ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮೇಶ್ವರ ಕಾಯಕ ಪುರುಷ

ಭೋವಿ ಸಮಾವೇಶದಲ್ಲಿ ರಾಘವೇಂದ್ರ ಬಣ್ಣನೆ
Last Updated 18 ಫೆಬ್ರುವರಿ 2013, 9:42 IST
ಅಕ್ಷರ ಗಾತ್ರ

ಶಿವಮೊಗ್ಗ: ಸಿದ್ಧರಾಮೇಶ್ವರ ಅವರು 12ನೇ ಶತಮಾನದಲ್ಲೇ ನೀರಿನ ಸಂರಕ್ಷಣೆ ಮತ್ತು ಕೆರೆ ಮತ್ತು ಭಾವಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದ ಕಾಯಕ ಪುರುಷ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಭೋವಿ ಸಮಾಜ ಹಮ್ಮಿಕೊಂಡಿದ್ದ ಗುರು  ಸಿದ್ಧರಾಮೇಶ್ವರರ 840ನೇ ಜಯಂತಿ ಹಾಗೂ ಜಿಲ್ಲಾಮಟ್ಟದ ಭೋವಿ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.

ಇಂದು ರಾಜ್ಯದಾದ್ಯಂತ ಬರ ಪರಿಸ್ಥಿತಿ ಇದೆ. ನೀರು ಮತ್ತು ವಿದ್ಯುತ್ ಕ್ಷಾಮ ಉಂಟಾಗಿದೆ. ಸರ್ಕಾರಕ್ಕೆ ಬರ ಸಮಸ್ಯೆ ಎದುರಿಸಲು ಕಷ್ಟವಾಗುತ್ತಿದೆ. ಆದರೆ, ಶ್ರಮ ಸಂಸ್ಕೃತಿ ಮೂಲಕ 12ನೇ ಶತಮಾನದಲ್ಲಿ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿವಾರಿಸಿದ ಶರಣ ಸಿದ್ಧರಾಮೇಶ್ವರ ಎಂದರು.

ಭೋವಿ ಸಮಾಜಕ್ಕೆ ಅಗತ್ಯವಿರುವ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. 
ಪ್ರಾಧ್ಯಾಪಕ ಕೆ. ಓಂಕಾರಪ್ಪ ಮಾತನಾಡಿ,  ಸಿದ್ಧರಾಮೇಶ್ವರ ಮತ್ತು ಬಸವಣ್ಣ, ಜಾತಿ ಹೋಗಲಾಡಿಸಲು ಹೋರಾಡಿದರು.

ಆದರೆ, ಇಂದು ಎಲ್ಲ ಕ್ಷೇತ್ರವನ್ನು ಜಾತಿ ಮೂಲಕ ನಿಯತ್ರಿಸಲಾಗುತ್ತಿದೆ. ಸಿದ್ಧರಾಮೇಶ್ವರ ಕೇವಲ ಕರ್ಮಯೋಗಿ ಆಗಿರದೇ, ಶಿವಯೋಗಿ, ಅನುಭಾವದಿಂದ 60 ಸಾವಿರಕ್ಕೂ ಹೆಚ್ಚು ವಚನ ರಚಿಸಿದ್ದಾರೆ ಎಂದರು.

ಇದಕ್ಕೂ ಮುನ್ನ, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದಿಂದ ಸೈನ್ಸ್ ಮೈದಾನದವರಗೆ ಮೆರವಣಿಗೆ ನಡೆಸಲಾಯಿತು. ಇಮ್ಮಡಿ ಸಿದ್ಧಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವ ಬಸವಣ್ಯಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಭೋವಿ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಹನುಮಂತಪ್ಪ, ಎಂ. ಪುರುಷೋತ್ತಮ್, ಕೆ. ಸಿದ್ದಪ್ಪ, ಜಯಶೀಲಪ್ಪ, ದಾಸಪ್ಪ ಇದ್ದರು.


`ಸದಾಶಿವ ಆಯೋಗದ ವರದಿ ಎಂಬ ಗರ ಬಡಿದಿದೆ'
ನಮ್ಮ ಸಮಾಜಕ್ಕೆ ದೆವ್ವ ಮೆಟ್ಟಿಕೊಂಡಿದ್ದು, ಸದಾಶಿವ ಆಯೋಗದ ವರದಿ ಎಂಬ ಗರಬಡಿಯುವ ಭಯದಲ್ಲಿ ಸಮಾಜ ಇದೆ ಎಂದು ಇಮ್ಮಡಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಜಾರಿಯಾದರೆ ನಮ್ಮ ಸಮಾಜಕ್ಕೆ ಮೀಸಲಾತಿ ಪ್ರಮಾಣ ಕಡಿಮೆ ಆಗಲಿದ್ದು, ಸಮಾಜ ಪ್ರಾಣ ತೆಗೆದ ಶರೀರದಂತೆ ಆಗುತ್ತದೆ ಎಂದು ಹೇಳಿದರು.

ಜಾತಿ ಸಮಾವೇಶಗಳು ಹೆಚ್ಚುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಜಾತಿ ಸಮಾವೇಶ ಆಯೋಜಿಸದಿದ್ದರೆ ಜನ ಸೇರುವುದಿಲ್ಲ. ಜನ ಸೇರದಿದ್ದರೆ ರಾಜಕಾರಣಿಗಳಿಗೆ ನಮ್ಮಂತಹ ಸಮಾಜದ ಅಸ್ತಿತ್ವ ತಿಳಿಯುವುದಿಲ್ಲ ಎಂದರು.

ಇಂದು ಅಧಿಕಾರದಿಂದ ಲೋಕ ಕಲ್ಯಾಣವಾಗುತ್ತಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮಾಜದವರು ಮುಖ್ಯಮಂತ್ರಿಯಾಗಿ ನಮ್ಮನ್ನು ಆಳುತ್ತಿದ್ದಾರೆ. ಏಕೆಂದರೆ ಅವರಲ್ಲಿರುವ ಒಗ್ಗಟ್ಟು, ಕುರುಬ ಸಮಾಜದವರು ಸಹ ಕಳೆದ ಚುನಾವಣೆಯಲ್ಲಿ 6-7 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಾಹ್ಮಣ ಸಮಾಜದವರು ಅವರಲ್ಲಿರುವ ಬುದ್ದಿವಂತಿಕೆಯಿಂದ 4-5 ಜನರು ಮಂತ್ರಿಗಳಾಗುತ್ತಾರೆ. ಹೀಗಾಗಿ, ಭೋವಿ ಸಮಾಜದವರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಮುಂದಿನ ಚುನಾವಣೆ ವೇಳೆ ಅಭ್ಯರ್ಥಿಗಳನ್ನು ತುಲನಾತ್ಮಕವಾಗಿ ಆಯ್ಕೆ ಮಾಡಬೇಕಿದೆ. ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂದು ಗುರುಪೀಠ ಹಾಗೂ ಸಮಾಜದ ಪ್ರಮುಖರ ಸಮ್ಮುಖದಲ್ಲಿ ನಿರ್ಧರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT