ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯದ ದಾರಿಯ ದಿಟ್ಟ ಪಥಿಕ

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಬ್ರಿಟಿಷ್‌ ಪ್ರಜೆ ಬೆಂಜಮಿನ್‌ ಹಾರ್ನಿಮನ್‌ (1873 – 1948) ಭಾರತದ ಪರವಾಗಿ ತಮ್ಮ ಸರ್ಕಾರದ ವಿರುದ್ಧವೇ ನಡೆಸಿದ ಹೋರಾಟ ಚಾರಿತ್ರಿಕವಾದುದು. ‘ಸ್ಟೇಟ್ಸ್‌ಮನ್‌’ ಹಾಗೂ ‘ಬಾಂಬೆ ಕ್ರಾನಿಕಲ್‌’ ಪತ್ರಿಕೆಗಳ ಮೂಲಕ ಅವರು ಮಾಡಿದ ಸತ್ಯಾನ್ವೇಷಣೆಯ ಕೆಲಸ ಬ್ರಿಟಿಷರಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಹಾರ್ನಿಮನ್‌ ಅಂಥವರನ್ನು ನೆನಪಿಸಿಕೊಳ್ಳುವುದು ‘ಪತ್ರಿಕಾ ದಿನ’ದ (ಜುಲೈ 1) ಅರ್ಥಪೂರ್ಣ ಆಚರಣೆ.

ಸ್ವಾತಂತ್ರ್ಯಾನಂತರ ಆರಂಭವಾದ– ನಗರಗಳಲ್ಲಿನ ರಸ್ತೆಗಳ ಹೆಸರು, ಉದ್ಯಾನಗಳ ಹೆಸರನ್ನು ಬದಲಿಸುವ ಪ್ರಕ್ರಿಯೆ ಇಂದಿಗೂ ನಿಂತಿಲ್ಲ. ಅಂದಿನ ಬ್ರಿಟಷ್‌ ಸರ್ಕಾರ ರಸ್ತೆ–ಉದ್ಯಾನಗಳಿಗೆ ನಾಮಕರಣ ಮಾಡಿದ್ದ ಬಿಳಿಯರ ಹೆಸರುಗಳನ್ನು ಭಾರತೀಯಗೊಳಿಸುವ ಕೆಲಸ ಈಗಲೂ ಚಾಲ್ತಿಯಲ್ಲಿದೆ. ಆದರೆ, ಮುಂಬೈ ಮಹಾನಗರದ ಉದ್ಯಾನವೊಂದರ ಕಥೆ ಬೇರೆಯದೇ ಬಗೆಯದು. ಅಲ್ಲಿನ ಪ್ರಮುಖ ಉದ್ಯಾನವೊಂದಕ್ಕೆ ಸ್ವಾತಂತ್ರ್ಯದ ಬಳಿಕ ಬ್ರಿಟಿಷ್‌ ಪ್ರಜೆಯೊಬ್ಬರ ಹೆಸರಿಡಲಾಗಿದೆ. ಆ ಉದ್ಯಾನದ ಹೆಸರು ‘ಹಾರ್ನಿಮನ್‌ ಸರ್ಕಲ್‌ ಗಾರ್ಡನ್ಸ್’.

ಹಾರ್ನಿಮನ್‌ರ ಹೆಸರನ್ನು ಭಾರತದಲ್ಲಿನ ಉದ್ಯಾನಕ್ಕೆ ಇಡಲಿಕ್ಕೆ ಕಾರಣವಿದೆ. ಬ್ರಿಟಿಷ್‌ ಪ್ರಜೆಯಾದರೂ ಅವರು ಜೀವನದುದ್ದಕ್ಕೂ ಪ್ರತಿಪಾದಿಸಿದ್ದು ಭಾರತದ ಕಾಳಜಿಯನ್ನು. ವೃತ್ತಿನಿರತ ಪತ್ರಕರ್ತರಾಗಿದ್ದ ಅವರು, ಭಾರತದಲ್ಲಿ ವಸಾಹತು ಸರ್ಕಾರ ನಡೆಸುತ್ತಿದ್ದ ದಬ್ಬಾಳಿಕೆಯನ್ನು ಐದು ದಶಕಗಳಿಗೂ ಹೆಚ್ಚು ಸಮಯ ತಮ್ಮ ಬರಹದ ಮೂಲಕ ವಿರೋಧಿಸಿದ್ದರು. ಇಂಗ್ಲೆಂಡ್‌ನಲ್ಲಿ ಹುಟ್ಟಿ ಬೆಳೆದ ಬೆಂಜಮಿನ್‌ ಗೈ ಹಾರ್ನಿಮನ್‌ ಬ್ರಿಟಿಷ್‌ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರ ಮಗ. ಓದು ಮುಗಿದ ಕೂಡಲೇ ಅವರು ಆರಿಸಿಕೊಂಡಿದ್ದು ಪತ್ರಿಕೋದ್ಯಮವನ್ನು (1894ರಲ್ಲಿ). ಇಂಗ್ಲೆಂಡ್‌ನ ‘ಪೋರ್ಟ್‌ ಮೌತ್‌ ಈವನಿಂಗ್‌ ಮೈಲ್‌’ ಮೂಲಕ ಅವರ ಪತ್ರಿಕಾ ವೃತ್ತಿ ಶುರುವಾಯಿತು.

ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಬೇರುಗಳನ್ನು ಬಿಡಲಾರಂಭಿಸಿದ ದಿನಗಳವು. ಬೆಂಜಮಿನ್‌ರ ತಂದೆ ಭಾರತದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಹಾಗಾಗಿ ಬೆಂಜಮಿನ್‌ ಕೂಡ ತಮ್ಮ ಪೋಷಕರೊಂದಿಗೆ ಭಾರತಕ್ಕೆ ಬಂದರು. ಆಗ ‘ಬ್ರಿಟಿಷ್‌ ಭಾರತ’ದ ರಾಜಧಾನಿ ಕಲ್ಕತ್ತಾ. ಆ ವೇಳೆಗಾಗಲೇ ‘ಡೈಲಿ ಕ್ರಾನಿಕಲ್‌’, ‘ಮ್ಯಾಂಚೆಸ್ಟರ್‌ ಗಾರ್ಡಿಯನ್‌’ ಮೊದಲಾದ ಪತ್ರಿಕೆಗಳಲ್ಲಿ ದುಡಿದಿದ್ದ ಬೆಂಜಮಿನ್‌ ಕಲ್ಕತ್ತಾಕ್ಕೆ ಬಂದು, ‘ಸ್ಟೇಟ್ಸ್‌ಮನ್‌’ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ ಕೆಲಸ ಆರಂಭಿಸಿದರು. ಅಂದಿನ ‘ಸ್ಟೇಟ್ಸ್‌ಮನ್‌’ ಪತ್ರಿಕೆ ಬ್ರಿಟಿಷರ ನಿಯಂತ್ರಣದಲ್ಲೇ ಇತ್ತು.

ಬ್ರಿಟಿಷ್ ಆಡಳಿತದಲ್ಲಿ ಎಲ್ಲ ವಿಚಾರಗಳೂ ಅವರ ಅನುಕೂಲಕ್ಕೆ ತಕ್ಕಂತೆ ರೂಪುಗೊಳ್ಳುತ್ತಿದ್ದವು. ಈ ನೀತಿಗಳಿಂದ ಭಾರತೀಯರಿಗೆ ಆಗುತ್ತಿದ್ದ ಅನ್ಯಾಯಗಳತ್ತ ಅವರಿಗೆ ಗಮನವೇ ಇರಲಿಲ್ಲ. ಸ್ಥಳೀಯರ ಕೂಗಿಗೆ, ವಿರೋಧಕ್ಕೆ ಬೆಲೆಯೂ ಇರಲಿಲ್ಲ. ಇಂತಹ ಘಟನೆಗಳನ್ನು ನೋಡಿ ಪತ್ರಕರ್ತ ಹಾರ್ನಿಮನ್‌ ಕೈಕಟ್ಟಿ ಕೂರಲಿಲ್ಲ. ನೈಜ ಪತ್ರಕರ್ತರಾಗಿ ಅವರು ಪಳಗಿದ್ದರು. ಸತ್ಯಾಂಶಗಳನ್ನು ಬೆಳಕಿಗೆ ತರುವ ಕೆಲಸ ಮಾಡಲು ಇಷ್ಟಪಡುತ್ತಿದ್ದರು. ‘ಸ್ಟೇಟ್ಸ್‌ಮನ್‌’ ಪತ್ರಿಕೆಯಲ್ಲಿ ‘ಭಾರತೀಯರ ಧ್ವನಿ’ ಇರುವಂತೆ ಅವರು ನೋಡಿಕೊಂಡರು. ಬ್ರಿಟಿಷ್‌ ಆಡಳಿತ ಎಡವಿದ ಸಂದರ್ಭದಲ್ಲಿ ಎಚ್ಚರಿಸಲು ಮುಲಾಜು ತೋರುತ್ತಿರಲಿಲ್ಲ. ಇದು ಪತ್ರಿಕೆಯ ಆಡಳಿತ ವರ್ಗಕ್ಕೆ ಮುಜುಗರದ ಸಂಗತಿಯಾಗಿತ್ತು.

ಆದರೆ, ಹಾರ್ನಿಮನ್‌ ತಾವು ಪ್ರಕಟಿಸುವ ಸುದ್ದಿಗಳಿಗೆ ಸಮರ್ಥ ದಾಖಲೆ – ಅಂಕಿಅಂಶಗಳನ್ನು ಇಟ್ಟುಕೊಳ್ಳುತ್ತಿದ್ದುದರಿಂದ ಪತ್ರಿಕೆಯ ಆಡಳಿತವರ್ಗ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಿತ್ತು. ಬಂಗಾಲವನ್ನು ಒಡೆದ ಬ್ರಿಟಿಷ್‌ ಆಡಳಿತಕ್ಕೆ ಕೆಲವು ಅಡಚಣೆಗಳು ಎದುರಾದವು. ಇದನ್ನೆಲ್ಲಾ ತಪ್ಪಿಸಲು ರಾಜಧಾನಿಯನ್ನು ಬದಲಿಸುವ ನಿರ್ಧಾರಕ್ಕೆ ಅವರು ಬಂದರು. ‘ಬ್ರಿಟಿಷ್‌ ಭಾರತ’ದ ರಾಜಧಾನಿ ನವದೆಹಲಿಗೆ ಸ್ಥಳಾಂತರವಾಯಿತು. ಆಗ ಸರ್ಕಾರ ಕೈಗೊಂಡ ಕೆಲವು ನಿರ್ಧಾರಗಳಿಂದ ಹಾರ್ನಿಮನ್ ರೋಸಿಹೋದರು. ಪತ್ರಕರ್ತರಾಗಿ ಸತ್ಯಕ್ಕೆ ಆದ್ಯತೆ ಕೊಡುತ್ತಿದ್ದ ಅವರಿಗೆ ‘ಸ್ಟೇಟ್ಸ್‌ಮನ್‌’ ಪತ್ರಿಕೆಯಲ್ಲಿ ಕೆಲಸ ಮಾಡಲು ಇಷ್ಟವಾಗದೆ ರಾಜೀನಾಮೆ ಕೊಟ್ಟರು.

ಅದೇವೇಳೆಗೆ ರಾಷ್ಟ್ರೀಯವಾದಿಗಳು ತಮ್ಮದೇ ಪತ್ರಿಕೆಗಳನ್ನು ಪ್ರಾರಂಭಿಸುವ ಉತ್ಸಾಹದಲ್ಲಿದ್ದರು. ಮುಂಬೈನಲ್ಲಿ ಫಿರೋಜ್‌ ಷಾ ಮೆಹತಾ ಅವರು ಶುರು ಮಾಡಿದ ‘ಬಾಂಬೆ ಕ್ರಾರ್ನಿಕಲ್‌’ಗೆ ಸಮರ್ಥ ಸಂಪಾದಕರಿಗಾಗಿ ಹುಡುಕಾಟ ನಡೆದಿತ್ತು. ಆಗ ಆಹ್ವಾನ ಹೋಗಿದ್ದು ಹಾರ್ನಿಮನ್‌ ಅವರಿಗೆ. ನೇರ ನುಡಿ, ಸ್ವತಂತ್ರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದ ‘ಬಾಂಬೆ ಕ್ರಾನಿಕಲ್‌’ ಪತ್ರಿಕೆಯನ್ನು ಹಾರ್ನಿಮನ್‌ ಅವರು ವಾಸ್ತವಿಕ ನೆಲೆಗಟ್ಟಿನ ಮೇಲೆ ರೂಪಿಸಲು ಪ್ರಯತ್ನಿಸಿದರು. ಆ ಪ್ರಯತ್ನ ಯಶಸ್ವಿಯೂ ಆಯಿತು. ಬ್ರಿಟಿಷರ ವಿರುದ್ಧ ಭಾರತೀಯರ ಧ್ವನಿಯನ್ನಾಗಿ ‘ಬಾಂಬೆ ಕ್ರಾನಿಕಲ್‌’ ಅನ್ನು ಹಾರ್ನಿಮನ್‌ ಸಜ್ಜುಗೊಳಿಸಿದರು.

ಸೆನ್ಸಾರ್‌ ಎಂಬ ತೂಗುಕತ್ತಿ ಇದ್ದರೂ ‘ಬಾಂಬೆ ಕ್ರಾನಿಕಲ್‌’ ಪತ್ರಿಕೆ, ಭಾರತ ವಿರೋಧಿ ಬ್ರಿಟಿಷ್‌ ಕೃತ್ಯಗಳನ್ನು ಎಡಬಿಡದೆ ಬಯಲು ಮಾಡತೊಡಗಿತು. ಪತ್ರಿಕೆಯ ವಿರುದ್ಧ ಅನೇಕ ಮೊಕದ್ದಮೆಗಳು ದಾಖಲಾದವು. ಸರ್ಕಾರ ಹತ್ತಾರು ಬಾರಿ ಎಚ್ಚರಿಕೆಗಳನ್ನು ನೀಡಿತು. ಇದಕ್ಕೆಲ್ಲ ಹಾರ್ನಿಮನ್‌ ಬಗ್ಗಲಿಲ್ಲ. ಹೋರಾಟ ಮುಂದುವರೆಯಿತು. ಪಂಜಾಬ್‌ನಲ್ಲಿನ ‘ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ’ ಎಲ್ಲರನ್ನೂ ಬೆಚ್ಚಿಬೀಳಿಸಿದ್ದ ಘೋರಕೃತ್ಯ. ಇದನ್ನು ಮುಚ್ಚಿ ಹಾಕಲು ಬ್ರಿಟಿಷ್‌ ಪ್ರಭುತ್ವ ಇನ್ನಿಲ್ಲದ ಪ್ರಯತ್ನಗಳಿಗೆ ಕೈಹಾಕಿತು. ಎಲ್ಲರ ಬಾಯಿ ಬಂದ್‌ ಮಾಡಲು ಮುಂದಾಯಿತು. ಪ್ರತಿಬಂಧಗಳ ನಡುವೆಯೂ ಮಾರಣಹೋಮದ ವರದಿಯನ್ನು ಛಾಯಾಚಿತ್ರಗಳೊಂದಿಗೆ ಪ್ರಕಟಿಸುವಲ್ಲಿ ಹಾರ್ನಿಮನ್‌ ಸಂಪಾದಕತ್ವದ ‘ಬಾಂಬೆ ಕ್ರಾನಿಕಲ್’ ಯಶಸ್ವಿಯಾಯಿತು.

ಇದರಿಂದಾಗಿಯೇ ಈ ಪಾಶವೀ ಕೃತ್ಯದ ತೀವ್ರತೆ ಜಗತ್ತಿನ ಗಮನಕ್ಕೆ ಬಂದಿತು. ಬ್ರಿಟಿಷ್‌ ಸರ್ಕಾರವೂ ಕಣ್ಣು ತೆರೆಯಿತು. ಹತ್ಯಾಕಾಂಡದ ತನಿಖೆಗಾಗಿ ‘ಹಂಟರ್‌ ಆಯೋಗ’ ರಚನೆಗೂ ವರದಿ ಕಾರಣವಾಯಿತು. ಜಲಿಯನ್‌ ವಾಲಾಬಾಗ್‌ ವರದಿಯ ದುಷ್ಪರಿಣಾಮ ಹಾರ್ನಿಮನ್ ಬಳಗಕ್ಕೆ ತಟ್ಟದಿರಲಿಲ್ಲ. ಘಟನೆಯನ್ನು ಪ್ರಥಮವಾಗಿ ಪ್ರಕಟಿಸಿದ ‘ಬಾಂಬೆ ಕ್ರಾನಿಕಲ್‌’ ಪ್ರತಿನಿಧಿ ಗೋವರ್ಧನ್‌ ದಾಸ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆಯಾಯಿತು. ಹಾರ್ನಿಮನ್‌ ಗಡೀಪಾರಿನ ಶಿಕ್ಷೆಗೆ ಗುರಿಯಾದರು. ಪತ್ರಿಕೆ ತಾತ್ಕಾಲಿಕವಾಗಿ ಬಂದ್‌ ಆಗುವುದು ಅನಿವಾರ್ಯವಾಗಿತ್ತು. ಒತ್ತಾಯದ ಮೇರೆಗೆ ಬ್ರಿಟನ್‌ಗೆ ಹೋದ ಹಾರ್ನಿಮನ್‌ ಅಲ್ಲೇನು ಸುಮ್ಮನೆ ಕೂರಲಿಲ್ಲ. ಒಂದಲ್ಲ ಎರಡಲ್ಲ, ಏಳು ವರ್ಷ ಅವರು ಅಲ್ಲಿರಬೇಕಾಯಿತು.

ಆಗ ಸ್ಥಳೀಯ ಪತ್ರಿಕೆಗಳಲ್ಲಿ ಭಾರತ ಪರ ಲೇಖನಗಳನ್ನು ನಿರಂತರವಾಗಿ ಬರೆಯುತ್ತಲೇ ಇದ್ದರು. ಅನೇಕ ನಿರ್ಬಂಧಗಳಿದ್ದರೂ ಹಾರ್ನಿಮನ್‌ ಹಡಗಿನಲ್ಲಿ ಕೊಲಂಬೋಗೆ ಹೋದರು. ಅಲ್ಲಿಂದ ಧನುಷ್ಕೋಟಿ ಮಾರ್ಗವಾಗಿ ಮುಂಬೈ ತಲುಪಿ ಮತ್ತೆ ‘ಬಾಂಬೆ ಕ್ರಾನಿಕಲ್‌’ ಆರಂಭಿಸಿದರು. ಈಗ ಬ್ರಿಟಿಷ್‌ ಸರ್ಕಾರ ಮಾತ್ರವಲ್ಲ, ಕಾಂಗ್ರೆಸ್‌ ಸಂಘಟನೆಯ ತಪ್ಪುಗಳನ್ನು ತೋರಲು ಕೂಡ ‘ಕ್ರಾನಿಕಲ್‌’ ವೇದಿಕೆಯಾಯಿತು. ಆಡಳಿತ ವರ್ಗ ಹಿಡಿತ ಬಿಗಿ ಮಾಡಲು ಹೊರಟಾಗ ಹಾರ್ನಿಮನ್‌ ರಾಜೀನಾಮೆ ಬರೆದಿಟ್ಟು ಬಂದರು. ಸುಮ್ಮನೆ ಕೂರುವ ಜಾಯಮಾನ ಅವರದಾಗಿರಲಿಲ್ಲ. ಇನ್ನೊಂದು ಸಂಜೆ ಪತ್ರಿಕೆಯನ್ನು ಮುಂಬೈನಿಂದಲೇ ಶುರುಮಾಡಿದರು. ‘ಬಾಂಬೆ ಸೆಂಟಿನಲ್‌’ ಆ ಪತ್ರಿಕೆಯ ಹೆಸರು.

‘ಬಾಂಬೆ ಸೆಂಟಿನಲ್‌’ ಮೂಲಕ ಸತ್ಯಾನ್ವೇಷಣೆಯನ್ನು ಮುಂದುವರೆಸಿದ ಹಾರ್ನಿಮನ್‌ ಅವರನ್ನು ಆನಿಬೆಸೆಂಟ್‌ ಆರಂಭಿಸಿದ ‘ಹೋಂರೂಲ್‌ ಲೀಗ್‌’ಗೆ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಭಾರತ ವಿರೋಧಿ ಬ್ರಿಟಿಷ್‌ ಕಾಯ್ದೆ ವಿರುದ್ಧ ‘ಲೀಗ್‌’ ಹೋರಾಟಕ್ಕಿಳಿಯಿತು. ಆಗ ನಡೆದ ಸತ್ಯಾಗ್ರಹ ಹೋರಾಟಕ್ಕೂ ಹಾರ್ನಿಮನ್‌ ಅವರದೇ ನೇತೃತ್ವ. ಯಾರಿಗೂ ತಲೆಬಾಗದೆ ಪತ್ರಿಕೆ ಮುನ್ನಡೆಸಲು ಯಾವಾಗಲೂ ಹೆಣಗುತ್ತಿದ್ದ ಹಾರ್ನಿಮನ್‌ರಿಗೆ ಸಾಲಸೋಲ ಸದಾ ಕಟ್ಟಿಟ್ಟ ಬುತ್ತಿ. ಆರ್ಥಿಕ ಕಾರಣಗಳಿಂದಾಗಿ ಅವರು ಕೋರ್ಟಿನಲ್ಲಿ ನಿಲ್ಲಬೇಕಾದ ಸಂದರ್ಭಗಳು ಎದುರಾದವು. ಇಂತಹ ಸ್ಥಿತಿಯಲ್ಲೂ ಅವರು ಎದೆಗುಂದುತ್ತಿರಲಿಲ್ಲ, ವೃತ್ತಿಧರ್ಮವನ್ನು ಬಿಟ್ಟುಕೊಡಲಿಲ್ಲ.

ಇದೇ ಸಂದರ್ಭದಲ್ಲಿ, ಮುಂಬೈ ರೇವಿನಲ್ಲಿ ಲಂಗರು ಹಾಕಿದ್ದ ಹಡಗೊಂದು ಸ್ಫೋಟಿಸಿತ್ತು. ಅದರಲ್ಲಿ ಅಪಾರ ಪ್ರಮಾಣದ ಮದ್ದು ಗುಂಡುಗಳಿದ್ದವು. ಸ್ಫೋಟದಿಂದ ರೇವಿನಲ್ಲಿದ್ದ ಇತರ ಹಡಗುಗಳಿಗೂ ಬೆಂಕಿ ವ್ಯಾಪಿಸಿತ್ತು. ಅಪಾರ ಆಸ್ತಿಪಾಸ್ತಿ ಹಾಳಾಗಿತ್ತು. ಸಾವು ನೋವುಗಳೂ ಸಂಭವಿಸಿದ್ದವು. ಈ ಘಟನೆಯ ವಿವರಗಳು ಬೆಳಕಿಗೆ ಬಂದರೆ, ದೇಶದಲ್ಲಿ ಪ್ರತಿಭಟನೆ ಹೆಚ್ಚಿ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿತ್ತು. ಇದನ್ನೆಲ್ಲ ನಿರೀಕ್ಷಿಸಿದ್ದ ಸರ್ಕಾರ ಈ ಸುದ್ದಿ ಪ್ರಕಟಣೆಗೆ ಅಂಕಲು ಪ್ರಯತ್ನಿಸಿತು. ಮುಂಬೈನ ಎಲ್ಲಾ ಸಂಪಾದಕರ ತುರ್ತು ಸಭೆಯನ್ನು ನಡೆಸಿದ ಸರ್ಕಾರ, ಸುದ್ದಿಯನ್ನು ಪ್ರಕಟಿಸದಂತೆ ಸೂಚಿಸಿತು.

ಮರುದಿನ ‘ಮುಂಬೈ ಸೆಂಟಿನೆಲ್‌’ ಪತ್ರಿಕೆ ಹಡಗು ಸ್ಫೋಟದ ವರದಿಯನ್ನು ಸ್ಫೋಟಿಸಿತು. ಸಭೆಯಲ್ಲಿದ್ದು ಎಲ್ಲದಕ್ಕೂ ತಲೆ ಅಲ್ಲಾಡಿಸಿ ಬಂದಿದ್ದ ಸಂಪಾದಕ ಹಾರ್ನಿಮನ್‌ ತಣ್ಣಗೆ ಎಲ್ಲಾ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಸಂಪೂರ್ಣ ಮಾಹಿತಿಯನ್ನು ಸರ್ಕಾರವೇ ಹೊರಹಾಕಬೇಕು. ಅದರಿಂದಾದ ನಷ್ಟದ ವಿವರಗಳನ್ನು ಜನರ ಮುಂದಿಡಬೇಕು, ಜೊತೆಗೆ ಈ ಬಗೆಗೆ ವಿಚಾರಣಾ ಆಯೋಗವನ್ನು ರಚಿಸಬೇಕೆಂದು ಅವರು ತಾಕೀತು ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಸರ್ಕಾರ, ‘ಮುಂಬೈ ಸೆಂಟಿನಲ್‌’ ಪತ್ರಿಕೆಯ ಪ್ರಕಟಣೆಯನ್ನು ಪ್ರತಿಬಂಧಿಸಿತು.

‘ಸೆಂಟಿನೆಲ್‌’ ಪತ್ರಿಕೆ ನಿಂತಾಗ ಗೆಳೆಯರೊಂದಿಗೆ ‘ಬ್ಲಿಜ್‌’ ಪತ್ರಿಕೆ ಆರಂಭಿಸಲು ಹಾರ್ನಿಮನ್‌ ಪ್ರಯತ್ನಿಸಿದರು. ಅನೇಕ ಪತ್ರಿಕೆಗಳಲ್ಲಿ ನೌಕರಿ ಮಾಡಿ, ಹಲವು ಪತ್ರಿಕೆಗಳಿಗೆ ಸಂಪಾದಕರಾಗಿದ್ದು, ಹತ್ತಾರು ಪತ್ರಿಕೆಗಳನ್ನು ಹುಟ್ಟುಹಾಕಲು ಕಾರಣರಾದ ಹಾರ್ನಿಮನ್‌ ‘ಮುಂಬೈ ಸೆಂಟಿನೆಲ್‌’ ಪತ್ರಿಕೆ ಮತ್ತೆ ಪ್ರಾರಂಭಗೊಂಡಾಗ ಅದರ ಸಂಪಾದಕರಾದರೂ, ವೃದ್ಧಾಪ್ಯದಿಂದಾಗಿ ಬೇಗ ಬಿಡುಗಡೆ ಪಡೆದರು. ಬ್ರಹ್ಮಚಾರಿಯಾಗಿ ಉಳಿದ ಹಾರ್ನಿಮನ್‌ ಹಲವು ಬಗೆಯ ಸಂಕಷ್ಟಗಳಿಗೆ ಈಡಾದರೂ ತಮ್ಮ ವೃತ್ತಿಧರ್ಮದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಅವರಿಂದ ಸಹಾಯ ಪಡೆದವರು ಕೊನೆಗಾಲದಲ್ಲಿ ನೆರವಿಗೆ ಬರಲಿಲ್ಲ. ಪತ್ರಿಕೋದ್ಯಮವೂ ಅವರನ್ನು ಗಮನಿಸಲಿಲ್ಲ.

ಔಷಧಿಗಳಿಗಾಗಿ ಹತ್ತೆಂಟು ರೂಪಾಯಿಗೂ ಹೆಣಗಬೇಕಾಯಿತು. ಧೀಮಂತ ಪತ್ರಕರ್ತನ ಕೊನೆಯ ದಿನಗಳು ದಾರುಣವಾಗಿದ್ದವು. ಭಾರತದಲ್ಲಿನ ಬ್ರಿಟಿಷ್‌ ಪ್ರಭುತ್ವದ ವಿರುದ್ಧ ಬ್ರಿಟಿಷ್‌ ಪ್ರಜೆ ಹಾಗೂ ಪತ್ರಕರ್ತ ಬಿ.ಜೆ. ಹಾರ್ನಿಮನ್‌ ಅವರು ದನಿ ಎತ್ತಿದ್ದು ಹಾಗೂ ಭಾರತೀಯ ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕಾಗಿ ಸತತ ಐವತ್ತು ವರ್ಷಗಳ ಕಾಲ ಶ್ರಮಿಸಿದ್ದು ಒಂದು ಚಾರಿತ್ರಿಕ ವ್ಯಂಗ್ಯದಂತೆ ಕಾಣಿಸುತ್ತದೆ. ಸ್ವಂತ ಹಿತವನ್ನು ಮರೆತು ‘ಭಾರತದ ಬಿಡುಗಡೆಯ ಹೋರಾಟ’ದಲ್ಲಿ ಕೊನೆಯುಸಿರಿನ ತನಕ ಶ್ರಮಿಸಿದ ಬೆಂಜಮಿನ್‌ ಗೈ ಹಾರ್ನಿಮನ್‌ ಸ್ಮರಣಾರ್ಥ ಮುಂಬೈನಲ್ಲೀಗ ಹಚ್ಚಹಸುರಿನ ಉದ್ಯಾನ ನಳನಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT