ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ತಾರೆಯರ ರಾಜಕಾರಣಕ್ಕೆ ಅಗ್ನಿಪರೀಕ್ಷೆ

Last Updated 9 ಮೇ 2016, 19:53 IST
ಅಕ್ಷರ ಗಾತ್ರ

ಕೊಲ್ಲಂ: ದಕ್ಷಿಣದ ರಾಜ್ಯಗಳ ರಾಜಕಾರಣದಲ್ಲಿ ಸಿನಿಮಾ ತಾರೆಯರಿಗೆ ಹೆಚ್ಚಿನ ಮಹತ್ವ ಇದೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಇಂದಿಗೂ ತಾರೆಯರಿಗೆ ಮಣೆ ಹಾಕುವ ಪ್ರವೃತ್ತಿ ಇದೆ.

ಸಿನಿಮಾ ನಟಿಯಾಗಿದ್ದ ಜಯಲಲಿತಾ ಈಗ ತಮಿಳುನಾಡಿನ ಮುಖ್ಯಮಂತ್ರಿ. ಮತ್ತೊಬ್ಬ ನಟ  ವಿಜಯಕಾಂತ್‌ ತಮ್ಮದೇ ಪಕ್ಷ ಕಟ್ಟಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ರಜನಿಕಾಂತ್‌ ರಾಜಕೀಯಕ್ಕೆ ಬರಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ.

ನಮ್ಮ ರಾಜ್ಯದಲ್ಲಿಯೂ ರಾಜ್‌ಕುಮಾರ್‌ ರಾಜಕೀಯಕ್ಕೆ ಬರಬೇಕು ಎಂಬ ಬೇಡಿಕೆ ಅವರು ಸಾಯುವವರೆಗೂ  ಇತ್ತು. ಆದರೆ ಕೇರಳದ ಜನರು ಸಿನಿಮಾಪ್ರಿಯರಾದರೂ ತಾರೆಯರಿಗೆ ರಾಜಕೀಯದಲ್ಲಿ ಅವಕಾಶ ಕೊಟ್ಟವರಲ್ಲ. ಸಿನಿಮಾ ತಾರೆಯರು ರಾಜಕೀಯಕ್ಕೆ ಬಂದಿರುವುದೂ ಕಡಿಮೆಯೇ. ಬಂದವರಿಗೂ ಅಂತಹ ಮಹತ್ವ ಸಿಕ್ಕಿಲ್ಲ.

ಆದರೆ, ಮಲಯಾಳದ ಜನಪ್ರಿಯ ನಟ ಮತ್ತು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಇನ್ನೊಸೆಂಟ್‌ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಬೆಂಬಲದ ಸ್ವತಂತ್ರ ಅಭ್ಯರ್ಥಿಯಾಗಿ ಚಾಲಕ್ಕುಡಿ ಕ್ಷೇತ್ರದಿಂದ ಗೆದ್ದರು. ಇದು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೊಸ ಪ್ರವೃತ್ತಿಯನ್ನೇ  ಸೃಷ್ಟಿಸಿದೆ. ಸಿನಿಮಾ ರಂಗದ ಹಲವರು ರಾಜಕೀಯದಲ್ಲಿ ಅದೃಷ್ಟ  ಪರೀಕ್ಷೆಗೆ ಹೊರಟಿದ್ದಾರೆ.

ಕಳೆದ ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ಸಿನಿಮಾರಂಗದಲ್ಲಿದ್ದು ಜನಪ್ರಿಯರಾಗಿರುವ ಮುಕೇಶ್‌ ಸಿಪಿಎಂ ಅಭ್ಯರ್ಥಿಯಾಗಿ ಮತ್ತು ಜಗದೀಶ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಲಿ ಶಾಸಕ ಮತ್ತು ನಟ ಕೆ.ಬಿ. ಗಣೇಶ್‌ ಕುಮಾರ್‌  ಹಾಗೂ ನಟ ಬಿಜೆಪಿ ಅಭ್ಯರ್ಥಿ ಭೀಮನ್‌ ರಘು ವಿರುದ್ಧ ಜಗದೀಶ್‌ ಸೆಣಸಬೇಕಿದೆ.

ಇಬ್ಬರು ಸಿನಿಮಾ ನಿರ್ದೇಶಕರೂ ಸ್ಪರ್ಧಿಸುತ್ತಿದ್ದಾರೆ. ಹಲವು ನಟ, ನಟಿಯರು ಪ್ರಚಾರ ಕಣಕ್ಕೂ ಧುಮುಕಿದ್ದಾರೆ.ತಾರೆಯರನ್ನು ಬಳಸಿಕೊಂಡು ಜನರ ಮನ ಸೆಳೆಯಬಹುದು ಎಂಬ ತಂತ್ರ ಮೊದಲು ರೂಪಿಸಿದ್ದು ಬಿಜೆಪಿ. ರಾಷ್ಟ್ರಪ್ರಶಸ್ತಿ ವಿಜೇತ ನಟ ಸುರೇಶ್‌ ಗೋಪಿ ಅವರನ್ನು  ಕಳೆದ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಜೆಪಿ ಬಯಸಿತ್ತು.

ಆದರೆ ಗೋಪಿ ಸ್ಪರ್ಧಿಸಲು ಮನಸು ಮಾಡಲಿಲ್ಲ. ಇತ್ತೀಚೆಗೆ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಗಿದೆ. ಗೋಪಿ  ಈಗ ಕೇರಳದ ರಣ ಬಿಸಿಲಿನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತ ಬೆವರು ಹರಿಸುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದಿರುವ ಇನ್ನೊಬ್ಬ ನಟ ಸಲೀಂಕುಮಾರ್‌ ಯುಡಿಎಫ್‌ ಪರ ಪ್ರಚಾರದಲ್ಲಿ ನಿರತರಾಗಿದ್ದರೆ ಹಲವು ನಟ, ನಟಿಯರು ತಮ್ಮ ತಮ್ಮ ಒಲವಿನ ಪಕ್ಷದ ಪರ ಮತ ಯಾಚಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ‘ಬಿಜೆಪಿಯ ಐವರು ಶಾಸಕರು ಇದ್ದಿದ್ದರೆ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರನ್ನು ವಿಧಾನಸಭೆಯಿಂದ ಹೊರಗೆ ದಬ್ಬುತ್ತಿದ್ದೆವು’ ಎಂದು ಸುರೇಶ್‌ ಗೋಪಿ ಸಿನಿಮಾ ಶೈಲಿಯ ಡೈಲಾಗ್‌ ಹೊಡೆದದ್ದು ಬಹಳ ಜನರಿಗೆ ಇಷ್ಟ ಆಗಿಲ್ಲ.

‘ಸ್ವಲ್ಪವಾದರೂ ಜವಾಬ್ದಾರಿ ಇರುವರು ಹೇಳುವಂತಹ ಮಾತೇ ಅಲ್ಲ ಇದು’ ಎಂದು ಸಿಪಿಎಂ ಕಾರ್ಯಕರ್ತ ಮೋಹನ್‌ ಅಭಿಪ್ರಾಯಪಡುತ್ತಾರೆ. ರಾಜಕೀಯಕ್ಕೆ ಸಂಬಂಧಿಸಿ ಕೇರಳದ ಜನ ಅತ್ಯಂತ ಸೂಕ್ಷ್ಮವಾಗಿ ಯೋಚಿಸುತ್ತಾರೆ. ಇಂತಹ ಮಾತು ಜನರಿಗೆ ಇಷ್ಟವಾಗದು ಎಂಬುದು ಅವರ ಭಾವನೆ. ತಮ್ಮದೇ ಪಕ್ಷದ ಬೆಂಬಲದಿಂದ ಗೆದ್ದು  ಲೋಕಸಭಾ ಸದಸ್ಯರಾಗಿರುವ ಇನೊಸೆಂಟ್‌ ಅವರನ್ನು ಟೀಕಿಸಲೂ ಮೋಹನ್‌ ಹಿಂಜರಿಯುವುದಿಲ್ಲ. ‘ಸಿನಿಮಾ ತಾರೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. 

ನಂತರ ಶೂಟಿಂಗ್‌ ಎಂದು ಹೇಳಿಕೊಂಡು ವಿದೇಶಗಳಿಗೆ ಅಥವಾ ಬೇರೆ ಊರುಗಳಿಗೆ ಹೋಗುತ್ತಾರೆ. ಜನರ ಕೈಗೆ ಸಿಗದ ಜನಪ್ರತಿನಿಧಿ ಇದ್ದೇನು ಉಪಯೋಗ ಎಂದು ಅವರು ಪ್ರಶ್ನಿಸುತ್ತಾರೆ.

ತಾರೆಯರು ಸ್ಪರ್ಧಿಸಿದರೆ ಅಥವಾ ಪ್ರಚಾರ ಮಾಡಿದರೆ ಅವರು ತಾರೆಯರು ಎಂಬ ಕಾರಣಕ್ಕೆ ಮತ ಸಿಗದು ಎಂದು ಖಡಾಖಂಡಿತವಾಗಿ ಹೇಳುತ್ತಾರೆ ಅಜಿಕ್ಕೋಡು ಕ್ಷೇತ್ರದ ಸಿಪಿಎಂ ಅಭ್ಯರ್ಥಿ ನಿಕೇಶ್‌ ಕುಮಾರ್‌. ನಿಕೇಶ್‌  ಕುಮಾರ್‌ ಕೇರಳದಲ್ಲಿ ತಾರಾಪಟ್ಟ ಪಡೆದ ಮೊದಲ ಸುದ್ದಿ ನಿರೂಪಕ. ರಿಪೋರ್ಟರ್‌ ಟಿ.ವಿ ಎಂಬ ವಾಹಿನಿಯ ಸಿ.ಇ.ಒ.‘ತಾರೆ ಎಂಬ ಕಾರಣಕ್ಕೆ ನಿಮಗೆ ಟಿಕೆಟ್‌ ನೀಡಿದ್ದಲ್ಲವೇ’ ಎಂದು ಕೇಳಿದರೆ ಅದನ್ನು ಅವರು ಸ್ಪಷ್ಟವಾಗಿ ನಿರಾಕರಿಸುತ್ತಾರೆ. 

ತಮಗೆ ಮಾತ್ರ ಅಲ್ಲ, ಸಿಪಿಎಂನಿಂದ ಸ್ಪರ್ಧಿಸುತ್ತಿರುವ ಮುಕೇಶ್‌ ಅವರಿಗೂ ಸಿನಿಮಾ ನಟ ಎಂಬ ಕಾರಣಕ್ಕೆ ಟಿಕೆಟ್‌ ನೀಡಿದ್ದಲ್ಲ. ಮುಕೇಶ್‌ ಅವರ ತಂದೆ ಒ. ಮಾಧವನ್‌ ನಾಟಕ ತಂಡ ಕಟ್ಟಿ ಸಿಪಿಎಂ ಪರ ನಾಟಕ ಆಡುತ್ತಿದ್ದವರು. ಮುಕೇಶ್‌ ವಿದ್ಯಾರ್ಥಿಯಾಗಿದ್ದಾಗಲೇ ಎಡರಂಗದಪರ ಒಲವು ಬೆಳೆಸಿಕೊಂಡವರು ಎಂದು ಅವರು ಸ್ಪಷ್ಟಪಡಿಸುತ್ತಾರೆ.

‘ನನ್ನ ತಂದೆ ಸ್ವಂತ ಪಕ್ಷ ಕಟ್ಟಿ ಶಾಸಕರಾದವರು. ನಾನು ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದಲ್ಲಿ ಇರುವವನು. ಕೋಮುವಾದ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎಂಬ ಕಾರಣಕ್ಕೆ ರಾಜಕೀಯಕ್ಕೆ ಇಳಿದಿದ್ದೇನೆಯೇ ಹೊರತು ಜನಪ್ರಿಯ ವ್ಯಕ್ತಿ ಎಂಬ ಕಾರಣಕ್ಕೆ ಅಲ್ಲ’ ಎಂಬುದು ಅವರ ಸ್ಪಷ್ಟ ನುಡಿ.

ತಮಗೇನು ಬೇಕು ಎಂಬುದರ ಅರಿವು ಕೇರಳದ ಜನರಿಗೆ ಸ್ಪಷ್ಟವಾಗಿ ಇದೆ. ಹಾಗಾಗಿ ತಾರೆ ಎಂಬ ಕಾರಣಕ್ಕೆ ಇಲ್ಲಿ ರಾಜಕಾರಣ ಮಾಡುವುದು ಸಾಧ್ಯವಿಲ್ಲ ಎಂದು ಅವರು   ಹೇಳುತ್ತಾರೆ. ಕೇರಳದ ಜನ ತಾರೆಯರಿಗೆ ಮಣೆ ಹಾಕುವ ಹೊಸ ರಾಜಕೀಯ ಪ್ರವೃತ್ತಿಗೆ ಮುನ್ನುಡಿ ಬರೆಯಲಿದ್ದಾರೆಯೇ ಎಂಬುದನ್ನು ಫಲಿತಾಂಶವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT