ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್ ಬರೀ ‘ಮುಖವಾಡ’

ಸೋನಿಯಾ, ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಾಕೊಯ್ಜನ್‌/ ನೌಗಾಂವ್‌ (ಅಸ್ಸಾಂ) (ಪಿಟಿಐ): ‘ತಾಯಿ, ಮಗ ನಿರ್ಧಾರ ಕೈಗೊಳ್ಳುವವರು; ಮನಮೋಹನ್‌ ಸಿಂಗ್‌ ಕೇವಲ ಮುಖವಾಡ ಎಂಬುದನ್ನು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಪ್ರಧಾನಿಯವರ ಮಾಧ್ಯಮ  ಸಲಹೆಗಾರರಾಗಿದ್ದ ಸಂಜಯ ಬಾರು ಅವರ ಪುಸ್ತಕ ಇದನ್ನು ಬಹಿರಂಗ ಪಡಿಸಿದೆ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ  ವಿರುದ್ಧ ವಾಗ್ದಾಳಿ ನಡೆಸಿದರು.

‘ಪ್ರಧಾನಿಯ ಅಧಿಕಾರ ಯಾರ ಕೈಯಲ್ಲಿತ್ತು ಎಂಬುದು ಬಾರು ಅವರ ಪುಸ್ತಕದಲ್ಲಿ ಸ್ಪಷ್ಟವಾಗಿದೆ. ಮನಮೋಹನ್‌ ಸಿಂಗ್‌ ಅವರಿಗೆ ಮಹತ್ವ ಇರಲಿಲ್ಲ. ಅದಕ್ಕಾಗಿ ತಾಯಿ ಮತ್ತು ಮಗ ಸರಿಯಾದ ಬೆಲೆ ತೆರಬೇಕು’ ಎಂದು ಕಾಕೊಯ್ಜನ್‌ನಲ್ಲಿ ಶನಿವಾರ ನಡೆದ ರ್‍್ಯಾಲಿಯಲ್ಲಿ ಮೋದಿ ಹೇಳಿದರು.

ಭಾವನಾತ್ಮಕ ಭಾಷಣ: ಇದರ ನಡುವೆಯೇ, ಅತ್ತ ಅಮೇಠಿಯಲ್ಲಿ  ಸೋನಿಯಾ ಅವರು  ಭಾವನಾತ್ಮಕ ಭಾಷಣದ ಮೂಲಕ ಮಗನಿಗಾಗಿ ಮತ ಯಾಚಿಸಿದರೆ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರಾಹುಲ್‌ ಅವರು ‘ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಭಾಗಿ­ಯಾ
ದವರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಕ್ಷಿಸುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಒಂದೇ ದಿನ ಮೋದಿ– ರಾಹುಲ್‌ ರ್‍್ಯಾಲಿ: ‘ಮಾಧ್ಯಮದ ಮಿತ್ರರು ನಾವಿಬ್ಬರು (ಮೋದಿ– ರಾಹುಲ್‌) ಒಂದೇ ಕ್ಷೇತ್ರದಲ್ಲಿ ಒಂದೇ ದಿನ ಮುಖಾಮುಖಿಯಾಗಲಿ ಎಂದು ಬಯಸಿದ್ದರು. ಅದು ಇಲ್ಲಿ ಸಾಧ್ಯವಾಗಿದೆ’ ಎಂದು  ನವಗಾಂವ್‌ನಲ್ಲಿ ನಡೆದ ರ್‍್ಯಾಲಿಯಲ್ಲಿ ಮೋದಿ ಹೇಳಿದರು.

‘ಜನರು ಯಾರ ಪರವಾಗಿದ್ದಾರೆ ಎಂಬುದನ್ನು ಈಗ ಅವರೇ (ಮಾಧ್ಯಮ) ವಸ್ತುನಿಷ್ಠವಾಗಿ ನಿರ್ಧರಿಸಲಿ. ರಾಹುಲ್‌ ಅವರು ಇಲ್ಲಿಗೂ ಬಂದಿದ್ದರು. ಈ ಹಿಂದಿನ ರ್‍ಯಾಲಿಗಳಲ್ಲಿ ಮಾಡಿದ ಭಾಷಣವನ್ನೇ ಇಲ್ಲಿಯೂ ಹೇಳಿ ಹೋದರು, ಹೊಸತೇನೂ ಇಲ್ಲ. ಅವರಿಗೆ ವೈವಿಧ್ಯಮಯ ಭಾಷಣಗಳನ್ನು ಬರೆದುಕೊಡುವವರ ಕೊರತೆ ಇದೆ. ಇಂತಹ ಭಾಷಣಗಳು ಅವರಿಗೆ ಬೇಕಿದ್ದರೆ ನನ್ನನ್ನು ಇಲ್ಲವೆ ನಮ್ಮ ಪಕ್ಷದಲ್ಲಿ ಯಾರನ್ನಾದರು ಸಂಪರ್ಕಿಸಲಿ’ ಎಂದು ಲೇವಡಿ ಮಾಡಿದರು.

ಮಮತಾ ವಿರುದ್ಧ ರಾಹುಲ್‌ ಆರೋಪ:  (ಮಾಲ್ಡಾ ವರದಿ): ಬಹುಕೋಟಿ ರೂಪಾಯಿಗಳ ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ಭಾಗಿ­ಯಾದವರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಕ್ಷಿಸುತ್ತಿದೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಆರೋಪಿಸಿದರು.

ಪ್ರಧಾನಿ ನಾಯಕ, ವಾಚಕನಲ್ಲ– ಜೇಟ್ಲಿ (ಅಮೃತಸರ ವರದಿ): ‘ಪ್ರಧಾನಿ (ಸಿಂಗ್‌) ಅವರು ಮಂಜುಗಡ್ಡೆ ಮೇಲೆ ನಡೆದಾಡಿದರು.  ಹೀಗಾಗಿ ಅವರ ಹೆಜ್ಜೆ ಗುರುತುಗಳೇ ಇಲ್ಲ. ಪ್ರಧಾನಿ ದೇಶದ ನಾಯಕನಾಗಿರಬೇಕೇ ಹೊರತು ವಾಚಕನಾಗಿಯಲ್ಲ’ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್‌ ಜೇಟ್ಲಿ ಅವರು ಸಿಂಗ್ ಅವರ ಕಾಲೆಳೆದಿದ್ದಾರೆ.

‘ಪ್ರಧಾನಿ ಅವರು ಭಾಷಣಗಳನ್ನು ಮಾಡುತ್ತಾರೆ. ಆದರೆ, ಜನರು ಅದನ್ನು ಕೇಳಿಸಿಕೊಳ್ಳುವುದಿಲ್ಲ. ಇಂತಹ ಭಾಷಣಗಳು ಜನರಿಗೆ ನೆನಪಿನಲ್ಲಿರುವುದೂ ಇಲ್ಲ ಅಥವಾ ಆ ಬಗ್ಗೆ ಹೆಚ್ಚು ಚರ್ಚಿಸುವುದೂ ಇಲ್ಲ. ಪ್ರಧಾನಿ ಅವರ ಸಮರ್ಥನೆಗೆ ನಿಂತಿರುವ ಪ್ರಧಾನಮಂತ್ರಿಗಳ ಕಾರ್ಯಾಲಯದ (ಪಿಎಂಒ) ನಿಲುವು ಸರಿಯಾಗಿಯೇ ಇದೆ. ಏಕೆಂದರೆ, ಪ್ರಧಾನಿ ಅವರು ಮಾಡಿದ ಭಾಷಣದ ಅಂಕಿಅಂಶಗಳನ್ನು ನೀಡಿ ಅವರನ್ನು ಭಾಷಣಕಾರನೆಂದು ಸಮರ್ಥವಾಗಿ ಬಿಂಬಿಸಿದೆ’ ಎಂದು ಜೇಟ್ಲಿ ಅವರು ಅಂತರ್ಜಾಲದ ತಮ್ಮ ಬ್ಲಾಗ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಮಗನನ್ನು ನಿಮ್ಮ ಉಡಿಗೆ ಹಾಕಿದ್ದೇನೆ: ಸೋನಿಯಾ
ಅಮೇಠಿ:
‘ನನ್ನ ಅತ್ತೆ ಇಂದಿರಾ ಗಾಂಧಿ ಅವರು ತಮ್ಮ ಪುತ್ರನನ್ನು (ರಾಜೀವ್‌್ ಗಾಂಧಿ) ನಿಮಗೆ ಕೊಟ್ಟಿದ್ದರು. ಈಗ ನಾನು ಕೂಡ ನನ್ನ ಪುತ್ರನನ್ನು (ರಾಹುಲ್‌ ಗಾಂಧಿ) ನಿಮ್ಮ ಉಡಿಗೆ ಹಾಕಿದ್ದೇನೆ’ ಎಂದು ಸೋನಿಯಾ ಗಾಂಧಿ ಅವರು ಚುನಾವಣಾ ರ್‍್ಯಾಲಿ ಭಾವನಾತ್ಮಕ­ವಾಗಿ ಮತಯಾಚನೆ ಮಾಡಿದರು.

‘ಗಾಂಧಿ ಕುಟುಂಬದ ಕರ್ಮಭೂಮಿಯಲ್ಲಿ ರಾಹುಲ್‌ ನಿಷ್ಠೆಯಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾನೆ’ ಎಂದರು.
‘ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿರು­ವವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು  ಸೋನಿಯಾ ಅವರು ಮೋದಿ ಅವರ ಟೀಕೆಗೆ ತಿರುಗೇಟು ನೀಡಿದರು.

‘ಹಗರಣಗಳಲ್ಲಿ ಭಾಗಿಯಾದವರ ವಿರುದ್ಧ ಕಾಂಗ್ರೆಸ್‌ ತ್ವರಿತ ಕ್ರಮ ತೆಗೆದುಕೊಂಡಿದೆ.  ಆದರೆ, ಬಿಜೆಪಿ ತನ್ನ ಪಕ್ಷದ ಭ್ರಷ್ಟರ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT