ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ಸಂಚಾರಕ್ಕೆ ತಿಂಗಳ ಹರುಷ

ಪೂರ್ವ–ಪಶ್ಚಿಮ ಕಾರಿಡಾರ್: ತಿಂಗಳಲ್ಲೇ ₹10.5 ಕೋಟಿ ಆದಾಯ
Last Updated 30 ಮೇ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ವ–ಪಶ್ಚಿಮ ಕಾರಿಡಾರ್‌ನ ಸುರಂಗ ಮಾರ್ಗದಲ್ಲಿ ಸಂಚಾರಕ್ಕೆ ಈಗ ತಿಂಗಳ ಸಂಭ್ರಮ. 18 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ತಿಂಗಳಲ್ಲೇ ನಮ್ಮ ಮೆಟ್ರೊಗೆ ₹10.5 ಕೋಟಿ ಆದಾಯ ಬಂದಿದೆ.

ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಸುರಂಗ ಮಾರ್ಗದ ಸಂಚಾರದೊಂದಿಗೆ ಈ ಮಾರ್ಗದಲ್ಲಿ ಪೂರ್ಣಪ್ರಮಾಣದ ಮೆಟ್ರೊ ರೈಲು ಸಂಚಾರ ಸೇವೆ ಆರಂಭ ಗೊಂಡಿದೆ. ಏಪ್ರಿಲ್‌ 29ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಈ ಮಾರ್ಗಕ್ಕೆ ಚಾಲನೆ ನೀಡಿದ್ದರು. ಏಪ್ರಿಲ್‌ 30ರಿಂದ ವಾಣಿಜ್ಯ ಸಂಚಾರ ಆರಂಭಗೊಂಡಿತ್ತು.

ಮೊದಲ ದಿನ 94,034 ಜನರು ಸಂಚಾರದ ಖುಷಿ ಅನುಭವಿಸಿದ್ದರು. ಮೇ 1ರಂದು 1.24 ಲಕ್ಷ ಮಂದಿ ಪ್ರಯಾ ಣಿಸಿದ್ದರು. ಮೊದಲ ವಾರದಲ್ಲೇ 8 ಲಕ್ಷ ಜನರು ಪ್ರಯಾಣ ಬೆಳೆಸಿದ್ದರು. ಒಂದು ತಿಂಗಳ ಪ್ರಯಾಣಿಕರ ಸಂಖ್ಯೆ 33 ಲಕ್ಷ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ನಿತ್ಯ 2 ಲಕ್ಷ ಪ್ರಯಾಣಿಕರ ನಿರೀಕ್ಷೆಯ ಈ ಮಾರ್ಗದಲ್ಲಿ ಸದ್ಯ ಪ್ರತಿನಿತ್ಯ ಸರಾಸರಿ 1.10 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ₹35 ಲಕ್ಷ ಆದಾಯ ಸಂಗ್ರಹ ವಾಗುತ್ತಿದೆ.

ಸಾಮಾನ್ಯ ದಿನಗಳಲ್ಲಿ ಈ ಮಾರ್ಗ ದಲ್ಲಿ ನಿತ್ಯ  1 ಲಕ್ಷದಷ್ಟು ಇರುವ ಪ್ರಯಾಣಿಕರ ಸಂಖ್ಯೆ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ 1.15 ಲಕ್ಷದ ಗಡಿ ದಾಟು ತ್ತಿದೆ. ಬಹುತೇಕರು ಸ್ವಂತ ವಾಹನ ಗಳನ್ನು ಬಿಟ್ಟು ಮೆಟ್ರೊ ರೈಲುಗಳನ್ನು ಏರುತ್ತಿದ್ದಾರೆ.

ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಕಾವೇರಿ ಭವನ ಸೇರಿದಂತೆ  ಕೆ.ಆರ್‌.ವೃತ್ತದ ಸುತ್ತಮುತ್ತ ಲಿನ ಸರ್ಕಾರಿ ಕಚೇರಿಗಳಲ್ಲಿ ದುಡಿಯುತ್ತಿರುವ ನೌಕರರು  ಈಗ ಮೆಟ್ರೊ ಮೊರೆ ಹೋಗಿದ್ದಾರೆ.

ರಜಾ ಅವಧಿ ಕಳೆದು ಹೈಕೋರ್ಟ್‌,  ಶಾಲಾ–ಕಾಲೇಜುಗಳು ಆರಂಭಗೊಳ್ಳು ತ್ತಿದ್ದಂತೆ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ನಿಗಮದ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

‘ಸದ್ಯ ನಾಗಸಂದ್ರ–ಸಂಪಿಗೆ ರಸ್ತೆ ನಡುವೆ ಮಾತ್ರ ಆರಂಭಗೊಂಡಿರುವ ಹಸಿರು ಮಾರ್ಗದ ಸಂಚಾರ ಸೇವೆ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುತ್ತಿದ್ದಂತೆ, ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯ ಮಟ್ಟ ತಲುಪುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.

‘ಮೆಟ್ರೊ ರೈಲಿಗೆ ಪೂರಕವಾಗಿ ಬಿಎಂಟಿಸಿ ಈಗ ಫೀಡರ್‌ ಬಸ್‌ಗಳ ಸೇವೆ ಒದಗಿಸಿದೆ. ಇದು ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಲು ಕಾರಣ’ ಎಂದು ಅವರು  ವಿಶ್ಲೇಷಿಸುತ್ತಾರೆ.

‘ಮೆಟ್ರೊ ರೈಲಿನಲ್ಲಿ ಮೂರು ಬೋಗಿಗಳಿದ್ದು, ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಸಬಹುದು. ಬೆಳಿಗ್ಗೆ ಹಾಗೂ ಸಂಜೆಯ ಸಂಚಾರ ದಟ್ಟಣೆಯ ಅವಧಿಯಲ್ಲಿ 8 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಿದರೆ ಅಂತರವನ್ನು ಇನ್ನಷ್ಟು ಕಡಿಮೆ ಮಾಡುತ್ತೇವೆ’ ಎಂದು ಅವರು ಹೇಳುತ್ತಾರೆ.

ಅವಧಿ ವಿಸ್ತರಣೆಗೆ ಸಿದ್ಧ
ಈ ಕಾರಿಡಾರ್‌ನಲ್ಲಿ ಈಗ ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ರೈಲು ಗಳು ಸಂಚಾರ ಮಾಡುತ್ತಿವೆ. ಅದನ್ನು ರಾತ್ರಿ 11.30ರ ವರೆಗೂ ವಿಸ್ತರಿಸಲು ನಿಗಮ ಸಿದ್ಧವಿದೆ. ಆದರೆ, ಪ್ರಯಾಣಿಕರ ಬೇಡಿಕೆ ಪ್ರಮಾಣ ಹೆಚ್ಚಾಗಲು ಕಾಯುತ್ತಿ ದ್ದೇವೆ’ ಎಂದು ನಿಗಮದ ವಕ್ತಾರ ಯು. ವಸಂತ ರಾವ್‌ ತಿಳಿಸುತ್ತಾರೆ.

‘ಪೀಣ್ಯ ಕೈಗಾರಿಕಾ ಸಂಘದವರು ಮನವಿ ಸಲ್ಲಿಸಿದ ಬಳಿಕ ಸಂಪಿಗೆ ರಸ್ತೆ–ನಾಗಸಂದ್ರ ಮಾರ್ಗದಲ್ಲಿ ಅವಧಿ ವಿಸ್ತರಣೆ ಮಾಡಲಾಯಿತು. ಅದೇ ರೀತಿಯಲ್ಲಿ ಇಲ್ಲಿಯೂ ಕಂಪೆನಿಗಳು ಮನವಿ ಸಲ್ಲಿಸಬೇಕು. ನಿರ್ದಿಷ್ಟ ಸಂಖ್ಯೆಯ ಜನರು ಪ್ರಯಾಣಿಸುವ ಭರವಸೆ ಇಲ್ಲದೆ ಅವಧಿ ವಿಸ್ತರಣೆ ಮಾಡುವುದು ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ಬಿಎಂಟಿಸಿ ಬಸ್‌ಗಳಲ್ಲಿ ನಾಯಂಡ ಹಳ್ಳಿ ಅಥವಾ ಬೈಯಪ್ಪನಹಳ್ಳಿ ಯಿಂದ ಮೆಜೆಸ್ಟಿಕ್‌ಗೆ ತಲುಪಲು ಕನಿಷ್ಠ ಒಂದು ಗಂಟೆ ಬೇಕು.  ಬೈಕ್‌, ರಿಕ್ಷಾ ಅಥವಾ ಕಾರುಗಳಲ್ಲಿ 45 ನಿಮಿಷವಾದರೂ ಬೇಕು. ಆದರೆ, ಮೆಟ್ರೊದಲ್ಲಿ 20–25 ನಿಮಿಷಗಳಲ್ಲಿ ತಲುಪಬಹುದು. ಸಂಚಾರ ದಟ್ಟಣೆ ಯ ಕಿರಿಕಿರಿಯೂ ಇಲ್ಲ’ ಎಂದು ನಿತ್ಯ ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವ ಸುಚೇತಾ ರಾವ್‌ ತಿಳಿಸುತ್ತಾರೆ.
‘ಟ್ರಾಫಿಕ್‌ ಕಿರಿಕಿರಿ ಇಲ್ಲದೆ ಮೆಟ್ರೊ ದಲ್ಲಿ ಆರಾಮವಾಗಿ ಕಚೇರಿಗೆ ಹೋಗಿ ಬರುತ್ತಿದ್ದೇನೆ. ಇದರಿಂದ ವಾರಕ್ಕೆ ₹300 ಉಳಿತಾಯ ವಾಗುತ್ತಿದೆ’ ಎಂದು ವಿಜಯನಗರದ ಸುಧೀಂದ್ರ ಹೇಳುತ್ತಾರೆ.

***
10 ದಿನದಲ್ಲಿ ‘ಕಾವೇರಿ’ ಸುರಂಗದಿಂದ ಹೊರಕ್ಕೆ
ಬೆಂಗಳೂರು: ‘
ನಮ್ಮ ಮೆಟ್ರೊ’ದ ಚಿಕ್ಕಪೇಟೆ–ಮೆಜೆಸ್ಟಿಕ್‌ ನಡುವಿನ ಸುರಂಗ ನಿರ್ಮಿಸುತ್ತಿರುವ ಕಾವೇರಿ (ಟಿಬಿಎಂ) ಯಂತ್ರವು 10 ದಿನಗಳಲ್ಲಿ ಸುರಂಗದಿಂದ ಹೊರ ಬರಲಿದೆ.

ಕಾವೇರಿ ಯಂತ್ರವು ಚಿಕ್ಕಪೇಟೆ ಯಿಂದ ಮೆಜೆಸ್ಟಿಕ್‌ ಕಡೆಗೆ 2014ರ ಅಕ್ಟೋಬರ್‌ನಲ್ಲಿ ಸುರಂಗ ಕೊರೆಯುವ ಕೆಲಸ ಆರಂಭಿಸಿತ್ತು. ಚಿಕ್ಕಪೇಟೆ, ಬಳೆ ಪೇಟೆಗಳಲ್ಲಿ ಸುರಂಗ ಕೊರೆವ ವೇಳೆ ಆದ ತೊಂದರೆ ಮತ್ತು ನೆಲದಾಳದ ಪರಿಸರದ ಬಗ್ಗೆ ಸರಿಯಾದ ಅರಿವಿಲ್ಲದ ಕಾರಣ ಸುರಂಗ ಕೊರೆಯುವ ಕೆಲಸ ತಡವಾಗಿತ್ತು. ಗಟ್ಟಿ ಕಲ್ಲುಗಳು ಸಿಕ್ಕ ಕಾರಣ ದಿನಕ್ಕೆ 1 ಮೀಟರ್‌ ಸುರಂಗ ಕೊರೆಯುವುದು ಕಷ್ಟವಾಗಿತ್ತು.

‘ಚಿಕ್ಕಪೇಟೆ–ಮೆಜೆಸ್ಟಿಕ್‌ ನಡುವಿನ ಅಂತರ 1.7 ಕಿ.ಮೀ. ಈಗ ಯಂತ್ರ ಮೆಜೆಸ್ಟಿಕ್‌ನಿಂದ 25 ಮೀಟರ್‌ ದೂರ ದಲ್ಲಿದೆ. ಅದು 10 ದಿನಗಳಲ್ಲಿ ಹೊರ ಬರಲಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಹೇಳುತ್ತಾರೆ.

‘ಈ ಮಾರ್ಗದಲ್ಲಿ ಹಳಿ ಅಳವಡಿಕೆ, ವಿದ್ಯುದೀಕರಣ, ಸಿಗ್ನಲ್‌ ಅಳವಡಿಕೆ ಹಾಗೂ ವಿವಿಧ ಪರೀಕ್ಷೆಗಳಿಗೆ ಮೂರು ತಿಂಗಳ ಅಗತ್ಯ ಇದೆ. ಆ ಬಳಿಕ ಪ್ರಾಯೋ ಗಿಕ ಸಂಚಾರ ಶುರುವಾಗಲಿದೆ’ ಎಂದ ಅವರು ವಿವರ ನೀಡುತ್ತಾರೆ.

‘ಚಿಕ್ಕಪೇಟೆಯಲ್ಲಿ ನೆಲದ ಮೇಲ್ಭಾಗ ದಲ್ಲಿ ಹಳೆಯ ಕಟ್ಟಡಗಳು. ನೆಲದಾಳ ದಲ್ಲಿ ಛಿದ್ರಗೊಂಡ ಗಟ್ಟಿ ಕಲ್ಲುಗಳು ಇವೆ. ಅದರ ಮೇಲೆ ಸಡಿಲ ಮಣ್ಣಿನ ಸಂರಚನೆ ಇದೆ. ಸುರಂಗ ಕೊರೆಯುವ ಯಂತ್ರದ (ಟಿಬಿಎಂ) ಕಟರ್‌ ಹೆಡ್‌ (ಕೊರೆಯುವ ಮುಂಭಾಗ) ತಿರುಗಿದಂತೆ ಅದ ರೊಂದಿಗೆ ಕಲ್ಲುಗಳೂ ತಿರುಗುತ್ತವೆ. ಕಟರ್‌ ಹೆಡ್‌ ಮುಕ್ಕಾದರೆ ಅದನ್ನು ಬದಲಾಯಿಸುವುದು ಮತ್ತೂ ಕಷ್ಟದ ಕೆಲಸ’ ಎಂದು  ಮಾಹಿತಿ ನೀಡುತ್ತಾರೆ.

‘ಟಿಬಿಎಂನ ಮುಂಬದಿಯಲ್ಲಿ ಒಂದೂವರೆ ಅಡಿಯಷ್ಟು ಮಾತ್ರ ಜಾಗ ಇರುತ್ತದೆ. ಅಲ್ಲಿ ಕಲ್ಲು ಮಣ್ಣು ಸುರಿಯು ತ್ತಿರುತ್ತದೆ. ಅಂತರ್ಜಲ ನುಗ್ಗಿ ಬರುತ್ತಿ ರುತ್ತದೆ. ಅದನ್ನು ತಡೆಯಲು ಗಾಳಿ ಯಿಂದ ಒತ್ತಡದ ವಾತಾವರಣವನ್ನು ನಿರ್ಮಿಸಬೇಕು. ಹಾಗೆ ಮಾಡಿ ದರೂ ಅಲ್ಲಿಗೆ ಹೋಗಿ ಕಾರ್ಮಿಕರು ಕಟರ್‌ ಹೆಡ್‌ ಬದಲಾಯಿಸುವುದು ದೊಡ್ಡ ಸಾಹಸವೇ ಸರಿ.

ಎಷ್ಟೋ ಸಲ ಯಂತ್ರದ ಮುಂಭಾಗದ ಸಡಿಲ ಮಣ್ಣಿನ ಸಂರಚನೆ ಯನ್ನು ಕಾಂಕ್ರೀಟ್‌ನಿಂದ ಭದ್ರಗೊಳಿಸಿ, ನಂತರ ಸುರಂಗ ಕೊರೆಯುತ್ತಿದ್ದೇವೆ. ಹೀಗಾಗಿ ಸ್ವಲ್ಪ ವಿಳಂಬವಾಗಿದೆ’ ಎಂದು ಅವರು ತಿಳಿಸುತ್ತಾರೆ.

ಇನ್ನೊಂದೆಡೆ, ಕೃಷ್ಣ ಟಿಬಿಎಂ ಯಂತ್ರವು ಸುರಂಗ ಕೊರೆಯುವ ಯಂತ್ರವು 2015ರ ಆಗಸ್ಟ್‌ನಲ್ಲಿ ಕೆಲಸ ಆರಂಭಿಸಿತ್ತು. ಅದು ಈಗ ಮೆಜೆಸ್ಟಿಕ್‌ನಿಂದ 130 ಮೀಟರ್‌ ದೂರದಲ್ಲಿದೆ. ಅದು ಸುರಂಗದಿಂದ ಹೊರ ಬರಲು 2 ತಿಂಗಳು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT