ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ರೋಗ ಅಕ್ಕರೆಯ ಸಲಹೆ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರತಿ ರೋಗದ ಚಿಕಿತ್ಸೆಯಲ್ಲೂ ಸೂಕ್ತವಾದ ಪಥ್ಯವನ್ನು ಪಾಲಿಸುವುದು ಮತ್ತು ಅಪಥ್ಯವನ್ನು ತ್ಯಜಿಸುವುದು ಬಹು ಮುಖ್ಯ. `ಪಥಿ ಹಿತಂ ಪಥ್ಯಂ' ಅಂದರೆ, ಆರೋಗ್ಯ  ಮತ್ತು ರೋಗ ನಿವಾರಣೆ ಮಾರ್ಗದಲ್ಲಿ ಹಿತವನ್ನು ಉಂಟು ಮಾಡುವುದಕ್ಕೆ `ಪಥ್ಯ' ಎನ್ನಬಹುದು. `ಪಥ್ಯೆ ಸತಿ ಗದಾರ್ತಸ್ಯ ಕಿಮೌಷಧ ನಿಶೇವಣಂ' ಎಂಬ ಆಯುರ್ವೇದದ ಹೇಳಿಕೆಯು ದ್ವಂದ್ವಾರ್ಥವನ್ನು ಕೊಡುತ್ತದೆ. ಪಥ್ಯವನ್ನು ಪಾಲಿಸಿದರೆ ರೋಗ ನಿವಾರಣೆಗೆ ಔಷಧಗಳ ಅವಶ್ಯಕತೆ ಇಲ್ಲ ಎಂಬುದು ಒಂದು ಅರ್ಥವಾದರೆ, ಪಥ್ಯವನ್ನು ಆಚರಿಸದೆ ಕೇವಲ ಔಷಧ ಸೇವನೆಯಿಂದ ರೋಗ ಪರಿಹಾರವಾಗದು ಎಂಬುದು ಇನ್ನೊಂದು ಅರ್ಥ.

ಮಧುಮೇಹ ರೋಗಿಗಳಂತೂ ಪಥ್ಯ ಮತ್ತು ಅಪಥ್ಯವಾದ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದು ಅತ್ಯಂತ ಮುಖ್ಯ. ಕಫವನ್ನು ಹೆಚ್ಚಿಸುವ ಆಹಾರ- ವಿಹಾರಗಳನ್ನು ವರ್ಜಿಸುವುದು ಒಳ್ಳೆಯದು. ಮಧುಮೇಹ ರೋಗಿಗಳ ದಿನಚರಿ ಇಂತಿರಲಿ:

1. ಬೆಳಗಿನ ಜಾವ ಕಫ ದೋಷದ ಪ್ರಾಧಾನ್ಯ ಇರುವ ಕಾಲವಾದ್ದರಿಂದ ಮಧುಮೇಹಿಗಳು ಬೇಗ ಏಳಬೇಕು. ತಡವಾಗಿ ಎದ್ದರೆ ದೇಹದಲ್ಲಿ ಕಫ ಹೆಚ್ಚಿ ಈ ಮೂಲಕ ರೋಗವು ಹೆಚ್ಚಾಗುತ್ತದೆ.

2. ಎದ್ದ ಕೂಡಲೇ ನೀರು ಕುಡಿಯುವ ಅಭ್ಯಾಸ ಒಳ್ಳೆಯದು. ಎಂಟು ಬೊಗಸೆಯಷ್ಟು ನೀರನ್ನು ಕುಡಿಯಬೇಕು. ಸ್ಥೂಲ ದೇಹಿಗಳಾದರೆ ಬಿಸಿ ನೀರನ್ನು (ಕರಗಿಸುವ ಗುಣ) ಕೃಶ ದೇಹಿಗಳು ತಣ್ಣೀರನ್ನು ಕುಡಿಯಬೇಕು. ಕೆಲವರಿಗೆ ಜೇನುತುಪ್ಪ, ನಿಂಬೆರಸವನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯುವ ಅಭ್ಯಾಸ ಇರುತ್ತದೆ. ಸ್ಥೂಲ ದೇಹಿಗಳಿಗೆ ಶುದ್ಧವಾದ ಜೇನುತುಪ್ಪ ಪಥ್ಯವಾದರೂ ಕೃಶ ದೇಹಿಗಳಿಗೆ ಅದು ಅಪಥ್ಯ. ಕಾಫಿ, ಟೀ ಸೇವಿಸಬೇಕಾದರೆ ಅವು ಕಷಾಯ ರಸ (ಒಗಚು) ಪ್ರಧಾನವಾಗಿ ಇರುವುದರಿಂದ ಸಕ್ಕರೆ ಸೇರಿಸದೇ ಕುಡಿಯಬಹುದು.

3. ಮಧುಮೇಹಿಗಳು ಬೆಳಿಗ್ಗೆ ತಪ್ಪದೇ ವ್ಯಾಯಾಮ ಮಾಡಲೇಬೇಕು. ಸ್ಥೂಲ ದೇಹಿಗಳು ಹೆಚ್ಚಾಗಿ ಮತ್ತು ಕೃಶ ದೇಹಿಗಳು ಸ್ವಲ್ಪ ವ್ಯಾಯಾಮ ಮಾಡಬೇಕು. ರೋಗಿಯು ಬಾಲ್ಯಾವಸ್ಥೆಯಲ್ಲಿದ್ದರೆ ವಿವಿಧ ರೀತಿಯ ಕ್ರೀಡೆಗಳು, ಮಾಧ್ಯಮ ವಯಸ್ಸಿನವರಾಗಿದ್ದರೆ ನೃತ್ಯ, ಏರೋಬಿಕ್ಸ್, ಜಿಮ್ ಮುಂತಾದ ವ್ಯಾಯಾಮಗಳು, ವೃದ್ಧರಾಗಿದ್ದರೆ ನಡಿಗೆ, ಸರಳವಾದ ಯೋಗಾಸನಗಳನ್ನು ಮಾಡಬೇಕು.

4. ಸ್ನಾನ ಮತ್ತು ಒಗ್ಗುವ ಎಣ್ಣೆಗಳನ್ನು ಹಚ್ಚಿ ಅಭ್ಯಂಗವನ್ನು ಆಚರಿಸಬೇಕು. ಅಭ್ಯಂಗದಿಂದ ರೋಗಿಗೆ ಕಾಲು ಉರಿ, ಜೋಮು ನಿವಾರಣೆ ಆಗುವುದರೊಂದಿಗೆ ನಿದ್ರೆ ಚೆನ್ನಾಗಿ ಬಂದು ರೋಗ ಹತೋಟಿಗೆ ಬರುತ್ತದೆ.

5. `ಊಟ ಬಲ್ಲವನಿಗೆ ರೋಗವಿಲ್ಲ' ಎಂಬಂತೆ ಮಧುಮೇಹಿಗಳು ತಾವು ಏನನ್ನು ತಿನ್ನಬೇಕು ಎಂಬುದನ್ನು ಚೆನ್ನಾಗಿ ಅರಿತಿರಬೇಕು. ಅನೇಕ ರೋಗಿಗಳಿಗೆ ಹಲವಾರು ಕಾರಣಗಳಿಂದ ಅವರ ರಕ್ತದ ಸಕ್ಕರೆಯ ಅಂಶ ತಗ್ಗಿ, ಸಿಹಿ ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ. ಸಿಹಿ ರುಚಿಯ ಆಹಾರಗಳು ರೋಗವನ್ನು ಹೆಚ್ಚಿಸುವುದರಿಂದ ಹಿತ, ಮಿತವಾಗಿ ಬಳಸಬೇಕು. ಸಿಹಿ ಸೇವನೆ ಕಫ ಕಾಲವಾದ ಬೆಳಿಗ್ಗೆ ಸರ್ವದಾ ನಿಷಿದ್ಧ. ಆದರೆ ಪಿತ್ತ ಕಾಲವಾದ ಮಧ್ಯಾಹ್ನ ಮತ್ತು ವಾತಕಾಲವಾದ ರಾತ್ರಿ ಮಿತ ಪ್ರಮಾಣದಲ್ಲಿ ಸೇವಿಸಬಹುದು.

ಆಹಾರದ ರಸಗಳಲ್ಲಿ `ತತ್ರಾದ್ಯ ಮಾರುತಂ ಘ್ನಂತಿ ತ್ರಯ ತಿಕ್ತಾದಯ ಕಫಂ...' ಅಂದರೆ ತಿಕ್ತ, ಕಟು, ಕಷಾಯ ರಸಗಳು ಕಫವನ್ನು ತಗ್ಗಿಸುತ್ತವೆ.

ಆಧುನಿಕ ವೈದ್ಯ ಪದ್ಧತಿಯ ಪಿತಾಮಹನಾದ ಹಿಪ್ಪೋಕ್ರಟಿಸ್‌ನ ಪ್ರಕಾರ ಹೊರಗಿನ ಪ್ರಕೃತಿಯಲ್ಲಿರುವ ಕೆಲವು ವಸ್ತುಗಳು ನಮ್ಮ ದೇಹದಲ್ಲಿ ಉಂಟಾಗುವ ರೋಗ ಲಕ್ಷಣಗಳನ್ನು ಹೋಲುತ್ತವೆ. ಉದಾಹರಣೆಗೆ ಹಾಗಲಕಾಯಿಯ ಆಕಾರವು ಮೇದೋಜೀರಕ ಗ್ರಂಥಿಗೆ (`ಪ್ಯಾಂಕ್ರಿಯಾಸ್'- ರಕ್ತಕ್ಕೆ ಇನ್ಸುಲಿನ್ನನ್ನು ಸ್ರವಿಸುವ ಒಂದು ಗ್ರಂಥಿ) ಹೋಲುತ್ತದೆ. ಈ ದೃಷ್ಟಿಯಿಂದಲೂ ಹಾಗಲಕಾಯಿಯು ಮಧುಮೇಹ ರೋಗಕ್ಕೆ ಸೂಕ್ತವಾದ ಔಷಧ ರೂಪದ ಆಹಾರವಾಗಿದೆ.

ಗೋರಿಕಾಯಿ: ನಾರಿನ ಅಂಶ ಹೆಚ್ಚಾಗಿರುವ ಈ ತರಕಾರಿಯು ಮಧುಮೇಹವನ್ನು ತಗ್ಗಿಸುವ ಗುಣಗಳ ಬಗ್ಗೆ ಸಂಶೋಧನೆ ನಡೆದಿದೆ.

ನವಿಲುಕೋಸು: ಇದರ ರಸ ಅಥವಾ ಹಸಿ ಕೋಸಂಬರಿಯನ್ನು ಬಳಸಿದಾಗ ಸಕ್ಕರೆ ರೋಗ ಹತೋಟಿಗೆ ಬರುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸಕ್ಕರೆ ಅಂಶ ಹೆಚ್ಚಾಗಿರುವ ಸಿಹಿಗುಂಬಳ, ಕ್ಯಾರೆಟ್, ಬೀಟ್‌ರೂಟ್, ಗೆಣಸನ್ನು ಬಳಸದಿರುವುದು ಹಿತಕರ.

ಬೂದುಗುಂಬಳ, ಹೀರೆ, ಪಡವಲ, ದಪ್ಪ ಮೆಣಸು, ಆಲೂಗೆಡ್ಡೆ, ಮೂಲಂಗಿ, ಸುವರ್ಣಗೆಡ್ಡೆ, ಬದನೆ, ಸೋರೆ, ಸೀಮೆಬದನೆ, ಸೌತೆ, ಬೆಂಡೆಕಾಯಿ, ಟೊಮ್ಯಾಟೊ, ಬೆಳ್ಳುಳ್ಳಿ, ಹಸಿಮೆಣಸನ್ನು ಬಳಸಬಹುದು.

ಸೊಪ್ಪುಗಳಲ್ಲಿ ನುಗ್ಗೆ, ಮೆಂತ್ಯ, ದಂಟು, ಪಾಲಾಕ್, ಪುದೀನ ಧಾರಾಳವಾಗಿ ಬಳಸಬಹುದು. ಎಲ್ಲ ಸೊಪ್ಪುಗಳಲ್ಲೂ ನಾರಿನಂಶ ಹೆಚ್ಚಾಗಿ ಇರುವುದರಿಂದ ಮಧುಮೇಹಿಗಳಿಗೆ ಅವು ಹಿತಕರ.

ಬೇಳೆಗಳಲ್ಲಿ ತೊಗರಿ, ಹುರುಳಿ, ಅವರೆಯನ್ನು ಬಳಸಬಹುದು. ಹೆಸರು ಬೇಳೆ ಆರೋಗ್ಯವಂತರಿಗೆ ಮಾತ್ರವಲ್ಲದೆ ಎಲ್ಲ ರೋಗಿಗಳಿಗೂ ಹಿತಕರವಾದ ಆಹಾರ.

ಅಡುಗೆಯಲ್ಲಿ ಬಳಸುವ ಎಣ್ಣೆಗಳಲ್ಲಿ ಕಡ್ಲೆಕಾಯಿ, ಎಣ್ಣೆ, ಸೂರ್ಯಕಾಂತಿ, ಕೊಬ್ಬರಿ ಎಣ್ಣೆ, ಸಾಸಿವೆ ಎಣ್ಣೆ ಮುಂತಾದವುಗಳನ್ನು ಅಲ್ಪ ಪ್ರಮಾಣದಲ್ಲಿ ಬಳಸಬೇಕು.

ಹೆಚ್ಚಿನ ಹಣ್ಣುಗಳೆಲ್ಲ ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುವುದರಿಂದ ಸಕ್ಕರೆ ಕಾಯಿಲೆಯ ರೋಗಿಗಳು ತಮ್ಮ ರೋಗದ ಸ್ಥಿತಿಯನ್ನು ಗಮನಿಸಿ ಮಿತ ಪ್ರಮಾಣದಲ್ಲಿ ಅವುಗಳನ್ನು ಸೇವಿಸಬೇಕು. ಒಗಚು ರುಚಿ ಇರುವ ನೇರಳೆ, ಎಲಚಿ, ಬೇಲದ ಹಣ್ಣುಗಳನ್ನು ಬಳಸಬಹುದು.

ಸಾಂಬಾರ ಪದಾರ್ಥಗಳಲ್ಲಿ ಮೆಂತ್ಯದ ಕಾಳು ಈ ರೋಗವನ್ನು ಹತೋಟಿಯಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ನಾರಿನ ಅಂಶ ಹೊಂದಿರುವ ಮೆಂತ್ಯವು ರಕ್ತ ಮತ್ತು ಮೂತ್ರದ ಸಕ್ಕರೆಯನ್ನು ತಗ್ಗಿಸುವ ಗುಣ ವೈಜ್ಞಾನಿಕವಾಗಿ ದೃಢಪಟ್ಟಿದೆ. ಕೊತ್ತಂಬರಿ ಬೀಜ, ಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಸೋಂಪನ್ನು ಬಳಸಬಹುದು. ಅರಿಶಿನವನ್ನು ನೆಲ್ಲಿಕಾಯಿಯೊಂದಿಗೆ ಮಿಶ್ರ ಮಾಡಿ ಬಳಸುವುದರಿಂದ ಅಥವಾ ಪ್ರತ್ಯೇಕವಾಗಿ ಅರಿಶಿನವೊಂದನ್ನೇ ಬಳಸುವುದರಿಂದ ಸಕ್ಕರೆ ರೋಗ ತಗ್ಗುತ್ತದೆ. ಇದು ಸಹ ಸಂಶೋಧನೆಯಿಂದ ದೃಢಪಟ್ಟಿದೆ.

ಒಣ ಖರ್ಜೂರವನ್ನು ಮಿತವಾಗಿ ಬಳಸಬೇಕು. ಹಾಲಿನಂತಹ ಡೇರಿ ಉತ್ಪನ್ನಗಳನ್ನು ಹಿತಮಿತವಾಗಿ ಉಪಯೋಗಿಸಬೇಕು.

ಮಾಂಸಾಹಾರಿಗಳು ಒಗ್ಗಿರುವ ಮಾಂಸಾಹಾರವನ್ನು ತಮ್ಮ ರಕ್ತದ ಸಕ್ಕರೆಯ ಮಿತಿಯನ್ನು ಆಧರಿಸಿ ಬಳಸಬೇಕು.

ಬ್ರೆಡ್ ಮುಂತಾದ ಬೇಕರಿ ಪದಾರ್ಥಗಳು, ಪಾನಿಪುರಿಯಂತಹ ಚಾಟ್ಸ್‌ಗಳು, ಪಿಜ್ಜಾ, ಬರ್ಗರ್ ಮುಂತಾದವು, ತಂಪು ಪಾನೀಯಗಳು, ಕಬ್ಬು, ಎಳನೀರನ್ನು ಅತ್ಯಂತ ಮಿತವಾಗಿ ಬಳಸಬೇಕು. ಊಟದ ಕೊನೆಗೆ ತಿನ್ನುವ ತಾಂಬೂಲದಲ್ಲಿ ಸೇರ್ಪಡೆಯಾಗುವ ಒಗಚು ರುಚಿಯ ಅಡಿಕೆಯು ಸಕ್ಕರೆ ಕಾಯಿಲೆಯನ್ನು ಹತೋಟಿಗೆ ತರುವ ಅಂಶ ದೃಢಪಟ್ಟಿದೆ.

ಮಾದಕ ವಸ್ತುಗಳು, ಧೂಮಪಾನ, ಮದ್ಯಪಾನ, ಮಧುಮೇಹಿಗಳು ಮಾತ್ರವಲ್ಲದೆ ಯಾವುದೇ ಬಗೆಯ ರೋಗಿಗಳೂ ವರ್ಜಿಸಲೇಬೇಕಾದ ವಸ್ತುಗಳು.

ಇಲ್ಲಿ ತಿಳಿಸಿರುವ ಪಥ್ಯ ಮತ್ತು ಅಪಥ್ಯದ ಆಹಾರಗಳನ್ನು ಚೆನ್ನಾಗಿ ಅರಿತು ಪಾಲಿಸಿದರೆ, ಸಕ್ಕರೆ ರೋಗ ಹತೋಟಿಗೆ ಬರುವುದರ ಜೊತೆಗೆ ಆ ರೋಗದ ಉಪದ್ರವಗಳು ಸಹ ಬರದಂತೆ ತಡೆಗಟ್ಟಬಹುದು.

ಬಾಯಾರಿಕೆ ನೀಗಿಸಿ
ಏಪ್ರಿಲ್ 11ರಂದು ಯುಗಾದಿ ಹಬ್ಬ. ಅಂದಿನಿಂದ ಕಫ ಪ್ರಾಬಲ್ಯ ಇರುವ ವಸಂತ ಋತು ಆರಂಭವಾಗುತ್ತದೆ. ವಸಂತ ಋತುಚರ್ಯೆಯಲ್ಲಿ ಬೇಸಿಗೆಯ ಬಾಯಾರಿಕೆ ನೀಗಲು `ಶೃಂಗವೇರಾಂಬು ಸಾರಾಂಬು ಮಧ್ವಾಂಬು ಜಲದಾಂಬು ಚ' ಎಂದು ಸಂಸ್ಕೃತ ತಿಳಿಸುತ್ತದೆ. ಅಂದರೆ ಶುಂಠಿ ಹಾಕಿ ಕಾಯಿಸಿದ ನೀರು, ಜೇನುತುಪ್ಪ ಬೆರೆಸಿದ ನೀರು, ಕೊನ್ನಾರಿ ಗೆಡ್ಡೆ (ಮುಸ್ತಾ) ಹಾಕಿ ಕುದಿಸಿದ ನೀರು ಮತ್ತು ಕೆಂಪು ಹೊನ್ನೆ ಚಕ್ಕೆ (ಅಸನ) ಹಾಕಿ ನೆನೆಸಿದ ನೀರು ಬಾಯಾರಿಕೆ ನೀಗಲು ಉತ್ತಮ ಉಪಾಯಗಳು.

ಇವುಗಳಲ್ಲಿ ಕೆಂಪು ಹೊನ್ನೆಯು ರಕ್ತ ಮತ್ತು ಮೂತ್ರದ ಸಕ್ಕರೆಯನ್ನು ಹತೋಟಿಗೆ ತರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಮಧುಮೇಹ ರೋಗಿಯು ಹೊನ್ನೆ ನೀರನ್ನು ಬೆಳಗಿನ ಜಾವ ಕುಡಿಯಬೇಕು.

ಯಾವ ಆಹಾರ?
ರಾಗಿ, ಜೋಳ, ಅಕ್ಕಿ, ಗೋಧಿಯಲ್ಲಿ ಯಾರಿಗೆ ಯಾವ ಆಹಾರ ಧಾನ್ಯ ಒಗ್ಗಿರುತ್ತದೋ ಅದನ್ನೇ ಬಳಸುವುದು ಒಳ್ಳೆಯದು. ಅನ್ನವನ್ನು ಕುಕ್ಕರ್‌ನಲ್ಲಿ ತಯಾರಿಸಿದರೆ ಅನ್ನವು ಗಂಜಿಯನ್ನು ಹೀರಿಕೊಳ್ಳುವುದರಿಂದ ಸುಲಭವಾಗಿ ಜೀರ್ಣವಾಗದು. ಇದರ ಬದಲು ಪಾತ್ರೆಯಲ್ಲಿ ಗಂಜಿ ಬಸಿದು ಅನ್ನ ತಯಾರಿಸಿದರೆ ಜೀರ್ಣಿಸಲು ಹಗುರ ಮತ್ತು ಈ ರೀತಿಯ ಅನ್ನ ಸಕ್ಕರೆ ರೋಗಿಗಳಿಗೆ ಹಿತಕರ.

ಬಾರ್ಲಿ ಅಕ್ಕಿ: ಸಂಸ್ಕೃತದಲ್ಲಿ `ಯವ' ಎಂದು ಕರೆಯುವ ಬಾರ‌್ಲಿ ಅಕ್ಕಿಯನ್ನು ಸ್ವಲ್ಪ ಹುರಿದು, ಪುಡಿ ಮಾಡಿಕೊಳ್ಳಬೇಕು. ಈ ಪುಡಿಯನ್ನು ಸಕ್ಕರೆ ರೋಗಿಯ ವಿವಿಧ ಆಹಾರಗಳ ಜೊತೆ ಸೇರಿಸಿದರೆ ರೋಗಿಗೆ ಬಲವೂ ಹೆಚ್ಚುತ್ತದೆ ಮತ್ತು ರೋಗವೂ ಹತೋಟಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT