ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ನಿರ್ಮಾಣದ ಕ್ರಿಯೆಯಲ್ಲಿ ಹೆಣ್ಣಿದ್ದಿದ್ದರೆ...

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ನಮ್ಮ ಮನೆಯ ಮೇಲ್ಛಾವಣಿಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟ ಚುಕ್ಕಿ ಮುನಿಯ ಜೋಡಿಗಳು, ಮರಿ ಹಕ್ಕಿಗಳಿಗಾಗಿ ಎಲ್ಲಿಂದಲೋ ಹುಳ ಹುಪ್ಪಟೆ ಹಿಡಿದು ತಂದು ತಿನ್ನಿಸುವಾಗಿನ ಗೂಡಿನಲ್ಲಿನ ಕಿಚಿಪಿಚಿ ಸಂಭ್ರಮ, ಹಾರಲು ಕಲಿಸುವಾಗಿನ ಕಾಳಜಿ, ಪರಸ್ಪರ ಆ ಹಕ್ಕಿಗಳಲ್ಲಿರುವ ಕರುಳಿನ ಅಗೋಚರ ಅನುಬಂಧವನ್ನು ನೋಡುವಾಗಲೆಲ್ಲಾ ಹೀಗೆ ಪ್ರಕೃತಿ ಸಹಜವಾಗಿ ನಾವೂ ಇದ್ದಿದ್ದರೆ ಎಷ್ಟು ಚೆಂದ ಎನ್ನಿಸುತ್ತಿರುತ್ತದೆ.

ಈ ಜಾತಿ, ಮತ, ಧರ್ಮಗಳನ್ನು ಸೃಷ್ಟಿಸಿದವರು ಯಾರು? ಇದರ ಕಾರಣಕ್ಕಾಗಿಯೇ ಇಷ್ಟೊಂದು ಕ್ರೌರ್ಯ! ಪುರುಷನ ಜೊತೆಗೇ ಸಮಾನವಾಗಿ ಮಹಿಳೆ ಈ ಸಮಾಜವನ್ನು ನಿರ್ಮಿಸಿದ್ದಿದ್ದರೆ ಬಹುಶಃ ಇದಾವ ಕಟ್ಟುಪಾಡುಗಳೂ ಇಲ್ಲದೇ ಬರಿಯ ಪ್ರೀತಿ, ಅಂತಃಕರಣದಿಂದಲೇ ಬದುಕು ತುಂಬಿಕೊಡಲು ಸಾಧ್ಯವಾಗುತ್ತಿತ್ತೆ?

ಜೈನ ಧರ್ಮದಲ್ಲಿ ಹುಟ್ಟಿ, ಸಾಮಾಜಿಕವಾಗಿ ಗುರುತಿಸಿಕೊಂಡು ಒಂದಿಷ್ಟು ಪ್ರಗತಿಪರವಾಗಿ ಯೋಚಿಸುವ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳದಿದ್ದರೆ, ಧಾರ್ಮಿಕ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಳ್ಳದಿದ್ದರೆ, ಒಟ್ಟು ಸಮಾಜವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಕ್ತವಾಗಿ ಯೋಚಿಸಿದರೆ, ಕೆಲಸ ಮಾಡಿದರೆ ಏನಾಗುತ್ತದೆ? ಎಂಬುದಕ್ಕೆ ಎರಡು ತಿಂಗಳ ಹಿಂದೆ ನಡೆದ ಅಹಿತಕರ ಘಟನೆ, ಅದರಿಂದ ನಾನು ಅನುಭವಿಸುತ್ತಿರುವ ಅಪಮಾನವೇ ಸಾಕ್ಷಿ. ಇದು ದೇಶದಲ್ಲೆೀ ಅತೀ ಹೆಚ್ಚಿನ ಅಂದರೆ ಶೇ 95ಕ್ಕಿಂಥಾ ಹೆಚ್ಚಿನ ಸಾಕ್ಷರರನ್ನು ಹೊಂದಿರುವ ಅಲ್ಪಸಂಖ್ಯಾತ ಕೋಮೊಂದು ಮಹಿಳೆಯ ವಿಷಯದಲ್ಲಿ ಇಂದಿಗೂ ಎಷ್ಟು ಅಸಹನೆ ಹೊಂದಿದೆ ಎಂಬುದಕ್ಕೊಂದು ಉದಾಹರಣೆಯೂ ಹೌದು.

ಹಾಸನದ ಸಾಹಿತ್ಯ ಪರಿಷತ್ ಆವರಣದಲ್ಲಿ ಜಾನಪದ ಉತ್ಸವ ಮತ್ತು ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಸಿದ್ಧಪಡಿಸಿದ ಮಾಂಸಾಹಾರ ಖಾದ್ಯಗಳ ಮಾರಾಟವೂ ಇತ್ತು. ಇದು ವಿವಾದಕ್ಕೆ ಕಾರಣವಾಗಿ ಪತ್ರಿಕೆಗಳಲ್ಲಿ ಪರ-ವಿರೋಧದ ಚರ್ಚೆ ನಡೆಯಿತು. ಇದನ್ನು ಕುರಿತು ಪತ್ರಿಕೆಯೊಂದು ತನ್ನ ವಾರದ ಅಂಕಣವೊಂದಕ್ಕೆ ಸಾಮಾಜಿಕ ಕ್ಷೇತ್ರದ ಹಲವರನ್ನು ಮಾತಾಡಿಸಿತು. ಅದರಲ್ಲಿ ನಾನೂ ಒಬ್ಬಳು.

ಮಾಂಸಾಹಾರಿ ಖಾದ್ಯ ಮಾರಾಟದಿಂದ ಸಾಹಿತ್ಯ ಪರಿಷತ್ ಆವರಣ ಅಪವಿತ್ರವಾಯಿತೇ?  ಇದು ಪ್ರಶ್ನೆ. ನಾನು ಯಾವ ಪೂರ್ವಗ್ರಹವೂ ಇಲ್ಲದೇ  ಆಹಾರದಲ್ಲಿ ಅದು ಪವಿತ್ರ ಇದು ಅಪವಿತ್ರ ಎನ್ನುವ ಭಾವನೆ ಸರಿಯಲ್ಲ. ಆಹಾರಕ್ಕೆ ಯಾವ ದೋಷವೂ ಇಲ್ಲ. ಸಾಹಿತ್ಯ ಪರಿಷತ್ ಭವನದಲ್ಲಿ ಮಾಂಸಾಹಾರ ಮಾರಾಟ ಮಾಡಿದ್ದರಲ್ಲಿ ನನಗೆ ಯಾವ ತಪ್ಪೂ ಕಾಣಿಸುತ್ತಿಲ್ಲ  ಎಂಬ ಹೇಳಿಕೆ ನೀಡಿದ್ದೆ. ಇದರಿಂದ ಅಸಹನೆಗೊಂಡ ಕೆಲ ಜೈನಧರ್ಮೀಯರು ದೂರವಾಣಿಯ ಮೂಲಕ ಮಾತಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ತಪ್ಪು ಒಪ್ಪಿಕೊಂಡು ವಿಷಾದದ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು.

 ನನ್ನ ಹೇಳಿಕೆ ಅತ್ಯಂತ  ವೈಯಕ್ತಿಕ ಮತ್ತು ಒಟ್ಟು ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತಾಡಿದ್ದು, ಇದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲವೆಂದು  ಮೃದುವಾಗಿಯೇ ಹೇಳಿದೆ. ಅದವರಿಗೆ ಸಮಾಧಾನವಾಗದೇ, ಹಾಸನದ ಧಾರ್ಮಿಕ ಸಂಘಗಳು ಸಭೆ ಸೇರಿ ವಿಚಾರ ಮಾಡುವುದಾಗಿ ತಿಳಿಸಿದರು.  ಸಭೆಗೆ ಕರೆಯಿರಿ ಅಲ್ಲಿ ನನ್ನ ಹೇಳಿಕೆ ಮತ್ತು ಸಂದರ್ಭವನ್ನು ವಿವರಿಸುತ್ತೇನೆ  ಎಂದು ಹೇಳಿದಾಗ ಒಪ್ಪಿಕೊಂಡರು.

ಆನಂತರ ತಾವಷ್ಟೇ ಸಭೆ ಸೇರಿ ನನ್ನನ್ನು ಕರೆಯದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ನೇರವಾಗಿ  ಪತ್ರಿಕಾ ಹೇಳಿಕೆ  ಬಿಡುಗಡೆ ಮಾಡಿದರು. ಅದರಲ್ಲಿ ನನ್ನ ಹೇಳಿಕೆಯು ಜೈನಧರ್ಮದ ಮೂಲ ಧ್ಯೇಯವಾದ ಅಹಿಂಸಾ ತತ್ವಕ್ಕೆ ವಿರುದ್ಧವಾದುದೆಂದೂ ಇದನ್ನು ಜೈನ ಸಮಾಜ ಖಂಡಿಸುತ್ತದೆಂದೂ ನನ್ನ ತಪ್ಪು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಬೇಕೆಂದೂ ಆಗ್ರಹಿಸಲಾಗಿತ್ತು.

 ನಾನು ಒಂದು ಬಹು ಸಂಸ್ಕೃತಿ, ಬಹು ಮತ-ಧರ್ಮಗಳಿರುವ, ಬಹು ವಿಧದ ಆಹಾರ ಸಂಸ್ಕೃತಿ ಇರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಬದುಕುತ್ತಿರುವುದರಿಂದ ಅವುಗಳೆಲ್ಲವನ್ನೂ ನನ್ನದರಂತೆಯೇ ಮನಃಪೂರ್ವಕವಾಗಿ ಗೌರವಿಸುತ್ತೇನೆಂದೂ ಯಾವುದೇ ಒಂದು ಧರ್ಮದ ವಕ್ತಾರಳಾಗದೇ, ಒಟ್ಟು ಸಮಾಜ ಮತ್ತು ಸಾಂಸ್ಕೃತಿಕ ಸಮುದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಂಪ ಹೇಳಿದ `ಮನುಷ್ಯ ಜಾತಿ ತಾನೊಂದೆ ವಲಂ' ಎಂಬ ನನ್ನ ಬದುಕಿನ ಮನೋಧರ್ಮಕ್ಕೆ ಬದ್ಧಳಾಗಿ ನನ್ನ ಅತ್ಯಂತ ವೈಯಕ್ತಿಕ ಅಭಿಪ್ರಾಯವನ್ನು ನೀಡಿರುವುದಾಗಿಯೂ, ನಾನು ನಂಬುವ ಸಹಬಾಳ್ವೆ ಮತ್ತು ಸಹಜೀವನದ ಪರಿಕಲ್ಪನೆಗೆ ಪೂರಕವಾಗಿಯಷ್ಟೇ ನನ್ನ ಹೇಳಿಕೆ ಇದೆ  ಎಂದು ಪತ್ರಿಕಾ ಹೇಳಿಕೆಯ ಮೂಲಕವೇ ಸ್ಪಷ್ಟಪಡಿಸಿದೆ. ಹೀಗೆ ವಿನಾಕಾರಣ ವಿವಾದಕ್ಕೆಳೆಯಲ್ಪಟ್ಟು ನೋವಿಗೀಡಾದೆ.

ಇದರಿಂದಲೂ ಸಮಾಧಾನಗೊಳ್ಳದ ಹಾಸನ ಜೈನಸಂಘದವರು ಇದೇ ವಿಷಯವನ್ನು ಪ್ರಸ್ತಾಪಿಸಿ ಮತ್ತೆ ಮನೆಗೇ ನೋಟಿಸ್ ಕಳುಹಿಸಿದರು. ಅದಕ್ಕೂ ಸಹನೆಯಿಂದಲೇ ಮೇಲಿನಂತೆಯೇ ಉತ್ತರಿಸಿದೆ. ಆದರೆ ನನ್ನ ಪ್ರತಿಕ್ರಿಯೆ ಪ್ರಕಟಿಸದೇ ತಮ್ಮ ನೋಟಿಸನ್ನು ಮಾತ್ರ ಧಾರ್ಮಿಕ ಕೇಂದ್ರಗಳಲ್ಲಿ ಪ್ರದರ್ಶಿಸಿ ಅಪಪ್ರಚಾರವನ್ನೂ ಮಾಡಿದರು. ಅದನ್ನು ನೋಡಿದವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮಾನಸಿಕ ಹಿಂಸೆಯೂ ಜೊತೆಗೂಡಿತು. ಈ ಮೊದಲೇ ಮಹಿಳಾ ದಿನಾಚರಣೆಗೆ ಅತಿಥಿಯಾಗಿ ಆಹ್ವಾನಿಸಿದ್ದ ಜೈನ ಮಹಿಳಾ ಸಮಾಜದವರು, ಕಾರ್ಯಕ್ರಮಕ್ಕೆ ಬರುವುದು ಬೇಡವೆಂದು ಪತ್ರ ಕಳುಹಿಸಿದರು.

ಯಾವುದೇ ಧಾರ್ಮಿಕ ಸಂಸ್ಥೆಯ ಪದಾಧಿಕಾರಿ ಇರಲಿ, ಕನಿಷ್ಠ ಸದಸ್ಯೆಯೂ ಅಲ್ಲದಿರುವಾಗ ಹೀಗೆಲ್ಲಾ ಆದೇಶಿಸುವುದು ವಿವೇಚನೆ ಇಲ್ಲದ ಕ್ರಮ ಹಾಗೂ ಕಾನೂನುರೀತ್ಯ ತಪ್ಪೆಂಬ ತಿಳಿವಳಿಕೆಯನ್ನು ಅವರಿಗೆ ನೀಡಿ ಈ ವಿವಾದವನ್ನು ಕೊನೆಗೊಳಿಸುವ ಯಾವ ಪ್ರಯತ್ನವನ್ನೂ  `ನಿನ್ನ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ' ಎಂದು ಖಾಸಗಿಯಾಗಿ ನನಗೆ ಹೇಳಿದ ಧರ್ಮದ ಪ್ರಮುಖ ವ್ಯಕ್ತಿಗಳ್ಯಾರೂ ಬಹಿರಂಗದಲ್ಲಿ ಮಾಡಲಿಲ್ಲವೆಂಬುದೇ ವಿಷಾದನೀಯ. ನನ್ನ ಪ್ರತಿಕ್ರಿಯೆ ಪ್ರಕಟಿಸದೇ ಸಂಘ ನೀಡಿದ ಅದೇ ನೋಟಿಸನ್ನು ರಾಜ್ಯ ಮಟ್ಟದ ಧಾರ್ಮಿಕ ಪತ್ರಿಕೆಗಳಲ್ಲಿ ಒಂದಾದ ನಂತರ ಇನ್ನೊಂದರಲ್ಲಿ ಪ್ರಕಟಿಸಿ ಈಗಲೂ ನನ್ನನ್ನು ಅಪಮಾನಿಸುವುದು ಮುಂದುವರಿದಿದೆ.

ಇಷ್ಟೆಲ್ಲಾ ಆದ ನಂತರವೂ ನಾನು ಮಾಡಿದ ಮಹಾ ಅಪರಾಧವೇನು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.  ಜೈನ ಸಮಾಜದೊಳಗೇ ಮಾಂಸಾಹಾರ ತಿನ್ನುತ್ತಿರುವವರು, ಮಾಂಸಾಹಾರಿಗಳನ್ನು ವಿವಾಹ ಮಾಡಿಕೊಳ್ಳುತ್ತಿರುವವರಿದ್ದಾರಲ್ಲಾ ಅವರಿಗೆ ಯಾವ ಶಿಕ್ಷೆ ವಿಧಿಸುತ್ತಿದ್ದೀರಿ? ಕನಿಷ್ಠ ನನ್ನ ವಿವರಣೆಯನ್ನು ಕೇಳುವ ಸೌಜನ್ಯವೂ ಇಲ್ಲದೇ ಮೇಲಿಂದ ಮೇಲೆ ನನ್ನ ಮೇಲೆ ಮಾಡಿದ ಈ ಗಧಾ ಪ್ರಹಾರ ಮಾನಸಿಕ ಹಿಂಸೆಯಲ್ಲವೇ? ಇದಕ್ಕೆ ಜೈನಧರ್ಮದಲ್ಲಿ ಯಾವ ಶಿಕ್ಷೆಯಿದೆ?

ಮುಕ್ತವಾಗಿ ಚರ್ಚೆಗೆ ತೆರೆದುಕೊಂಡಿದ್ದರೆ ಹೀಗೆಲ್ಲಾ ಪ್ರಶ್ನಿಸಬಹುದಿತ್ತು. ಆದರೆ ಬದಲಾವಣೆಗೆ ತೆರೆದುಕೊಳ್ಳಲು ಒಪ್ಪದ ಪೀಠಸ್ಥ ಮನಸ್ಸುಗಳೊಂದಿಗೆ ಸಂವಾದ ಸಾಧ್ಯವೇ? ನಾನೋರ್ವ ಸಾರ್ವಜನಿಕ ವ್ಯಕ್ತಿ ನನಗೆ ನನ್ನದೇ ಆದ ವೈಯಕ್ತಿಕ ವಿಚಾರಗಳಿರುತ್ತವೆ, ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ ಎಂಬುದನ್ನು ಗೌರವಿಸಬೇಕಲ್ಲವೇ? ಮತ್ತೂ ಹೀಗೇ ಅಪಮಾನಿಸುತ್ತಿದ್ದರೆ, ಅದು ಜೈನಸಮುದಾಯವನ್ನು ತ್ಯಜಿಸುವ ಒತ್ತಡ ಉಂಟುಮಾಡಿದಂತಲ್ಲವೇ?

 ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 0.4ರಷ್ಟಿರುವ ಜೈನಧರ್ಮೀಯರಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಇತರೆಲ್ಲಾ ಧರ್ಮದ ಮಹಿಳೆಯರಿಗಿಂತಾ ಅತ್ಯಧಿಕವಾಗಿದ್ದು ಅದು ಶೇಕಡಾ 90.6ರಷ್ಟಿದೆ. ಆದರೆ ಅದೇ ಮಹಿಳೆಯರ ಸಾಮಾಜಿಕವಾಗಿ ಕೆಲಸದಲ್ಲಿ ಪಾಲ್ಗೊಳ್ಳುವಿಕೆಯ ಪ್ರಮಾಣ ಶೇಕಡಾ 9.2 ಮಾತ್ರ! ಅದು ಮುಸ್ಲಿಂ ಮತ್ತು ದಲಿತ ಮಹಿಳೆಗಿಂತಲೂ ಕಡಿಮೆ. ಈ ಅಂಕಿ ಅಂಶಗಳೇ ಜೈನಮಹಿಳೆಗೆ ಸಾಮಾಜಿಕ ಮುಕ್ತತೆ ಇಲ್ಲದಿರುವುದನ್ನು ಸೂಚಿಸುತ್ತದೆ.

ಉನ್ನತ ವ್ಯಾಸಂಗ ಮಾಡಿದ ಹೆಚ್ಚಿನ ಮಹಿಳೆಯರು ಇಂದಿಗೂ ಅಡುಗೆ ಮನೆ ದೇವರ ಮನೆಗಳಲ್ಲೆೀ ಉಳಿದಿರುವುದು, ಯಾವುದೇ ಉನ್ನತ ಹುದ್ದೆಗಳಲ್ಲಾಗಲಿ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಾಗಲಿ ಜೈನ ಮಹಿಳೆಯರು ಇಲ್ಲವೇ ಇಲ್ಲವೆನಿಸುವಷ್ಟು ವಿರಳವಾಗಿರುವುದು ಏನನ್ನು ಸೂಚಿಸುತ್ತದೆ?

ಅಹಿಂಸಾ ಧರ್ಮ ಪ್ರತಿಪಾದಿಸುವ ಜೈನಧರ್ಮದಲ್ಲಿ 0-6 ವರ್ಷದ ಗಂಡು-ಹೆಣ್ಣುಮಕ್ಕಳ ನಡುವಿನ ಅನುಪಾತ ಪ್ರತಿ 1000ಕ್ಕೆ 870ಕ್ಕೆ ಇಳಿದಿದ್ದು, ಇದು ಸದ್ದಿಲ್ಲದೇ ಹೆಣ್ಣು ಭ್ರೂಣಹತ್ಯೆ ಮಾಡುತ್ತಿರುವ ಎರಡನೆಯ ದೊಡ್ಡ ಧರ್ಮವಾಗಿದೆ!

ಇತ್ತೀಚಿನ ಕೆಲ ವರ್ಷಗಳಲ್ಲಿ ಜೈನ ಹೆಣ್ಣುಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾತಿ ವಿವಾಹಗಳಿಗೆ ಮೊರೆ ಹೋಗುತ್ತಿರುವ ನಿದರ್ಶನಗಳಿವೆ, ಈ ಉಸಿರು ಕಟ್ಟಿಸುವ ವಾತಾವರಣದಲ್ಲಿ ಇದ್ದರೆ ತಮ್ಮ ವಿದ್ಯಾಭ್ಯಾಸ, ಸಾಮರ್ಥ್ಯ, ಪ್ರತಿಭೆ ಕಮರಿ ಹೋಗುತ್ತದೆ ಎಂಬ ಆತಂಕದಿಂದ ಮುಕ್ತ ವಾತಾವರಣವನ್ನು ಅರಸಿ ಇವರೆಲ್ಲಾ ಹೊರ ಹೋಗುತ್ತಿದ್ದಾರೆಯೇ? ಜೈನಧರ್ಮವು ಮಹಿಳೆಯರ ಬಗ್ಗೆ ಹೊಂದಿರುವ ನಿಕಷ್ಟ ಭಾವನೆಗಳಿಗೆ ನಿದರ್ಶನವಾಗಿ ಹೆಚ್ಚಿನ ಮಾಹಿತಿಗಾಗಿ ಡಾ.ಬಾಳಾಸಾಹೇಬ ಲೋಕಾಪುರ ಅವರು ಬರೆದಿರುವ  ಜೈನಮಹಿಳೆ-ಸಮಾಜೋ ಧಾರ್ಮಿಕ ಅಧ್ಯಯನ ಎಂಬ ಸಂಶೋಧನಾ ಕೃತಿಯನ್ನು ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT