ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಆರೋಪ: ಮಹಿಳೆಗೆ ಕೋರ್ಟ್‌ ಛೀಮಾರಿ

ಅತ್ಯಾಚಾರದ ದೂರಿತ್ತವರ ವಿರುದ್ಧವೇ ಪ್ರಕರಣ
Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯುವಕರಿಬ್ಬರ ವಿರುದ್ಧ  ಅತ್ಯಾ­ಚಾರದ ಸುಳ್ಳು ಆರೋಪ ಮಾಡಿದ ಮಹಿಳೆಯ ವಿರು­ದ್ಧವೇ ಪ್ರಕರಣ ದಾಖಲಿಸುವಂತೆ ದೆಹಲಿಯ ನ್ಯಾಯಾ­ಲಯ ಆದೇಶಿಸಿದ ಅಪ­ರೂ­ಪದ ಘಟನೆ ಸೋಮವಾರ ನಡೆದಿದೆ.

ಯುವಕರಿಬ್ಬರು ತಂಪು ಪಾನೀಯ­ದಲ್ಲಿ ಮದ್ಯ ಸೇರಿಸಿ ಕುಡಿಸಿದ ನಂತರ ತನ್ನ ಮೇಲೆ   ಅತ್ಯಾ­ಚಾರ­ವೆಸಗಿ­ದ್ದಾರೆ ಎಂದು ಮಹಿಳೆ­ಯೊ­ಬ್ಬಳು ದೆಹಲಿಯ ದ್ವಾರಕಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ತನ್ನ ಮೇಲೆ ಯುವಕರು ಅತ್ಯಾಚಾರ ನಡೆ­ಸಿಲ್ಲ ಎಂದು ಆ ಮಹಿಳೆ ವಿಚಾರಣೆ ವೇಳೆ ತಪ್ಪೊಪ್ಪಿ­ಕೊಂಡಿದ್ದಾಳೆ.  ವಿಪರೀತ ಮದ್ಯ ಸೇವಿಸಿದ್ದ ಮಹಿಳೆ ತನ್ನನ್ನು ವಾಹನ­ದಲ್ಲಿ ಮನೆಗೆ ಬಿಡು­ವಂತೆ ಯುವಕರಿಗೆ ದುಂಬಾಲು ಬಿದ್ದಿ­ದ್ದಳು. ಆದರೆ,  ಯುವಕರು ಮಹಿಳೆ­ಯನ್ನು ತಮ್ಮ ವಾಹನದಲ್ಲಿ ಕರೆದು­ಕೊಂಡು ಹೋಗಲು ಒಪ್ಪದಿ­ದ್ದಾಗ ಯುವ­ಕರ ವಿರುದ್ಧ ಸೇಡು ತೀರಿಸಿ­­ಕೊಳ್ಳಲು ಅತ್ಯಾ­ಚಾರದ ನಾಟಕ ಹೂಡಿ­ದ್ದಳು ಎಂಬ ಕುತೂಹಲ­ಕಾರಿ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾ­ಲಯ ಮಹಿಳೆಗೆ ಛೀಮಾರಿ ಹಾಕಿ, ನಿರಪ­ರಾಧಿ ಯುವಕರನ್ನು ಬಿಡುಗಡೆ­ಗೊಳಿಸಿದೆ. ಮಹಿಳೆ ವಿರುದ್ಧ ಹೆಚ್ಚುವರಿ ಮೆಟ್ರೋ­­ಪಾಲಿಟನ್‌ ನ್ಯಾಯಾಲಯ­ದಲ್ಲಿ ದೂರು ದಾಖಲಿಸುವಂತೆ ನ್ಯಾಯಾ­ಧೀಶರು ಆದೇಶಿಸಿ­ದ್ದಾರೆ. ಈ ಅರ್ಜಿಯ ವಿಚಾ­ರಣೆ ನಡೆ­ಸಿದ ನ್ಯಾಯಾಧೀಶರು, ಸುಳ್ಳು ಅತ್ಯಾ­ಚಾರ ಆರೋಪ ಮಾಡುವ ಮಹಿಳೆ­ಯರಿಗೂ ಶಿಕ್ಷೆಯಾಗ­ಬೇಕು ಎಂದರು.

ಸುಳ್ಳು ಅತ್ಯಾಚಾರ ಆರೋಪಕ್ಕೆ ಗುರಿಯಾದ ವ್ಯಕ್ತಿ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದ ಮೇಲೂ  ಆತನನ್ನು ಸಮಾಜ ಶಂಕೆಯಿಂದ ನೋಡು­­ತ್ತದೆ.  ಆತ ನಿರಂತರ ಮಾನಸಿಕ ಯಾತನೆ ಅನುಭವಿಸ­ಬೇಕಾ­­ಗುತ್ತದೆ. ವಿಚಾರಣೆ ವೇಳೆಯೂ ಆರೋಪಿಗಳನ್ನು  ಅತ್ಯಾ­ಚಾರಿ­­­ಗ­ಳಂತೆ ಕಾಣ­ಲಾಗು­ತ್ತದೆ ಎಂದು ನ್ಯಾಯಾ­ಧೀಶರು ಕಳವಳ ವ್ಯಕ್ತಪಡಿಸಿದರು.

ವೈಯಕ್ತಿಕ ಹಿತಾಸಕ್ತಿಗಾಗಿ ನಿರಪರಾ­ಧಿಗಳ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಮಾಡುವ ಪ್ರವೃತ್ತಿ  ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಕಾಲ ಬಂದಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT