?
ನನ್ನ ತಂದೆಯ ಹತ್ಯೆ ನಂತರವೂ ಸಮಿತಿಯ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಒಟ್ಟು 220 ಶಾಖೆಗಳಿವೆ. ಸಾವಿರಾರು ಕಾರ್ಯಕರ್ತರಿದ್ದಾರೆ. ಅಂಧಶ್ರದ್ಧಾ ನಿರ್ಮೂಲನಾ ವಾರ್ತಾ ಪತ್ರವನ್ನು ತಿಂಗಳಿಗೊಮ್ಮೆ ಪ್ರಕಟಿಸುತ್ತೇವೆ. ಇದಕ್ಕೆ 25 ಸಾವಿರಕ್ಕೂ ಹೆಚ್ಚು ಚಂದಾದಾರರಿದ್ದಾರೆ.

ಸಮಿತಿಯ ನಿರ್ವಹಣೆಗೆ ಆರ್ಥಿಕ ಸಹಾಯ ಹೇಗೆ ಬರುತ್ತದೆ?
ಇದೊಂದು ಜನರ ಸಮಿತಿ. ಇದಕ್ಕೆ ಸರ್ಕಾರ ಅಥವಾ ವಿದೇಶಿ ಮೂಲಗಳಿಂದ ಹಣ ಬರುವುದಿಲ್ಲ. ಜನರೇ ಹಣ ನೀಡುತ್ತಾರೆ.

ಮೂಢ ನಂಬಿಕೆಯ ವಿರುದ್ಧದ ಹೋರಾಟವಲ್ಲದೆ ಸಮಿತಿ ಬೇರೆ ಯಾವ ಕಾರ್ಯಕ್ರಮಗಳನ್ನು ಮಾಡುತ್ತದೆ?
ಕೆರೆಗಳಲ್ಲಿ ಗಣಪತಿ ವಿಸರ್ಜನೆ ವಿರುದ್ಧ 1995ರಿಂದ ಜನಜಾಗೃತಿ ಮಾಡಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸುಡದಂತೆ ಮಕ್ಕಳಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಶಾಲೆಗಳಿಗೆ ಹೋಗಿ ‘ಈ ಬಾರಿ ಪಟಾಕಿಗೆ ಹಾಕುವ ಹಣವನ್ನು ಕಡಿಮೆ ಮಾಡುತ್ತೇನೆ. ಪಟಾಕಿಗೆ ನೀಡುವ ಹಣದ ಶೇ 50 ರಷ್ಟನ್ನು ಪುಸ್ತಕ ಖರೀದಿಗೆ ಬಳಸುತ್ತೇನೆ’ ಎಂದು ಮಕ್ಕಳಿಂದ ಪ್ರತಿಜ್ಞೆ ಮಾಡಿಸಲಾಗುತ್ತದೆ. ಕಳೆದ ಬಾರಿ ಇಂತಹ 25 ಕೋಟಿ ಭರವಸೆಗಳನ್ನು ಸಂಗ್ರಹಿಸಿದ್ದೇವೆ. ಹೋಳಿ ಹಬ್ಬದಲ್ಲಿ ಕೂಡ ಪರಿಸರ ಹಾನಿಗೆ ಸಂಬಂಧಿಸಿದಂತೆ ಜನರಿಗೆ ತಿಳಿವಳಿಕೆ ಹೇಳಲಾಗುತ್ತಿದೆ.

ಮಕ್ಕಳಿಗಾಗಿ ಇರುವ ಇತರ ಕಾರ್ಯಕ್ರಮಗಳು ಯಾವವು?
‘ವಿಜ್ಞಾನ ಬೋಧ ವಾಹಿನಿ’ ಮೂಲಕ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಂಚಾರಿ ತಾರಾಲಯದ ಮೂಲಕ ಜ್ಯೋತಿಷ ಹೇಗೆ ವಿಜ್ಞಾನವಲ್ಲ ಎಂಬ ತಿಳಿವಳಿಕೆ ನೀಡಲಾಗುತ್ತಿದೆ. ಮೂಢನಂಬಿಕೆಯ ಬಗ್ಗೆ ಶಾಲಾ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ.  

ಇತರ ಸಾಮಾಜಿಕ ಚಟುವಟಿಕೆಗಳು ಏನು?
ದೇವಾಲಯಗಳಿಗೆ ಮಹಿಳೆಯರ ಪ್ರವೇಶ ಅವಕಾಶಕ್ಕೆ ಹೋರಾಟ, ಸರ್ಪ ಮಿತ್ರ ಯೋಜನೆ ಮೂಲಕ ಹಾವುಗಳ ಬಗ್ಗೆ ತಿಳಿವಳಿಕೆ, ಮಾನಸ ಮಿತ್ರ ಯೋಜನೆ ಮೂಲಕ ಮನೋರೋಗಿಗಳಿಗೆ ಆಪ್ತ ಸಲಹೆ ಮುಂತಾದ ಹಲವಾರು ಯೋಜನೆಗಳನ್ನು ಸಮಿತಿ ಮಾಡುತ್ತಿದೆ.

ಮೊದಲಿನಿಂದಲೂ ನೀವು ಈ ಹೋರಾಟದಲ್ಲಿ ಭಾಗಿಯಾಗಿದ್ದಿರಾ?
ನನ್ನ ತಂದೆಯ ಹೋರಾಟದಲ್ಲಿ ಮೊದಲಿಂದಲೂ ಭಾಗಿಯಾಗಿದ್ದೆ. ಆದರೆ ಪೂರ್ಣಾವಧಿ ಕಾರ್ಯಕರ್ತೆಯಾಗಿರಲಿಲ್ಲ.
ಈಗ ನಾನು ಮತ್ತು ನನ್ನ ಪತಿ ಇಬ್ಬರೂ ಸಂಪೂರ್ಣವಾಗಿ ಇದರಲ್ಲಿ ತೊಡಗಿಕೊಂಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT