ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಥೆಟಿಕ್‌ ಟರ್ಫ್‌ ಗಗನಕುಸುಮ...

ಕ್ರೀಡಾ ಹಾಸ್ಟೆಲ್‌ ಕಥೆ– ವ್ಯಥೆ– ಕೊಡಗು
Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹಲವು ಹೆಸರಾಂತ ಹಾಕಿ ಪಟುಗಳನ್ನು ನೀಡಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ವತಿಯ ಕ್ರೀಡಾ ಹಾಸ್ಟೆಲ್ ಕುಶಾಲನಗರಕ್ಕೆ ಸಮೀಪದ ಕೂಡಿಗೆ ಎಂಬ ಊರಿನಲ್ಲಿದೆ.  ಕೂಡಿಗೆಯಲ್ಲಿ ಹಾಕಿಯ ಮೂಲಪಾಠಗಳನ್ನು ಕಲಿತ ಹಲವು ಕಿರಿಯರು ನಂತರ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಆದರೆ ಈ ಹಾಸ್ಟೆಲ್‌ನಲ್ಲಿ ಹಾಕಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಇವತ್ತಿಗೂ ಸಿಂಥೆಟಿಕ್‌ ಟರ್ಫ್‌ನಲ್ಲಿ ಆಡುವ ಭಾಗ್ಯ ಇಲ್ಲ.

ಸಿಂಥೆಟಿಕ್‌ ಟರ್ಫ್‌ ಹಾಕಿ ಮೈದಾನ ಮಾಡಬೇಕೆಂದು ಜಾಗವನ್ನು ಗುರುತಿಸಲಾಗಿದೆ. ಅಲ್ಲದೇ, ಸುಮಾರು ₨ 3 ಕೋಟಿ ರೂಪಾಯಿಯಷ್ಟು ಹಣವನ್ನು ಕೂಡ ಮೀಸಲು ಇಡಲಾಗಿದೆ. ಎರಡು ವರ್ಷಗಳ ಹಿಂದೆ ಗುದ್ದಲಿ ಪೂಜೆಯನ್ನೂ ನೆರವೇರಿಸಲಾಗಿತ್ತು. ಆದರೆ, ಇದುವರೆಗೆ ನಿರ್ಮಾಣ ಕಾಮಗಾರಿ ಮಾತ್ರ ಆರಂಭವಾಗಿಲ್ಲ !

ಅಂತರರಾಷ್ಟ್ರೀಯ ಮಟ್ಟದ ಎಲ್ಲ ಹಾಕಿ ಟೂರ್ನಿಗಳನ್ನು ಸಿಂಥೆಟಿಕ್‌ ಟರ್ಫ್‌ ಮೈದಾನದಲ್ಲಿ ನಡೆಸಲಾಗುತ್ತಿದೆ. ಮಣ್ಣಿನ ಮೈದಾನದಲ್ಲಿ ಆಡುವುದಕ್ಕೂ  ಸಿಂಥೆಟಿಕ್‌ ಟರ್ಫ್‌ ಹಾಸಿರುವ ಮೈದಾನದಲ್ಲಿ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಳವೆಯಲ್ಲಿಯೇ ಮಕ್ಕಳು ಸಿಂಥೆಟಿಕ್‌ ಹಾಸಿನ ಮೇಲೆ ಆಡಿ ಅಭ್ಯಾಸ ನಡೆಸಿದರೆ ನಂತರದ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಎತ್ತರದಿಂದ ಎತ್ತರಕ್ಕೆ ಹೋಗಲು
ಹೆಚ್ಚು ಅನುಕೂಲವಾಗುತ್ತದೆ. 

ಹೀಗಾಗಿ ಸಿಂಥೆಟಿಕ್‌ ಟರ್ಫ್‌ ಹಾಸಬೇಕೆಂದು  ಹಲವು ವರ್ಷಗಳಿಂದ ಈ ಹಾಸ್ಟೆಲ್‌ನ ಕ್ರೀಡಾಪಟುಗಳು ಒತ್ತಾಯಿಸುತ್ತಿದ್ದಾರೆ.
ಶಾಲೆಯ ಆಡಳಿತ ಮಂಡಳಿಯು ಈ ಕುರಿತು ಹಲವು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಟರ್ಫ್‌ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ವಿದ್ಯಾರ್ಥಿಗಳು ಮಣ್ಣಿನ ಮೈದಾನದಲ್ಲಿಯೇ ಹಾಕಿ ಅಭ್ಯಾಸ ನಡೆಸುತ್ತಿದ್ದಾರೆ.

ಇನ್ನೊಂದು ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ ಇದೆ.  ಪಕ್ಕದಲ್ಲಿ ಒಳಾಂಗಣ ಕ್ರೀಡಾಂಗಣವಿದೆ. ಇಲ್ಲಿ ಜಿಮ್ನಾಸಿಯಂ ಕೂಡಾ ಇದೆ.
ಶಾಲೆಯ ಆವರಣದಲ್ಲಿ ಎರಡು ಬೋರ್‌ವೆಲ್‌ಗಳಿವೆ, ನೀರಿಗೆ ತೊಂದರೆ ಇಲ್ಲ. ಸೋಲಾರ್‌ ಬಳಕೆ ಮಾಡಲಾಗುತ್ತಿದೆ. ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿವೆ. 

ಹಾಕಿ ತರಬೇತಿ ನೀಡಲು ಇಬ್ಬರು ಕೋಚ್‌ಗಳು ಇದ್ದಾರೆ. ಜಿಮ್ನಾಸ್ಟಿಕ್‌ ಹಾಗೂ ಅಥ್ಲೆಟಿಕ್ಸ್‌ ನಲ್ಲಿ ತರಬೇತಿ ನೀಡಲು ತಲಾ ಒಬ್ಬರು ತರಬೇತುದಾರರು ಇದ್ದಾರೆ.  ಬೇರೆ ಜಿಲ್ಲೆಗಳ ಟೂರ್ನಿಗಳಲ್ಲಿ ಭಾಗವಹಿಸಲು ತೆರಳಲು ಅನುಕೂಲವಾಗಲೆಂದು ಶಾಲೆಗೆ ಪ್ರತ್ಯೇಕವಾದ ಮಿನಿಬಸ್‌ ನೀಡಲಾಗಿದೆ. ಹೀಗೆ ಈ ಶಾಲೆಯಲ್ಲಿ ಕೊರತೆಗಳು ಕಡಿಮೆ.

ಸುರಕ್ಷತೆಗೆ ಹೆಚ್ಚಿನ ಒತ್ತು
ಶಾಲೆಯ ಆವರಣದೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರವೇಶ ದ್ವಾರ ಹಾಗೂ ಶಾಲೆಯ ಆವರಣದ ಸುತ್ತಮುತ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುಮಾರು 90 ಎಕರೆ ವಿಸ್ತಾರವಾದ ಜಾಗದಲ್ಲಿ ಕ್ರೀಡಾ ಶಾಲೆ ಮತ್ತು ಮೈದಾನಗಳು ಇವೆ.   ಒಟ್ಟು 115 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೂ ಹೆಚ್ಚು ಗಮನ ಹರಿಸಿದ್ದು, ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100ರಷ್ಟು  ಸಾಧನೆ ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT