ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಬಯ್ಯನ ಪರೋಟ

ಕಥೆ
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ನಾನಾಗ ಎಂಟನೇ ತರಗತಿ ಓದುತ್ತಿದ್ದೆ. ಹಳ್ಳಿಯಿಂದ ಬರುತ್ತಿದ್ದ ನಮಗೆ ಪಟ್ಟಣದ ಹಾಸ್ಟೆಲ್ಲೇ ಜೀವಾಳ. ಇದ್ದ ಒಂದೇ ಕಾಲೇಜಿಗೆ ದೂರದೂರದ ಹಳ್ಳಿಗಳಿಂದ ನನ್ನಂತಹ ಹಲವು ವಿದ್ಯಾರ್ಥಿಗಳು ಸೇರಿದ್ದರು. ಹಾಸ್ಟೆಲ್‌ನಲ್ಲಿ ಸಿಗುತ್ತಿದ್ದ ಮುದ್ದೆ, ತಿಳಿಸಾರು ತಿಂದೂ ತಿಂದೂ ಬಾಯಿ ಜ್ವರ ಬಂದವರ ಹಾಗೆ ಕೆಟ್ಟೋಗುತ್ತಿತ್ತು. ಅಪರೂಪಕ್ಕೊಮ್ಮೆ ಬೆಳಗಿನ ತಿಂಡಿ ರುಚಿಯಾಗಿರುತ್ತಿತ್ತು. ಈ ರುಚಿಯಾದ ತಿಂಡಿಯನ್ನೇ ತಿಂಗಳುಗಟ್ಟಲೆ ನೆನಸಿಕೊಂಡು ಬಾಯಿ ಚಪ್ಪರಿಸುತ್ತಿದ್ದೆವು.

ಹಾಸ್ಟೆಲ್ ಸುತ್ತ ಹಬ್ಬಿಕೊಂಡಿದ್ದ ತರಾವರಿ ಬಳ್ಳಿಗಳು, ಕುರುಚಲು ಗಿಡಗಳು, ಕೊಳಕು ನೀರು ಎಲ್ಲಾ ಆಗಾಗ್ಗೆ ಅನಾರೋಗ್ಯದ ಬಿಸಿಯನ್ನು ತಟ್ಟಿಸುತ್ತಿದ್ದವು. ಇದ್ದ ಒಂದೇ ಬಾವಿ ಸ್ನಾನಕ್ಕೆ ಮತ್ತು ಕುಡಿಯಲಿಕ್ಕೆ ಉಪಯೋಗವಾಗುತ್ತಿತ್ತು. ಅದರಲ್ಲೂ ಬೇಸಿಗೆ ಕಾಲದಲ್ಲಿ ಮೈಶಾಖ ಕಡಿಮೆಗೊಳಿಸಲು ಊಟದ ತಟ್ಟೆಯನ್ನು ಬಾವಿಯಲ್ಲಿ ಬೇಕಂತಲೇ ಬೀಳಿಸಿ, ಅದನ್ನು ತರುವ ನೆಪದಲ್ಲಿ ಈಜುತ್ತಿದ್ದೆವು. ಇಷ್ಟೆಲ್ಲ ಅವಾಂತರಗಳನ್ನು ಬಾವಿ ಮೂಕ ರೋದನದಲ್ಲಿ ಸಹಿಸಿಕೊಳ್ಳುತ್ತಿತ್ತು.

ಹಾಸ್ಟೆಲ್ ಊಟದ ಮೆನುಗೆ ಬೇಸತ್ತು, ಇನ್ನಿತರ ಕಡೆ ಬಾಯಿಹಾಕಲು ತವಕಿಸುತ್ತಿದ್ದೆವು. ಮದುವೆ ಸೀಸನ್ ಬಂದರೆ ಸಾಕು ನಮಗೆ ಎಲ್ಲಿಲ್ಲದ ಹಬ್ಬ. ಕನಕಪುರ ತಾಲ್ಲೂಕು ಕೇಂದ್ರವಾಗಿದ್ದ ಕಾರಣ ಕಲ್ಯಾಣಮಂಟಪಗಳಿಗೇನೂ ಕೊರತೆ ಇರಲಿಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ಮಂಟಪದಲ್ಲಿ ಮದುವೆ ಇದ್ದೇ ಇರುತ್ತಿತ್ತು. ನಮ್ಮ ಹರಕು, ಕೊಳಕು ಬಟ್ಟೆಯನ್ನು ಕಂಡು ಕೆಲವರು ಇನ್ನಿಲ್ಲದ ಪ್ರಶ್ನೆಗಳ ಸುರಿಮಳೆ ಸುರಿಸಿದರೆ, ಇನ್ನೂ ಕೆಲವರು ಕಂಡೂ ಕಾಣದಂತೆ ಸುಮ್ಮನಿದ್ದುಬಿಡುತ್ತಿದ್ದರು. ಸ್ಕೂಲ್‌ಗೆ ಮಧ್ಯಾಹ್ನದ ಬಿಡುವು ಸಿಗುವುದೇ ತಡ ನಮ್ಮ ತಂಡ ಯಾವುದಾದರೊಂದು ಮಂಟಪದ ಮುಂದೆ ಹಾಜರಾಗುತ್ತಿತ್ತು. ಇದು ನಮ್ಮ ವರ್ಷದ ವೇಳಾಪಟ್ಟಿಯ ರೀತಿ ನಡೆಯುತ್ತಿತ್ತು.

ಓದು, ಬರಹ, ಹರಟೆ, ಕುಚೇಷ್ಟೆ, ಆಟ. ಈಜು ಎಲ್ಲವೂ ಜೊತೆಜೊತೆಗೇ ನಡೆಯುತ್ತಿತ್ತು. ಏನಿದ್ದರೂ, ಹೇಗಿದ್ದರೂ, ಅದೇನೇ ಆದರೂ ನಮಗೆ ಬಾಯಿಯ ರುಚಿ ನೀಗಿಸುವ ಅಂಶದ ಕೊರತೆ ಮಾತ್ರ ಸದಾ ಕಾಡುತ್ತಲೇ ಇತ್ತು. ‘ಮಸೀದಿ ಮುಂದಿರುವ ಸಾಬಿ ಬಹಳ ಚೆನ್ನಾಗಿ ಪರೋಟ ಮಾಡ್ತಾನೆ, ಎರಡು ತಿಂದರೆ ಸಾಕು ಹೊಟ್ಟೆಫುಲ್ ತುಂಬೋಯ್ತದೆ’ ಎಂದು ಒಮ್ಮೆ ಹಾಸ್ಟೆಲ್‌ಗೆ ಬಂದಿದ್ದ ಒಬ್ಬರು  ವಾರ್ಡನ್‌ಗೆ ಹೇಳುತ್ತಿದ್ದರು. ಅಂದು ಕಸಗುಡಿಸುವ ಸರದಿ ಇದ್ದದ್ದರಿಂದ ಈ ಮಾತು ಕಿವಿಗೆ ಬಿದ್ದು ಅದೇಗೋ ತಲೆಯಲ್ಲಿ ವರ್ಷಾನುಗಟ್ಟಲೆ ಉಳಿದುಕೊಂಡುಬಿಟ್ಟಿತ್ತು.

ಇದಕ್ಕೂ ಕಾಲ ಕೂಡಿಬರಬೇಕಲ್ಲ. ಊರಿಂದ ಯಾರಾದರೂ ಬಂದರೆ ಒಂದೈದು ರುಪಾಯಿ ಕೊಟ್ಟುಹೋಗುತ್ತಿದ್ದರು. ಇದು ಸೋಪು–ಪೆನ್ನಿಗೇ ಸಾಕಾಗುತ್ತಿರಲಿಲ್ಲ. ಇನ್ನು ಪರೋಟ ತಿನ್ನುವ ಮಾತೆಲ್ಲಿ ಬಂತು. ‘ಥೂ ನನ್ ಜನ್ಮವೇ, ಒಂದು ಪರೋಟ ತಿನ್ನೋಕು ಕಾಸಿಲ್ವಲಪ್ಪ’ ಎಂದು ಗೊಣಗುತ್ತಲೇ ಹಾಸ್ಟೆಲ್ ತಿಂಡಿ ಊಟವನ್ನೇ ಚಪ್ಪರಿಸುತ್ತಿದ್ದೆ. ಒಮ್ಮೆ ಊರಿಂದ ಬಂದಿದ್ದ ಅಣ್ಣ ಹತ್ತು ರೂಪಾಯಿ ಕೈಗಿತ್ತು ‘ಏನಾರ ಬೇಕಾದ್ರೆ ತಗೋ, ಚೆನ್ನಗೆ ಓದು’ ಎಂದು ಹೇಳಿ ಹೊರಟುಹೋದರು. ಅಣ್ಣ ಹೇಳಿದ ಯಾವ ಮಾತುಗಳೂ ಮನಸಿಗೆ ನಾಟಲಿಲ್ಲ. ಏಕೆಂದರೆ ಗಮನವೆಲ್ಲ ಹತ್ತು ರೂಪಾಯಿಯ ನೋಟಿನ ಮೇಲೆಯೇ ಇತ್ತು.

ಹತ್ತು ರೂಪಾಯಿ ಜೇಬಿನಲ್ಲಿ! ರಾತ್ರಿ ನಿದ್ದೆಯಿಲ್ಲ. ಸಾಬಿ ಅಂಗಡಿಯದ್ದೇ ಕನಸು. ಮಸೀದಿಯೇ ಕಣ್ಮುಂದೆ ಬಂದ್ಹಂಗೆ. ಏನೇನೋ ಕಲ್ಪನೆ. ಸಾಬಿ ಹೋಟೆಲ್ ಹಂಗಿರಬೇಕು, ಹಿಂಗಿರಬೇಕು. ಪರೋಟ ಈ ತರ ಇರಬಹುದು. ಆ ತರ ಇರಬಹುದು, ಹೋಳಿಗೆ ಇದ್ದಂಗಿರಬಹುದು, ಕಜ್ಜಾಯ ಇದ್ದಂಗಿರಬಹುದು... ಇನ್ನು ಏನೇನೋ.... ಸರಿ, ಬೆಳಗಾಯಿತು. ತೊಣಚಿ ಹಚ್ಚಿದ ನಾಯಂಗೆ ಬೇಗನೆ ಎದ್ದು ಲಗುಬಗೆಯಿಂದ ಮುಖ ತೊಳೆದು, ಎಂಟು ಗಂಟೆ ಆಗುತ್ತಲೇ ‘ಲೋ ನಂಗೆ ಸ್ವಲ್ಪ ಕೆಲ್ಸ ಅದೆ. ಬತ್ತೀನಿ ಕಣ್ರೋ’ ಎಂದು ಗೆಳೆಯರ ಬಳಗಕ್ಕೆ ಸುಳ್ಳಾಕಿ ಬಿರಬಿರನೆ ಮುನ್ನಡೆದದ್ದೂ ಆಯಿತು.

ಕನಕಪುರದಲ್ಲಿ ಎರಡು ಮೂರು ಮಸೀದಿಗಳಿವೆ. ಯಾವ ಮಸೀದಿ ಅಂತ ಹುಡುಕುವುದು. ಗೊಂದಲವೋ ಗೊಂದಲ. ಹಾಸ್ಟೆಲ್ ಬಿಟ್ಟಿದ್ದಾಯಿತು. ಸಮೀಪವಿರುವ ಮಸೀದಿ ಎದುರಿಗೆ ಬಂದಂದ್ದಾಯಿತು. ಪರೋಟ ಅಂಗಡಿ ಎಲ್ಲಿ ಅಂತ ಹುಡುಕೋದು, ಇದೇ ಮಸೀದಿ ಮುಂದೆನಾ ಅಥವಾ ಇನ್ನೊಂದು ಮಸೀದಿ ಮುಂದೆನಾ, ಹೇಳಿದ ಪುಣ್ಯಾತ್ಮ ಅದೂ ಒದರಿದ್ದರೆ ಆಯ್ತಿರಲಿಲ್ಲವೇ, ಎಂದು ಗೊಣಗುತ್ತಾ ಮುಖವೆಲ್ಲ ಬಾಡಿಹೋದ ಬಳ್ಳಿಯಂತಾಗಿ ಸುಸ್ತು ಆವರಿಸುತ್ತಿತ್ತು.

ಆಗ ಇದ್ದಕ್ಕಿದ್ದಂತೆ ಯಾರೋ ಹೆಗಲಿಗೆ ಕೈಹಾಕಿ ‘ಏನೋ ಇಲ್ಲಿ’ ಎಂದು ಕೇಳಿದರು. ತಿರುಗಿ ನೋಡಿದರೆ ಅಬ್ದುಲ್ಲಾ ನಿಂತವನೆ. ಅಬ್ದುಲ್ಲಾ ಮತ್ತು ನಾನು ಎರಡು ವರ್ಷದಿಂದ ಒಂದೇ ತರಗತಿಯಲ್ಲಿ ಓದುತ್ತಿದ್ದವರು. ಗೆಳೆಯನ ಕಂಡು ಸಂತೋಷ ಉಕ್ಕಿ ಬಂದರೂ ಬಂದ ಕಾರ್ಯವನ್ನು ಅರಹುವ ಮನಸ್ಸಿಲ್ಲ. ಒಂದು ವೇಳೆ ಅವನೇನಾದರು ನನ್ನ ಪರೋಟ ತಿನ್ನುವ ಬಯಕೆ ಕೇಳಿ ‘ನಾನೂ ಬತ್ತೀನಿ’ ಅಂದುಬಿಟ್ಟರೆ ದುಡ್ಡು ಎಲ್ಲಿಂದ ತರುವುದು. ಇದು ನನ್ನ ದೊಡ್ಡ ತಲೆನೋವು.

‘ಏನಿಲ್ಲ ಕಣೋ. ಸುಮ್ಮನೇ ಇಲ್ಲೆಲ್ಲ ನೋಡೋಣ ಅನ್ನಿಸ್ತು. ಅದಕೇ ಬಂದೆ’ ಎಂದು ಬಂದ ಕಾರ್ಯದ ವಿಷಯವನ್ನು ತಿರುಚಿದೆ. ಅಬ್ದುಲ್ಲ ಸುಳ್ಳನ್ನು ಗ್ರಹಿಸಿದನೋ ಏನೋ– ‘ಹೋಗ್ಲಿ ಬಿಡು, ಬಾ ನಂಜೊತೆ, ನಿಂಗೆ ಒಳ್ಳೆ ಪರೋಟ ಕೊಡಿಸ್ತೀನಿ’ ಅಂದು ಮಾತಾಡಲೂ ಬಿಡದೆ ಹೋಟೆಲ್‌ಗೆ ಎಳೆದೊಯ್ದ. ಬೇಡ ಅನ್ನಲಿಕ್ಕು ಆಗದೆ, ಅದಕ್ಕೇ ನಾನೂ ಬಂದಿದ್ದು ಅನ್ನಲೂ ಆಗದೆ ಗೊಂದಲದಲ್ಲಿ ಅವನ ಹಿಂದೆ ಒಡೆಯನ ಹಿಂಬಾಲಿಸುವ ನಾಯಿಯಂತೆ ಹಿಂಬಾಲಿಸಿದೆ.

ಕಿತ್ತೋದ ಹೆಂಚಿನ ಮನೆ. ಮನೆ ಮುಂದೆಯೇ ನಿಂತ ನೀರಿನ ಗುಂಡಿ. ನೀರಿನ ತುಂಬ ಸಾವಿರಾರು ಸೊಳ್ಳೆಗಳು. ಅಲ್ಲಿಂದ ಒಳಗೆ ಕಾಲಿಟ್ಟೊಡನೆ ಅರೆಮುರಿದ ಟೇಬಲ್‌ಗಳು. ಅವುಗಳನ್ನು ಹೇಗೋ ನಿಲ್ಲಿಸಲು ಇನ್ನೊಂದಿಷ್ಟು ಕರಕುಕರಕಾದ ಆಧಾರ ಮರದ ಪಟ್ಟಿಗಳು. ಒಳಗೆ ಗಮ್ಮೆನ್ನುವ ಬಾಡಿನ ಸುವಾಸನೆ. ಆ ವಾಸನೆಯ ಸುತ್ತ ಗುಂಯ್‌ಗುಡುವ ನೂರಾರು ನೊಣಗಳು. ಅಲ್ಲೊಂದು ಮೂಲೆಯಲ್ಲಿ ತೆರೆದ ತಟ್ಟೆಯಲ್ಲಿ ಬಿದ್ದಿರುವ ಈರುಳ್ಳಿ, ಸೌತೆಕಾಯಿ. ಇನ್ನೊಂದು ಮೂಲೆಯ ಇನ್ನೊಂದು ತಟ್ಟೆಯಲ್ಲಿ ಬೆತ್ತಲೆ ಬಿದ್ದಿರುವ ಪರೋಟದ ಗ್ಯಾಂಗು. ಅದರ ಸುತ್ತ ನಿಂತ ನೊಣಗಳ ದಂಡು. ಎಲ್ಲವೂ ವಿಚಿತ್ರ ಪ್ರದೇಶವೊಂದರ ಅನುಭವದಂತೆ ಅವಾಕ್ಕಾಗಿಸಿತು. ಒಂದು ರೀತಿಯಲ್ಲಿ ಬಂದ ಕೆಲಸವೇ ಮರೆತುಹೋದಂತಾಯಿತು.

‘ಬಾರೋ.. ಇದು ಇಡೀ ಕನಕ್ಪುರಕ್ಕೆ ಫೇಮಸ್ ಪರೋಟ ಹೋಟೆಲ್ ಕಣೋ.. ಬಾ ಕೂತ್ಕೋ, ತಿನ್ನೋಣ’ ಎಂದು ಗೆಳೆಯ ಭುಜವಿಡಿದು ಕುಳ್ಳಿರಿಸಿದನು. ಸರಿ, ಊಟದ ಮೊದಲು ಕೈತೊಳೆಯೋಣ ಎಂದುಕೊಂಡು ನೀರಿನ ಹಂಡೆಗೆ ಕೈಯಿಟ್ಟರೆ ಅದರೊಳಗಿನ ಎಣ್ಣೆಯೋಪಾದಿಯ ಜಿಡ್ಡಿನ ಅಂಶ ಕೈಗೆ ಮೆತ್ತಿಕೊಂಡು ವಿಚಿತ್ರ ಅಸಹ್ಯವನ್ನು ತಂದಿತು. ಇಷ್ಟದರೂ ಪರೋಟ ತಿನ್ನುವ ಆಸೆ ಮಾತ್ರ ನಿಲ್ಲಲಿಲ್ಲ. ಗೆಳೆಯನೊಡನೆ ಕುಂತಿದ್ದೇ ತಡ ಎರಡೆರಡು ಪರೋಟ ಎನ್ನುವ ದನಿಗೆ ಒಳಗಿನಿಂದ ಒಂದು ವ್ಯಕ್ತಿ ದನಿಗೂಡಿಸಿ ಎರಡು ಪ್ಲೇಟ್ ಹಿಡಿದು ಬಂದಿತು.

ಕೆದರಿದ ತಲೆಯ, ಕೊಂಚ ಬಾಗಿದ ಬೆನ್ನಿನ, ಹೊಗೆಯಿಂದ ಕೆಂಪಾದ ಕಣ್ಣುಗಳ, ರಸ ಆರಿದ ತುಟಿಗಳ, ಒತ್ತೊತ್ತಾಗಿ ಬೆಳೆದ ಗಡ್ಡ, ಅದಕ್ಕೆ ಹೊಂದಿಕೊಂಡಿರುವ ಮೀಸೆ– ಇಷ್ಟೆಲ್ಲ ಹೊತ್ತುಕೊಂಡ ಮನುಷ್ಯ ಬಂದದ್ದು ಕಂಡು ಪರೋಟ ತಿನ್ನುವ ಬಯಕೆ ತನಗೆ ತಾನೇ ಹಿಂಗಿಹೋಯಿತು. ಆ ಮನುಷ್ಯನ ವಿಕರಾಕೃತಿ ಮನದಲ್ಲಿ ಗಟ್ಟಿಯಾಗುವ ಮೊದಲೇ ಪರೋಟದ ಬಿಸಿ ಕೈತಾಗಿತು. ಕೈತಾಗಿ ಬಾಯಿಗಿಟ್ಟ ಕೂಡಲೇ ಲೋಕದ ಸಮಸ್ತವೂ ಮರೆಯಿತು. ಮೊದಲ ರುಚಿ.

ಪರೋಟದ ಪದರು ಪದರನ್ನೂ ಬಿಚ್ಚಿ, ಅದನ್ನು ಸುರುಳಿಯಾಕಾರದಲ್ಲಿ ಸುತ್ತಿ ಸೇರ್ವದಲ್ಲಿ ಅದ್ದಿ ತಿನ್ನತೊಡಗಿದೆ. ಸೇರ್ವ ಯಾವುದರದು ಎನ್ನುವ ಯಾವ ಗೊಂದಲವೂ ನನಗಿರಲಿಲ್ಲ. ಏಕೆಂದರೆ ಸಕಲವನ್ನೂ ಸೇವಿಸುವವರಿಗೆ ಇದನ್ನು ಕುರಿತು ಚಿಂತಿಸುವ ಗೊಡವೆಯೇ ಇರಲಾರದು. ತಿನ್ನುತ್ತಾ ತಿನ್ನುತ್ತಾ ಬಾಯಿ ಚಪ್ಪರಿಸಿದಷ್ಟೂ ಅದರ ರುಚಿ ಇಮ್ಮಡಿಗೊಳ್ಳುತ್ತಿತ್ತು. ಹಾಗೆ ತಿನ್ನುವುದರೊಂದಿಗೆ ಸಾಬಿ ಹೋಟ್ಲ ಪರೋಟ ಒಮ್ಮೆಯಾದ್ರು ತಿನ್ಬೇಕು ಎನ್ನುವ ವಾರ್ಡನ್ ಸ್ನೇಹಿತರ ಮಾತು ಪದೇ ಪದೇ ನೆನಪಾಗುತ್ತಿತ್ತು.

ಇಲ್ಲಿಂದ ಶುರುವಾದ ಪರೋಟ ಯಾತ್ರೆ ಸದ್ದಿಲ್ಲದೆ ಐದು ರೂಪಾಯಿ ಜೇಬಿನಲ್ಲಿ ಕಂಡ ಕೂಡಲೇ ಮುಂದುವರಿಯುತ್ತಿತ್ತು. ಒಮ್ಮೆ ಮಾರುಕಟ್ಟೆಯ ಶೆಟ್ಟಿ ಅಂಗಡಿಯ ಮುಂದೆ ನಿಂತಿರುವಾಗ ಇದ್ದಕ್ಕಿದ್ದಂತೆ ಯಾರೋ ಬಂದು– ‘ಯಾಕಪ್ಪಾ, ಸುಮಾರು ದಿನದಿಂದ ಹೋಟ್ಲಿಗೆ ಬಂದಿಲ್ಲ’ ಎಂದು ಕೇಳಿದರು. ತಿರುಗಿ ನೋಡಿದರೆ ಪರೋಟ ಸಾಬಿ. ಅತ್ಯಾಶ್ಚರ್ಯ. ಮಳೆ ಬಂದು ಕೊಚ್ಚೆ ಕೆಸರಿನ ರಾಡಿಯಾಗಿದ್ದ ಮಾರುಕಟ್ಟೆಯಲ್ಲಿ ಈ ಮನುಷ್ಯ ಇನ್ನೊಂದು ರಾಡಿಯಂತೆ ಕಂಡನು. ಅಲ್ಲಿನ ಜನರ ಗಜಿಬಿಜಿ ಸದ್ದು ಹೇಗಿತ್ತೋ ಹಾಗೆ ಅಲ್ಲಿನ ಕೆಸರೂ ಕಾಣುತ್ತಿತ್ತು. ಮೊದಲೇ ಈ ಮನುಷ್ಯ ವಿಚಿತ್ರ.

ಈಗ ಕೆಸರನ್ನೆಲ್ಲ ಕಾಲಿಗೆ ಮೆತ್ತಿಸಿಕೊಂಡು, ಮೋಟುಬೀಡಿ ತುಟಿಯಲ್ಲಿ ಸಿಕ್ಕಿಸಿಕೊಂಡು, ಇರುವ ಮೂರು ಕೂದಲನ್ನು ಕೆದರಿಕೊಂಡು, ಅದಕ್ಕೊಂದಿಷ್ಟು ಕೆಸರು ಮೆತ್ತಿಸಿಕೊಂಡು ಮೊದಲು ಕಂಡದ್ದಕ್ಕಿಂತಲೂ ಈಗ ಇನ್ನೂ ವಿಚಿತ್ರವಾಗಿ ಕಾಣುತ್ತಿದ್ದನು. ಇದ್ದಕ್ಕಿದ್ದಂತೆ ಹೀಗೆ ಸಿಕ್ಕಿ, ಆಕಸ್ಮಿಕವಾಗಿ ಎದುರಾದ ಈ ಪ್ರಶ್ನೆಗೆ ಉತ್ತರ ಹೊಳೆಯದೆ ತಬ್ಬಿಬ್ಬಾದರೂ, ಸಾವರಿಸಿಕೊಂಡು ‘ಇಲ್ಲ, ಸುಮ್ಮನೆ’ ಎಂಬ ಹಾರಿಕೆಯ ಉತ್ತರ ನೀಡಿದೆ. ಅದೇನನ್ನಿಸಿತೋ ಆ ಸಾಬಿಗೆ ‘ದುಡ್ಡಿಲ್ಲದಿದ್ದರೂ ಪರವಾಗಿಲ್ಲ ಬಂದು ಹೋಗಪ್ಪ’ ಎಂದು ಹೇಳಿ– ‘ದುಡ್ಡು ಇವತ್ತಿರ್ತದೆ ನಾಳೆ ಹೊಯ್ತದೆ. ದುಡ್ಡು ಇನ್ನೊಮ್ಮೆ ಕೊಟ್ರಾತು’ ಎಂದು ಹೇಳಿದನು. ಮನದ ಮೂಲೆಯಲ್ಲೆಲ್ಲೋ ಖುಷಿಯ ಸಿಂಚನ ಮೂಡಿತು.

ಆದರೂ ಅದೇನೋ ಅನುಮಾನ. ಇವ್ನು ಯಾಕೀಗೆ ನನ್ನೇ ಕೇಳ್ದ, ಇನ್ಯಾರೂ ಬರೋದಿಲ್ವೆ ಇವ್ನ ಹೋಟೆಲ್ಗೆ... ಎಂದು ಏನೇನೋ ಅನುಮಾನ ಕಾಡಲು ಪ್ರಾರಂಭಿಸಿತು. ಅದೇನಾದರು ಆಗಲಿ, ಮುಂದಿನ ವಾರ ಒಮ್ಮೆ ಹೋಗಿಬಂದರೆ ಆಯಿತೆಂದುಕೊಂಡು ಸುಮ್ಮನೆ ಮುಂದುವರೆದೆ.
ಒಂದು ವಾರದ ನಂತರ ಅಣ್ಣ ಮತ್ತೊಮ್ಮೆ ಐದು ರೂ ಕೈಗಿತ್ತರು. ಸಿಕ್ಕಿದ್ದೇ ತಡ ಮನಸ್ಸು ಸಾಬಿ ಪರೋಟದತ್ತ ಮುನ್ನುಗ್ಗಿತು. ಹಾಸ್ಟೆಲ್‌ನ ಗೆಳೆಯರ ಕಣ್ತಪ್ಪಿಸಿ ಸಾಬಿ ಹೋಟೆಲ್ಗೆ ನುಗ್ಗಿ ಎರಡು ಪರೋಟ ಆರ್ಡರ್ ಮಾಡಿದೆ. ಈ ದಿನ ಹಿಂದೆಂದಿಗಿಂತಲೂ ಕೊಂಚ ಭಿನ್ನವಾಗಿ ಸಾಬಿ ಕಾಣುತ್ತಿದ್ದ. ಕೊಳಕು ಆ ಹೋಟೆಲನ್ನು, ಅವನನ್ನು ಕೊಂಚವೂ ಬದಲಿಸಲಿರಲಿಲ್ಲ. ಆದರೂ ಅವನ ದಟ್ಟ ಗಡ್ಡದ ನಡುವೆ ಮೂಡಿದ ಬೆಳದಿಂಗಳಂತಹ ನಗು ಅವನನ್ನು ಕೊಂಚ ಭಿನ್ನವಾಗಿ ಪರಿಚಯಿಸಿತ್ತು.

ಅದೇನೋ ಉತ್ಸಾಹ, ಹುಮ್ಮಸ್ಸು, ಗೆಲುವು– ಇವೆಲ್ಲ ಬೆರೆತ ರೀತಿಯಲ್ಲಿ ಅವನು ಕಾಣುತ್ತಿದ್ದ. ಬಡಿಸುವಾಗಲಂತೂ ಅವನು ಇನ್ನಿಲ್ಲದ ಲವಲವಿಕೆಯಿಂದ ಕೂಡಿದಂತೆ ಕಾಣುತ್ತಿದ್ದ. ತಿಂದಾದ ಮೇಲೂ ಸಹ ‘ಇನ್ನೊಂದು ಬೇಕಾ ಪುಟ್ಟ, ದುಡ್ಡಿಲ್ಲದಿದ್ದರು ಪರವಾಗಿಲ್ಲ, ನಾಳೆ ಕೊಡುವಿಯಂತೆ, ಕೊಡದಿದ್ದರು ನಡೆಯುತ್ತೆ, ಹೊಟ್ಟೆತುಂಬ ತಿನ್ನು’ ಎಂದು ನನ್ನನ್ನು ಅತ್ಯಂತ ಮುಜುಗರಕ್ಕೆ ಈಡುಮಾಡುತ್ತಿದ್ದ. ತಿಂದು ಹೊರಬಂದೆ. ಬಾಗಿಲವರೆಗೂ ಬಂದು ‘ಮತ್ತೆ ಬರ್ತಾ ಇರು’ ಎಂದೇಳಿ ಮುಗುಳ್ನಕ್ಕು ಒಳಹೋದ. ತಲೆಯಲ್ಲಿ ಇನ್ನೊಂದಿಷ್ಟು ಗೊಂದಲ ಶುರುವಾಯ್ತು. ಗೆಳೆಯರೊಂದಿಗೆ ಇದೆಲ್ಲ ಹೇಳೋಣವೆಂದರೆ ಒಂಥರಾ ಸಂಕೋಚ. ಈ ಸಂಕೋಚ ಇನ್ನಷ್ಟು ದಿನಗಳ ಕಾಲ ಮುಂದುವರೆದು ಹೋಟೆಲ್‌ನ ಸಹವಾಸವೂ ಮುಂದುವರೆಯಿತು.

ಒಂದು ದಿನ ಹೋಟೆಲ್ ಊಟದಲ್ಲಿ ಮಗ್ನನಾಗಿದ್ದೆ. ಸಾಬಿ ಇದ್ದಕ್ಕಿದ್ದಂತೆ ಕೈಹಿಡಿದು ‘ಮನೆಗೆ ಹೋಗಿದ್ದು ಬರೋಣ ಬಾ’ ಎಂದು ಸರಸರನೆ ಎಳೆದುಕೊಂಡು ನಡೆದನು. ಎಲ್ಲಿಗೆ, ಯಾರ ಮನೆಗೆ, ಯಾಕೆ ಹೀಗೆ ಏನೆಲ್ಲ ಪ್ರಶ್ನೆ ಕೇಳಬೇಕಿತ್ತೋ ಅದೆಲ್ಲಕ್ಕೂ ಮೀರಿ ಅವನ ಹಿಂದೆ ನಡೆದೆ. ಸಾಬಿ ತನ್ನ ಮನೆಗೆ ಕರೆದೊಯ್ದು ತನ್ನ ಹೆಂಡತಿ ಮುಂದೆ ಕುಳ್ಳಿರಿಸಿದನು. ‘ಬಾನು ಇಲ್ಲೋಡು, ಮಗ ಬಂದವ್ನೆ, ಕಣ್ಬಿಟ್ಟು ನೋಡು, ಮಾತಾಡು’ ಎಂದು ಏನೇನೋ ಮಾತನಾಡಿದನು. ಆದರೂ ಬಾನಮ್ಮ ಎದ್ದೇಳಲಿಲ್ಲ. ಎಷ್ಟೋ ಹೊತ್ತಾದ ಮೇಲೆ ‘ಸ್ಕೂಲಿಗೆ ಟೇಮಾಯ್ತು, ನಾ ಹೋಯ್ತೀನಿ’ ಎಂದಾಗ ಬಾನಮ್ಮ ಕಣ್ತೆರೆಯಲು ಪ್ರಾರಂಭಿಸಿದಳು.

ಸುಕ್ಕುಸುಕ್ಕಾದ ಮುಖ, ಜೋತುಬಿದ್ದ ಕಿವಿಗಳು, ಮುಖದ ತುಂಬೆಲ್ಲಾ ನೇತಾಡುತ್ತಿದ್ದ ತಲೆ ಕೂದಲುಗಳು... ಇವೆಲ್ಲಾ ಸೇರಿ ಬಾನಮ್ಮನ ಆಳದಲ್ಲಿ ದೊಡ್ಡದೊಂದು ದುಃಖದ ಕೊಡವೇ ಕುಳಿತಿದೆ ಎನಿಸಿತು. ಸ್ಕೂಲಿಗೆ ಹೊತ್ತಾದರೂ ಎದ್ದೇಳುವ ಮನಸ್ಸಾಗದೆ ಅಲ್ಲೇ ಕುಳಿತೆ. ಸಾಬಿಯ ಹೋಟೆಲ್‌ಗೆ ವಿರುದ್ಧ ರೀತಿ ಮನೆಯಿದೆ. ಅಚ್ಚುಕಟ್ಟಾದ ಮನೆ. ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆ ಸಾಮಾನುಗಳು. ಅಡುಗೆಮನೆ, ಹಜಾರ, ಸ್ನಾನದ ಮನೆ, ಮಲಗುವ ಕೋಣೆ ಎಲ್ಲಾ ಭೇದವಿಲ್ಲದಂತೆ ಬಂದವರಿಗೆಲ್ಲಾ ಕಾಣುತ್ತಿದ್ದವು. ಗೋಡೆಯ ಮೇಲೆ ಕಣ್ಣಾಡಿಸಿದಷ್ಟೂ ಉರ್ದುವಿನಿಂದ ಬರೆದ ಏನೇನೋ ಪೋಟೋಗಳು ವಿರಾಜಮಾನವಾಗಿದ್ದವು. ಇಷ್ಟು ಅಚ್ಚುಕಟ್ಟಾದ ಮನೆಯಿಟ್ಟಿರುವ ಸಾಬಿ ಹೋಟೆಲ್ ಮಾತ್ರ ಏಕೆ ಹಾಗಿಟ್ಟಿದ್ದಾನೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೇ ಎಲ್ಲವನ್ನೂ ಏಕಚಿತ್ತದಿಂದ ನೋಡಿ ಮೌನಕ್ಕೆ ಶರಣಾಗಿದ್ದೆ.

ಇದೇ ಸಂದರ್ಭದಲ್ಲಿ ಬಾನಮ್ಮ ಅರೆತೆರೆದ ಕಣ್ಣಿನಿಂದ ನನ್ನನೊಮ್ಮೆ ನೋಡಿದಳು. ಅವಳ ಕಣ್ಣಲ್ಲಿ ಅದೆಂತದೋ ಸುಖ ಬಂದು ನಿಂತಿತು. ಜೊತೆಗೆ ಕಣ್ತುಂಬ ನೀರೂ ತುಂಬಿತು. ಏನೋ ಹೇಳಲು ಹೋದವಳು ಹಾಗೇ ಮೂರ್ಛೆ ಹೋದಳು. ಸಾಬಯ್ಯ ತಕ್ಷಣವೇ ಬಂದು ಸ್ವಲ್ಪ ನೀರು ಕುಡಿಸಿದನು. ನಂತರ ‘ಬಾ ಹೋಗೋಣ’ ಎಂದು ನನ್ನ ಕೈಯಿಡಿದು ಹೊರನಡೆದನು. ನಾನು ಬಾನಮ್ಮನನ್ನೇ ನೋಡುತ್ತಾ ಮನೆಯ ಹೊಸ್ತಿಲ ದಾಟಿದೆನು. ಮನದಲ್ಲಿ ಅದೇನೋ ಕಳವಳ, ನೋವು, ಏನೋ ಬಾಧೆ, ಎಲ್ಲವೂ ಒಮ್ಮೆಲೇ ಮೈದುಂಬಿ ಬಾನಮ್ಮ ಮತ್ತೆ ಮತ್ತೆ ಎದೆಯಾಳದಲ್ಲಿ ಇಳಿಯಲು ಶುರುಮಾಡಿದಳು.

ಸಾಬಯ್ಯ ಹೋಗುವಾಗ ‘ಮೂರೊರ್ಷದಿಂದ ಹಿಂಗೆ ಪುಟ್ಟ, ಇವತ್ತು ನಮ್ಮೇರಿಯಾ ಹುಡುಗ ಓಡ್ಬಂದು ನಿನ್ನೆಂಡ್ತಿ ಯಾಕೋ ಒದ್ದಾಡ್ತಾವಳೆ ಅಂದ, ಅದ್ಕೆ ನಿನ್ನ ಕರ್ಕೊಂಡು ಹೋದೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡ. ‘ನನ್ನೇಕೆ ಕರ್ಕೊಂಡೋದೆ? ನಿಂಗೆ ಮಕ್ಕಳಿಲ್ವ? ಬಾನಮ್ಮನಿಗೆ ಏನಾಗಿದೆ? ಯಾಕೆ ಮೂರೊರ್ಷದಿಂದ ಹಾಗಿದ್ದಾಳೆ? ನೀನೇಕೆ ಎಲ್ಲಾ ಕಳ್ಕೊಂಡಂಗೆ ಯಾವಾಗ್ಲೂ ಇರ್ತಿಯಾ?’ ಎಂಬ ಪ್ರಶ್ನೆಗಳ ಮಳೆಯನ್ನೇ ಅವನ ಮೇಲೆ ಸುರಿಸಬೇಕೆಂದುಕೊಂಡೆ. ಆದರೆ ಅವನ ಬಾಡಿಹೋದ ಮುಖ ಕಂಡು ಏನನ್ನೂ ಕೇಳದೆ ಸುಮ್ಮನೆ ಅವನನ್ನು ಹಿಂಬಾಲಿಸಿದೆ. ಇಷ್ಟೊತ್ತಿಗಾಗಲೇ ಸ್ಕೂಲ್ ಶುರುವಾಗಿದ್ದ ಕಾರಣ, ಸೀದಾ ಹಾಸ್ಟೆಲ್‌ಗೆ ಬಂದು ಏನೋ ನೆಪ ಹೇಳಿ ಮಲಗಿಕೊಂಡೆ. ಸಾಬಯ್ಯನ ಕೇಳಬೇಕೆಂದ ಪ್ರಶ್ನೆಗಳು ನನ್ನನ್ನು ಸುತ್ತುವರೆದು, ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದವು.
ಮಧ್ಯಾಹ್ನವೇ ಗಾಢ ನಿದ್ರೆ ಆವರಿಸಿತು.

‘ಲೋ ನೋಡ್ರೋ ಇವ್ನ, ಆ ಸಾಬ್ರು ಜೊತೆ ಏನೋ ಸಂಬಂಧ ಬೆಳಸವ್ನೆ’.

‘ಆ ಸಾಬಯ್ಯನ ನೋಡಿದ್ರೆ ಇವ್ನಿಗೆ ಅವರಪ್ಪನ ನೆನಪು ಬತ್ತದಂತೆ ಕಣ್ರೋ’.

‘ಹ್ಹ.. ಹ್ಹ.. ಹ್ಹ..’

‘ಒಟ್ನಲ್ಲಿ ಪಟ್ನಕ್ಕೆ ಬಂದ ಹೈದನಿಗೆ ಒಳ್ಳೇ ಫ್ಯಾಮಿಲಿ ಸಿಕ್ತು ಕಣ್ರೋ’.

‘ಆಯಮ್ಮನಿಗೆ ಇವ್ನ ನೋಡಿದ್ದ ಕೂಡಲೇ ಅಳು ಬಂದ್ಬಿಡ್ತಂತೆ’.

ಎಂದೆಲ್ಲಾ ಹಾಸ್ಟೆಲ್ ಹುಡುಗರು ನನ್ನ ಮತ್ತು ಈ ಸಾಬಯ್ಯನ ಸಂಬಂಧದ ಪ್ರಸಂಗ ಕೇಳಿ ಸುತ್ತ ನಗುತ್ತಿರುವಂತೆ ಭಾಸವಾಗಿ ಕನಸಿನ ಲೋಕದಿಂದ ತಟ್ಟಂತ ಜಾಗೃತ ಸ್ಥಿತಿಗೆ ಮರಳಿದೆ. ಇದೆಲ್ಲದರ ನಡುವೆ ವಿಚಿತ್ರವಾದ ಸಂಬಂಧದ ಎಳೆಯೊಂದು ಮನದ ಮೂಲೆಯಲ್ಲಿ ಕೂತು ಬಾನಮ್ಮನ ಬಾನಂಗಳಕ್ಕೆ ಜಿಗಿಯುತ್ತಿತ್ತು. ಮತ್ತೆ ಮತ್ತೆ ಸಾಬಯ್ಯನ ಬೇಸತ್ತ ಮುಖ ಕಣ್ಣಾಳದಲ್ಲಿ ಇಳಿದು ಮಿಂಚಿ ಮರೆಯಾಗುತ್ತಿತ್ತು. ಓದು, ಬರಹದ ನಡುವೆ ಆಗಾಗ್ಗೆ ಇವರಿಬ್ಬರ ನೆನಪು ಮುಸುಕು ಮುಸುಕಾಗಿ ಪುಟದ ಅಕ್ಷರಗಳಾಗುತ್ತಾ ಸಾಗಿಬಂದಿತು.

ಇದ್ದ ಮುನ್ಸಿಪಲ್ ಹೈಸ್ಕೂಲ್ ಸಾವಿರ ಸಂಖ್ಯೆಯನ್ನು ಹೊಂದಿತ್ತು. ನಾನಿದ್ದ ತರಗತಿಯಲ್ಲೇ ನೂರೈವತ್ತು ವಿದ್ಯಾರ್ಥಿಗಳಿದ್ದೆವು. ಇತ್ತೀಚೆಗೆ ನನ್ನ ಅಸಮಾಧಾನದ ಮುಖ ಕಂಡು ಹಲವರು ಪ್ರಶ್ನಿಸಿದರೂ ಉತ್ತರ ಹೇಳಲು ನಾನು ಸಿದ್ಧನಿರಲಿಲ್ಲ. ಸಿದ್ಧನಿರಲಿಲ್ಲ ಎನ್ನುವುದಕ್ಕಿಂತ ಉತ್ತರ ಯಾವುದೆಂದು ತಿಳಿಯದ ಸ್ಥಿತಿಯಲ್ಲಿ ನಾನಿದ್ದೆ. ಅಬ್ದುಲ್ಲಾ ಆತ್ಮೀಯನಾದ ಕಾರಣ ಹೇಳೋಣವೆಂದರೆ ನಮಗೂ ಈ ಧರ್ಮಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಾನೇನೊ ಎಂದು ಹೆದರಿ ನನ್ನೊಳಗೇ ಅದುಮಿಡಲು ಪ್ರಯತ್ನಿಸುತ್ತಿದ್ದೆ.

ಹೀಗಿರುವಾಗ ಒಂದು ದಿನ ಸಾಬಯ್ಯನ ಹೋಟೆಲ್‌ನಲ್ಲಿ ಪರೋಟ ತಿನ್ನುತ್ತಿದ್ದೆ. ಪಕ್ಕದಲ್ಲಿದ್ದ ಒಬ್ಬ ಸಾಬಯ್ಯ ‘ನಿನ್ನ ಮಕ್ಳು ಎಷ್ಟು? ಎಲ್ಲಿದ್ದಾರೆ?’ ಎಂದು ಕೇಳಿದ. ತಕ್ಷಣ ಸಾಬಯ್ಯ ‘ಒಬ್ನೇ.. ಇಲ್ಲೇ ಕುಂತವ್ನೆ ನೋಡಿ’ ಎಂದು ಹೇಳಿ ನನ್ನನ್ನು ಅತ್ಯಾಶ್ಚರ್ಯದಲ್ಲಿ ಮುಳುಗಿಸಿದ. ಇದೇನು ಹೀಗೆ ಹೇಳಿದ ಸಾಬಯ್ಯ, ಸ್ನೇಹಿತರಿಗೆ ತಿಳಿದರೆ ಏನು ಗತಿ, ಅವರೆಲ್ಲ ಆಡಿಕೊಳ್ಳುವುದಿಲ್ಲವೇ ಎಂದು ಏನೇನೋ ಭಯ, ಆತಂಕ ಮನದ ಮೂಲೆಯ ಸುತ್ತ ಸುತ್ತುತ್ತಾ ಬೇಗನೆ ತಿಂದು ಸಾಬಯ್ಯನಿಗೂ ಬರ್ತೇನೆ ಎಂದೂ ಸಹ ಹೇಳದೆ ಹಾಸ್ಟೆಲ್‌ಗೆ ಬಂದೆ.

‘ಲೋ ನಾನೂ ದಿನಾ ನೋಡ್ತಿದ್ದೀನಿ... ಅದೆಲ್ಲೋ ಹೋಯ್ತೀಯ, ಮತ್ತೆ ಬತ್ತೀಯ. ಸಪ್ಪಗಿರ್ತೀಯ, ಕೇಳಿದ್ರೆ ಏನೂ ಹೇಳಲ್ಲ, ಏನ್ ನಿನ್ನ ರೋಗ’ ಎಂದು ಹಾಸ್ಟೆಲ್ ಗೆಳೆಯ ಸಿದ್ದರಾಜು ಕೇಳಿದ. ಏನಿಲ್ಲವೆಂದು ಸಬೂಬು ಹೇಳಿ ಬ್ಯಾಗ್ ನೇತಾಕಿಕೊಂಡು ಸ್ಕೂಲ್‌ಗೆ ಹಾಜರಾದೆ. ತರಗತಿ ಉದ್ದಕ್ಕೂ ಸಾಬಯ್ಯನ ಮಾತು ನೆನಪಿಗೆ ಬಂದು, ಸಂಜೆ ಹೋಗಿ ಕೇಳಾನ ಯಾಕಿಂಗಂದೆ ಎಂದು ಮನದಲ್ಲೇ ಕೋಪವ ತಾಳಿ ಸಂಜೆಯಾಗುವುದನ್ನೇ ಕಾದು ಕುಳಿತೆ.

ಸಂಜೆ ಸಾಬಯ್ಯನ ಅಂಗಡಿ ಹತ್ತಿರ ಬಂದೆ. ಸಿಕ್ಕರೆ ಬೈಯಲೇಬೇಕು. ಇನ್ನೊಮ್ಮೆ ಬರುವುದಿಲ್ಲ ಎಂದು ಹೇಳಿಬಿಡಬೇಕೆಂದುಕೊಂಡು ಹೋಟೆಲ್ ಸುತ್ತೆಲ್ಲಾ ಹುಡುಕಿದೆ. ಸಾಬಯ್ಯ ಕಾಣಲಿಲ್ಲ. ಅಲ್ಲೇ ಇದ್ದ ಗುಜರಿ ಅಂಗಡಿಯವನು.. ‘ಹೋಯ್ ಹುಡುಗ.. ಇವತ್ತು ಅವನು ಬರಾಕಿಲ್ಲ, ಅವನೆಂಡ್ತಿ ಸತ್ತೋದ್ಲು’ ಎಂದು ಹೇಳಿದ. ಮೈಯೆಲ್ಲ ಬೆವತು ತಲೆತಿರುಗಿದಂತಾಗಿ ನಾಚಿಕೆ ಮನದ ಮೂಲೆಮೂಲೆಯಲ್ಲೂ ಆಕ್ರಮಿಸಿತು. ಕಾಲ ಮೀರುವ ಮೊದಲೇ ಬಾನಮ್ಮನ ನೋಡಲೇಬೇಕೆಂದುಕೊಂಡು ಅವನ ಮನೆ ಹತ್ತಿರ ದೌಡಾಯಿಸಿದೆ. ದುಃಖದ ತೀವ್ರತೆಯೇ ಮೈವೆತ್ತಂತಿದೆ ಮನೆ.

ರೋದನ ಸುತ್ತಲಿನ ಪ್ರದೇಶವನ್ನೆಲ್ಲ ಆವರಿಸಿದೆ. ಜನರ ಹಿಂಡು ಅಲ್ಲೇ ಸುತ್ತುವರಿದು ನಿಂತಿದೆ. ಇವರನ್ನೆಲ್ಲ ಹೇಗೋ ಬಿಡಿಸಿ ಜಾಗ ಮಾಡಿ ಹೆಣದ ಹತ್ತಿರ ತಲುಪಿ ಬಗ್ಗಿ ನೋಡಿದೆ. ‘ಬಂದೆಯ ಕಂದಾ’ ಎಂದು ಕೂಗಿದ ದನಿಯಲ್ಲಿ ಬಾನಮ್ಮ ನಕ್ಕು ಮಾತನಾಡಿದಂತಾಗಿ ಕಣ್ಮುಚ್ಚಿದೆ. ಮತ್ತೆ ಕಣ್ದೆರೆದು ಸಾಬಯ್ಯನ ಹುಡುಕಾಟದಲ್ಲಿ ತೊಡಗಿದೆ. ಕೊನೆಗೂ ಸಾಬಯ್ಯ ಸಿಕ್ಕ. ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಕಂಬನಿ ಮೈದುಂಬಿ ಆ ಕಡೆ ಮುಖಮಾಡಿದ. ನೂರು ಮಾತಿಗಿಂತ ಒಂದು ಮೌನ ಮೇಲಲ್ಲವೇ...

ಹೀಗೇ ಕಾಲಚಕ್ರ ಉರುಳಿ ಎಸ್ಸೆಸ್ಸೆಲ್ಸಿ ಮುಗಿಯಿತು. ನಂತರ ಬೆಂಗಳೂರು ಕೈಬೀಸಿ ಕರೆದು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿತು. ಇಷ್ಟಾದರೂ ಓದಿದ ಸ್ಕೂಲು, ಸಾಬಯ್ಯನ ಪರೋಟ ಹೋಟೆಲ್, ಹಾಸ್ಟೆಲ್– ಇವು ಮರೆಯಲಾರದ ತಾಣಗಳಾಗಿ ಮಾರ್ಪಟ್ಟವು. ಬೆಂಗಳೂರಿಂದ ಊರಿಗೆ ಹೊರಡುವಾಗ ಇಲ್ಲಿಳಿದು ಈ ಮೂರನ್ನು ನೋಡಿ ಹೋಗದಿದ್ದರೆ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಆದರೆ ಒಂದು ಕೊರತೆ ನಿತ್ಯ ಕಾಡಿಸುತ್ತಿತ್ತು. ಸ್ಕೂಲು, ಹಾಸ್ಟೆಲ್ ಇದ್ದಂತೆ ಸಾಬಯ್ಯನ ಹೋಟೆಲ್ ಕೂಡ ಇತ್ತು. ಆದರೆ ಅದರೊಳಗೆ ಸಾಬಯ್ಯ ಮಾತ್ರ ಇರುತ್ತಿರಲಿಲ್ಲ. ಯಾರನ್ನಾದರೂ ಕೇಳಿದರೆ ‘ಗೊತ್ತಿಲ್ಲ’ ಎನ್ನುವ ಉತ್ತರವನ್ನು ನೀಡುತ್ತಿದ್ದರು.

ಇದು ಸುಮಾರು ಹತ್ತು ವರ್ಷ ಹೀಗೇ ಮುಂದುವರಿಯಿತು. ಕೆಲಸ ಸಿಕ್ಕಿತ್ತು. ಊರಿಗೆ ಬಂದೋಗುವುದು ಕಡಿಮೆಯಾಗಿತ್ತು. ಬಂದಾಗ ಈ ಮೂರು ಸ್ಥಳಗಳ ಭೇಟಿಗಾಗಿ ಮನಸ್ಸು ಹಾತೊರೆಯುತ್ತಿತ್ತು. ಇತ್ತೀಚೆಗೆ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಸಾಬಯ್ಯನ ಅಂಗಡಿಯೂ ನಿರ್ನಾಮವಾಗಿತ್ತು. ಹಾಗಾಗಿ ಉಳಿದೆರಡೇ ನೆನಪಿನ ಬುತ್ತಿಯನ್ನು ಹಿಗ್ಗಿಸುತ್ತಿದ್ದವು. ಹೀಗಿರುವಲ್ಲಿ ಒಂದು ದಿನ ಹಾಸ್ಟೆಲ್ ಹೋಗಿದ್ದೆ. ಕೊಳಕಿನಿಂದ ಕೂಡಿದ್ದ ಅಂದಿನ ಹಾಸ್ಟೆಲ್‌ಗಿಂತ ಇಂದು ಎಷ್ಟೋ ಪಾಲು ಉತ್ತಮವಾಗಿ ಹೈಟೆಕ್ ಆಗಿತ್ತು.

ಸುತ್ತ ಹಸಿರು ಮೈಚಾಚಿ ನಿಂತಿತ್ತು. ಮರಗಳು ಎತ್ತರೆತ್ತರಕ್ಕೆ ಬೆಳೆದು ಹಾಸ್ಟೆಲನ್ನು ಸೊಂಪಾಗಿಟ್ಟಿದ್ದವು. ಹಾಸ್ಟೆಲ್ ಹೊರಗೂ ಒಳಗೂ ಮರಗಳ ಸಾಲುಗಳು ಎದ್ದಿದ್ದವು. ಮನಸ್ಸು ಇವುಗಳನ್ನು ನೋಡಿ ಆನಂದಿಸುತ್ತಾ ಹಳೆಯ ನೆನಪುಗಳಿಗೆ ಜಾರುತ್ತಿದ್ದಂತೆ ಯಾರೋ ಹಾಸ್ಟೆಲ್ ಹೊರಗಿನ ಮರದ ಬುಡದಿಂದ ‘ಗುರುವಾ’ ಎಂದು ಕರೆದಿದ್ದು ಕೇಳಿಸಿತು. ಯಾವುದೋ ಪರಿಚಿತ ದನಿ. ತನ್ನ ಕಡೆಯೇ ಕೈಬೀಸಿ ಕರೆದು ಹತ್ತಿರ ಬಾ ಎನ್ನುತ್ತಿದೆ. ಇದ್ಯಾರೀ ಹುಚ್ಚ, ನನ್ನೇಕೆ ಕರೆತಿದ್ದಾನೆ, ಹಸಿವಿರಬಹುದು, ಎರಡು ರೂಪಾಯಿ ಕೊಟ್ಟರಾಯಿತೆಂದು ಮುಂದೆ ಸಾಗಿದೆ.

ಹತ್ತಿರ ಹೋದಂಗೆಲ್ಲ ಅಪರಿಚಿತ ಮುಖ ಪರಿಚಿತದೆಡೆಗೆ ಸಾಗಿತು. ಕೆದರಿದ ಕೂದಲಿನ, ಅಸಹ್ಯ ಕೊಳಕಿನ, ಕಂಬಳಿ ಹೊದ್ದ ವ್ಯಕ್ತಿ ತಟ್ಟನೆ ಸಾಬಯ್ಯನ ಮುಖವನ್ನು ಮನದಲ್ಲಿ ಅಚ್ಚೊತ್ತಿತು. ಒಮ್ಮೆಗೆ ಗಾಬರಿ. ಒಂದು ರೀತಿಯ ತಳಮಳ. ಏನೋ ಸಂಕಟ. ಏನಾಯಿತು ಎಂದು ಕೇಳುವ ಮೊದಲೇ ನನ್ನ ಕೈ ಅವನ ಕೈ ಹಿಡಿಯಿತು. ‘ಏಳು ಮನೆಗೋಗುವ’ ಎಂದೆ. ಯಾರ ಮನೆ ಎನ್ನುವಂತೆ ಗಾಬರಿಯಿಂದ ನೋಡಿದ. ‘ನಿನ್ನ ಮನೆ ಅಲ್ಲಿದೆ.. ಆದರೆ ಈ ಲೋಕವೇ ನನ್ಮನೆ. ನಾನಿನ್ನ ಹತ್ರ ಬಂದ್ರೆ ಲೋಕದೊಳಗೆ ನೂರೆಂಟು ಪ್ರಶ್ನೆ.. ನೂರೆಂಟು ಮಾತು, ಬೇಡ ಬಿಡಪ್ಪ.. ಎಲ್ಲಿದ್ರೂ ನೀ ಚೆನ್ನಾಗಿರು. ಯಾವತ್ತಾದ್ರು ಸಿಕ್ತಿಯಾ ಅಂತ ಈ ಮರಗಳ ಕೆಳಗೆ ಇಷ್ಟು ವರ್ಷ ಕಳ್ದೆ.

ನಿನ್ನ ನೋಡಿದ್ನಲಾ ಅಷ್ಟೇ ಸಾಕು’ ಎಂದು ಆಕಾಶದ ಹಕ್ಕಿಯೊಂದು ಗರಿಗೆದರಿ ತನ್ನ ಗುರಿಯೆಡೆಗೆ ತಾನೇ ಸಾಗುವಂತೆ ಕೂಗಿದರೂ ಕೇಳದಂತೆ ದಾರಿಯುದ್ದಕ್ಕೂ ಸಾಗಿದನು. ಅಸಹಾಯಕತೆಯೇ ಮೈವೆತ್ತಂತೆ ದಾರಿಯುದ್ದಕ್ಕೂ ಕಣ್ಣಿಟ್ಟು ನೋಡಿ ಕಂಬನಿದುಂಬಿದೆ. ನನ್ನೆದೆಯೊಳಗೆ ಸಾಬಿ ಸಾಬಯ್ಯ ಆದದ್ದು, ಈ ಗುರುರಾಜ ಅವನೊಳಗೆ ಗುರವಾ ಆಗಿದ್ದು ಹೇಗೆಂದು ತಿಳಿಯದೆ ಕಾಲನ ಕೈಯೊಳಗೆ ಲೀನವಾಗಿದ್ದೆ. ಲೀನವಾಗುತ್ತಲೇ ತಡೆಯದ ನೋವಿನ ಕಡಲೊಂದು ಕಾಲುಸೋಕಿದಂತಾಗಿ ಅವನ ನಡೆದ ಹಾದಿಗೆ ನನ್ನ ಹೆಜ್ಜೆಗಳು ಮುಂದಡಿಯಿಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT