ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನಕ್ಕೆ ಈಗ ಸಮಾಜವಾದಿ `ಮೇಷ್ಟ್ರು'

Last Updated 31 ಮೇ 2013, 19:59 IST
ಅಕ್ಷರ ಗಾತ್ರ

ಶಿವಮೊಗ್ಗ: ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜಕಾರಣದಲ್ಲಿದ್ದರೂ ಕ್ರಿಯಾಶೀಲರಾಗಿರುವ ಸಮಾಜವಾದಿ ಹಿನ್ನೆಲೆಯ ಕಾಗೋಡು ತಿಮ್ಮಪ್ಪ ಈಗ 14ನೇ ವಿಧಾನಸಭೆಯ ಸಭಾಧ್ಯಕ್ಷ.

ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಅವರಿಗೆ, ಪಕ್ಷ ಶಾಸಕರನ್ನು ತಿದ್ದುವ `ಮೇಷ್ಟ್ರು' ಕೆಲಸಕ್ಕೆ ನೇಮಿಸಿದೆ. ದೀರ್ಘಕಾಲದಿಂದ ರಾಜಕಾರಣದಲ್ಲಿದ್ದರೂ ಬಂಡಾಯ, ಗುಂಪುಗಾರಿಕೆ, ಭಿನ್ನಮತದ ಹೆಜ್ಜೆ ತುಳಿಯದ ಕಾಗೋಡು, ಸಹಜವಾಗಿಯೇ ಪಕ್ಷದ ಆದೇಶ ಒಪ್ಪಿಕೊಂಡು ಸ್ಪೀಕರ್ ಸ್ಥಾನ ಏರಿದ್ದಾರೆ.

ಸಾಗರದಿಂದ 18 ಕಿ.ಮೀ. ದೂರದ ಹಳ್ಳಿ ಕಾಗೋಡು, ಗೇಣಿ ರೈತರ ಪರ ಹೋರಾಟ ನಡೆದ ಸ್ಥಳ. ಇದು ತಿಮ್ಮಪ್ಪ ಅವರ ಹುಟ್ಟಿದ ಊರು. ಕಾಗೋಡಿಗೆ ಯೌವನದ ದಿನಗಳಲ್ಲೇ ಸಮಾಜವಾದಿಗಳಾದ ರಾಮಮನೋಹರ ಲೋಹಿಯಾ, ಮಧು ಲಿಮಯೆ ಮತ್ತಿತರರನ್ನು ಕುತೂಹಲದ ಕಣ್ಣುಗಳಿಂದ ನೋಡುವ ಅವಕಾಶ ಒದಗಿ ಬಂದಿತ್ತು. ಜಾರ್ಜ್ ಫರ್ನಾಂಡಿಸ್, ಶಾಂತವೇರಿ ಗೋಪಾಲಗೌಡ, ಜೆ.ಎಚ್.ಪಟೇಲರ ಒಡನಾಟಗಳಿಂದ ಹೋರಾಟದ ವ್ಯಕ್ತಿತ್ವ ರೂಪಿಸಿಕೊಂಡವರು ಕಾಗೋಡು. ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಪ್ರೊ.ನಂಜುಂಡಸ್ವಾಮಿ ಜತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಲೇ ಬೆಳೆದರು.

1960ರಲ್ಲಿ ಸಾಗರದಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರು, ಕಾಗೋಡು ಸತ್ಯಾಗ್ರಹದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿದರು. 1961ರಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು. 1972ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಅಚ್ಚುಕಟ್ಟಾದ ಮಾತುಗಳಿಂದ ದೇವರಾಜ ಅರಸು ಗಮನ ಸೆಳೆದರು. ಈ ಕಾರಣದಿಂದಾಗಿಯೇ 1974ರಲ್ಲಿ ಭೂ ಸುಧಾರಣಾ ಶಾಸನ ರೂಪಿಸಲು ಅರಸು ಸರ್ಕಾರ ನೇಮಿಸಿದ ಜಂಟಿ ಆಯ್ಕೆ ಸಮಿತಿಯಲ್ಲಿ ಸದಸ್ಯರಾಗುವ ಅವಕಾಶ ಅವರಿಗೆ ಒದಗಿಬಂದಿತು. ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆ `ಉಳುವವನೇ ಹೊಲದೊಡೆಯ' ಜಾರಿಗೆ ಕಾಗೋಡು ಪ್ರಮುಖ ಪಾತ್ರ ವಹಿಸಿದ್ದರು.

ಗುಂಡೂರಾವ್ ಮಂತ್ರಿಮಂಡಲದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಸಚಿವರಾಗಿದ್ದ ಕಾಗೋಡು, ಕೆಲ ಸಮಯ ಲೋಕೋಪಯೋಗಿ ಸಚಿವರೂ ಆಗಿದ್ದರು. ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ  ಸಮಾಜ ಕಲ್ಯಾಣ ಖಾತೆ ನಿಭಾಯಿಸಿದ್ದರು. 2001ರಲ್ಲಿ ತೋಟಗಾರಿಕೆ ಸಚಿವರಾದರು. 2002ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹೆಚ್ಚುವರಿಯಾಗಿ ವಾರ್ತಾ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಇಷ್ಟೆಲ್ಲಾ ಅನುಭವಿಗೆ ಈ ಸಲ ಗೆದ್ದಾಗ, `ನೀವು ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದೀರಾ?' ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಕೊಟ್ಟ ಉತ್ತರ, `ಕೇವಲ ಕೈ ಮುಗಿದಿದ್ದು'. ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಯತ್ತ ಪ್ರಯಾಣ ಬೆಳೆಸಿದರೆ ಕಾಗೋಡು, ಕ್ಷೇತ್ರದಲ್ಲಿ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ ಮಾಡುತ್ತಿದ್ದರು. ಅಂದು ತಾನು ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದೇನೆ ಎಂದು ಹೇಳಿದ್ದರೆ ಇಂದು ತಿಮ್ಮಪ್ಪ ಅವರಿಗೆ ಕನಿಷ್ಠ ಮಂತ್ರಿ ಸ್ಥಾನವಾದರೂ ಸಿಗುತ್ತಿತ್ತು. ಅವರ ಸ್ವಭಾವವೇ ಅವರಿಗೆ ಮುಳುವಾಯಿತು ಎಂಬುದು ಕಾರ್ಯಕರ್ತರ ಅಳಲು.   
  
`ಕ್ಷೇತ್ರದ ಪ್ರತಿ ಊರಿನ ಹೆಸರು ಅವರ ಬಾಯಿಯಲ್ಲಿವೆ. 10 ವರ್ಷಗಳ ನಂತರ ಅವರಿಗೆ ಅಧಿಕಾರ ಸಿಕ್ಕಿದೆ. ಮಲೆನಾಡು ಭಾಗದಲ್ಲಿ ಇಂಡೀಕರಣ, ಬಗರ್‌ಹುಕುಂ ಸಮಸ್ಯೆಗಳಿವೆ. ಈ ಬಾರಿಯಾದರೂ ಇವುಗಳಿಗೆ ಪರಿಹಾರ ಸಿಗುತ್ತದೆಂಬ ನಂಬಿಕೆ ಇತ್ತು. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದೆವು. ಈಗ ಅವರಿಗೆ ಪಕ್ಷದೊಡ್ಡ ಜವಾಬ್ದಾರಿ ನೀಡಿದೆ. ಅದನ್ನೂ ಸಮರ್ಥವಾಗಿ ನಿರ್ವಹಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕಾಂಗ್ರೆಸ್ ಮುಖಂಡ .ನಾ.ಶ್ರೀನಿವಾಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT