ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಸತ್ವವುಳ್ಳ ಕಹಿ ಹಾಗಲಕಾಯಿ

Last Updated 22 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಹಾಗಲಕಾಯಿ ಎಂದೊಡನೆ ಕೆಲವರ ಮುಖ ಕಿವುಚಿದಂತಾಗುತ್ತದೆ. ಆದರೆ ಇದರ ಔಷಧೀಯ ಗುಣಗಳನ್ನು ಬಲ್ಲವರಿಗೆ ಇದೊಂದು ಸಂಜೀವಿನಿ. ಹಾಗಲಕಾಯಿಯ ವೈಜ್ಞಾನಿಕ ಹೆಸರು ಮೊಮೋರ್ಡಿಕಾ ಚರಾನ್ಷಿಯಾ. (Momordica Charantia) ಇದೊಂದು ಕುಕರ್ ಬಿಟೇಷಿಯಾ ಕುಟುಂಬಕ್ಕೆ ಸೇರಿದ ಬಳ್ಳಿ. ಸಂಸ್ಕೃತದಲ್ಲಿ ಇದನ್ನು ಕರವಲ್ಲಿ, ಅಂಬುವಲ್ಲಕ, ಕ್ರಿಮಿಜ್ಞ ಮತ್ತು ಬೃಹತ್ ವಲ್ಲಿ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಇಂಗ್ಲಿಷ್‌ನಲ್ಲಿ ಬಿಟರ್ ಗಾರ್ಡ್ ಎಂದು, ಹಿಂದಿಯಲ್ಲಿ ಕರೇಲಿ ಅಥವಾ ಕರೇಲಾ ಎಂದೂ, ಮಲಯಾಳದಲ್ಲಿ ಪವೈಕ್ಕ, ಕೈಪಕ್ಕ ಎಂದೂ ತಮಿಳಿನಲ್ಲಿ ಪಿಕಲ್, ವವೈಕ್ಕಿ ಎಂದು ತೆಲುಗಿನಲ್ಲಿ ಕಕರಕೈ ಎಂದೂ, ಕೊಂಕಣಿಯಲ್ಲಿ ಕರಟಿಂ ಎಂದೂ ಕರೆಯುತ್ತಾರೆ. ಇದು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿಯಾಗಿದೆ. ಕಾರಣ ಇದರಲ್ಲಿರುವ ಔಷಧೀಯ ಗುಣ. ಅವು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ.

ಉಪಯೋಗಗಳು
ಮಧುಮೇಹಕ್ಕೆ:
ಪ್ರತಿದಿನ ಬೆಳಿಗ್ಗೆ 30 ಮಿ.ಲೀ. ಅಥವಾ ಉಪಹಾರ ಮತ್ತು ಊಟಕ್ಕೂ ಮುನ್ನ ಮೂರು ಹೊತ್ತು 10ಮಿ.ಲೀ. ಹಾಗಲಕಾಯಿ ರಸವನ್ನು ಸೇವಿಸುವುದರಿಂದ ಮತ್ತು ಹಾಗಲಕಾಯಿಯ ತುಂಡುಗಳನ್ನು ಉಪ್ಪು ಸವರಿಕೊಂಡು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಮೊಸರಿನೊಂದಿಗೆ ಹಾಗಲಕಾಯಿಯನ್ನು ಸೇವಿಸಬಹುದು. ಮಧುಮೇಹದಿಂದ ನರಳುವ ರೋಗಿಗಳು ಹಾಗಲಕಾಯಿಯನ್ನು ಹಸಿಯಾಗಿ ತಿಂದರೆ ಬಹುಪಾಲು ಕಡಿಮೆಯಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಹಾಗಲಕಾಯಿಯ ಕರೇಲಾ ಜ್ಯೂಸ್ ಸಿಗುತ್ತದೆ.

ಕಾಮಾಲೆಗೆ: ಹಾಗಲಗಿಡದ ಬಳ್ಳಿಯ ಎಲೆಗಳಿಂದ ರಸ ತೆಗೆದು 10ಮಿ.ಲೀ. ಅನ್ನು ಕೆಲವು ದಿನಗಳವರೆಗೆ ಪ್ರತಿನಿತ್ಯ ತೆಗೆದುಕೊಳ್ಳಬೇಕು ಅಥವಾ ಹಾಗಲ ಎಲೆಗಳನ್ನು ನುಣ್ಣಗೆ ಅರೆದು ರಸ ಹಿಂಡದೆಯೇ ಹಾಗೆಯೇ ಸೇವಿಸಬೇಕು. ಹಸಿ ಹಾಗಲಕಾಯಿ ಇಲ್ಲವೇ ಎಲೆಯ ರಸವನ್ನು ಸೇವಿಸುವುದರಿಂದ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಗುಣವಾಗುತ್ತವೆ.

ಮೂಲವ್ಯಾಧಿಗೆ: ಹಾಗಲಕಾಯಿಯ ರಸವನ್ನು ಜೇನುತುಪ್ಪದೊಂದಿಗೆ ಮೇಲಿಂದ ಮೇಲೆ ತೆಗೆದುಕೊಳ್ಳಬೇಕು ಅಥವಾ ಹಾಗಲ ಎಲೆಗಳನ್ನು ನುಣ್ಣಗೆ ಅರೆದು ಸೇವಿಸಬೇಕು. ಹಾಗಲಕಾಯಿಯ ಎಲೆಗಳನ್ನು ನುಣ್ಣಗೆ ಅರೆದು ಮೊಸರಿನೊಳಗೆ ಅದ್ದಿ ಹಾಗಲ ಬೇರನ್ನು ಅರೆದು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿಯನ್ನು ವಾಸಿಮಾಡಿಕೊಳ್ಳಬಹುದು.

ಆಮ್ಲೀಯತೆ: ಹಾಗಲಕಾಯಿ ರಸವನ್ನು ಕೆಲವು ಬಾರಿ ನಿಯಮಿತವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಅತಿಸಾರ ಭೇದಿಯನ್ನು ತಡೆಗಟ್ಟಬಹುದು. 15ಮಿ.ಲೀ. ಹಾಗಲ ಎಲೆಯ ರಸವನ್ನು ಇಂಗು ಮತ್ತು ಕಲ್ಲುಪ್ಪು ಬೆರೆಸಿ ಕುಡಿಯುವುದರಿಂದ ಕರುಳಿನಲ್ಲಿರುವ ಲಾಡಿಹುಳು, ಜಂತುಹುಳು ಸಾಯುತ್ತವೆ. ಹಾಗಲ ಎಲೆ ರಸದಲ್ಲಿ ಹರಳೆಣ್ಣೆ ಬೆರೆಸಿ, ಸೇವಿಸಿದರೂ ಸಹ ಕರುಳಿನ ಹುಳುಗಳು ಸಾಯುತ್ತವೆ. ಪ್ರತಿನಿತ್ಯ ಹಾಗಲಕಾಯಿ, ಉಪ್ಪಿನಕಾಯಿ ಅಥವಾ ಪಲ್ಯವನ್ನು ತಿನ್ನುವುದರಿಂದ ಒಳಗಿನ ಕ್ರಿಯೆ ಸರಿಯಾಗಿ ನಡೆದು ಕರುಳು ಸ್ವಚ್ಛವಾಗಿರುತ್ತದೆ. ಮಕ್ಕಳಿಗೆ ವಾಕರಿಕೆ ಅಥವಾ ವಾಂತಿಯಾಗುತ್ತಿದ್ದರೆ ಒಂದು ಟೀ ಚಮಚದಷ್ಟು ಹಾಗಲ ರಸದಲ್ಲಿ ಸ್ವಲ್ಪ ಅಡಿಗೆ ಅರಿಶಿನ ಬೆರೆಸಿ ಕುಡಿಸಿ.

ಶೀತ ಮತ್ತು ಜ್ವರ: ಹಾಗಲಕಾಯಿಯನ್ನು ನುಣ್ಣಗೆ ಅರೆದು ಹಣೆಯ ಮೇಲೆ ಹಚ್ಚಬೇಕು ಮತ್ತು ಹಾಗಲಕಾಯಿ ರಸವನ್ನು ಜೇನುತುಪ್ಪ ಬೆರೆಸಿ ಸೇವಿಸಿದರೆ ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.

ಚರ್ಮದ ಕಾಯಿಲೆಗೆ ಮದ್ದು: ಹಾಗಲ ಎಲೆಯ ರಸದಲ್ಲಿ ಅಡುಗೆ ಅರಿಶಿಣವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಸಿಡುಬು ರೋಗಕ್ಕೆ ಉತ್ತಮ ಪರಿಹಾರ ದೊರೆಯುತ್ತದೆ. ಹಾಗಲಕಾಯಿಯ ಪುಡಿಯಲ್ಲಿ ದಾಲ್ಚಿನ್ನಿ ಮತ್ತು ಮೆಣಸನ್ನು ಪುಡಿಮಾಡಿ ಬೆರೆಸಿ ಹೈಡ್ರೋಕಾರ್ಪಸ್ ಎಣ್ಣೆಯಲ್ಲಿ ಮಿಶ್ರಮಾಡಿ ಹುಣ್ಣು, ಬೊಕ್ಕೆಗಳು ಮತ್ತು ಕೆರೆತವಿರುವ ಭಾಗದಲ್ಲಿ ಹಚ್ಚಿದರೆ ಅವು ವಾಸಿಯಾಗುತ್ತವೆ.

ತಲೆಯಲ್ಲಿ ಆಗುವ ಹುಣ್ಣುಗಳು ಮತ್ತು ಬೊಕ್ಕೆಗಳಿಗೆ ಹಾಗಲ ಎಲೆಯ ರಸದ ಲೇಪನ ಮಾಡಿ. ಹಾಗಲ ಗಿಡವನ್ನು ಅರೆದು ತಯಾರಿಸಿದ ಗಂಧವೂ ಸಹ ಹುಣ್ಣು ಬೊಕ್ಕೆಗಳಿಗೆ ಉತ್ತಮ ಪರಿಹಾರ ಒದಗಿಸುತ್ತದೆ. ಬಾಯಿಯಲ್ಲಿ ಆಗುವ ಹುಣ್ಣುಗಳಿಗೆ ಹಾಗಲ ಎಲೆಯ ರಸವನ್ನು ಬಾಯಿಯಲ್ಲಿ ತುಂಬಿಕೊಂಡು ಮುಕ್ಕಳಿಸಿ, ಕಾಲುಗಳ ಹಿಮ್ಮಡಿಯಲ್ಲಿ ಉರಿ ಉಂಟಾದರೆ ಹಾಗಲ ಎಲೆಯ ರಸವನ್ನು ಹಚ್ಚಿ ಸುಟ್ಟಗಾಯಗಳ ಮೇಲೂ ಹಾಗಲಕಾಯಿ ರಸವನ್ನು ಹಚ್ಚಬಹುದು.

ಹಾಗಲಕಾಯಿಯ ಸಿಹಿಗೊಜ್ಜು ಮಾಡಿಕೊಂಡು ಕ್ರಮವಾಗಿ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗುವುದು. ಕರುಳಿನ ಹುಣ್ಣು, ಕೆಮ್ಮು ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT