ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲೇಖನ

ಅಮೃತವಾಕ್ಕು
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಜೈನಧರ್ಮಕ್ಕೇ ವಿಶಿಷ್ಟವಾದ ಒಂದು ಪರಿಕಲ್ಪನೆ. ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಂಪೂರ್ಣ ಜೈನಸಿದ್ಧಾಂತದ ಪರಿಚಯ ಅಗತ್ಯ. ಜೈನಧರ್ಮ ಬದುಕುವ ಕಲೆಯ ಜೊತೆಗೆ ಸಾಯುವ ಕಲೆಯನ್ನು ಸಹ ಬೋಧಿಸುವುದು. ಲ್ಲೇಖನ ಸಾಯುವ ಕಲೆಗೆ ಸಂಬಂಧಿಸಿದ್ದು. ಸತ್+ಲೇಖನ = ಸಲ್ಲೇಖನ = ಸರಿಯಾದ ರೀತಿಯಲ್ಲಿ ಕೃಶಗೊಳಿಸುವುದೇ ಸಲ್ಲೇಖನ.  

ಇದೊಂದು ಅಂತಿಮ ವ್ರತ.  ಮೋಕ್ಷಾರ್ಥಿಯಾದ  ಮುನಿಯು ತನ್ನ ಕಾಯವನ್ನು ಮತ್ತು ಕಷಾಯಗಳನ್ನು (ಕೋಪ, ಗರ್ವ, ಮೋಸ, ಲೋಭಗಳನ್ನು) ಕೃಶಗೊಳಿಸಬೇಕು. ಕಾಯವನ್ನು ಕೃಶಗೊಳಿಸಲು ಆಹಾರವನ್ನು ತ್ಯಜಿಸಿ ಉಪವಾಸ ಮಾಡುವ ಅನಶನವೆಂಬ ಬಹಿರಂಗ ತಪವನ್ನು ಆಶ್ರಯಿಸಿದರೆ; ಕಷಾಯವನ್ನು ಕೃಶಗೊಳಿಸಲು ಸ್ವಾಧ್ಯಾಯ, ಧ್ಯಾನಗಳೆಂಬ ಅಂತರಂಗ ತಪಗಳನ್ನು ಆಶ್ರಯಿಸುತ್ತಾನೆ.  ಈ ಬಾಹ್ಯ – ಅಭ್ಯಂತರ ತಪಗಳಿಂದ ಹೊಸ ಕರ್ಮಗಳು ಹರಿದುಬರುವುದು ನಿಲ್ಲುತ್ತದೆ ಹಾಗೂ ಹಳೆಯ ಕರ್ಮಗಳು ದಹಿಸಿ ಹೋಗುತ್ತವೆ.

ಮುನಿ ಹಾಗೂ ಗೃಹಸ್ಥ ಇಬ್ಬರೂ ಸಲ್ಲೇಖನ ಸ್ವೀಕರಿಸಲು ಅರ್ಹರು. ಆದರೆ, ಎಲ್ಲಿಯವರೆಗೆ ಮುನಿಯಾದವನಿಗೆ ಅನಶನಾದಿ ದ್ವಾದಶ ತಪಗಳನ್ನು; ಗೃಹಸ್ಥನಾದವನಿಗೆ ಅಹಿಂಸಾದಿ ದ್ವಾದಶ ವ್ರತಗಳನ್ನು ಆಚರಿಸಲು ಅವರವರ ದೇಹ ಸಮರ್ಥವಾಗಿರುವುದೋ ಅಲ್ಲಿಯವರೆಗೆ ಸಲ್ಲೇಖನವನ್ನು ಅವರು ಸ್ವೀಕರಿಸಲು ಅನರ್ಹರು.

ಆದರೆ, ಮುಪ್ಪು ಆವರಿಸಿದಾಗ; ಪ್ರತೀಕಾರವಿಲ್ಲದ ರೋಗಕ್ಕೆ ತುತ್ತಾದಾಗ; ಕ್ಷಾಮದಿಂದ ಬದುಕುಳಿಯಲು ಸಾಧ್ಯವಿಲ್ಲದಾಗ; ನಿಸರ್ಗದಿಂದ ಮಾರಣಾಂತಿಕ ತೊಂದರೆ ಘಟಿಸಿದಾಗ, ತನ್ನ ಧರ್ಮಾಚರಣೆಯ ರಕ್ಷಣೆಗಾಗಿ ಧೀರನಾದವನು ಸ್ವಂತ ಇಚ್ಛೆಯಿಂದ ಸಲ್ಲೇಖನ ಸ್ವೀಕರಿಸಬಹುದು. (ಪವಿತ್ರ ಕ್ಷೇತ್ರದಲ್ಲಿ) ಗುರುವಿನಿಂದಲೇ ಸಂಘ ಸಮ್ಮುಖದಲ್ಲಿ ಸಲ್ಲೇಖನ ಪಡೆಯಬೇಕು.

ಆಗ ವ್ರತಿಕನು ಎಲ್ಲರಲ್ಲಿ ಕ್ಷಮೆಯನ್ನು ಕೇಳಬೇಕು. ಅಲ್ಲದೆ ಎಲ್ಲರನ್ನು ಕ್ಷಮಿಸಬೇಕು. ಸಮತೆ ಸಾಧಿಸಬೇಕು. ಆಗ ದರ್ಶನ, ಜ್ಞಾನ, ಚಾರಿತ್ರ, ತಪಗಳ ಆರಾಧನೆಯು ಆತನ ಗುರಿಯಾಗುವುದು. ಈ ವ್ರತಕ್ಕೆ ಐದು ದೋಷಗಳಿವೆ:

1. ಬೇಗ ಸಾಯಲು ಬಯಸುವುದು,
2. ಇನ್ನೂ ಸ್ವಲ್ಪದಿನ ಬದುಕಲು ಇಚ್ಛಿಸುವುದು,
3. ಭಯಪಡುವುದು,
4. ಹಿಂದಿನ ರಾಗ-ದ್ವೇಷದ ಘಟನೆ ಸ್ಮರಿಸುವುದು,
5. ಇಂದಿನ ತಪದ ಫಲವನ್ನು ಮುಂದಿನ ಜನ್ಮದಲ್ಲಿ ಹೊಂದಲು ಸಂಕಲ್ಪಿಸುವುದು - ಈ ಮೊದಲಾದವುಗಳನ್ನು ಗುರುಗಳಾದ ಆಚಾರ್ಯರು ಆತನಿಗೆ ಚೆನ್ನಾಗಿ ಮನವರಿಕೆ ಮಾಡಿಸಿ, ಆತನ ಸೇವೆಗೆ ಮುನಿ ಜನರನ್ನು ನೇಮಿಸಿ, ಆತನ ಸಾಧನೆಗೆ ಸಹಕಾರಿಯಾಗುತ್ತಾರೆ.

ಎಲ್ಲ ನಿಯಮಗಳನ್ನು ಅನುಸರಿಸುತ್ತಾ, ಕ್ರಮವಾಗಿ ಆಹಾರ-ಪಾನೀಯಗಳನ್ನು ತ್ಯಜಿಸುತ್ತಾ, ನಿರಾಯಾಸವಾಗಿ ಮಲಗುತ್ತಾ, ಆತ್ಮನ ನಿಜ ಸ್ವರೂಪವನ್ನು ಅಂತಿಮ ಕ್ಷಣದವರೆಗೂ ಧ್ಯಾನಿಸುವ ಪ್ರಕ್ರಿಯೆಯೇ -ಸಲ್ಲೇಖನ. ಇದನ್ನು ಪಂಡಿತಮರಣ, ಸಮಾಧಿಮರಣ, ಆರಾಧನೆ, ಸನ್ಯಸನ, ಸಂಥಾರ ಎಂದು ಮುಂತಾಗಿ ಕರೆಯುತ್ತಾರೆ. ಇದನ್ನು ಸಾಧಿಸಿಧವರೇ ಮಹಾಪುರುಷರು. ಇಂಥ ಹತ್ತೊಂಬತ್ತು ಮಹಾಪುರುಷರ ಚರಿತ್ರೆ ಕನ್ನಡದ ಪ್ರಪ್ರಥಮ ಗದ್ಯಕಾವ್ಯ ವಡ್ಡಾರಾಧನೆಯಲ್ಲಿ ದಾಖಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT