ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ತಮಿಳರಿಗೆ ಭೂಮಿ ವಾಪಸ್‌

27 ವರ್ಷಗಳ ಕಾಯುವಿಕೆಗೆ ಸಿಕ್ಕ ಫಲಿತಾಂಶ *ಎರಡು ದಶಕಗಳಿಂದಲೂ ತಾತ್ಕಾಲಿಕ ಶಿಬಿರದಲ್ಲಿರುವ ನಿರಾಶ್ರಿತರು
Last Updated 29 ಮೇ 2016, 19:30 IST
ಅಕ್ಷರ ಗಾತ್ರ

‘ತಮಿಳರ ಮನವೊಲಿಸಲು ಅವರಿಗೆ ಭೂಮಿಯನ್ನು ಹಿಂದಿರುಗಿಸಲಾಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ನಿಮ್ಮ ಸ್ವಂತ ಭೂಮಿ ಸೇನೆಯ ವಶದಲ್ಲಿದ್ದರೆ ನಿಮಗೆ ಏನನಿಸುತ್ತಿತ್ತು?’ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೋದ ವಾರ ಜಪಾನ್‌ನಲ್ಲಿ ಶ್ರೀಲಂಕಾ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮೇಲಿನ ಪ್ರಶ್ನೆ ಮುಂದಿಟ್ಟಿದ್ದರು.

ಲಂಕಾ ಸೇನೆ ಕಳೆದ 27 ವರ್ಷಗಳಿಂದ ತನ್ನ ಚಟುವಟಿಕೆಗೆ ಬಳಸಿದ್ದ ಭೂಮಿಯಲ್ಲಿ ಕೆಲವು ಭಾಗವನ್ನು ತಮಿಳರಿಗೆ ಮರಳಿಸಿದೆ. ಸಿರಿಸೇನ ಸರ್ಕಾರದ ಈ ಕ್ರಮವನ್ನು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಸೇರಿದಂತೆ ಕೆಲವರು ವಿರೋಧಿಸಿದ್ದಾರೆ. ‘ರಾಜಪಕ್ಸೆ ಆಡಳಿತದ ಅವಧಿಯಲ್ಲಿದ್ದಂತಹ ಕಠಿಣ ಭದ್ರತಾ ಕ್ರಮಗಳನ್ನು ಸಿರಿಸೇನ ಸಡಿಲಿಸುತ್ತಿದ್ದಾರೆ’ ಎಂಬುದು ಅವರ ಆರೋಪ.

ಆದರೆ ಇದನ್ನು ತಳ್ಳಿಹಾಕಿರುವ ಸಿರಿಸೇನ, ‘ತಮಿಳರು ಈ ಭೂಮಿಗಾಗಿ ಒಂದೆರಡು ವರ್ಷ ಕಾದಿಲ್ಲ. ಇಪ್ಪತ್ತೇಳು ವರ್ಷಗಳಿಂದ ಕಾಯುತ್ತಿದ್ದಾರೆ’  ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

1,000 ಎಕರೆ ಭೂಮಿಯನ್ನು ವಾಪಸ್‌ ಮಾಡಲು ಶ್ರೀಲಂಕಾ ಸಂಪುಟ 2015ರ ಫೆಬ್ರುವರಿಯಲ್ಲಿ ಒಪ್ಪಿಗೆ ಸೂಚಿಸಿತ್ತು. ಮಾತ್ರವಲ್ಲ, ಅದೇ ವರ್ಷ ಮಾರ್ಚ್‌ ತಿಂಗಳಲ್ಲಿ 425 ಎಕರೆ ಭೂಮಿ ಹಿಂದಿರುಗಿಸಿತ್ತು. ಇದೀಗ ಇನ್ನಷ್ಟು ಭೂಮಿಯನ್ನು ಅದರ ವಾರಸುದಾರರಿಗೆ ಒಪ್ಪಿಸಲಾಗಿದೆ.

ಲಂಕಾ ಸರ್ಕಾರದ ಕ್ರಮವನ್ನು ಅಂತರರಾಷ್ಟ್ರೀಯ ಸಮುದಾಯ ಸ್ವಾಗತಿಸಿದೆ. ಎಲ್‌ಟಿಟಿಇ ಸಂಘಟನೆ ಸೋಲೊಪ್ಪಿಕೊಂಡ ಬಳಿಕವೂ ಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯ ಮುಂದುವರಿದಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ದೂರಿದ್ದವು.

ಸೇನಾ ಚಟುವಟಿಕೆಗೆ ಬಳಕೆ:  ಎಲ್‌ಟಿಟಿಇ ಜತೆಗಿನ ಕದನ ಸಂದರ್ಭ ಜಾಫ್ನಾ ಸೇರಿದಂತೆ ಕೆಲವೆಡೆ ತಮಿಳರಿಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತ್ತು.


ಸೇನಾ ನೆಲೆ ಸ್ಥಾಪಿಸಿ ಎಲ್‌ಟಿಟಿಇ ವಿರುದ್ಧದ ಹೋರಾಟಕ್ಕೆ ಈ ಭೂಮಿಯನ್ನು ಬಳಸಿತ್ತು. ಎಲ್‌ಟಿಟಿಇ ಜತೆಗಿನ ಕದನ 2009 ರಲ್ಲಿ ಮುಕ್ತಾಯ ಕಂಡಿತ್ತು.
ಅಂತರ್ಯುದ್ಧ ಕೊನೆಗೊಂಡು ಸಮಾರು ಏಳು ವರ್ಷಗಳು ಕಳೆದಿವೆಯಾದರೂ ತನ್ನ ವಶಕ್ಕೆ ತೆಗೆದುಕೊಂಡಿದ್ದ ಭೂಮಿಯನ್ನು ಸರ್ಕಾರ ವಾರಸುದಾರರಿಗೆ ವಾಪಸ್‌ ಮಾಡಿರಲಿಲ್ಲ.

ಒಂದು ಅಂದಾಜಿನ ಪ್ರಕಾರ ಲಂಕಾ ಸೇನೆ ಜಾಫ್ನಾದಲ್ಲಿ ತಮಿಳರಿಗೆ ಸೇರಿದ್ದ ಸುಮಾರು 6,381 ಎಕರೆ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ತಮಿಳರು ತಮ್ಮ ಭೂಮಿ ವಾಪಸ್‌ ಪಡೆಯಲು ಕಳೆದ ಕೆಲ ವರ್ಷಗಳಿಂದ ಕಾನೂನು ಸಮರ ನಡೆಸುತ್ತಾ ಬಂದಿದ್ದಾರೆ. ಆದರೆ ಇದರಲ್ಲಿ ಪೂರ್ಣ ಯಶಸ್ಸು ದಕ್ಕಿರಲಿಲ್ಲ.

ತಮಿಳರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ, ಭೂಮಿ ವಾಪಸ್‌ ಮಾಡುವ ಬಗ್ಗೆ ಸಿರಿಸೇನ ಅವರು ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದರು. ಇದೀಗ ತಾವು ಕೊಟ್ಟಿದ್ದ ಭರವಸೆ ಈಡೇರಿಸುವ ಕೆಲಸ ಆರಂಭಿಸಿದ್ದಾರೆ. ತಮ್ಮ ಭೂಮಿ ಸೇನೆಯ ವಶದಲ್ಲಿರುವ ಕಾರಣ ಕೆಲವು ತಮಿಳರು ಸುಮಾರು 20 ವರ್ಷಗಳಿಂದಲೂ ತಾತ್ಕಾಲಿಕ ಶಿಬಿರದಲ್ಲಿ ನೆಲೆಸಿದ್ದಾರೆ. 

ಇನ್ನೊಂದು ಸಂಘರ್ಷಕ್ಕೆ ಅವಕಾಶ ನೀಡೆವು: ‘ಎಲ್‌ಟಿಟಿಇ ತನ್ನ ಸೇನಾ ಶಕ್ತಿಯನ್ನು ಪೂರ್ಣವಾಗಿ ಕಳೆದುಕೊಂಡಿದೆಯಾದರೂ  ತಮಿಳರಲ್ಲಿ ಸರ್ಕಾರದ ಕುರಿತು, ಸಿಂಹಳೀಯರ ಕುರಿತು ಅತೃಪ್ತಿ ಇದ್ದೇ ಇದೆ’ ಎಂದು ಸಿರಿಸೇನ ಇತ್ತೀಚೆಗೆ ಹೇಳಿದ್ದರು.

ಆದರೆ ಈ ದ್ವೀಪರಾಷ್ಟ್ರದಲ್ಲಿ ಪ್ರತ್ಯೇಕತಾವಾದಿಗಳು ತಲೆಎತ್ತದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ‘ತಮಿಳರಿಗೆ ಭೂಮಿ ವಾಪಸ್‌ ಮಾಡುವುದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಆದರೆ ನಿಜವಾಗಿಯೂ ದೇಶಕ್ಕೆ ಇದರಿಂದ ಅಪಾಯವಿಲ್ಲ’ ಎಂದಿದ್ದಾರೆ.

ಎಲ್‌ಟಿಟಿಇ ಜತೆಗಿನ ಸಮರ ಕೊನೆಗೊಂಡರೂ ತಮಿಳರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಲಂಕಾ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ತಮಿಳರಲ್ಲಿ ಒಂದು ರೀತಿಯ ಅತೃಪ್ತಿ ಮನೆ ಮಾಡಿದೆ.  ಈ ಅಸಮಾಧಾನ ಯಾವಾಗ ಬೇಕಾದರೂ ಸ್ಫೋಟಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಎಲ್‌ಟಿಟಿಇ ಸಂಘಟನೆ ಮತ್ತೆ ಸಕ್ರಿಯವಾಗಬಹುದು ಎಂಬ ಸಂದೇಹ ಕೂಡಾ ಬಲಗೊಳ್ಳುತ್ತಿತ್ತು. ಸಿರಿಸೇನ ಅವರು ಕೆಲವೊಂದು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡು ತಮಿಳರ ಅತೃಪ್ತಿಯನ್ನು ಶಮನಗೊಳಿಸಿ ಅವರ ವಿಶ್ವಾಸ ಮರಳಿ ಪಡೆಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT