ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ಸಂಗೀತ ಕಲೆಗಿದೆ ಅಶಾಂತಿ ಹಿಮ್ಮೆಟ್ಟಿಸುವ ಶಕ್ತಿ

ನುಡಿಸಿರಿಗೆ ಚಾಲನೆ ನೀಡಿದ ಸಾಹಿತಿ ಡಾ. ವೀಣಾ ಶಾಂತೇಶ್ವರ
Last Updated 26 ನವೆಂಬರ್ 2015, 19:32 IST
ಅಕ್ಷರ ಗಾತ್ರ

ವನಜಾಕ್ಷಿ ಶ್ರೀಪತಿ ಭಟ್ ವೇದಿಕೆ (ಪುತ್ತಿಗೆ): ಕರಾವಳಿ ಭಾಗದ ಸಾಂಸ್ಕೃತಿಕ ನಗರಿ ಮೂಡುಬಿದಿರೆಯಲ್ಲಿ ಗುರುವಾರ ಕನ್ನಡ ನಾಡು ನುಡಿ ಸಂಸ್ಕೃತಿಯ ನಾಲ್ಕು ದಿನಗಳ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2015ಕ್ಕೆ ಅದ್ಧೂರಿ ಚಾಲನೆ ಸಿಕ್ಕಿತು.

ಸಾಂಸ್ಕೃತಿಕ ಮೆರವಣಿಗೆಯಿಂದ ಆರಂಭಗೊಂಡ ಅಕ್ಷರ ಜಾತ್ರೆಯಲ್ಲಿ ನಾಡಗೀತೆ, ರೈತಗೀತೆ, ವಂದೇ ಮಾತರಂ ಮತ್ತು ದೇಶಭಕ್ತಿ ಗೀತೆಗಳ ಗಾಯನವೂ ಹೊಸತನವನ್ನು ತೋರಿಸಿದವು. ಹಾಡಿಗೆ ತಕ್ಕಂತೆ ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಜನರು ಕನ್ನಡ ಧ್ವಜ, ಹಸಿರು ಧ್ವಜ ಮತ್ತು ತ್ರಿವರ್ಣ ಧ್ವಜವನ್ನು  ಕೈಯಲ್ಲಿ ಹಾರಿಸಿದರು. ಜ್ಯೋತಿ ಬೆಳಗಿಸಿ, ಭತ್ತದ ತೆನೆಗೆ ಹಾಲು ಹಾಕುವ ಮೂಲಕ ಸಾಹಿತಿ ಡಾ. ವೀಣಾ ಶಾಂತೇಶ್ವರ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಸಾಹಿತ್ಯ-ಸಂಗೀತ ಹಾಗೂ ಇತರ ಲಲಿತ ಕಲೆಗಳು ಮನುಷ್ಯನ ವ್ಯಕ್ತಿತ್ವವನ್ನು ಪರಿಷ್ಕರಿಸುವ, ಮನಸ್ಸನ್ನು ಪರಿಶುದ್ಧಗೊಳಿಸುವ ಮತ್ತು ಅವನನ್ನು ದೈವತ್ವದೆಡೆಗೆ ಕರೆದೊಯ್ಯುವ ಸಾಧನಗಳಾಗಿವೆ. ಇಂದಿನ ದಿನಗಳಲ್ಲಿ ಎಲ್ಲೆಡೆ ತಾಂಡವವಾಡುತ್ತಿರುವ ಅಶಾಂತಿ, ಅಸಹನೆ, ಅಸಹಿಷ್ಣುತೆ ಇತ್ಯಾದಿ ಅನಿಷ್ಟಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸುವ ಮಾನಸಿಕ ಸ್ಥೈರ್ಯ ಸಾಹಿತ್ಯ-ಸಂಗೀತ-ಕಲೆ ಇವುಗಳಿಂದಲೇ ಸಿಗುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಮುಖ್ಯವೆನಿಸಿವೆ' ಎಂದರು.

‘ದೇಶದಲ್ಲಿ ಈ ಅಸಹಿಷ್ಣುತೆ ಹೊಸದಲ್ಲ, ಅದು 1947 ರಿಂದಲೂ ಇದೆ. ಈ ಅಸಹಿಷ್ಣುತೆಯ ವಿರುದ್ಧದ ಹೋರಾಟವು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸುವುದು ಸರಿಯಲ್ಲ' ಎಂದು ಈಚೆಗೆ ಚಿತ್ರನಟ ಕಮಲಹಾಸನ್ ಹೇಳಿದ್ದು ಸಹ ವಿಚಾರ ಯೋಗ್ಯವಾಗಿದೆ. ಅಸಹಿಷ್ಣುತೆ ಈಗ ಕೇವಲ ನಮ್ಮ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ನಾಗರಿಕತೆಗೇ ಒಂದು ಕಳಂಕವಾಗಿತ್ತು. ಅಸಹಿಷ್ಣುತೆಯನ್ನು-ಭಯೋತ್ಪಾದನೆಯನ್ನು ದಿಟ್ಟವಾಗಿ ಎದುರಿಸಿ ಮಾನವೀಯ ಮೌಲ್ಯಗಳನ್ನು ಪುನರ್‌ಸ್ಥಾಪಿಸಲು ಇಡೀ ಜಗತ್ತೇ ಒಂದಾಗುವ ಅವಶ್ಯಕತೆ ಇದೆ ಎಂದು ಜಿ 20 ಶೃಂಗಸಭೆಯಲ್ಲಿ ಜಗತ್ತಿನ ಮುಂದಾಳುಗಳು ಒಮ್ಮತದಿಂದ ಘೋಷಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಾನು ಯಾವಾಗಲೂ ಆಶಾವಾದಿ. ‘ನುಡಿಸಿರಿ’ಯಂತಹ ಕಾರ್ಯಕ್ರಮಗಳು ನಮ್ಮಲ್ಲಿ ಸೌಹಾರ್ದ ಭಾವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಪ್ರಯತ್ನಗಳಾಗಿವೆ' ಎಂದು ಹೇಳಿದರು.

‘ಕನ್ನಡ ಕಟ್ಟುವ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಈಗ ವೇದಿಕೆ ಸಿದ್ಧವಾಗಿದೆ. ಆದರೆ ಈ ಸಾಮಾಜಿಕ ಜಾಲತಾಣದಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾಹುತಗಳೂ ನಡೆಯುವುದು ಸಾಧ್ಯ. ಇತ್ತೀಚೆಗೆ ಫೇಸ್‌ಬುಕ್, ಟ್ವಿಟರ್, ಮೊಬೈಲ್ ಇತ್ಯಾದಿಗಳ ದುರುಪಯೋಗದಿಂದ ಅನೇಕ ದುರ್ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ಮಾಧ್ಯಮ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಎಚ್ಚರಿಕೆಯಿಂದ, ವಿವೇಕದಿಂದ ಬಳಸುವುದು ಅವಶ್ಯವಿದೆ’ ಎಂದು ಹೇಳಿದರು.

ಸಾಹಿತಿ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ, ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತಿತರ ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT