ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಪ್ರತಿಭಾನ್ವೇಷಣೆ ಸ್ಕಾಲರ್‌ಶಿಪ್

ವಿದ್ಯಾಧನ
Last Updated 30 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರ ಮತ್ತು ಸಾವಿರಾರು ಸ್ವಯಂ ಸೇವಾ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹಣಕಾಸು ನೆರವು ನೀಡುತ್ತಿರುವುದು ಸರಿಯಷ್ಟೆ. ಆದರೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ಕಲ್ಪಿಸುವ ಯೋಜನೆಗಳು ತುಂಬಾ ವಿರಳ.

ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ಮೂಲಕ ದೇಶದ ಬಡ ಮಕ್ಕಳಲ್ಲಿರುವ ಸಾಂಸ್ಕೃತಿಕ ಪ್ರತಿಭೆಯನ್ನು ಆನಾವರಣಗೊಳಿಸುವ ಉದ್ದೇಶದಿಂದ ‘ಸಾಂಸ್ಕೃತಿಕ ಪ್ರತಿಭಾನ್ವೇಷಣೆ ಸ್ಕಾಲರ್‌ಶಿಪ್’ ಯೋಜನೆಯನ್ನು ನೀಡುತ್ತಿದೆ.

ಕಲೆ, ಜನಪದ, ಶಿಲ್ಪಕಲೆ, ಕರಕುಶಲ, ಸಂಗೀತ, ನಾಟಕ, ನೃತ್ಯ, ನೃತ್ಯರೂಪಕ, ಹಾಡುಗಾರಿಕೆ, ಶಾಸ್ತ್ರೀಯ ಸಂಗೀತ ಹೀಗೆ ವಿವಿಧ ಸಾಂಸ್ಕೃತಿಕ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಮಕ್ಕಳಿಗೆ ಪ್ರೊತ್ಸಾಹ ನೀಡುವ ಸಲುವಾಗಿ ಸಂಸ್ಕೃತಿ ಸಚಿವಾಲಯ ಈ ಸ್ಕಾಲರ್‌ಶಿಪ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಲಾಭ ಪಡೆದಿರುವ ಸಾವಿರಾರು ಪ್ರತಿಭೆಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಅರ್ಹತೆಗಳು: ಸಾಂಸ್ಕೃತಿಕ ಪ್ರತಿಭಾನ್ವೇಷಣೆ ಸ್ಕಾಲರ್‌ಶಿಪ್‌ ಯೋಜನೆ ಪಡೆಯುವ ವಿದ್ಯಾರ್ಥಿಗಳು ಅಥವಾ ಮಕ್ಕಳು 10 ರಿಂದ 14 ವರ್ಷ ವಯಸ್ಸಿನ ಒಳಗಿರಬೇಕು. ಅಂದರೆ 1–7–2001 ಮತ್ತು 6–5–2006ರ ನಡುವೆ ಜನಿಸಿರಬೇಕು. ಸಂಬಂಧಿತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಕಡ್ಡಾಯ.

ತರಬೇತಿ ಪಡೆಯುತ್ತಿರುವ ಸಂಸ್ಥೆ ಅಥವಾ ಗುರು ಅಥವಾ ಶಿಕ್ಷಕರಿಂದ ವಿದ್ಯಾರ್ಥಿಗಳು ತರಬೇತಿ ಪ್ರಮಾಣ ಪತ್ರವನ್ನು ಪಡೆದು ಅರ್ಜಿಯ ಜೊತೆ ಲಗತ್ತಿಸಬೇಕು. ಗುರುಗಳು/ಶಿಕ್ಷಕರು/ಸಂಸ್ಥೆಗಳೇ ವಿದ್ಯಾರ್ಥಿಗಳ ಪರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇವರು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದು.

ಮಕ್ಕಳ ಪೋಷಕರ ವರಮಾನ ಮಾಸಿಕ ಆರು ಸಾವಿರ ರೂಪಾಯಿ ಒಳಗಿರಬೇಕು. ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಪ್ರದರ್ಶನ ನೀಡಿದ ಕಲೆ/ಸಂಗೀತ/ಇತರೆ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಛಾಯಾಚಿತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಅರ್ಜಿ ಸಲ್ಲಿಸಬೇಕು. ಅಪೂರ್ಣ ವಿವರಗಳಿಂದ ಕೂಡಿರುವ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಸ್ಕಾಲರ್‌ಶಿಪ್ ಸಂಖ್ಯೆ/ವೇತನ/ಅವಧಿ: ಪ್ರತಿ ವರ್ಷ 620 ವಿದ್ಯಾರ್ಥಿ ವೇತನಗಳನ್ನು ನೀಡಲಾಗುವುದು. ಇವುಗಳಲ್ಲಿ 100 ಸ್ಕಾಲರ್‌ಶಿಪ್‌ಗಳು ಎಸ್‌.ಟಿ ಕೆಟಗರಿ ಅಥವಾ ಬುಡಕಟ್ಟು ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. 20 ಅಂಗವಿಕಲ ಮಕ್ಕಳಿಗೆ ಮೀಸಲಾಗಿವೆ. ಉಳಿದ 500 ಸ್ಕಾಲರ್‌ಶಿಪ್‌ಗಳನ್ನು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುವುದು.

ವಾರ್ಷಿಕ 3600 ರೂಪಾಯಿ ಭತ್ಯೆ ಹಾಗೂ ಮಾಸಿಕ 400 ರೂಪಾಯಿ ವಿದ್ಯಾರ್ಥಿ ವೇತನ ಲಭಿಸುವುದು. ಶಿಕ್ಷಕರು/ಗುರುಗಳು/ ಸಂಸ್ಥೆಗಳಿಗೆ ವರ್ಷಕ್ಕೆ 9000 ರೂಪಾಯಿ ಗೌರವಧನ ನೀಡಲಾಗುವುದು.

ಈ ಸ್ಕಾಲರ್‌ಶಿಪ್ ಪಡೆಯುವ ವಿದ್ಯಾರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ತರಬೇತಿ ಪಡೆಯುತ್ತಿರಬೇಕು. ಯಾವುದೇ ಕಾರಣಕ್ಕೂ ದೈನಂದಿನ ಶಾಲಾ ಶಿಕ್ಷಣವನ್ನು ಮೊಟಕು ಗೊಳಿಸಿರಬಾರದು. ವರ್ಷಕ್ಕೆ ಎರಡು ಸಲ ತರಬೇತಿಯ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಈ ಸ್ಕಾಲರ್‌ಶಿಪ್ ಅನ್ನು ಪದವಿಯವರೆಗೂ ನೀಡಲಾಗುವುದು. ಅಗತ್ಯವಿದ್ದರೆ ಮತ್ತೆ ಕೆಲವು ವರ್ಷಗಳವರೆಗೆ ವಿಸ್ತರಿಸಿಕೊಳ್ಳಬಹುದು. ಪ್ರತಿ ಎರಡು ವರ್ಷಗಳಿಗೊಮ್ಮೆ ಸ್ಕಾಲರ್‌ಶಿಪ್‌  ನವೀಕರಿಸಿಕೊಳ್ಳಬೇಕು.

ಆಯ್ಕೆ ವಿಧಾನ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದಾಗ್ಯೂ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ನಡೆಸಿಯೇ ಅಂತಿಮ ಆಯ್ಕೆ ಮಾಡಲಾಗುವುದು. ಈ ಸಂಬಂಧದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಅಂಚೆ ಮುಖಾಂತರ ತಿಳಿಸಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ವಿದ್ಯಾರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆ ಮೂಲಕವೇ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು www.ccrtindia.gov.in ಈ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು. ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಂಚೆ ಮುಖಾಂತರ ದಿನಾಂಕ 31–12–2014ರ ಒಳಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಆದಾಯ ಪ್ರಮಾಣ ಪತ್ರ, ಅಂಗವಿಕಲರ ಪ್ರಮಾಣ ಪತ್ರ, ಎಸ್‌.ಟಿ ಪ್ರಮಾಣ ಪತ್ರ, ಗುರು/ ಶಿಕ್ಷಕರು/ ಸಂಸ್ಥೆಗಳು ನೀಡಿರುವ ತರಬೇತಿ ಪ್ರಮಾಣ ಪತ್ರ, ಇತ್ತೀಚಿನ ಪ್ರದರ್ಶನ ಕಲೆ/ ಸಂಗೀತವನ್ನು ದೃಢೀಕರಿಸುವ ಮೂರು ಫೋಟೊ, ಗುರು/ ಶಿಕ್ಷಕರ ಬಯೋಡೇಟ ಲಗತ್ತಿಸಿ ಕಳುಹಿಸಬೇಕು.
ಅರ್ಜಿಗಳನ್ನು center for cultural resources and trainig, 15 A, Sector-7, Dwarka, New Delhi-110075 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ (011) 25309300, ವಿಸ್ತರಣೆ 337& 338 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇ-ಮೇಲ್ ವಿಳಾಸ:  ddsch.ccrt@nic.in ವೆಬ್ ವಿಳಾಸ: www.ccrtindia.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT