ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕರಿಗೆ ದೊರಕದ ರಾಘವಾಂಕ

Last Updated 24 ನವೆಂಬರ್ 2014, 14:31 IST
ಅಕ್ಷರ ಗಾತ್ರ

ಹಾಸನ ಜಿಲ್ಲೆಯ ಬೇಲೂರು ಎಂದರೇನೇ ಹೊಯ್ಸಳ ಶಿಲ್ಪಕಲೆಯ ತವರೂರು. ಇಲ್ಲಿಯ ಪುರಾಣ ಪ್ರಸಿದ್ಧ ದೇಗುಲಗಳಲ್ಲಿ ಹೊಯ್ಸಳ ಕಲಾಶಿಲ್ಪಗಳು ಚಕಿತಗೊಳಿಸುತ್ತವೆ. ಅವುಗಳ ಪೈಕಿ ಒಂದಾಗಿದೆ ಪಾತಾಳೇಶ್ವರ ದೇವಾಲಯ.

ಈ ಪಾತಾಳೇಶ್ವರ ದೇವಾಲಯದ ಪರಿಸರದಲ್ಲಿ ಹೊಯ್ಸಳ ಕಾಲದ ಮಹಾಕವಿ ರಾಘವಾಂಕನ ಸಮಾಧಿ ಇದೆ. ದೇವಾಲಯವೇ ರಾಘವಾಂಕನ ಸಮಾಧಿಯಾಗಿರಲೂಬಹುದು ಎಂಬ ಸಂಶೋಧಕರ ಹಲವು ದಶಕಗಳ ಊಹೆ ಇದೀಗ ಸುಳ್ಳಾಗಿದೆ. ಈ ದೇವಾಲಯವು ಸಮಾಧಿ ದೇವಾಲಯವೂ ಅಲ್ಲ, ಅದರ ಆವರಣದಲ್ಲಿ ಯಾವ ಸಮಾಧಿಯೂ ಇಲ್ಲ’ ಎಂಬುದೀಗ ಸ್ಪಷ್ಟವಾಗಿ ನಿರ್ಣಯಿತವಾಗಿದೆ.

ರಾಘವಾಂಕ ಮಹಾಕವಿ ಹರಿಹರನ ಸೋದರಳಿಯನೂ, ಶಿಷ್ಯನೂ ಆಗಿದ್ದು ಷಟ್ಪದಿ ಕವಿ ಎಂದು ಪ್ರಖ್ಯಾತನಾಗಿದ್ದ. ಮೂಲತಃ ದೋರಸಮುದ್ರದ ಹೊಯ್ಸಳ ದೊರೆಗಳ ಆಶ್ರಿತರಾಗಿದ್ದ ಈ ಕುಟುಂಬವು ಹಂಪೆಗೆ ಹೋಗಿ ನೆಲೆಸಿತ್ತು. ಹೊಯ್ಸಳ ನರಸಿಂಹನ ಆಸ್ಥಾನದ ಅಧಿಕಾರಿಯಾಗಿದ್ದ ಕೆರೆಯ ಪದ್ಮರಸನು ರಾಘವಾಂಕನ ಮಿತ್ರನಾಗಿದ್ದ ಕಾರಣ ರಾಘವಾಂಕ, ತನ್ನ ಕೊನೆಯ ದಿನಗಳಲ್ಲಿ ಬೇಲೂರಿಗೆ ಬಂದಿದ್ದ. ಆತ ಇಲ್ಲಿಯೇ ಮರಣ ಹೊಂದಿದ್ದ, ಈತನ ಸಮಾಧಿ ಇಲ್ಲಿಯೇ ಇದೆ ಎಂಬ ನಂಬಿಕೆ ಇತ್ತು. ಬೇಲೂರಿನ ಸಂಶೋಧಕ ಮತ್ತು ಸಾಹಿತಿ ಡಾ. ಶ್ರೀವತ್ಸ ಎಸ್. ವಟಿ ಅವರು ಈ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಲು ನಿಶ್ಚಯಿಸಿದರು. ಅವರ ಮೇಲ್ವಿಚಾರಣೆಯಲ್ಲಿ ಗರ್ಭಗೃಹದ ಶಿವಲಿಂಗದ ಬುಡಭಾಗ ಹಾಗೂ ಇಡೀ ದೇವಾಲಯದ ಆವರಣವನ್ನು ಮೂಲ ಮಟ್ಟದವರೆಗೂ ಅಗೆದು ಕೂಲಂಕಷವಾಗಿ ಪರಿಶೀಲಿಸಲಾಯಿತು. ಆದರೆ ಸಮಾಧಿಯಾಗಲೀ, ಅಂಥ ಯಾವುದೇ ಬಗೆಯ ಕುರುಹುಗಳಾಗಲೀ ಸಿಕ್ಕಲಿಲ್ಲ. ಆದ್ದರಿಂದ ರಾಘವಾಂಕನ ಸಮಾಧಿಯ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಆ ಸಮಾಧಿಯು ಎಲ್ಲಿದೆ ಎಂಬ ಬಗ್ಗೆ ಬೇಲೂರಿನ ಇತರ ಭಾಗಗಳಲ್ಲಿ ಸಂಶೋಧನೆ ನಡೆಯಬೇಕಾಗಿದೆ.

ದೇಗುಲದ ಬಗ್ಗೆ ಒಂದಿಷ್ಟು...
ಪಾತಾಳೇಶ್ವರ ದೇವಾಲಯ ನಿರ್ಮಾಣದ ಕುರಿತಾದ ಶಾಸನ ಸಿಕ್ಕಿಲ್ಲವಾದ ಕಾರಣ ನಿರ್ಮಾತೃ, ಶಿಲ್ಪಿ, ಕಾಲ, ಕಾರಣ ಮುಂತಾದ ವಿವರಗಳು ಸ್ಪಷ್ಟವಾಗಿ ತಿಳಿದಿಲ್ಲ. ಆದರೂ ಇದು ಸುಮಾರು 12-13ನೇ ಶತಮಾನದಲ್ಲಿ ಹೊಯ್ಸಳ ಶಿಲ್ಪಿಗಳಿಂದ ನಿರ್ಮಿತವಾಗಿದೆ ಎಂದು ವಾಸ್ತು ಲಕ್ಷಣಗಳು ಹಾಗೂ ಶಿಲ್ಪಕಲೆಯ ಆಧಾರದಿಂದ ಹೇಳಬಹುದು. ಸುಮಾರು 12 ಅಡಿ ಚೌಕದ ಗರ್ಭಗೃಹ, ಅಷ್ಟೇ ಅಳತೆಯ ಶುಕನಾಸಿ ಕೋಣೆ ಇವು ಈಗ ಉಳಿದಿರುವ ಅಂಗಭಾಗಗಳು. ನವರಂಗ, ಮುಖಮಂಟಪ ಇತ್ಯಾದಿಗಳು ಇಲ್ಲ. ಆಕಾರದಲ್ಲಿ ಪುಟ್ಟದಾದರೂ ಇದರ ಶಿಲ್ಪಕಲೆಯು ಗಮನಾರ್ಹವಾಗಿದೆ. ಗರ್ಭಗೃಹದ ಮೂರೂ ದಿಕ್ಕುಗಳ ಹೊರಭಿತ್ತಿಯಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಸುಂದರವಾದ ಶಿಲ್ಪಗಳಿವೆ. ಗಜಸಂಹಾರಮೂರ್ತಿ, ಭೈರವ ಮೂರ್ತಿಗಳು, ಅಂಧಕಾಸುರ ವಧ, ಕಾಳಿಂಗಮರ್ದನ, ನಾಟ್ಯಸರಸ್ವತಿ, ಹರಿಹರ, ವಿವಿಧ ದೇವಿಯರು, ವೇಣು-ಮೃದಂಗ-ತಾಳ ಮುಂತಾದ ವಾದ್ಯವಾದಕರು, ದರ್ಪಣಸುಂದರಿ, ಕಪಿಕುಪಿತೆ, ಮುಂತಾಗಿ ಸುಮಾರು 30 ಭಿತ್ತಿಶಿಲ್ಪಗಳಿವೆ.

ಈ ಪುಟ್ಟ ದೇವಾಲಯದಲ್ಲಿ ಆಕರ್ಷಕವಾದ ಇಷ್ಟೊಂದು ಭಿತ್ತಿಶಿಲ್ಪಗಳಿರುವುದು ಗಮನಾರ್ಹ. ಈ ಮೂರ್ತಿಶಿಲ್ಪಗಳ ಮೇಲುಬದಿಯಲ್ಲಿ ವಿವಿಧ ಮಾದರಿಯ ಶಿಖರವಿನ್ಯಾಸಗಳ ಸೊಗಸಾದ ಕೆತ್ತನೆ ಇದೆ. ಪಟ್ಟಿಕೆಯಲ್ಲಿ ಪ್ರಣಯ ಶಿಲ್ಪಗಳು, ಕಪೋತತೋರಣದ ಯೋಗನರಸಿಂಹ-ಶಿವ-ಧನ್ವಂತರಿ-ದೇವಿಯರು, ಶುಕನಾಸಿ ದ್ವಾರದ ಸುಂದರ ಕೆತ್ತನೆಯುಳ್ಳ ಮಕರ ಫಲಕದಲ್ಲಿ ಷಡ್ಭುಜ ನಟರಾಜ, ನಂದಿ, ದ್ವಾರಪಾಲರು, ಗಣಪತಿ, ಗರ್ಭಗೃಹ ಹಾಗೂ ಶುಕನಾಸಿಕೋಣೆಯ ಛಾವಣಿಯಲ್ಲಿ ಪದ್ಮಾಕಾರದ  ಪ್ರಧಾನ ಭುವನೇಶ್ವರಿಗಳು, ಅವುಗಳಲ್ಲಿ ಅಷ್ಟದಿಕ್ಪಾಲಕರು-ಪುರಾಣ ಕಥಾಪ್ರಸಂಗಗಳು ಇತ್ಯಾದಿ ಶಿಲ್ಪಕಾರ್ಯಗಳು ಆಕರ್ಷಕವಾಗಿವೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ಇದರ ವಿಶೇಷವೇನೆಂದರೆ ಲಿಂಗವು ನಾಲ್ಕೂವರೆ ಅಡಿ ನೀಳವಾದ ಹುಟ್ಟುಗಲ್ಲಾಗಿದ್ದು ಇದರ ಅರ್ಧಭಾಗವು ನೆಲಮಟ್ಟದಿಂದ ಕೆಳಗೆ ಹುದುಗಿದೆ. ಮುಕ್ಕಾಲು ಅಡಿಯಷ್ಟು ಭಾಗ ಮಾತ್ರವೇ ಕಾಣುವಂತಿದ್ದು ಇನ್ನುಳಿದದ್ದು ಪೀಠದ ಒಳಗಿದೆ. ಇದೂ ಇಲ್ಲಿನ ವಿಶೇಷಗಳಲ್ಲಿ ಒಂದು.

ಈ ದೇವಾಲಯಕ್ಕೆ ಪಾತಾಳೇಶ್ವರ ಎಂಬ ಹೆಸರಿರುವುದೇ ಕುತೂಹಲಕರ. ಸರ್ಕಾರಿ ದಾಖಲೆಗಳಲ್ಲಿ ಇದಕ್ಕೆ ‘ವೀರೇಶ್ವರ’ ಎಂದು ಅಧಿಕೃತ ಹೆಸರಿದೆ. ಈ ದೇವಾಲಯವು ಬೇಲೂರಿನ ಕೋಟೆಯ ಈಶಾನ್ಯಭಾಗಕ್ಕೆ ಅಂಟಿದಂತೆ ಕೋಟೆಯ ಕಂದಕದ ಬದಿಯಲ್ಲಿ ನಿರ್ಮಿತವಾಗಿದ್ದು, ಊರು ಬೆಳೆಯುತ್ತಾ ಬಂದಂತೆ ರಸ್ತೆ, ಕಟ್ಟಡಗಳು ಮುಂತಾದ ನಿರ್ಮಾಣಗಳ ಕಾರಣ ನೆಲದ ಮಟ್ಟವು ಮೇಲೇರುತ್ತಾ ಬಂದಂತೆ ಮಳೆಯ ನೀರು ಕೊಚ್ಚಿತಂದುಹಾಕಿದ ಕೊಚ್ಚುಮಣ್ಣು ಸಂಗ್ರಹಗೊಳ್ಳುತ್ತಾ ದೇವಾಲಯದ ಪಾತಳಿಗಿಂತ ಮೇಲೆಮೇಲೆ ಬರತೊಡಗಿತು. ಹೀಗೆ ಶತಮಾನಗಳ ಕಾಲ ಸಂಗ್ರಹಗೊಂಡ ಮಣ್ಣು ದೇವಾಲಯವನ್ನು ಪಟ್ಟಿಕೆಗಳ ತನಕದ ಐದು ಅಡಿಗಳಷ್ಟು ಭಾಗವನ್ನು ಮುಚ್ಚಿಹಾಕಿತ್ತು. ರಸ್ತೆಯ ಮಟ್ಟವೂ ಮೇಲೆ ಬಂದ ಕಾರಣ ದೇವಾಲಯದ ಆಕಾರವು ಕುಬ್ಜವಾಗಿ ಗರ್ಭಗೃಹವು ನೆಲಮಟ್ಟದಿಂದ ಕೆಳಗೆ ಇರುವಂತೆ ಕಾಣತೊಡಗಿತು. ಹೀಗೆ ನೆಲದ ಮಟ್ಟಕ್ಕಿಂತ ಕೆಳಗಿರುವ ದೇವಾಲಯಗಳನ್ನು ‘ಪಾತಾಳ ದೇವಾಲಯಗಳು’ ಎಂದು ಕರೆಯುವುದು ವಾಡಿಕೆ. ಅದರಂತೆ ಜನರು ಈ ವೀರೇಶ್ವರ ದೇವಾಲಯವನ್ನು ‘ಪಾತಾಳೇಶ್ವರ’ ಎಂದು ಕರೆದಿರಬೇಕು. ಹೀಗೆ ಪಾತಾಳೇಶ್ವರ ದೇವಾಲಯ ಎಂಬ ಹೆಸರೇ ಜನಪ್ರಿಯವಾಗಿ ಮೂಲ ಹೆಸರೇ ಇತ್ತೀಚೆಗೆ ಮರೆಯುವಂತಾಗಿತ್ತು. 

ನೆಲದ ಮಟ್ಟಕ್ಕಿಂತ ಕೆಳಗಿದ್ದ ಕಾರಣ ಗರ್ಭಗೃಹಕ್ಕೆ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಛಾವಣಿಯಲ್ಲಿ ಗಿಡಗಂಟಿಗಳು ಬೆಳೆದು ಶಿಖರ ಭಾಗವು ಸಡಿಲಗೊಂದು ಶಿಥಿಲವಾಗುತ್ತಾ ಬಂದಿತ್ತು. ಮೇಲಿದ್ದ ಕಲ್ಲುಗಳು ಕೆಳಗೆ ಬೀಳತೊಡಗಿ, ಕೆಲವೇ ವರ್ಷಗಳಲ್ಲಿ ದೇವಾಲಯವು ಕುಸಿದು ಬೀಳುವ ಭಯ ಮೈದೋರಿತ್ತು. ನಿರಂತರವಾಗಿ ಪೂಜಾದಿಗಳು ನಡೆಯುತ್ತಿದ್ದ ಈ ದೇವಾಲಯವನ್ನು ರಕ್ಷಿಸಿಕೊಳ್ಳಲೇಬೇಕೆಂದು ಸಂಕಲ್ಪಿಸಿದ ಭಕ್ತರು ದೇವಾಲಯಕ್ಕೆ ಇಟ್ಟಿಗೆ ಗೋಡೆಯನ್ನು ಅಳವಡಿಸುವ ಯತ್ನವನ್ನೂ ನಡೆಸಿದ್ದರು. ಆದರೆ ಬೇಲೂರಿನ ಸಂಶೋಧಕ ಹಾಗೂ ದೇವಾಲಯ ವಾಸ್ತುಶಿಲ್ಪತಜ್ಞರಾದ ಡಾ. ಶ್ರೀವತ್ಸ ಎಸ್. ವಟಿ ಅವರು ‘ಇಷ್ಟು ಶಿಲ್ಪಕಲಾ ಸಮೃದ್ಧವಾದ ದೇವಾಲಯಕ್ಕೆ ಕಾಂಕ್ರೀಟ್ ಗೋಡೆಯು ತಕ್ಕುದ್ದಲ್ಲ. ಶಾಶ್ವತ ರಕ್ಷಕವೂ ಅಲ್ಲ. ದೇವಾಲಯವನ್ನು ಪೂರ್ಣವಾಗಿ ಬಿಚ್ಚಿ ಹೂತುಹೋಗಿರುವ ಭಾಗವನ್ನು ಮೇಲೆತ್ತಿ ನೆಲದ ಮಟ್ಟಕ್ಕೆ ಎತ್ತಿ ಯಥಾವತ್ತಾಗಿ ಮೂಲ ರೂಪದಲ್ಲಿ ಪುನಃ ನಿರ್ಮಿಸಬೇಕು. ಧರ್ಮಸ್ಥಳದ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನ ಸಹಕಾರದಿಂದ ಈ ಕಾರ್ಯವನ್ನು ಸಾಧಿಸ ಬಹುದು’ ಎಂದು ಸಲಹೆ ನೀಡಿ, ಆ ಸಂಸ್ಥೆಯೊಂದಿಗೆ ಸಂಪರ್ಕ ಮಾಡಿಸಿಕೊಟ್ಟರು.

‘ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಈ ದೇವಾಲಯದ ಶಿಲ್ಪಕಲೆ ಮತ್ತು ಐತಿಹಾಸಿಕ ಮಹತ್ವವನ್ನು ವಿವರಿಸಿದರು. ಧರ್ಮೋತ್ಥಾನ ಟ್ರಸ್ಟ್‌ನ ಸಹಾಯಧನದೊಂದಿಗೆ ಬೇಲೂರಿನ ಪಾತಾಳೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ನೀಡಿದ ಹಣವು ಪುನರ್ನಿರ್ಮಾಣ ವೆಚ್ಚವನ್ನು ಭರಿಸಲು ಸಹಾಯಕವಾಯಿತು. ಸುಮಾರು ಒಂದೂವರೆ ವರ್ಷ ಅವಧಿಯಲ್ಲಿ ದೇವಾಲಯದ ಪುನರ್ನಿರ್ಮಾಣಕಾರ್ಯ ಯಶಸ್ವಿಯಾಗಿ ನೆರವೇರಿದೆ. ನೆಲದಾಳದಲ್ಲಿ ಹುದುಗಿದ್ದ ಭಾಗಗಳ ಸಹಿತ ದೇವಾಲಯವನ್ನು ಪೂರ್ಣವಾಗಿ ಬಿಚ್ಚಿ, ಭದ್ರವಾದ ಅಡಿಪಾಯದ ಮೇಲೆ ಹೊಸ ಭೂಮಟ್ಟಕ್ಕೆ ಮೇಲೆತ್ತಿ ಶುಕನಾಸಿ ಕೋಣೆಯ ಹೊರಗೋಡೆ, ಗರ್ಭಗೃಹಕ್ಕೆ ಇಟ್ಟಿಗೆ-ಗಾರೆಯ ಶಿಖರ, ನಂದಿಗೆ ಪೀಠ, ಪಾವಟಿಗೆ, ಹೊರ ಆವರಣದ ನೆಲಕ್ಕೆ ಕಲ್ಲಿನ ನೆಲಹಾಸು, ಪ್ರವೇಶದ್ವಾರದ ಮೇಲುಬದಿಯಲ್ಲಿ ಆಸೀನ ಶಿವನ ಗಾರೆಯ ಶಿಲ್ಪ ಮುಂತಾದವನ್ನು ಹೊಸದಾಗಿ ಅಳವಡಿಸಿ ಮೂಲ ಶಿಲ್ಪಕಾರ್ಯಕ್ಕೆ ಎಲ್ಲೂ ಚ್ಯುತಿ ಬಾರದಂತೆ ಪುನರ್ನಿರ್ಮಾಣ ಮಾಡಲಾಗಿದೆ’ ಎಂಬ ಮಾಹಿತಿ ನೀಡಿದರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿರುವ  ಹೆಚ್. ಎಂ. ದಯಾನಂದ.

ನೆಲದಾಳದಿಂದ ಮೇಲೆದ್ದು ಪುನರ್ನಿರ್ಮಾಣಗೊಂಡಿರುವ ಈ ಶಿಲ್ಪ ಶ್ರೀಮಂತ ದೇವಾಲಯವು ಬೇಲೂರಿನ ಪ್ರವಾಸೀ ಆಕರ್ಷಣೆಯನ್ನು ಹೆಚ್ಚಿಸುವುದು ಎಂದು ನಿರೀಕ್ಷಿಸಲಾಗಿದೆ.  ಇದೇ ೧೨ರಂದು ಆಗಮೋಕ್ತ ಪ್ರಾಣಪ್ರತಿಷ್ಠೆ ಲೋಕಾರ್ಪಣ ಸಮಾರಂಭ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT