ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೂಕದ ಸರಳ ಪಯಣ

ತಿರುಪತಿ ಎಕ್ಸ್‌ಪ್ರೆಸ್‌
Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನಿರ್ಮಾಪಕರು: ಶೈಲೇಂದ್ರ ಬಾಬು, ನಿರ್ದೇಶಕ: ಪಿ.ಕುಮಾರ್‌
ತಾರಾಗಣ: ಸುಮಂತ್‌, ಕೃತಿ ಖರಬಂಧ, ಅಶೋಕ್‌, ಸುಮಿತ್ರಾ, ಶರತ್‌ ಲೋಹಿತಾಶ್ವ, ಚಿಕ್ಕಣ್ಣ, ನವೀನ್‌ ಕೃಷ್ಣ, ಸಾಧುಕೋಕಿಲ ಬುಲೆಟ್‌ ಪ್ರಕಾಶ್‌ ಮತ್ತಿತರರು.


ತೆಲುಗಿನ ‘ವೆಂಕಟಾದ್ರಿ ಎಕ್ಸ್‌ಪ್ರೆಸ್‌’ ಚಿತ್ರದ ಕನ್ನಡ ರೂಪ ‘ತಿರುಪತಿ ಎಕ್ಸ್‌ಪ್ರೆಸ್‌’. ನಿರ್ದೇಶಕ ಕುಮಾರ್, ಸರಳ ಮತ್ತು ಸಾಮಾನ್ಯ ಕಥೆ­ಯನ್ನು ಕಡತಂದು, ಆಡಂಬರವಿಲ್ಲದೆ ನಿರೂ­ಪಿಸಿದ್ದಾರೆ. ಸರಳತೆಯ ಕಾರಣಕ್ಕೇ ಸಿನಿಮಾ ಆಪ್ತ­ವಾಗುತ್ತದೆ. ಒಂದು ವೇಳೆ ಕಥೆ ಮತ್ತು ಪಾತ್ರಗಳಿಗೆ ಆಡಂಬರದ ಸ್ಪರ್ಶ ಹೆಚ್ಚು ಇದ್ದಿದ್ದರೆ ಎಕ್ಸ್‌ಪ್ರೆಸ್ ಹಳಿ ತಪ್ಪುತ್ತಿತ್ತು. ಒಳಿತಿನ ಉದ್ದೇಶ­ದಿಂದ ‘ಕೌಟುಂ­ಬಿಕ ಶಿಸ್ತು’ ರೂಪಿಸಿರುವ ಅಪ್ಪ, ಆ ಶಿಸ್ತನ್ನು ಸಾಂದ­ರ್ಭಿಕ ಅನಿವಾರ್ಯ­ತೆಯಿಂದ ಮುರಿಯುವ ಮಗ. ಈ ಎರಡು ಧ್ರುವಗಳಿಗೆ ಹೊಂದಿಕೊಂಡು ಬರುವ ಘಟನೆ–ಪಾತ್ರಗಳ ನಡುವೆ ಎಕ್ಸ್‌ಪ್ರೆಸ್ ಚಲಿ­ಸುತ್ತದೆ. ಈ ಚಲನೆಯ ಹಾದಿಯ ಸನ್ನಿ­ವೇಶಗಳು ಸಿನಿಮಾಕ್ಕೆ ರಸವನ್ನು ತುಂಬಿದೆ.

ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರಾವ್ ತನ್ನ ಕುಟುಂಬ ಸದಸ್ಯರಿಗೆ ಶಿಸ್ತಿನ ಕಟ್ಟಳೆ­ಗಳನ್ನು ವಿಧಿಸಿದವರು. ತಮ್ಮದೇ ಆದ ಕೌಟುಂಬಿಕ ನಿಯಮಗಳನ್ನು ಜಾರಿ ಮಾಡಿಕೊಂಡವರು. ಮನೆಯ ಯಾವೊಬ್ಬ ಸದಸ್ಯ ನೂರು ತಪ್ಪುಗಳನ್ನು ಮಾಡಿದರೆ, ಆತ ಮನೆಯಿಂದ ಹೊರ ನಡೆ­ಯ­ಬೇಕು. ಈ ನಿಯಮದ ಮೊದಲ ಪ್ರಯೋಗ­ವನ್ನು ತಮ್ಮನ ಮೇಲೆ ನಡೆಸಿ ಆತನನ್ನು ಮನೆ­ಯಿಂದಲೇ ದೂರ ನಿಲ್ಲಿಸುತ್ತಾರೆ. ಇಂತಿಪ್ಪ ಶ್ರೀನಿ­ವಾಸ್ ರಾವ್ ಅವರ ಕಿರಿಯ ಪುತ್ರ ಸುಮಂತ್ ಪರರ ಸಂಕಷ್ಟ­ಗಳಿಗೆ ತುಡಿಯುವ ಮನಸ್ಸಿನವ. ಈ ತುಡಿತವೇ ಆತನನ್ನು ತನ್ನ ತಂದೆಯ ನಿಯಮದ ಪ್ರಕಾರ 99 ತಪ್ಪು­ಗಳನ್ನು ಮಾಡಿದ ಸ್ಥಿತಿಗೆ ತಂದು ನಿಲ್ಲಿಸಿದೆ. ಇನ್ನೊಂದು ತಪ್ಪು ಮಾಡಿದರೆ ಮನೆಯ ಹೊಸ್ತಿಲು ದಾಟಬೇಕಾಗುತ್ತದೆ! ಇಲ್ಲಿ ತಂದೆ–ಮಗ ಎರಡು ಆಶಯಗಳ ಪ್ರತಿನಿಧಿಗಳಾಗಿ ಕಾಣು­ತ್ತಾರೆ. ನೂರ­ನೇ ತಪ್ಪು ಯಾವ ರೀತಿ ಘಟಿಸುತ್ತದೆ, ಆ ನಡುವೆ ನಡೆಯುವ ಕಥೆ ಏನು ಎನ್ನುವುದೇ ಇಲ್ಲಿ ಕುತೂ­ಹಲಕ್ಕೆ ಕಾರಣ. 

ನೂರನೇ ತಪ್ಪಿನ ಭಯದಲ್ಲಿಯೇ ತನ್ನ ಅಣ್ಣನ ಮದುವೆಗಾಗಿ ಮೈಸೂರಿನಿಂದ ತಿರುಪತಿಗೆ ಪಯ­ಣಿಸುವ ಸುಮಂತ್‌ನನ್ನು ಪ್ರಾರ್ಥನಾ ಒಗ್ಗೂ­ಡು­ವಳು. ಈ ಮೈಸೂರು– ತಿರುಪತಿ ನಡುವಿನ ಪಯ­ಣದಲ್ಲಿ ನಾಯಕ–ನಾಯಕಿಯ ಆಟ, ಪಡಿ­ಪಾಟಲಿನ ಸನ್ನಿವೇಶಗಳನ್ನು ಹೊತ್ತುಕೊಂಡು ಸಿನಿಮಾ ಸರಳವಾಗಿ ಸಾಗುತ್ತದೆ. ‘ತಿರುಪತಿ ಎಕ್ಸ್‌­ಪ್ರೆಸ್‌’ ವೇಗವಾಗಿಯೂ ಓಡುವುದಿಲ್ಲ, ನಿಧಾನಗ­ತಿ­ಯಲ್ಲೂ ಚಲಿಸುವುದಿಲ್ಲ. ಸಮತೂಕದ ತಾಳ್ಮೆಯ ಪಯಣ. ಚಿಕ್ಕಣ್ಣ, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್, ಸಿಹಿಕಹಿ ಚಂದ್ರು ಸೇರಿ­ದಂತೆ ಹಾಸ್ಯ ನಟರ ದಂಡೇ ಇದೆ. ಇವರು ತಮ್ಮ ಸೀಮಿತ ಪಾತ್ರ ಪರಿಧಿಯಲ್ಲಿ ಪ್ರೇಕ್ಷಕನ ಮೊಗವನ್ನು ಅರಳಿ­ಸುತ್ತಾರೆ. ತಮ್ಮ ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ ನಾಯಕ ಸುಮಂತ್ ನಟನೆ ಸುಧಾ­ರಿಸಿದೆ. ನಾಯಕಿ ಕೃತಿ ಖರಬಂಧ ಸಿಕ್ಕಿರುವ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಕಥೆಯಲ್ಲಿ ಇಲ್ಲದ ಅದ್ದೂರಿತ ಇಲ್ಲಿನ ಎರಡು ಹಾಡುಗಳಲ್ಲಿದ್ದು, ಆ ಕ್ಷಣದಲ್ಲಿ ಇಷ್ಟವಾಗುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT