ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೋಹನಂ

ಗಾನ, ನಾಟ್ಯದ ಹದ ಮುದ
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನೃತ್ಯದ ಹೆಜ್ಜೆಯೊಳಗಿನ ಗಾನಸುಧೆಯನ್ನು ಮತ್ತು ಸಂಗೀತದ ದನಿಯೊಳಗಿನ ನೃತ್ಯತರಂಗವನ್ನು ಗುರುತಿಸುವುದೇ ‘ಸಮ್ಮೋಹನಂ’ ಎನ್ನುತ್ತಾರೆ ಕರ್ನಾಟಕಿ ಸಂಗೀತಗಾರ್ತಿ ಅರುಣಾ ಸಾಯಿರಾಮ್ ಹಾಗೂ ಭರತನಾಟ್ಯ ಕಲಾವಿದೆ ಮಾಳವಿಕಾ ಸರುಕ್ಕೈ. ಸಂಗೀತ–ನೃತ್ಯದ ಮಾಂತ್ರಿಕ ಶಕ್ತಿಯನ್ನು ಏಕಕಾಲದಲ್ಲಿ ಒಂದೇ ವೇದಿಕೆಯಡಿ, ಕಲಾಪ್ರಿಯರ ಮುಂದಿಡುವ ಪ್ರಯತ್ನವಿದು.

ಸಂಗೀತ ಹಾಗೂ ನೃತ್ಯ ಪರಸ್ಪರ ಭಾವಪೂರ್ಣವಾಗಿ ಬೆಸೆದುಕೊಂಡ ಕಲಾಪ್ರಕಾರಗಳು. ಅಲ್ಲಿ ಲಯದ ಮೋಡಿ ಇದೆ, ಇಲ್ಲಿ ತಾಳದ ಮಾಂತ್ರಿಕತೆ ಇದೆ. ಆದರೆ ಒಂದನ್ನು ಬಿಟ್ಟು ಇನ್ನೊಂದು ಅಪೂರ್ಣ.

ನೃತ್ಯದ ವಿಜೃಂಭಣೆಯಲ್ಲಿ ಸಂಗೀತ ತೆರೆಮರೆಗೆ ಸರಿಯುವ ಅಥವಾ ಸಂಗೀತದ ಶ್ರೀಮಂತಿಕೆಯಲ್ಲಿ ನೃತ್ಯ ಬಡವಾಗುವ ಅಪಾಯ ಈ ಎರಡೂ ಕಲೆಗಳ ಮಿತಿ ಎಂದೇ ಹೇಳಬಹುದು. ಈ ಪರಿಧಿಯಿಂದ ಆಚೆ ಬಂದು ಎರಡೂ ಕಲೆಗಳನ್ನು ಸಮಾನವಾಗಿ ಪ್ರದರ್ಶಿಸಿ, ಒಂದೇ ಸಮಯದಲ್ಲಿ, ಒಂದೇ ವೇದಿಕೆಯಡಿ ಎರಡಕ್ಕೂ ಸಮಾನ ಗೌರವ ದಕ್ಕಿಸಿಕೊಡುವ ಪ್ರಯತ್ನವಾಗಿ ‘ಸಮ್ಮೋಹನಂ’ ನೃತ್ಯ–ಸಂಗೀತದ ಜುಗಲ್‌ಬಂದಿ ಪರಿಕಲ್ಪನೆ ಹುಟ್ಟಿಕೊಂಡಿದ್ದು.

ಖ್ಯಾತ ಕರ್ನಾಟಕ ಸಂಗೀತದ ಗಾಯಕಿ ಅರುಣಾ ಸಾಯಿರಾಮ್ ಹಾಗೂ ಭರತನಾಟ್ಯ ಕಲಾವಿದೆ ಮಾಳವಿಕಾ ಸರುಕ್ಕೈ ಇದೇ ಭಾನುವಾರ ಸಂಜೆ 7.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಮ್ಮೋಹನಂ’ಗೆ ಸಾಕ್ಷಿಯಾಗಲಿದ್ದಾರೆ.
ಅರುಣಾ ಸಾಯಿರಾಮ್ ಹಾಗೂ ಮಾಳವಿಕಾ ಸರುಕ್ಕೈ ಅವರು ಆರಾಧಿಸುತ್ತ ಬಂದ ಕಲಾಪ್ರಕಾರಗಳು ಬೇರೆ–ಬೇರೆ ಆದರೂ, ಅನುಸರಿಸಿಕೊಂಡು ಬಂದ ಮಾರ್ಗಗಳು ಬಹುತೇಕ ಒಂದೇ. ಒಂದೇ ದೃಷ್ಟಿಕೋನ, ಒಂದೇ ತುಡಿತ ಹೊಂದಿರುವ ಇವರು ಈ ಎರಡು ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಡಿ ತಂದು ಮಾಂತ್ರಿಕ ಸ್ಪರ್ಶ ನೀಡ ಹೊರಟ ಫಲವೇ ‘ಸಮ್ಮೋಹನಂ’.

ನೃತ್ಯಂ–ಸಂಗೀತಂ–ಸಮ್ಮೋಹನಂ
ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಒಂದು ಅದ್ಭುತ ಪ್ರದರ್ಶನ ಸಮ್ಮೋಹನಂ. ಇದು ಅನೇಕ ಪ್ರಯತ್ನಗಳ, ವಿಚಾರಗಳ, ಕಲ್ಪನೆಗಳ ನಂತರ ಬೆಳೆದು ಬಂದ ಪರಿಕಲ್ಪನೆ ಎನ್ನುತ್ತಾರೆ ಅರುಣಾ ಹಾಗೂ ಮಾಳವಿಕಾ.

ಒಂದೇ ತಾಳ, ಒಂದೇ ರಾಗ

ಸೂತ್ರ, ವಿಧಾನ ಎರಡೂ ದೃಷ್ಟಿಕೋನಗಳಿಂದಲೂ ಭರತನಾಟ್ಯ ಮೂಲತಃ ಸಂಗೀತದ ಒಂದು ಅವಿಭಾಜ್ಯ ಭಾಗವಾಗಿ ಬೆಳೆದು ಬಂದಿದೆ. ಆದರೆ ನೃತ್ಯ ಕಾರ್ಯಕ್ರಮಗಳಲ್ಲಿ ಸಂಗೀತ ತೆರೆಯ ಹಿಂದಿರುತ್ತದೆ. ಅಲ್ಲಿ ಕೇವಲ ನೃತ್ಯದ ವೈಭವ ಕಣ್ಣಿಗೆ ಕಟ್ಟುತ್ತ ಹೋಗುತ್ತದೆ. ಹಾಗೆಯೇ ಸಂಗೀತ ಕಾರ್ಯಕ್ರಮದಲ್ಲೂ ಸಂಗೀತವೇ ಪ್ರಮುಖವಾಗಿ ಉಳಿದು, ಅದರ ಒಳಗಿರುವ ದನಿ ತರಂಗಗಳ ನೃತ್ಯ ಕಣ್ಣಿಗೆ ಕಾಣದೇ ಹೋಗುತ್ತದೆ.

ನೃತ್ಯ–ಸಂಗೀತ ಎರಡನ್ನೂ ಒಂದೇ ಸಮಯದಲ್ಲಿ, ಒಂದೇ ವೇದಿಕೆಯಲ್ಲಿ ಏಕ ರೀತಿಯ ಪ್ರಾಮುಖ್ಯ  ನೀಡಿ, ಸಮಾನವಾಗಿ ವೈಭೋಗಿಸುವ ತಂತ್ರವಾಗಿ ಸಮ್ಮೋಹನಂ ಜನಮನ ಗೆಲ್ಲಲಿದೆ.

90 ನಿಮಿಷಗಳ ಈ ಜುಗಲ್‌ಬಂದಿ ಪ್ರದರ್ಶನದಲ್ಲಿ ತುಂಟ ಕೃಷ್ಣನ ಪುರಾಣ ಕಥನದ ವಿಶ್ಲೇಷಣೆ ಇದೆ. ಇಲ್ಲಿ ಒಂದು ಸರಳವಾದ, ಅಪ್ಯಾಯಮಾನವಾದ ಕೃಷ್ಣನ ಪ್ರೇಮ ಕಾವ್ಯ ಇದೆ, ರಾಧಾಳ ಮೋಹಕ ಶೃಂಗಾರವಿದೆ, ಭವ್ಯ ಬೃಂದಾವನದ ಮಧುರ ವಿವರಣೆ ಇದೆ. ಒಂದು ಶುದ್ಧ ನೃತ್ಯ ಮತ್ತು ಅಭಿನಯದ ರೂಪದಲ್ಲಿ ಕೃಷ್ಣನನ್ನು ಪಡೆಯುವ ಮೀರಾಳ ತುಡಿತವಿದೆ.

ಕೃಷ್ಣನ ತುಂಟಾಟ, ರಾಧೆಯ ಅಂತರಂಗದ ಚಿತ್ರಣವನ್ನು ಭಾವಾಭಿನಯದ ಮೂಲಕ ಪ್ರೇಕ್ಷಕರ ಮುಂದಿಡುವ ಜೊತೆಗೆ, ಅವರ ಸಾಂಗತ್ಯದ ಸೊಗಸಾದ ಕಥನವನ್ನು ರಾಗಗಳ ಮೂಲಕ ಮನಸ್ಸಿಗೆ ತಾಟುವಂತೆ ಅಭಿವ್ಯಕ್ತಿಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶ.

ಹೊಸ ಆವಿಷ್ಕಾರಗಳ ಪ್ರಯತ್ನ, ಸೀಮಿತ ಪರಿಧಿಯಿಂದಾಚೆ ಹೋಗುವ ತವಕ, ಸಹಜತೆಯೊಂದಿಗೆ ವಿಕಸನದ ಹಾದಿಯಲ್ಲಿ ಮುಂದಡಿ ಇಡುವ ತುಡಿತದ ರೂಪವಾಗಿ ‘ಸಮ್ಮೋಹನಂ’ ಸಿದ್ಧಗೊಂಡಿದ್ದು. ಸಂಗೀತ ಮತ್ತು ನೃತ್ಯದ ಹೊಸ ಸಂಭಾಷಣೆಯ ಒಂದು ವಿಶಾಲ ಅರ್ಥ ಇದು ಎಂದು ಹೇಳಬಹುದೇನೊ. ಸಮ್ಮೋಹನಂ ಕೇವಲ ಈ ಇಬ್ಬರು ಕಲಾವಿದರ ಪ್ರದರ್ಶನವಷ್ಟೇ ಅಲ್ಲ, ಒಂದು ಇಡೀ ತಂಡದ ಒಟ್ಟು ಪರಿಶ್ರಮದ ಫಲ ಎನ್ನುತ್ತಾರೆ.

ಈ ವಿಶಿಷ್ಟ ಬಗೆಯ ನೃತ್ಯ–ಗಾನಗೋಷ್ಠಿಯ ಬಗ್ಗೆ ಮಾತನಾಡಿದ ಅರುಣಾ, ‘ಸಂಗೀತಕ್ಕೂ, ನೃತ್ಯಕ್ಕೂ ಹೊಸ ಅರ್ಥ ಹುಡುಕುವ ಪ್ರಯತ್ನವಾಗಿ ಸಮ್ಮೋಹನಂ ರೂಪುಗೊಂಡಿತು. ಈ ಪರಿಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಖ್ಯಾತ ನೃತ್ಯಗಾರ್ತಿ ಮಾಳವಿಕಾ ನೆರವಾದರು. ಸಂಗೀತಕ್ಕೆ ಸಂಪೂರ್ಣ ಜೀವ ತುಂಬುವುದು ನೃತ್ಯ. ಹಾಗೆಯೇ ಸಂಗೀತಕ್ಕೆ ನೃತ್ಯದ ಸಾಥ್ ಇದ್ದರಷ್ಟೇ ಪರಿಪೂರ್ಣ. ಈ ಎರಡೂ ಪ್ರಕಾರದ ಪ್ರೇಕ್ಷಕರನ್ನು ಒಂದೇ ಸಮಯದಲ್ಲಿ ಒಂದೇ ವೇದಿಕೆಯಡಿ ಹಿಡಿದಿಟ್ಟು, ಅವರಿಗೆ ಈ ಕಲೆಗಳ ಆಳ ಅರ್ಥವನ್ನು ವಿವರಿಸಬೇಕು, ಅರ್ಥೈಸಬೇಕು ಎನ್ನುವ ತುಡಿತದ ಫಲವಿದು’ ಎನ್ನುತ್ತಾರೆ.

ಜುಗಲ್‌ಬಂದಿಯ ಹೊಸ ಅರ್ಥ
ಹಾಗೆ ನೋಡಿದರೆ ಸಂಗೀತ ಮತ್ತು ನೃತ್ಯದ ಜುಗಲ್‌ಬಂದಿ, ಶಾಸ್ತ್ರೀಯ ವೇದಿಕೆಗಳಿಗೆ ಹೊಸ ಪರಿಕಲ್ಪನೆ ಏನೂ ಅಲ್ಲ. ಅನೇಕ ವರ್ಷಗಳಿಂದಲೂ ಸಂಗೀತ ಹಾಗೂ ನೃತ್ಯದ ಪ್ರತ್ಯೇಕ ಜುಗಲ್‌ಬಂದಿಗಳು ನಡೆಯುತ್ತಲೇ ಇವೆ. ಕಲಾವಿದರು ಈ ರೀತಿಯ ಪ್ರಯೋಗಗಳಿಗೆ ಸಾಕ್ಷಿಯಾಗುತ್ತ ಬಂದಿದ್ದಾರೆ. ಆದರೆ ಈ ರೀತಿಯ ಸಂಗೀತ–ನೃತ್ಯದ ಸಮ್ಮಿಲನ ಹೊಸದು ಎನ್ನುತ್ತಾರೆ ಮಾಳವಿಕಾ.

‘ಸಂಗೀತ ಹಾಗೂ ನೃತ್ಯ ಪ್ರಕಾರಗಳು ಈ ನವಯುಗದ ಬದಲಾದ ಸನ್ನಿವೇಶಗಳಲ್ಲಿ ಹೊಸ ಹೊಸ ಅರ್ಥಗಳಿಗೆ ಒಡ್ಡಿಕೊಳ್ಳುತ್ತ ಸಾಗಿವೆ. ಇಂದು ಕಲಾಪ್ರಿಯರ ಮುಂದೆ ಮನರಂಜನೆಗೆ ಸಾಕಷ್ಟು ಆಯ್ಕೆಗಳಿವೆ. ಅವೆಲ್ಲವುಗಳಿಗಿಂತ ಪ್ರತ್ಯೇಕವಾಗಿ ನಿಂತು, ಶ್ರೇಷ್ಠವಾಗಿ ಉಳಿದು ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಉಳಿಸಿಕೊಂಡು ಅವರಿಗೆ ಹೊಸ ಅನುಭವಗಳನ್ನು, ಕಲಾತೃಪ್ತಿಯನ್ನು ನೀಡುತ್ತ ಹೋಗುವುದರಲ್ಲಿ ಇದರ ನಿಜವಾದ ಸಾಮರ್ಥ್ಯ ಅಡಗಿದೆ. ಈ ನಿಟ್ಟಿನಲ್ಲಿ ಇಂತಹ ಕಲಾಪ್ರಕಾರಗಳನ್ನು ಈ ಹೊಸ ಪ್ರಯತ್ನಗಳಿಗೆ ಒಡ್ಡಬೇಕಾಗಿರುವುದು ಇಂದಿನ ಅಗತ್ಯಗಳಲ್ಲೊಂದು’ ಎನ್ನುತ್ತಾರೆ ಅವರು.

ಮೂಲ ಒಂದೇ, ಆಶಯವೂ ಒಂದೇ

ನಮ್ಮಿಬ್ಬರಲ್ಲಿಯೂ ಒಂದು ಸಾಮ್ಯತೆ ಇದೆ. ಮಾಳವಿಕಾ ಹಾಗೂ ನಾನು ಒಂದೇ ನೆಲದಲ್ಲಿ ಬೆಳೆದು, ನಂತರ ನಮ್ಮ ವೈಯಕ್ತಿಕ ಮಾರ್ಗಗಳಲ್ಲಿ ಪಳಗುವ ಪ್ರಯತ್ನದಲ್ಲಿದ್ದೇವೆ. ನಮ್ಮಿಬ್ಬರ ಮೂಲ ಒಂದೇ (ತಮಿಳು ನಾಡಿನ ತಂಜಾವೂರು), ಆಶಯವೂ ಒಂದೇ. ಇಂತಹ ಒಂದು ಆಶಯದ ರೂಪಕವೇ ‘ಸಮ್ಮೋಹನಂ’.

ಅದ್ಭುತವಾದ ಕಥಾಹಂದರ ಹಾಗೂ ಸಮರ್ಥವಾದ ಪರಿಕಲ್ಪನೆಯೊಂದಿಗೆ ಮಾಳವಿಕಾ ಮುಂದೆ ಬಂದಾಗ ನನಗೊಂದು ಹೊಸ ಮನೆಯ ಬಾಗಿಲು ತೆರೆದಂತೆ ಭಾಸವಾಯಿತು. ಮೋಡಿ ಮಾಡಬಲ್ಲ ಕಾಲ್ಗೆಜ್ಜೆಯ ತಾಳಕ್ಕೆ, ಇಂಪಾದ ದನಿ ಬೆರೆತಾಗ ಉಂಟಾಗಬಹುದಾದ ಭಾವತರಂಗಗಳನ್ನು ಕಲಾಪ್ರೇಮಿಗಳು ಅನುಭವಿಸಿಯೇ ಹೇಳಬೇಕು. ನಮ್ಮ ದೃಷ್ಟಿಕೋನದಲ್ಲಿ ಇದು ಒಂದು ಕಾರ್ಯಕ್ರಮ ಮಾತ್ರವಲ್ಲ, ನಮ್ಮ ಬದುಕಿನ ಒಂದು ಮೈಲಿಗಲ್ಲು.
–ಅರುಣಾ ಸಾಯಿರಾಮ್

ಕಾರ್ಯಕ್ರಮ: ಸಮ್ಮೋಹನಂ: ನೃತ್ಯ–ಸಂಗೀತ ಜುಗಲ್‌ಬಂದಿ
ದಿನಾಂಕ: ಭಾನುವಾರ, ಮಾರ್ಚ್ 8
ಸಮಯ: ಸಂಜೆ 7.30
ಅವಧಿ: 90 ನಿಮಿಷ
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್
ಪ್ರಸ್ತುತಿ: ಭೂಮಿಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT