ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಾಚೆಯಿಂದ ಕಂಡ ಬೆಂಗಳೂರು

ಬದಲಾವಣೆ ಬೇಕಾಗಿದೆ
Last Updated 3 ಜುಲೈ 2015, 20:27 IST
ಅಕ್ಷರ ಗಾತ್ರ

ನಾನು ಸೇವಾ ಅವಧಿಯಲ್ಲಿ ಮತ್ತು ನಂತರದ ದಿನಗಳಲ್ಲಿ ಸಹ ಪ್ರಪಂಚದ ಹಲವಾರು ದೇಶಗಳ ದೊಡ್ಡ ದೊಡ್ಡ ನಗರಗಳನ್ನು ನೋಡಿದ್ದೇನೆ. ಅಲ್ಲಿಯ ಸಾರ್ವಜನಿಕ ಸೌಲಭ್ಯ, ಸ್ವಚ್ಛ ಸುಂದರ ನಗರಗಳು, ಸ್ಥಳೀಯ ಆಡಳಿತ, ಅವರು ಒದಗಿಸುವ ಸಾರ್ವಜನಿಕ ಸೌಲಭ್ಯಗಳನ್ನು ನೋಡಿ ನಿಬ್ಬೆರಗಾಗಿದ್ದೇನೆ.

1988ರಲ್ಲಿ ಮೊಟ್ಟಮೊದಲಿಗೆ ನಾನು ಇಂಗ್ಲೆಂಡ್‌ ಪ್ರವಾಸಕ್ಕೆ ಹೋದೆ. ಮೊಟ್ಟ ಮೊದಲ ವಿಶ್ವ  ಕನ್ನಡ ಸಮ್ಮೇಳನ ಮ್ಯಾಂಚೆಸ್ಟರ್‌ನಲ್ಲಿ ನಡೆಯಿತು. ಲಂಡನ್‌ನ ಹಿತ್ರೂ ವಿಮಾನ ನಿಲ್ದಾಣದಲ್ಲಿ ಇಳಿದಾಗಿನಿಂದ ವಿಮಾನ ನಿಲ್ದಾಣದಲ್ಲಿ ಸಿಗುವ ಸೌಲಭ್ಯಗಳು, ಸಾರಿಗೆ ವ್ಯವಸ್ಥೆ, ನಗರದ ವಿವಿಧ ಭಾಗಗಳಲ್ಲಿ ತಲುಪಲು ಇರುವ ಸಾರಿಗೆ ವ್ಯವಸ್ಥೆ ಹೇಗೆ ಒಂದಕ್ಕೊಂದು ಪೂರಕವಾಗಿ ಹೊಂದಿಕೊಂಡು ಸೇವೆ ಒದಗಿಸುತ್ತವೆ ಎಂಬುದನ್ನು ನೋಡಿ ಬೆರಗಾಗಿದ್ದೇನೆ. ನಾವು ಒಂದು ಟಿಕೆಟ್‌ ಪಡೆದರೆ ಅದೇ ಟಿಕೆಟ್‌ನಿಂದ ಬಸ್‌ನಲ್ಲಾದರೂ ಸಂಚರಿಸಬಹುದು, ಟ್ಯೂಬ್‌ ಟ್ರೈನ್‌ನಲ್ಲಾದರೂ ಪ್ರಯಾಣಿಸಬಹುದು ಅಥವಾ ರೈಲಿನಲ್ಲಾದರೂ ಸಂಚಾರ ಬೆಳೆಸಬಹುದು. ಅವು ಒಂದಕ್ಕೊಂದು ಪೂರಕ ಹಾಗೂ ಸಹಭಾಗಿ.

ಭಾರತೀಯ ವಿದ್ಯಾಭವನದಲ್ಲಿ ಉಳಿದುಕೊಂಡಿದ್ದ ನನಗೆ ಹತ್ತಿರದ ಟ್ಯೂಬ್‌ ಟ್ರೈನ್‌ ಮೂಲಕ ನಗರದ ಯಾವುದೇ ಭಾಗಕ್ಕೆ ತಲುಪುವ ವ್ಯವಸ್ಥೆ ಇತ್ತು. ಮೊದಲ ಬಾರಿಗೆ ಹೋದೆನಾದರೂ ಎಲ್ಲವೂ ಅರ್ಥವಾಗುವಷ್ಟು ಸರಳವಾಗಿತ್ತು. ಅಲ್ಲಿಂದ ಮ್ಯಾಂಚೆಸ್ಟರ್‌ನಲ್ಲಿ ಒಂದು ವಾರ  ಅಲ್ಲಿಯ ರೈಲು ಸಂಚಾರ ಹಾಗೂ ಟ್ಯಾಕ್ಸಿ ವ್ಯವಸ್ಥೆ ಕೂಡಾ ಅಷ್ಟು ಸುಲಲಿತವಾಗಿತ್ತು.

ಮೊದಲ ಬಾರಿಗೆ ಮ್ಯಾಂಚೆಸ್ಟರ್‌ ಮೇಯರ್‌ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಕನ್ನಡಿಗರ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿದ್ದ ಮೇಯರ್ ಆ ಊರಿನ ಜನರ ಬಗ್ಗೆ ಹೊಂದಿದ್ದ ಕಾಳಜಿ, ಅಭಿವೃದ್ಧಿ ಬಗ್ಗೆ ಹೊಂದಿದ್ದ ದೃಷ್ಟಿಕೋನ ನನಗೆ ಮಾದರಿ ಎನಿಸಿತು. ಮೇಯರ್‌ ಊರಿನ ಬಗ್ಗೆ ಸಮಗ್ರ ಮಾಹಿತಿ ಹೊಂದಿದ್ದು, ನಗರದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ತಕ್ಷಣ ಆ ಕಾಲದ ಬೆಂಗಳೂರಿನ ಮೇಯರ್‌ ಹಾಗೂ ಆಯುಕ್ತರ ನಡುವೆ ನಡೆಯುತ್ತಿದ್ದ ಜಗಳಗಳು ನೆನಪಾಗಿ ನನಗೆ ಅಸಹ್ಯ ಎನಿಸಿತು.

ಅದೇ ರೀತಿ ಅಮೆರಿಕ ದೇಶದ ವಿವಿಧ ನಗರಗಳಲ್ಲಿ ಹಲವಾರು ದಿನಗಳು ವಾಸಿಸಿ ಅಲ್ಲಿನ ನಾಗರಿಕ ಸೌಲಭ್ಯ ಮತ್ತು ಸ್ಥಳೀಯ ಆಡಳಿತಗಾರರ ಸೌಹಾರ್ದಯುತ ಕಾರ್ಯನಿರ್ವಹಣೆ ಮಾದರಿ ಅನಿಸಿತ್ತು. ಸ್ವಲ್ಪ ಆಳವಾಗಿ ಅಭ್ಯಾಸ ಮಾಡಿ ವಿಚಾರಿಸಿದರೆ ಅದಕ್ಕೆ ಕಾರಣ ಏನು ಎಂಬುದು ತಿಳಿಯುತ್ತದೆ. ಅಲ್ಲಿನ ನಗರದ ಮೇಯರ್‌ಗಳಿಗೆ ಅವರ ಅಧಿಕಾರಗಳು, ಜವಾಬ್ದಾರಿಯಿಂದಾಗಿ ಅವರು ಹೆಚ್ಚು ಅಧಿಕಾರಯುತ ಆಡಳಿತಗಾರರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. 

ತ್ವರಿತಗತಿಯಲ್ಲಿ ನಿರ್ಧಾರ  ತೆಗೆದುಕೊಂಡು ಅನುಷ್ಠಾನಗೊಳಿಸುವಷ್ಟು ಅಧಿಕಾರ ಇರುತ್ತದೆ, ಸ್ವಾತಂತ್ರ್ಯ ಇರುತ್ತದೆ.  ಬಾಲ್ಟಿಮೋರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ಕೂಡಾ ಅಲ್ಲಿಯ ಸ್ಥಳೀಯ ಮೇಯರ್‌ ಹಾಗೂ ಆಡಳಿತಗಾರರು ಬಂದಿದ್ದರು. ಅವರ ಜತೆಗೆ ಅವರ ನಗರಗಳ ಬಗ್ಗೆ ಮಾತನಾಡಿ ವಿಷಯ ತಿಳಿದುಕೊಳ್ಳುವುದೇ ಒಂದು ರೋಚಕ ಅನುಭವ. ಅಲ್ಲಿ ಇರುವಾಗ ನಮ್ಮ ಬೆಂಗಳೂರಿನ ನೆನೆದು ನಮ್ಮೂರು ಯಾವಾಗ ಹೀಗಾಗುತ್ತದೋ ಎಂದು ಹಪಹಪಿಸಿದ್ದು ಒಂದು ನೆನಪಷ್ಟೇ.

ಕಳೆದ ವರ್ಷ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದಾಗ ಸ್ಯಾನ್‌ಫ್ರಾನ್ಸಿಸ್ಕೊ ನಗರದ ಉಪಮೇಯರ್‌ ಹಾಗೂ ಅಲ್ಲಿಯ ಆಡಳಿತಗಾರರ ಭೇಟಿ ಆಗುವ ಅವಕಾಶ ಒದಗಿತ್ತು. ಅವರ ತಂಡದಲ್ಲಿ ಕೆಲವು ಕನ್ನಡಿಗ ಅಧಿಕಾರಿಗಳು ಕೂಡಾ ಕೆಲಸ ನಿರ್ವಹಿಸುವುದು ಕಂಡು  ಸಂತೋಷ ಆಯಿತು. ಅವರು ‘ಸೋದರ ನಗರ’ ಒಡಂಬಡಿಕೆ ಮಾಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಇದಕ್ಕಾಗಿ ಅವರು ಮೂರು ಸಲ ನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭಗಳಲ್ಲಿ ಬೇರೆ ಬೇರೆ ಮುಖ್ಯಮಂತ್ರಿಗಳನ್ನು, ಮೇಯರ್‌ಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತಿ ಬಾರಿಯೂ ಅವರಿಗೆ ವಿಶೇಷ ಯೋಜನೆಯ ಬಗ್ಗೆ ವಿವರಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದಾಗ ಒಬ್ಬ ಬೆಂಗಳೂರಿಗನಾಗಿ ನನಗೆ ಬಹಳ ಮುಜುಗರ ಆಯಿತು.

ಅದೇ ರೀತಿ ಐರೋಪ್ಯ ರಾಷ್ಟ್ರಗಳ ನಗರಗಳಾದ ಪ್ಯಾರೀಸ್, ಸ್ವೀಡನ್‌ನ ಮ್ಯಾಡ್ರಿಡ್‌, ದಕ್ಷಿಣ ಆಫ್ರಿಕಾದ ಕೇಪ್‌ ಸಿಟಿ, ಟರ್ಕಿಯ ಇಸ್ತಾಂಬುಲ್‌, ಚೀನಾದ ಬೀಜಿಂಗ್‌ ಹೀಗೆ ಹತ್ತು ಹಲವು ನಗರಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಸಾರಿಗೆ ಸಂಪರ್ಕ, ನಗರ ನೈರ್ಮಲ್ಯ, ಪೊಲೀಸ್‌ ರಕ್ಷಣಾ ವ್ಯವಸ್ಥೆ, ಪ್ರವಾಸಿ ತಾಣಗಳ ಅದ್ಭುತ ನಿರ್ವಹಣೆ... ಇವೆಲ್ಲವನ್ನೂ ನೋಡಿ ನಮ್ಮೂರು ಯಾವಾಗ ಹೀಗಾಗುತ್ತದೋ ಎಂದು ಪರಿತಪಿಸಿದ್ದೇನೆ.

ನನ್ನ ಅನುಭವದಲ್ಲಿ ಬೆಂಗಳೂರು ಒಂದು ಸುಂದರ ಅದ್ಭುತವಾದ ಹವಾನಿಯಂತ್ರಣ ನಗರ. ನಮ್ಮ ಈ ನಗರಕ್ಕೆ ವಿಜಯನಗರ ಪರಂಪರೆ ಇದೆ. ಬ್ರಿಟಿಷ್ ಆಡಳಿತ ವ್ಯವಸ್ಥೆಯ ಜತೆಗಿನ ಸಂಬಂಧದಿಂದಾಗಿ ಪಾಶ್ಚಿಮಾತ್ಯದ ಸ್ಪರ್ಶ  ಇದೆ. ಜಾಗತಿಕರಣದ ನಂತರ 1995–2000ರ ದಶಕದಲ್ಲಿ ಬೆಂಗಳೂರು ನಾಗಾಲೋಟದಲ್ಲಿ ಬೆಳೆದಿದೆ. ಒಂದು ಜಾಗತಿಕ ನಗರವಾಗಿ ಗುರುತಿಸಿಕೊಂಡಿದೆ. 

ಆದರೆ, ನಮ್ಮ ರಾಜಕೀಯ ವ್ಯವಸ್ಥೆ, ಆಡಳಿತಶಾಹಿ, ದೂರಗಾಮಿತ್ವದ ಕೊರತೆ ಈ ನಾಗಾಲೋಟದ ಬೆಳವಣಿಗೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ನಗರ ಕಳೆದ ಕೆಲವು ವರ್ಷಗಳಿಂದ ಕೆಟ್ಟ ವಿಷಯಗಳಿಂದಾಗಿ ಪ್ರಚಾರಕ್ಕೆ ಬರುತ್ತಿದೆ. ಇದು ನಮ್ಮ ದುರದೃಷ್ಟ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಮುಖವಾಗಿ ನಗರವನ್ನು ಪ್ರೀತಿಸುವವರು, ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಇರುವವರು ಸೇವಾ ಮನೋಭಾವದಿಂದ ನಗರದ ಆಡಳಿತವನ್ನು ನಿರ್ವಹಿಸುವ ಹೊಣೆ ಹೊರುತ್ತಾರೆ. ಕಳೆದ 2–3 ದಶಕಗಳಿಂದ ನಮ್ಮ ಬೆಂಗಳೂರಿನ ಬಗ್ಗೆ ಈ ಮಾತುಗಳನ್ನು ಹೇಳಲು ಸಾಧ್ಯವಿಲ್ಲ. ಒಂದು ರೀತಿಯ ಪ್ರಮುಖ ರಾಜಕೀಯ ವಾಹಿನಿಗಳಲ್ಲಿ ಇರುವ ಜಾಡ್ಯ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೂ, ಕೆಳ ಹಂತದ ವರೆಗೂ ವ್ಯಾಪಿಸಿದೆ. ಸೇವಾ ಮನೋಭಾವದಿಂದ ಬರುವವರು ಬಹಳ ವಿರಳ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಪಡೆಯಲು ದುಡ್ಡು ನೀಡಬೇಕು. ಗೆಲ್ಲಲು ಹಣ ಖರ್ಚು ಮಾಡಬೇಕು. ಇಂತವರು ಗೆದ್ದ ಬಳಿಕ ಹಣ ಸಂಪಾದಿಸುವುದು ಅಜನ್ಮ ಹಕ್ಕು ಎಂದು ಭಾವಿಸುತ್ತಾರೆ. ತಮ್ಮ ಕೆಲಸಕ್ಕೆ ಸಹಕರಿಸುವ ಅಧಿಕಾರಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಬ್ರೆಜಿಲ್‌ನ ರಿಯೋಗೆ ಹೋಗಿದ್ದೆ. ಆ ನಗರದಲ್ಲಿ ಕೊಳೆಗೇರಿಗಳನ್ನು ಅದ್ಭುತ ನಿರ್ವಹಣೆ ಮಾಡಿದ್ದಾರೆ. ಆದರೆ, ನಮ್ಮಲ್ಲಿ ವ್ಯವಸ್ಥೆ ಇಲ್ಲ. ನಮ್ಮಲ್ಲಿ ಎಲ್ಲದಕ್ಕೂ ಕಾನೂನು ಇದೆ. ನಗರ ನಿರ್ವಹಣೆ, ಪೊಲೀಸ್‌, ಸಾರಿಗೆ ವ್ಯವಸ್ಥೆಗಳ ನಿರ್ವಹಣೆಗೆ ನಿಯಮಗಳಿವೆ. ಆದರೆ, ಯಾರಿಗೂ ಈ ವ್ಯವಸ್ಥೆಯ ಮೇಲೆ ನಿಯಂತ್ರಣ ಇಲ್ಲ. ನಮ್ಮ ಮೇಯರ್‌ಗೆ  ಪೊಲೀಸರ ಚಟುವಟಿಕೆ ಮೇಲಾಗಲಿ, ಕುಡಿಯುವ ನೀರಿನ ನಿರ್ವಹಣಾ ವ್ಯವಸ್ಥೆ  ಮೇಲಾಗಲಿ ನಿಯಂತ್ರಣ ಇಲ್ಲ. ಇದು ಒಂದು ಉದಾಹರಣೆ ಮಾತ್ರ. ಇಂತಹ ಹತ್ತು ಹಲವು ಉದಾಹರಣೆಗಳನ್ನು ಗಮನಿಸಬಹುದು.

ಮೇಯರ್‌ ಹಾಗೂ ಪಾಲಿಕೆ ಸದಸ್ಯರು ಸಚಿವರ ಏಜೆಂಟ್‌ಗಳಾಗಿದ್ದಾರೆ. ಸಂವಿಧಾನದ 74ನೇ ತಿದ್ದುಪಡಿಯ (ನಗರ ಪಾಲಿಕೆ) ಮಹತ್ವ ಅವರಿಗೆ ಅರ್ಥ ಆಗಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಲು ಸರ್ಕಾರವೂ ಬಿಡುತ್ತಿಲ್ಲ.

ಬೇರೆ ದೇಶಗಳಲ್ಲಿ ಸಂಪನ್ಮೂಲ ಕ್ರೋಡೀಕರಣ, ಕರಾರುವಕ್ಕಾಗಿ ವಿನಿಯೋಗ, ವಾಸ್ತವ ಬಜೆಟ್ ಮಂಡನೆ ವ್ಯವಸ್ಥೆ ಇದೆ. ನಮ್ಮಲ್ಲಿ ₹ 500 ಕೋಟಿ ಆದಾಯ ಇದ್ದರೆ ₹ 2 ಸಾವಿರ ಕೋಟಿಯ ಅವಾಸ್ತವಿಕ ಬಜೆಟ್‌ ಮಂಡಿಸುತ್ತಿದ್ದೇವೆ.  ಪಾಲಿಕೆ ಹಾಗೂ ವಿಧಾನಸೌಧದ ನಡುವಿನ ಹೊಕ್ಕಳ ಬಳ್ಳಿಯ ಸಂಬಂಧ ತುಂಡಾಗುವ ವರೆಗೆ ನಮಗೆ ಮೋಕ್ಷ ಇಲ್ಲ.
(ಲೇಖಕ– ನಿವೃತ್ತ ಐಎಎಸ್ ಅಧಿಕಾರಿ)
*
ಬಿಬಿಎಂಪಿಗೆ ಚುನಾವಣೆ ಘೋಷಣೆ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ‘ಪ್ರಜಾವಾಣಿ’ ತಜ್ಞರಿಂದ ಲೇಖನ ಆಹ್ವಾನಿಸಿ ಪ್ರಕಟಿಸುತ್ತಿದೆ. ಬಿಬಿಎಂಪಿಯಲ್ಲಿ ಬರುವ ಹೊಸ ಕೌನ್ಸಿಲ್‌ನ ಆಡಳಿತಕ್ಕೆ ಈ ಲೇಖನಮಾಲೆ ಒಂದು ದಿಕ್ಸೂಚಿ ಆಗಬೇಕು ಎನ್ನುವ ಆಶಯ ಪತ್ರಿಕೆಯದಾಗಿದೆ. ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT