ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಸರದಾರ ರಂಜನ್ ಸೋಧಿ

ವ್ಯಕ್ತಿ
Last Updated 17 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ರಾಜ್ಯವರ್ಧನ್ ಸಿಂಗ್ ರಾಠೋಡ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದು, ಭಾರತದ ಶೂಟಿಂಗ್ ಕ್ರೀಡೆಗೆ ಲಭಿಸಿದ ಮಹತ್ವದ ತಿರುವು. 2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ ಚೊಚ್ಚಲ ಸ್ವರ್ಣ ಪದಕ ಗೆದ್ದುಕೊಟ್ಟಿದ್ದು ದೇಶದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಆ ಸಾಧನೆ ಅದೆಷ್ಟೋ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿತು. ಅವರಲ್ಲಿ ರಂಜನ್ ಸೋಧಿ ಕೂಡ ಒಬ್ಬರು.

ಶ್ರೀಮಂತ ಕುಟುಂಬದ ಸೋಧಿ ಹಣವನ್ನು ನೆಚ್ಚಿಕೊಂಡು ಕ್ರೀಡಾ ಜಗತ್ತಿನೊಳಗೆ ಕಾಲಿಡಲಿಲ್ಲ. ಬದಲಾಗಿ ಕ್ರೀಡೆ ಎಂಬುದು ಅವರಲ್ಲಿ ರಕ್ತಗತವಾಗಿಯೇ ಬಂದಿದೆ. ಅವರ ಹೃದಯ ಬಡಿತ, ಅವರ ಮನಸ್ಸಿನ ತುಡಿತ ಶೂಟಿಂಗ್. ತಂದೆ ಮಾಲ್ವಿಂದರ್ ಸಿಂಗ್ ಸೋಧಿ ಕೂಡ ಶೂಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವರು. ಅವರ ಕುಟುಂಬ ವರ್ಗದ ಹೆಚ್ಚಿನವರು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ದೇಶದ ಕ್ರೀಡಾ ಕ್ಷೇತ್ರ ಹೆಮ್ಮೆಪಡುವಂಥ ಹಲವು ಸಾಧನೆಗಳಿಗೆ ಕಾರಣರಾಗಿರುವ ಶೂಟಿಂಗ್ ಸ್ಪರ್ಧಿ ಸೋಧಿ ಅವರಿಗೆ ಈ ಬಾರಿಯ `ರಾಜೀವ್ ಗಾಂಧಿ ಖೇಲ್ ರತ್ನ' ಪುರಸ್ಕಾರ ಲಭಿಸಿದೆ.

ಸೋಧಿ ಅವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯವರು. ಭಾರತ-ಪಾಕ್ ಗಡಿ ಪ್ರದೇಶದ ಸಟ್ಲೇಜ್ ನದಿ ತೀರದಲ್ಲಿರುವ ಈ ಜಿಲ್ಲೆ `ವೀರರ ಭೂಮಿ' ಎಂದೇ ಪ್ರಸಿದ್ಧ. ಅದಕ್ಕೆ ಕಾರಣ ಇಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು. `ವೀರರ ಭೂಮಿ' ಮೂಲದ ಸೋಧಿ ಅವರ ಶೂಟಿಂಗ್ ಸಾಧನೆಗೆ ಈಗ ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಸಂದಿದೆ.

`ನನಗೆ ಲಭಿಸಿದ ದೊಡ್ಡ ಗೌರವವಿದು. ಪ್ರತಿ ಕ್ರೀಡಾಪಟುಗಳು ಈ ಗೌರವಕ್ಕಾಗಿ ಕನಸು ಕಾಣುತ್ತಾರೆ' ಎಂದಿದ್ದಾರೆ 33 ವರ್ಷ ವಯಸ್ಸಿನ ಸೋಧಿ.ಗುರಿ ತಲುಪುವುದೇ ಅಂತಿಮವಲ್ಲ. ಅದಷ್ಟೇ ಯಶಸ್ಸೂ ಅಲ್ಲ. ಪ್ರತಿ ಬಾರಿ ಕೆಳಗೆ ಬಿದ್ದಾಗ ಮತ್ತೆ ಎದ್ದು ನಿಲ್ಲಬೇಕೆಂಬ ತುಡಿತ, ಛಲವಿದೆಯಲ್ಲ ಅದು ಯಶಸ್ಸು. ಈ ತತ್ವವನ್ನು ನಂಬಿಕೊಂಡು ಬಂದವರು ಡಬಲ್ ಟ್ರ್ಯಾಪ್ ಶೂಟಿಂಗ್ ಸ್ಪರ್ಧಿ ಸೋಧಿ. ಅವರು ಭಾರತದ ಶೂಟಿಂಗ್ ಕ್ಷೇತ್ರದಲ್ಲಿ ಹಲವು ಮೊದಲುಗಳ ಸರದಾರ.

ಚಿಕ್ಕ ವಯಸ್ಸಿನಲ್ಲೇ ಸ್ಪರ್ಧೆ ಆರಂಭಿಸಿದ್ದರೂ ಯಶಸ್ಸು ಲಭಿಸಿದ್ದು ನಿಧಾನವಾಗಿ. 1998ರಲ್ಲಿ ಅವರ ಶೂಟಿಂಗ್ ಜೀವನ ಶುರುವಾಯಿತು. 2007ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಅದು ಅವರ ಜೀವನದ ಮೊದಲ ಅತ್ಯುತ್ತಮ ಸಾಧನೆ. 2009ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಆ ವರ್ಷ ಅವರಿಗೆ `ಅರ್ಜುನ' ಪ್ರಶಸ್ತಿ ಗೌರವ ಲಭಿಸಿತು.

ಆ ಬಳಿಕ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಬಂದ ಸೋಧಿ 2010ರಲ್ಲಿ ಟರ್ಕಿಯ ಇಜ್ಮಿರ್ ವಿಶ್ವಕಪ್ ಫೈನಲ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದರು. 2011ರ ವಿಶ್ವಕಪ್ ಫೈನಲ್‌ನಲ್ಲೂ ಸ್ವರ್ಣ ಪದಕ ಜಯಿಸಿದ್ದರು. ಅದು ಭಾರತದ ಶೂಟಿಂಗ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕ್ಷಣ.

2010ರ ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡು ರಜತ ಪದಕ ಗೆದ್ದುಕೊಟ್ಟರು. ಅದೇ ವರ್ಷ ಚೀನಾದ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಶೂಟಿಂಗ್‌ನಲ್ಲಿ ಹಲವು ವರ್ಷಗಳ ಬಳಿಕ ಈ ಸಾಧನೆ ಮಾಡಿದ ಭಾರತೀಯ ಅವರು.

ಸೋಧಿ 2011ರಲ್ಲಿ ವಿಶ್ವ ಶೂಟಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಈ ಹಂತಕ್ಕೇರಿದ ಭಾರತದ ಮೊದಲ ಶೂಟರ್. ಅದೇ ವರ್ಷ ಮತ್ತೊಂದು ವಿಶ್ವಕಪ್ ಫೈನಲ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಈ ಮೂಲಕ ಹ್ಯಾಟ್ರಿಕ್ ಪದಕಗಳ ಸಾಧನೆಗೆ ಕಾರಣರಾಗಿದ್ದರು. ಇದರಿಂದ ಈ ಸಾಧನೆ ಮಾಡಿದ ಮೊದಲ ಭಾರತೀಯ ಅವರಾದರು.

ಎಂಬಿಎ ಪದವೀಧರರಾಗಿರುವ ಸೋಧಿ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳಾಂಗಣ ವಿನ್ಯಾಸಗಾರ್ತಿ ರುಚಿಕಾ ಅವರನ್ನು ವಿವಾಹವಾಗಿರುವ ಸೋಧಿ ಅವರಿಗೆ ನಾಲ್ಕು ವರ್ಷ ವಯಸ್ಸಿನ ಪುತ್ರನಿದ್ದಾನೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅವರು ಆ ಕೂಟದಲ್ಲಿ ನಿರಾಸೆ ಮೂಡಿಸಿದ್ದರು.

ಆದರೆ ಒಲಿಂಪಿಕ್ಸ್‌ನಂಥ ಮಹಾ ಕ್ರೀಡಾಮೇಳದಲ್ಲಿ ಪಾಲ್ಗೊಳ್ಳಲು ಸ್ಥಾನ ಗಿಟ್ಟಿಸಿಕೊಳ್ಳುವುದೇ ಶ್ರೇಷ್ಠ ಸಾಧನೆ. ಒಲಿಂಪಿಕ್ಸ್‌ಗೆ ಸ್ಥಾನ ಪಡೆದ ಯಾವುದೇ ಸ್ಪರ್ಧಿ ಇರಬಹುದು. ಅದು ಒಂದು ಅಥವಾ ಎರಡು ದಿನದ ಪ್ರಯತ್ನದಿಂದ ಬಂದಿದ್ದಲ್ಲ. ಆ ಪ್ರಯತ್ನದ ಹಿಂದೆ ಹಲವು ವರ್ಷಗಳ ಶ್ರಮವಿರುತ್ತದೆ.

`ಟೀಕಾಕಾರರು ಹೆಚ್ಚು ಹೆಚ್ಚು ಟೀಕಿಸಿದಂತೆ ನನ್ನ ಸಾಮರ್ಥ್ಯವೂ ಹೆಚ್ಚುತ್ತಾ ಹೋಯಿತು. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆದು ನಿಂತೆ' ಎಂದಿದ್ದಾರೆ ಸೋಧಿ. ಹೌದು, ಅವರು ಶೂಟಿಂಗ್ ಜೀವನದ ಆರಂಭಿಕ ವರ್ಷಗಳಲ್ಲಿ ಟೀಕಾಪ್ರಹಾರಕ್ಕೆ ಗುರಿಯಾಗಿದ್ದರು.
`ಲಂಡನ್ ಒಲಿಂಪಿಕ್ಸ್‌ನಲ್ಲಿ ನನಗೆ ಯಶಸ್ಸು ಸಿಗಲಿಲ್ಲ. ಆದರೆ ಇನ್ನುಳಿದ ಚಾಂಪಿಯನ್‌ಷಿಪ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಆದರೂ ಟೀಕೆಗಳು ಎದುರಾದವು. ಆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡವನಲ್ಲ. ಈಗ ನನ್ನ ಗುರಿ 2016ರ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು' ಎಂದಿದ್ದಾರೆ.

ಶೂಟಿಂಗ್ ದುಬಾರಿ ಕ್ರೀಡೆ. ಏಕೆಂದರೆ ಒಂದು ರೈಫಲ್ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ. ಬುಲೆಟ್‌ಗಳ ಬೆಲೆ ದುಬಾರಿ. ಬಿಂದ್ರಾ, ಸೋಧಿ ಅವರೆಲ್ಲಾ ಕೋಟಿ ರೂಪಾಯಿಗೂ ಹೆಚ್ಚು ಸ್ವಂತ ಹಣ ಖರ್ಚು ಮಾಡಿ ಅಭ್ಯಾಸ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡಿದ್ದಾರೆ. ವಿದೇಶದಲ್ಲಿ ತರಬೇತಿ ಪಡೆಯಲು ಸ್ವಂತ ಜೇಬಿನಿಂದ ದುಡ್ಡು ಖರ್ಚು ಮಾಡಿದ್ದಾರೆ.

ಅದಕ್ಕೆ ತಕ್ಕ ಯಶಸ್ಸು ಲಭಿಸಿದೆ. ಭಾರತದ ಶೂಟಿಂಗ್ ಸ್ಪರ್ಧಿಗಳಿಂದ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಸಾಧನೆ ಮೂಡಿಬರುತ್ತಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ವಿಜಯ್ ಕುಮಾರ್ ಹಾಗೂ ಗಗನ್ ನಾರಂಗ್ ಪದಕ ಗೆದ್ದುಕೊಟ್ಟಿದ್ದರು. ಇದುವರೆಗೆ ಒಟ್ಟು ಏಳು `ಖೇಲ್ ರತ್ನ' ಪ್ರಶಸ್ತಿಗಳು ಶೂಟಿಂಗ್ ಸ್ಪರ್ಧಿಗಳಿಗೆ ಒಲಿದಿರುವುದು ವಿಶೇಷ.

ಬಿಂದ್ರಾ (2001-02), ಅಂಜಲಿ ಭಾಗ್ವತ್ (2002-03), ರಾಜ್ಯವರ್ಧನ್ (2004-05), ಮಾನವ್‌ಜಿತ್ ಸಿಂಗ್ ಸಂಧು (2006-07), ಗಗನ್ ನಾರಂಗ್ (2010-11) ಹಾಗೂ ವಿಜಯ್ ಕುಮಾರ್ (2011-12) ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಾರಿ ಸೋಧಿಗೆ ಈ ಗೌರವ ಒಲಿದಿದ್ದು, ಸತತ ಮೂರನೇ ವರ್ಷವೂ `ಖೇಲ್ ರತ್ನ' ಶೂಟರ್‌ಗಳ ಪಾಲಾಗಿದೆ. ಸೋಧಿ ಅವರ ಈ ಸಾಧನೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಮಕ್ಕಳನ್ನು ಹುರಿದುಂಬಿಸಲು ಪೋಷಕರಿಗೆ ದಾರಿ ದೀವಿಗೆಯಾಗಬೇಕು.
-ಕೆ.ಓಂಕಾರ ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT