ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದಿಹಲ್ಲಿನ ನಗೆಯ ಸಿನಿಮಾ ಧ್ಯಾನಿ ರಿಚರ್ಡ್ ಅಟೆನ್‌ಬರೊ

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಡಿ­­­ಕಿ’ ಎಂದು ವಿಶ್ವದ ಸಿನಿಮಾ ಅಭಿಮಾನಿಗಳು ಅವರನ್ನು ಕರೆದರು. ಇನ್ನೂ ಒತ್ತಿಹೇಳುವುದಾದರೆ ‘ಡಿಕಿ ಡಾರ್ಲಿಂಗ್’. ತಮಗೆ ಡಿಕಿ ಎನ್ನುವ ಹೆಸರು ಅಷ್ಟು ಇಷ್ಟವಿಲ್ಲ ಎಂದು ಕನಿಷ್ಠ ಹತ್ತು ಸಂದರ್ಶನಗಳಲ್ಲಿ ಅವರು ಹೇಳಿಕೊಂಡಿದ್ದುಂಟು. ‘ಡಿಕ್’ ಎನ್ನುವ ಹೆಸರೇ ಚೆಂದ ಎಂದು ಮುಂಭಾಗದ ಹಲ್ಲುಗಳ ಸಂದಿಯನ್ನು ತೋರಿಸಿ ನಗುತ್ತಿದ್ದರು. ವರ್ಷಗಟ್ಟಲೆ ಅವರು ‘ಸರ್ ರಿಚರ್ಡ್’; ಈಚಿನ ದಿನಗಳಲ್ಲಿ ಅಧಿಕೃತವಾಗಿ ‘ಲಾರ್ಡ್ ಅಟೆನ್‌ಬರೊ’. ಅಪರಿಚಿತರೇ ಆಗಲೀ, ತಮ್ಮನ್ನು ಏನೆಂದು ಕರೆಯುವುದು ಎಂದು ಕಳೆದ ಎಂಟ್ಹತ್ತು ವರ್ಷಗಳಲ್ಲಿ ಕೇಳಿದರೆ, ಅವರು ಹೇಳುತ್ತಿದ್ದುದು– ‘ನನ್ನನ್ನು ಬಾಲ್ಡಿ ಎನ್ನಿ’.

ರಿಚರ್ಡ್ ಅಟೆನ್‌ಬರೊ ಎಷ್ಟೆಲ್ಲಾ ಹೆಸರು ಸಂಪಾದಿಸಿದ್ದರು ಎನ್ನುವುದಕ್ಕೆ ಅವರ ಇಷ್ಟೆಲ್ಲಾ ನಾಮಧೇಯಗಳೇ ಸಾಕ್ಷಿ. ಇನ್ನು ಸಂದಿಹಲ್ಲಿನ ನಗು ಅವರ ಹೃದಯವಂತಿಕೆಗೆ ಕನ್ನಡಿ. ತಮ್ಮ ೮೪ನೇ ವಯಸ್ಸಿನಲ್ಲಿ ನೀಲಿ ಡೆನಿಮ್ ಜೀನ್ಸ್, ಟಿ–ಶರ್ಟ್ ಹಾಕಿಕೊಂಡು, ಏದುಸಿರು ಬಿಡುತ್ತಲೇ ಮೆಟ್ಟಿಲುಗಳನ್ನು ಏರುತ್ತಿದ್ದ ಅವರ ತಲೆಯಲ್ಲಿ ಆಗಷ್ಟೇ ಹೊಸ ಸ್ಕ್ರಿಪ್ಟ್ ಮೂಡಿತ್ತು. ಅವರ ಹೃದಯದಲ್ಲಿ ಪೇಸ್‌ಮೇಕರ್ ಅಳವಡಿಸಲಾಗಿತ್ತು. ಕೊನೆಯ ದಿನಗಳಲ್ಲಿ ಆ ಆರ್ದ್ರ ಹೃದಯ ಎಷ್ಟೋ ಸಲ ಹೇಳಿದ ಮಾತನ್ನು ಕೇಳುತ್ತಿರಲಿಲ್ಲ. ಪಾರ್ಶ್ವವಾಯುವಿನಿಂದ ಐದು ವರ್ಷ ಪಡಿಪಾಟಲು ಪಟ್ಟ ಅವರು ತಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಮಾರಾಟ ಮಾಡಿ, ೨೦೧೩ರಲ್ಲಿ ಪಶ್ಚಿಮ ಲಂಡನ್‌ನ ‘ಕೇರ್ ಹೋಮ್‌’ನಲ್ಲಿ ನೆಲೆ ಪಡೆದುಕೊಂಡರು.

ಅವರ ಬದುಕಿನಲ್ಲಿ ಸಿನಿಮೀಯವೂ, ಬೆರಗು ಮೂಡಿಸುವಂಥವೂ ಆದ ಫ್ಲಾಷ್‌ಬ್ಯಾಕ್‌ಗಳಿವೆ. ೧೯೪೫ರಲ್ಲಿ ರಾಡಾದಲ್ಲಿ (ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್‌ ಆರ್ಟ್) ಕಂಡ ನಟಿ ಶಿಲಾ ಸಿಮ್ ಅವರನ್ನು ಅಟೆನ್‌ಬರೊ ಮದುವೆಯಾದರು. ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಹುಟ್ಟಿದ. ಹಿರಿಯ ಮಗಳು ಜೇನ್ ಹೋಲೆಂಡ್ ೨೦೦೪ರಲ್ಲಿ ಸುನಾಮಿ ಅಪ್ಪಳಿಸಿದಾಗ ಥಾಯ್ಲೆಂಡ್‌ನಲ್ಲಿ ಕೊಚ್ಚಿಕೊಂಡು ಹೋದರು. ಅವರೊಬ್ಬರೇ ಅಲ್ಲ; ಅವರ ಮಗಳು, ಅತ್ತೆಯೂ ನೀರುಪಾಲಾದರು. ಅದನ್ನು ವಿಪರೀತ ತಲೆಗೆ ಹಚ್ಚಿಕೊಂಡ ಅಟೆನ್‌ಬರೋ ಆರೋಗ್ಯದಲ್ಲಿ ಏರುಪೇರಾಯಿತು.

ಅದಕ್ಕಿಂತ ಒಂದು ವರ್ಷ ಮೊದಲು ಅಟೆನ್‌ಬರೋ ಹೇಳಿದ್ದರು: ‘ನಾನು ಯಾವ ರೀತಿಯಲ್ಲೂ ಬುದ್ಧಿಜೀವಿ ಅಲ್ಲ. ವಿದ್ವತ್ತಿನ ನಿರ್ಬಂಧಗಳಿಗೆ ಒಳಪಟ್ಟವನು ನಾನು. ನನ್ನ ಜ್ಞಾನದ ವ್ಯಾಪ್ತಿಗೆ ಮೀರಿದ ಯಾವುದನ್ನೂ ಮಾಡಲಾಗದ ಕಾರಣಕ್ಕೆ ಹಠಾತ್ತನೆ ಸಿಟ್ಟಿಗೇಳುತ್ತೇನೆ. ಎಂದೂ ವಿಶ್ವವಿದ್ಯಾಲಯದಲ್ಲಿ ಕಲಿತವನು ನಾನಲ್ಲ ಎಂಬ ಸಂಗತಿಯೂ ನನಗೆ ಕೋಪ ತರಿಸುತ್ತದೆ’.

ಬ್ರಿಟನ್ ಸರ್ಕಾರ ಸಾಧಕ ಎಂದು ೧೯೭೬ರಲ್ಲಿ ‘ನೈಟ್‌ಹುಡ್’ ಪದವಿ ಕೊಟ್ಟ ದಿಗ್ಗಜ, ೧೯೯೩ರಲ್ಲಿ ‘ಲೈಫ್ ಪೀರ್’ ಗೌರವ ಪಡೆದ ಅಪರೂಪದ ವ್ಯಕ್ತಿ ಅಟೆನ್‌ಬರೊ ತಮ್ಮ ೮೦ನೇ ವಯಸ್ಸಿನಲ್ಲಿಯೂ ಹೇಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಅವರ ಈ ಮಾತೇ ಪುಷ್ಟಿ. ಇಂಥ ಅಸಂಖ್ಯ ಅಭಿಪ್ರಾಯ, ಅನುಭವ ನುಡಿಗಳು ಡಯಾನಾ ಹಾಕಿನ್ಸ್ ಬರೆದ ಅಟೆನ್‌ಬರೊ ಆತ್ಮಕಥೆಯಲ್ಲಿ ಅಡಕವಾಗಿವೆ.

‘ನನ್ನ ಇಬ್ಬರೂ ಸಹೋದರರಾದ ಡೇವಿಡ್ ಹಾಗೂ ಜಾನ್ ನನಗಿಂತ ಬುದ್ಧಿವಂತರಾಗಿದ್ದರು. ಕಾರ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅವರು ವಿಶ್ವವಿದ್ಯಾಲಯ ಸೇರಿದರು. ನಾನು ಡ್ರಾಮಾ ಸ್ಕೂಲ್ ಸೇರಿದೆ’ ಎಂದು ಆತ್ಮಕಥೆಯಲ್ಲಿ ಉಲ್ಲೇಖವಿದೆ. ೧೯೪೧ರಲ್ಲಿ ಮೊದಲ ಅವಧಿಯ ಕಲಿಕೆ ಮುಗಿಸಿ ಮನೆಗೆ ಬಂದಾಗ ಅಪ್ಪನ ಓದುವ ಕೋಣೆಯಲ್ಲಿ ನಾಟಕಕ್ಕೆ ಸಂಬಂಧಿಸಿದ ಕ್ಲಾಸಿಕ್ ಕೃತಿಗಳು ಕಣ್ಣಿಗೆ ಬಿದ್ದವು. ಗ್ರೀಕ್ ರಂಗಭೂಮಿ ಚರಿತ್ರೆ, ಚೀನಾ ರಂಗಭೂಮಿ ಇತ್ಯಾದಿ. ಮಗ ನಾಟಕ ಕಲಿಯತೊಡಗಿದ ಮೇಲೆ ಅಪ್ಪ ತಾನೂ ಅವುಗಳ ಬಗೆಗೆ ಓದಬೇಕು ಎಂದು ಕೊಂಡುತಂದಿದ್ದ ಪುಸ್ತಕಗಳು ಅವು ಎಂದು ತಕ್ಷಣ ಅಟೆನ್‌ಬರೊಗೆ ಗೊತ್ತಾಗಿ ಕಣ್ಣು ತೇವಗೊಂಡವು.

ರಿಚರ್ಡ್ ಸ್ಯಾಮ್ಯುಯಲ್ ಅಟೆನ್‌ಬರೊ ಹುಟ್ಟಿದ್ದು ಆಗಸ್ಟ್ 29, 1923ರಲ್ಲಿ, ಕೇಂಬ್ರಿಜ್‌ನಲ್ಲಿ. ಎರಡನೇ ಮಹಾಯುದ್ಧದ ಕಾಲದಲ್ಲಿ ‘ರಾಯಲ್‌ ಏರ್‌ಫೋರ್ಸ್‌’ನಲ್ಲಿ ಕೆಲಸ ಮಾಡಿದವರು. ಪೈಲಟ್‌ ತರಬೇತಿ ಪಡೆದರೂ ಅವರ ಗಮನ ಅಭಿನಯದ ಕಡೆಗೆ ಹೊರಳಿದ್ದು ಸೋಜಿಗ. ‘ರಾಯಲ್ ಅಕಾಡೆಮಿ ಆಫ್ ಡ್ರಮ್ಯಾಟಿಕ್‌ ಆರ್ಟ್’ನ ಮಾರ್ಗದರ್ಶಕ ರಾಗಿ ತಮ್ಮ ಕೊನೆಯುಸಿರಿರುವವರೆಗೂ ಅವರು ಸೇವೆ ಸಲ್ಲಿಸಿದರು. ಅವರ ಅಭಿನಯದ ಹಣೆಬರಹ ಬರೆದ ಆ ಸಂಸ್ಥೆಗೂ ಮೊದಲು ಲೀಸೆಸ್ಟರ್‌ಷೈರ್‌ನ ಲಿಟ್ಲ್‌ ಥಿಯೇಟರ್‌ನಲ್ಲಿ ತಾಲೀಮಿಗೆ ಒಡ್ಡಿಕೊಂಡಿದ್ದರು.

ಸಿನಿಮಾ ರಂಗದ ನಂಟು ಹತ್ತಿಸಿಕೊಂಡು, 1942ರ ವೇಳೆಗಾಗಲೇ ಅಭಿನಯಿಸ ತೊಡಗಿದರು. ಅವರಿಗೆ ಹೆಸರು ತಂದುಕೊಟ್ಟಿದ್ದು ‘ಬ್ರಿಗ್ಟನ್‌ ರಾಕ್‌’ (1947) ಚಿತ್ರದಲ್ಲಿನ ನೆಗೆಟಿವ್ ಪಾತ್ರ. ಅದಾಗಿ ಎರಡು ವರ್ಷ ಉರುಳುವುದರಲ್ಲಿ ಬ್ರಿಟನ್‌ನ ಜನಪ್ರಿಯ ನಟರ ಸಾಲಿನಲ್ಲಿ ಅವರ ಹೆಸರಿತ್ತು. 1967–68ರಲ್ಲಿ ಸತತ ಎರಡು ವರ್ಷ ‘ಗೋಲ್ಡನ್‌ ಗ್ಲೋಬ್‌’ ಪ್ರಶಸ್ತಿ ಅವರಿಗೆ ಒಲಿಯಿತು.

ಎಪ್ಪತ್ತೆಂಟು ಸಿನಿಮಾಗಳಲ್ಲಿ ಅಭಿನಯ, ಹನ್ನೆರಡು ಸಿನಿಮಾಗಳ ನಿರ್ದೇಶನ, ಹದಿಮೂರರ ನಿರ್ಮಾಣ ಸಂಖ್ಯಾ ದೃಷ್ಟಿಯಲ್ಲಿ ಅಷ್ಟು ದೊಡ್ಡದೇನೂ ಅಲ್ಲ. ಆದರೆ, ಅವರ ದೊಡ್ಡಸ್ಥಿಕೆ ಇರುವುದು ‘ಗಾಂಧಿ’ ಕುರಿತ ಸಿನಿಮಾ ಮಾಡಿದುದರಲ್ಲಿ. ಹದಿನೆಂಟು ವರ್ಷಗಳ ತಪಸ್ಸು ಅದು. ಲಂಡನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೋತಿಲಾಲ್‌ ಕೊಠಾರಿ ಎನ್ನುವ ಗಾಂಧಿವಾದಿ ತುಂಬಿದ ಮಹಾತ್ಮನ ಬದುಕಿನ ಚಿತ್ರಣಗಳನ್ನು ಸಿನಿಮಾ ಆಗಿ ಮೂಡಿಸುವ ಬಯಕೆ ಮೂಡಿಸಿಕೊಂಡ ಅಟೆನ್‌ಬರೊ ಅದಕ್ಕಾಗಿ ಸವೆಸಿದ ಹಾದಿ ಕಷ್ಟದ್ದೇ ಆಗಿತ್ತು. ಆ ಸಿನಿಮಾದ ಎರಡನೇ ಕ್ಯಾಮೆರಾ ಯೂನಿಟ್‌ನಲ್ಲಿ ಸಹಾಯಕ ಸಿನಿಮಾಟೋ ಗ್ರಫರ್‌ ಆಗಿದ್ದ ಜಿ.ಎಸ್‌. ಭಾಸ್ಕರ್‌ ಆ ಕಾಲಘಟ್ಟದ ಅನುಭವಗಳನ್ನು ನೆನೆಯುವುದು ಹೀಗೆ: ‘ಅಟೆನ್‌ಬರೊ ಅವರ ಜೊತೆ ಮಾತುಕತೆಗೆ ತೊಡಗುವ ಅವಕಾಶ ನನಗೆಂದೂ ಸಿಗಲಿಲ್ಲ. ಆದರೆ, ಆ ಅಗಾಧ ಕೆಲಸದ ಭಾಗವಾದುದರಿಂದ ಅನೇಕ ಸಿನಿಮಾಟೋಗ್ರಫಿಯ ಸೂಕ್ಷ್ಮಗಳನ್ನು ಕಲಿತೆ. ಮುಖ್ಯವಾಗಿ ಪಾಶ್ಚಾತ್ಯ ಚಿತ್ರ ತಯಾರಿಕೆಯಲ್ಲಿ ಇರುವ ಶಿಸ್ತಿನಿಂದ ನಾನು ಸಾಕಷ್ಟು ಕಲಿತೆ. ನಮ್ಮಲ್ಲಿ ಆ್ಯಕ್ಷನ್‌, ಕಟ್‌ ಹೇಳುವವರು ನಿರ್ದೇಶಕರು. ಆದರೆ, ಅಲ್ಲಿ ಸಹಾಯಕ ನಿರ್ದೇಶಕರು ಆ ಕೆಲಸ ಮಾಡುತ್ತಾರೆ. ಅಟೆನ್‌ಬರೊ ಇಡೀ ನಿರ್ದೇಶನದ ರೂಹನ್ನು ನಿರ್ಧರಿಸಿ, ಎಲ್ಲವನ್ನೂ ದೂರದಿಂದಲೇ ನಿಯಂತ್ರಿಸುತ್ತಿದ್ದ ವೈಖರಿಯೇ ಬೆರಗು ಮೂಡಿಸುವಂಥದ್ದು’.

1981, ಜನವರಿ 31ರಂದು ಗಾಂಧಿ ಅಂತಿಮ ಸಂಸ್ಕಾರದ ಚಿತ್ರೀಕರಣ ನಡೆಯಿತು. ಅದಕ್ಕೆ ಪೂರ್ವಭಾವಿಯಾಗಿ ದೊಡ್ಡ ಕಾನ್ಫರೆನ್ಸ್‌ ರೂಮ್‌ನಲ್ಲಿ ಹಿಂದಿನ ದಿನವೇ ಎಲ್ಲಾ ತಂತ್ರಜ್ಞರಿಗೂ ನಕಾಶೆ ತೋರಿಸಿ, ಎಲ್ಲೆಲ್ಲಿ ಯಾವ್ಯಾವ ಕ್ಯಾಮೆರಾವನ್ನು ಯಾವ ಕೋನದಲ್ಲಿ ಇಡಬೇಕು ಎಂದು ಯೋಜಿಸಲಾಯಿತು. ಸುಮಾರು 12 ಕ್ಯಾಮೆರಾಗಳು ಚಿತ್ರೀಕರಣಕ್ಕೆ ಸಜ್ಜಾಗಿದ್ದವು. ಯಾವ ಶಾಟ್‌ ಕೂಡ ಓವರ್‌ಲ್ಯಾಪ್‌ ಆಗದಂತೆ ಎಚ್ಚರ ವಹಿಸಿದ್ದೇ ಒಂದು ಸೋಜಿಗ. ನಮ್ಮಲ್ಲಿ ರೋಲ್‌, ಕ್ಯಾಮೆರಾ ಎಂದೊಡನೆ ಆ್ಯಕ್ಷನ್‌ ಹೇಳಿಬಿಡಬೇಕು ಎಂಬ ತುರ್ತು ಸೃಷ್ಟಿಯಾಗುತ್ತದೆ. ಆದರೆ, ಅಲ್ಲಿ ರೋಲ್‌, ಕ್ಯಾಮೆರಾ ಎಂದು ಸಹಾಯಕ ನಿರ್ದೇಶಕ ಹೇಳಿದ ನಂತರವೂ ವಿನ್ಸ್‌ ವಾಕರ್‌ ಪಾತ್ರಧಾರಿ ಮಾರ್ಟಿನ್‌ ಶೀನ್‌ ಅವರಿಗೆ ಖುದ್ದು ಅಟೆನ್‌ಬರೊ, ಎಲ್ಲಿಂದ ಹೇಗೆ ಸಾಗಬೇಕು ಎಂದು ರನ್ನಿಂಗ್‌ ಕಾಮೆಂಟ್ರಿ ಕೊಡತೊಡಗಿದರು. 18 ಟೇಕ್‌ಗಳ ನಂತರ ಓಕೆ ಆದ ಆ ಶಾಟ್‌ ಇನ್ನೂ ಭಾಸ್ಕರ್‌ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಬೆನ್‌ ಕಿಂಗ್ಸ್‌ಲೇ ಅಭಿನಯದ ‘ಗಾಂಧಿ’ ಸಿನಿಮಾ ನೋಡದೆ ಮಹಾತ್ಮನ ಕುರಿತ ಇನ್ನೊಂದು ದೃಶ್ಯ ಪ್ರಯೋಗ ನಡೆಯುವುದೇ ವಿರಳ. ‘ಕೂರ್ಮಾವತಾರ’ ಚಿತ್ರದಲ್ಲಿ ಗಾಂಧಿ ಪಾತ್ರಧಾರಿಯ ಕಣ್ಣಲ್ಲಿ ಒಂದೇ ಹನಿ ನೀರು ಬರಬೇಕು ಎಂದು ಧಾರಾವಾಹಿ ನಿರ್ದೇಶಕ ತಾಕೀತು ಮಾಡುವ ವ್ಯಂಗ್ಯಸೂಕ್ಷ್ಮವನ್ನು ಹೇಳಲು ಅಟೆನ್‌ಬರೊ ಮರುಸೃಷ್ಟಿಸಿದ ‘ಗಾಂಧಿ’ ಸಿನಿಮಾದ ದೃಶ್ಯವನ್ನೇ ಗಿರೀಶ್‌ ಕಾಸರವಳ್ಳಿ ಬಳಸಿರುವುದು ಇದಕ್ಕೆ ಸಾಕ್ಷಿ.

ರಮ್ಯ ಕಥಾನಕಗಳ ದೊಡ್ಡ ಹಂದರಕ್ಕೆ ಹೆಚ್ಚು ಜೋತುಬೀಳುವ ಮನಸ್ಸುಗಳ ನಡುವೆ ಇತಿಹಾಸದ ಆವರಣಕ್ಕೆ ಅಟೆನ್‌ಬರೊ ಪದೇಪದೇ ಪ್ರವೇಶಿಸಿ, ಸಿನಿಮಾ ಪ್ರಯೋಗ ಮಾಡಿದರು. ಚರ್ಚಿಲ್‌ರ ಕುರಿತ ‘ಯಂಗ್‌ ವಿನ್‌ಸ್ಟನ್‌’ (1972) ಹಾಗೂ ಚಾರ್ಲಿ ಚಾಪ್ಲಿನ್‌ ಬಗೆಗಿನ ‘ಚಾಪ್ಲಿನ್‌’ (1992) ಚಿತ್ರಗಳು ಇದಕ್ಕೆ ಉದಾಹರಣೆಗಳು.  ಐರ್ಲೆಂಡ್‌ ಕವಿ ಸಿ.ಎಸ್‌. ಲೆವಿಸ್‌ ವಿಚ್ಛೇದಿತ ಮಹಿಳೆಯೊಂದಿಗೆ ಹೊಂದಿದ್ದ ಸಂಬಂಧದ ವಸ್ತುವಿನ ‘ಶಾಡೊ ಲ್ಯಾಂಡ್ಸ್‌’ ಬಗೆಗೆ ಹಲವು ಟೀಕೆ–ಟಿಪ್ಪಣಿಗಳು ವ್ಯಕ್ತವಾದಾಗ ಅದೇ ಸಂದುಹಲ್ಲುಗಳ ನಗೆ ಚೆಲ್ಲಿದ್ದರು ಅಟೆನ್‌ಬರೊ.

‘ಜುರಾಸಿಕ್‌ ಪಾರ್ಕ್‌’ನಲ್ಲಿ ಊರುಗೋಲು ಹಿಡಿದು ಥೀಮ್‌ ಪಾರ್ಕ್‌ ಡೆವಲಪರ್‌ ಪಾತ್ರದಲ್ಲಿ ತಮ್ಮ ಹಳೆಯ ಗತ್ತನ್ನು ನೆನಪಿಸಿ, ಅಭಿನಯದ ಕೊನೆಯ ಇನಿಂಗ್ಸ್‌ ತೋರಿದ ಅವರು, ಹೆಸರಾಂತ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್ ಮನಸ್ಸನ್ನೂ ಗೆದ್ದವರು. ‘ಕ್ಲೋಸಿಂಗ್‌ ದಿ ರಿಂಗ್’ (2007) ಅವರ ನಿರ್ದೇಶನದ ಕೊನೆಯ ಚಿತ್ರ.

ಅವರು ನಿರ್ಮಿಸಿದ ‘ದಿ ಆ್ಯಂಗ್ರಿ ಸೈಲೆನ್ಸ್‌’, ‘ವಿಷಲ್‌ ಡೌನ್‌ ಅಂಡ್‌ ವಿಂಡ್‌’ ಬಹುಕಾಲ ನೆನಪಿನಲ್ಲಿ ಇಡುವಂಥವು. ‘ಓಹ್‌! ವಾಟ್‌ ಎ ಲವ್ಲಿ ವಾರ್‌’ (1969) ಅವರ ನಿರ್ದೇಶನದ ಮೊದಲ ರುಜು.

ಚೆಲ್ಸಿ ಫುಟ್‌ಬಾಲ್‌ ಕ್ಲಬ್‌ನ ಪರಮ ಅಭಿಮಾನಿಯಾಗಿದ್ದ ಅವರು, 1969–82ರವರೆಗೆ ಅದರ ನಿರ್ದೇಶಕರಾಗಿ ಕೆಲಸ ಮಾಡಿದರು. 1993–2008ರವರೆಗೆ ಗೌರವ ಉಪಾಧ್ಯಕ್ಷನಾಗುವ ಭಾಗ್ಯವೂ ಅವರದ್ದಾಯಿತು.

ಮಗ ಮೈಕಲ್‌ ಅಪ್ಪನಂತೆ ರಂಗ ನಿರ್ದೇಶನದಲ್ಲಿ ತೊಡಗಿದ್ದರೆ, ಬದುಕಿ ಉಳಿದಿರುವ ಮಗಳು ಶಾರ್ಲೊಟ್‌ ನಾಟಕಗಳಲ್ಲಿ ಅಭಿನಯಿಸಲು ಬಣ್ಣ ಹಚ್ಚುತ್ತಿದ್ದಾರೆ. ಪತಿಯ ಆರೋಗ್ಯ ಕೈಕೊಟ್ಟಾಗಲೇ ‘ಸೆನೆಲ್ ಡೆಮೆನ್ಷಿಯಾ’ ಎಂಬ ನೆನಪಿನ ಶಕ್ತಿ ಕುಂದಿದ ಕಾಯಿಲೆಗೆ ಪತ್ನಿ ಶೆಲಾ ಸಿಮ್ ತುತ್ತಾದರು. ತಮ್ಮ ಪತಿಗಿಂತ ಒಂದು ವರ್ಷ ವಯಸ್ಸಿನಲ್ಲಿ ದೊಡ್ಡವರಾದ ಅವರಿಗೆ ತಾವು ಮಾರಿದ ಆಸ್ತಿ ಪಾಸ್ತಿಯ ನೆನಪೂ ಸರಿಯಾಗಿ ಇಲ್ಲ.

‘ನಿತ್ಯವೂ ಯಾರು ಯಾರಿಗೆ ಸಂತಾಪ ಸೂಚಿಸಲಾಗಿದೆ ಎಂದು ಪತ್ರಿಕೆಗಳ ಪುಟಗಳನ್ನು ತಿರುಗಿಸಿ ನೋಡುತ್ತೇನೆ. ಅಲ್ಲಿ ನನ್ನ ಹೆಸರು ಇಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡು ಮತ್ತೆ ಕೆಲಸಕ್ಕೆ ಅಣಿಯಾಗುತ್ತೇನೆ’ ಎಂದು ತಮ್ಮ ಎಂಬತ್ತೈದರ ಹರೆಯದಲ್ಲೂ ಹೇಳುತ್ತಿದ್ದ ಅಟೆನ್‌ಬರೊ ಜೀವನಪ್ರೀತಿಯನ್ನು ಅವರು ಕೊನೆಯುಸಿರೆಳೆದ ಆಗಸ್ಟ್‌ 25ರಂದು ಅನೇಕರು ನೆನೆದರು. ಹಾಗೆ ನೆನಪಿಸಿಕೊಂಡು ಹನಿಗಣ್ಣಾಗುವವರ ಎದೆಗಳಲ್ಲಿ ಈಗಲೂ ಅವರು ಬದುಕಿದ್ದಾರೆ!        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT