ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಧರಗುಡ್ಡದಲ್ಲಿ ಗುರುಪೂರ್ಣಿಮೆ ಬೆಳಕು

ಸುತ್ತಾಣ
Last Updated 10 ಜುಲೈ 2015, 19:30 IST
ಅಕ್ಷರ ಗಾತ್ರ

ಅನುದಿನದ ಯಾಂತ್ರಿಕತೆಯ ಏಕತಾನತೆಯಿಂದ ಬೇಸತ್ತ  ತನುಮನಗಳನ್ನು ತಂಪಾಗಿಸಿಕೊಳ್ಳಬೇಕು ಎಂದು ನಗರಿಗರು ಸದಾ ಬಯಸುತ್ತಿರುತ್ತಾರೆ. ನಿಸರ್ಗದ ರಮ್ಯತೆಯೊಂದಿಗೆ ಸ್ಪರ್ಧಿಸುವಂತಿರುವ ತರು-ಲತೆಗಳ ಸೊಂಪಿನ  ಪರಿಸರ ಹಾಗೂ ಪ್ರಶಾಂತತೆ, ಭಕ್ತಿ, ಧ್ಯಾನ, ಜೀವನ ಧರ್ಮಯೋಗ, ಮತ್ತೂ ಹತ್ತು ಹಲವು ಸುಸಂಸ್ಕೃತಿಗಳ ಸಂಯೋಗಗಳ ತಾಣವನ್ನು ಅರಸಬೇಕೆಂದರೆ ಬೆಂಗಳೂರಿಗೆ ಅನತಿ ದೂರದಲ್ಲಿರುವ ಕೆಂಗೇರಿಗೆ 2 ಕಿ.ಮೀ. ಅಂತರದಲ್ಲಿರುವ ಕೋಡಿಪಾಳ್ಯದ  ಶ್ರೀಧರಗುಡ್ಡದ ಆಶ್ರಮಕ್ಕೆ ತೆರಳಬೇಕು.

ಸುಮಾರು 19 ವರ್ಷಗಳ ಹಿಂದೆ ಶ್ರೀಧರಗುಡ್ಡವೆಂದು ಹೆಸರಾದ ಇಲ್ಲಿನ ಹಸಿರ ಬನದ ನಡುವಿನ  ಪ್ರಾಂಗಣದಲ್ಲಿ ಆದಿಪೂಜ್ಯ ವಿನಾಯಕ, ಕರುಣೇಶ್ವರ, ದಕ್ಷಿಣಾಮೂರ್ತಿ, ಕರುಣಾಕ್ಷಿ ದೇವಿಯ-ಪಾದಗಳಿರುವ ಹಾಗೂ ಬೃಹದ್ದಾಕಾರದ ಹುತ್ತವಿರುವ ಸುಬ್ರಹ್ಮಣ್ಯ ಮಂದಿರಗಳಿವೆ.ಪರಮೇಶ್ವರನ ಪರಿವಾರವೇ ಇಲ್ಲಿದೆ ಎಂದು ಹೇಳಬಹುದು. ಶ್ರೀ ಶನೇಶ್ವರನ ಮಂದಿರದಲ್ಲಿ ಸಪ್ತ ಮಾತೃಕೆಯರು ವಿರಾಜಮಾನರಾಗಿರು ಹಾಗೂ 2003ರಲ್ಲಿ ಶಂಕರ ಜಯಂತಿಯ ಅಂಗವಾಗಿ ಸ್ಥಾಪಿಸಲಾಗಿರುವ ಶ್ರೀ ಶಂಕರಾಚಾರ್ಯರ ದಿವ್ಯ ರೂಪದ ಪ್ರತಿಮೆಯನ್ನು ಇಲ್ಲಿ ಕಾಣಬಹುದು. 

ಊರ ಹಬ್ಬದ ಸಮಯದಲ್ಲಿ ರಥೋತ್ಸವ, ದೀಪೋತ್ಸವ, ತೆಪ್ಪೋತ್ಸವ, ಅನ್ನಸಂತರ್ಪಣೆ ಮುಂತಾದವುಗಳು ಜರುಗುತ್ತವೆ. ಶಿವರಾತ್ರಿಯ ದಿನದಂದು ಅಹೋರಾತ್ರಿ ಜಾಗರಣೆ ಮಾಡಲು ಇದು ಹೇಳಿ ಮಾಡಿಸಿದ ಪ್ರಶಾಂತ ತಾಣ. ಗುಡ್ಡದ ಮೇಲೆ ನವವರ್ಣ ವನದಲ್ಲಿ, ನವಗ್ರಹ ವಿಗ್ರಹಗಳು ಅವುಗಳಿಗೆ ಪೂರಕವಾದ ಗಿಡಗಳೊಡನೆ ಸ್ಥಾಪನೆಗೊಂಡಿವೆ. ಜತೆಗೆ ತೆಂಗಿನ ತೋಟದ ಸೊಬಗು, ದನಕರುಗಳ ಕೊಟ್ಟಿಗೆಯ ಶುಭ್ರತೆ ಎಲ್ಲವೂ ಕಣ್ಮನಗಳಿಗೆ ಆನಂದಕರವಾಗಿವೆ.ವ್ಯಾಸವೇದ ಪೀಠದಲ್ಲಿ ವೇದ ಪಾಠಶಾಲೆ, ಸಂಸ್ಕೃತ ಶಾಲೆ, ಯೋಗ ಶಾಲೆ, ಪಂಚಕರ್ಮ, ಆಯುರ್ವೇದ, ಪುಸ್ತಕ ಭಂಡಾರ, ಆಶ್ರಮ ಆಹಾರ, ಆರೋಗ್ಯ ಕೇಂದ್ರ, ಅಧ್ಯಯನ ಕೇಂದ್ರ ಮೊದಲಾದ ಒಂಬತ್ತು ಫೌಂಡೇಶನ್‌ಗಳಿದ್ದು, ಹಿರಿಯ-ಕಿರಿಯರಿಗೆ ಕಲಿಯಲು ಉತ್ತಮ ಸ್ಥಳಾವಕಾಶವೆಂದೇ ಹೇಳಬಹುದು.

ಗುರು ಪೂರ್ಣಿಮೆಯನ್ನು ಇಲ್ಲಿ ಮಹತ್ವಪೂರ್ಣವಾಗಿ ಆಚರಿಸುತ್ತಾರೆ. ಅಂದು ಶ್ರೀ ಕರುಣಾಕ್ಷಿ ಮಂದಿರದ ನಾಲ್ಕು ದ್ವಾರಗಳು ದರ್ಶನಕ್ಕಾಗಿ ತೆರೆಯಲಾಗುತ್ತದೆ. ಗುರುಮಾತಾ ಅಮ್ಮನವರು 12 ವರ್ಷದೊಳಗಿನ ಮಕ್ಕಳಿಗೆ ಬೀಜಾಕ್ಷರ ಮಂತ್ರದೀಕ್ಷೆ, ಆಧ್ಯಾತ್ಮ ಸಾಧನೆಯ ಸಾಧಕರಿಗೆ ಮಂತ್ರದೀಕ್ಷೆ, ಆವಾಹನೆ ಅಭಿಮಂತ್ರಿಸಿದ ಬಂಗಾರ  ಅಥವಾ ಬೆಳ್ಳಿಯ ಶ್ರೀಚಕ್ರವನ್ನು ಮೊದಲೇ ನೊಂದಾಯಿಸಿ ಕೊಂಡಿರುವ ಭಕ್ತರಿಗೆ ನೀಡುತ್ತಾರೆ. ಗಂಡು ಮಕ್ಕಳಿಗೆ ಗಾಯತ್ರೀ ಮಂತ್ರ ಉಪದೇಶ ಹಾಗೂ ಸರ್ವರಿಗೂ ಅಭಿಮಂತ್ರಿಸಿದ ಸಂಬಂಧ ಮಾಲೆಯನ್ನು ನೀಡುತ್ತಾರೆ.

ಪ್ರತಿ ಶುಕ್ರವಾರ, ಭಾನುವಾರದ  ದಿನಗಳಲ್ಲಿ ವಿಶೇಷತೆಯೊಂದಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆ ಇದೆ. ಸಮಗ್ರವಾಗಿ ಶ್ರೀಧರ ಗುಡ್ಡ ಅಧ್ಯಾತ್ಮಿಕವಾಗಿಯೂ, ವಿಹಾರಕ್ಕೂ ಯೋಗ್ಯವಾದ ಸ್ಥಳ. ಇದರ ಸಮೀಪದಲ್ಲೇ ಇರುವ ಓಂಕಾರೇಶ್ವರಗುಡ್ಡದ ದ್ವಾದಶ ಲಿಂಗಗಳು, ಮುಕ್ತಿನಾಥ, ರಾಜ ರಾಜೇಶ್ವರಿ ಹಾಗೂ ನಿಮಿಷಾಂಬ  ಮಂದಿರಗಳ ದರ್ಶನವನ್ನು ಮಾಡಬಹುದು.

***
ಜುಲೈ 31ರಂದು ಗುರುಪೂರ್ಣಿಮೆ. ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿ: ಭಾನು ರಾವ್-9448054116,ಉಷಾ-9880383793.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT