ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ನಿಕಷದಲ್ಲಿ ನಕ್ಕವರು...

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅದು ಗ್ಲಾಮರ್ ಜಗತ್ತು. ಬಣ್ಣ ಬಣ್ಣದ ಚಿಟ್ಟೆಗಳಂತಿದ್ದ ಹುಡುಗಿಯರ ಮನಸ್ಸಿನಲ್ಲಿ ಸಂತಸದ ನೂರಾರು ಬಣ್ಣ. ಮುಖದಲ್ಲಿ ಮಿಂಚಿನೊಂದಿಗೆ ಆತಂಕ ತುಂಬಿಕೊಂಡೇ ಇತ್ತಿಂದತ್ತ ಅತ್ತಿಂದಿತ್ತ ಹೆಜ್ಜೆ ಹಾಕುತ್ತಿದ್ದ ಅವರು ಹುರುಪಿನಲ್ಲಿ ಸ್ಪರ್ಧೆಗೆ ಸಜ್ಜಾಗುತ್ತಿದ್ದರು. ಕ್ಷಣ ಕ್ಷಣಕ್ಕೂ ಕನ್ನಡಿ ನೋಡಿಕೊಂಡು ಮುಖ ತೀಡಿಕೊಳ್ಳುತ್ತಲೇ ಮೇಕಪ್ ಮಾಸದಂತೆ ಕಾದು ಕುಳಿತಿದ್ದರು.

ನಗರದ ಮೂವ್‌ ಎನ್ ಪಿಕ್ ಹೋಟೆಲ್‌ನಲ್ಲಿ ನಡೆದ ಮಿಸ್‌ ದಿವಾ ಯೂನಿವರ್ಸ್‌ 2014 ಆಡಿಷನ್‌ನ ಕಾರ್ಯಕ್ರಮ ಅದಾಗಿತ್ತು.
ಅಹಮದಾಬಾದ್, ಇಂದೋರ್, ಲಖನೌ, ಹೈದರಾಬಾದ್, ಕೋಲ್ಕತ್ತ, ಚಂಡೀಗಡ, ಪುಣೆ ಮತ್ತು ದೆಹಲಿಯಲ್ಲಿ ಎರಡನೇ ಆವೃತ್ತಿಯ ಯಮಹಾ ಫ್ಯಾಸಿನೊ ‘ಮಿಸ್‌ ದಿವಾ ಯೂನಿವರ್ಸ್‌’ ಆಡಿಷನ್‌ಗಳನ್ನು ಆಯೋಜಿಸಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಸೌಂದರ್ಯ ಸ್ಪರ್ಧೆ ನಡೆಯಿತು.

ನೂತನ ಬ್ರ್ಯಾಂಡ್‌ಗಳಿಗೆ ಹೆಜ್ಜೆ ಹಾಕುವುದು ರೂಪದರ್ಶಿಯರಿಗೆ ಹೊಸತೇನಲ್ಲ. ಆದರೆ ಈ ಫ್ಯಾಷನ್ ಷೋ ಅದಕ್ಕಿಂತ ಭಿನ್ನವಾಗಿತ್ತು. ಮಿಸ್‌ ದಿವಾ ಆಗಲು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸುಂದರವಾಗಿ ಕಂಡು ಆಡಿಷನ್‌ನಲ್ಲಿ ಗೆಲ್ಲುವ ತವಕ ಹುಡುಗಿಯರಲ್ಲಿ ತುಂಬಿಕೊಂಡಿತ್ತು. ಕೆಲ ಯುವತಿ­ಯರಿಗೆ ರ್‍್ಯಾಂಪ್‌ ಹೊಸತೆನಿಸಿದರೆ, ಇನ್ನು ಕೆಲವರು ಆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರೇ ಆಗಿದ್ದರು. ವಯ್ಯಾರ, ಬೆಡಗನ್ನು ಆವಾಹಿಸಿಕೊಂಡ ಅವರ ಕಣ್ಣುಗಳಲ್ಲಿ ಮಿಸ್‌ ದಿವಾ ಕನಸು ಮಿಂಚುತ್ತಿತ್ತು.

ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ ನೂರು ಹುಡುಗಿಯರು ಆಡಿಷನ್‌ನಲ್ಲಿ ಪಾಲ್ಗೊಂಡಿದ್ದರು. ಬೆಳಗಿನಿಂದ ಅಲ್ಲಿ ಪೂರ್ವಭಾವಿ ತಯಾರಿಯೂ ಸಾಗುತ್ತಿತ್ತು. ರೂಪದರ್ಶಿಗಳು ರೂಢಿಸಿಕೊಳ್ಳಬೇಕಾದ ಹಮ್ಮು ಬಿಮ್ಮು, ಒನಪು ವಯ್ಯಾರ, ದಿರಿಸಿನ ವಿನ್ಯಾದ ಎಲ್ಲವುಗಳ ಕುರಿತು ಅಲ್ಲಿ ಚರ್ಚೆ, ಅಭ್ಯಾಸ ಮುಂದುವರಿದಿತ್ತು.

ನೋಟದ ತಕ್ಕಡಿಯಲ್ಲಿ...
ಬೆಂಗಳೂರು ಯಾವುದರಲ್ಲೂ ಕಡಿಮೆಯಿಲ್ಲ. ಅದರಲ್ಲೂ ಫ್ಯಾಷನ್ ವಿಷಯಕ್ಕೆ ಬಂದರೆ ಅದು ಇನ್ನೂ ಒಂದು ಕೈ ಮುಂದು. ಇದಕ್ಕೆ ಸಾಕ್ಷಿಯಂತೆ ಕಂಡುಬಂದಿದ್ದು ಈ ಸ್ಪರ್ಧೆ. ಮಬ್ಬು ಬೆಳಕಿನಲ್ಲಿ ಬಿಳಿ ಬಣ್ಣದ ಪಾಶ್ಚಾತ್ಯ ದಿರಿಸಿನೊಂದಿಗೆ ವೇದಿಕೆ ಏರುತ್ತಿದ್ದ ಲಲನೆಯರ ಪ್ರತಿ ಹೆಜ್ಜೆಯಲ್ಲೂ ಮಾಡೆಲಿಂಗ್ ಜಗತ್ತಿನ ಶಿಸ್ತು ಎದ್ದು ಕಾಣುತ್ತಿತ್ತು. ಮೇಕಪ್, ಹೇರ್‌ಸ್ಟೈಲ್, ದಿರಿಸು, ಹೈ ಹೀಲ್ಡ್‌, ಮುಖಚರ್ಯೆ ಎಲ್ಲವನ್ನೂ ತಮ್ಮ ದೇಹಕ್ಕೆ ಒಗ್ಗಿಸಿಕೊಂಡು ಒಂದಷ್ಟು ನಿಮಿಷಗಳ ಕಾಲ ಮುಖದಲ್ಲಿ ನಗು ತುಂಬಿಕೊಂಡು ಸೌಂದರ್ಯವನ್ನು ಒರೆಗೆ ಹಚ್ಚಿಕೊಳ್ಳುವ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು ಅವರು.

ಆಡಿಷನ್‌ನ ಪ್ರತಿ ಹಂತದಲ್ಲೂ ಒಂದಷ್ಟು ಹುಡುಗಿಯರು ಆಯ್ಕೆಯಾಗಿ, ಇನ್ನೊಂದಷ್ಟು ಹುಡುಗಿಯರು ಹೊರಗುಳಿಯುತ್ತಿದ್ದರು. ತಮ್ಮ ತಂಗಿ, ಮಗಳು, ಗೆಳತಿಯನ್ನು ಆಡಿಷನ್‌ಗೆ ಕರೆತಂದು ಕಾಯುತ್ತಿದ್ದವರೂ ಆತಂಕದಲ್ಲೇ ಕಾಲ ತಳ್ಳುತ್ತಿದ್ದರು.
ಈ ಆಡಿಷನ್‌ಗೆ ತೀರ್ಪುಗಾರರಾಗಿ ಬಂದಿದ್ದವರು ನಟಿ ಪಾರ್ವತಿ ನಾಯರ್, ಪ್ರಸಿದ್ಧ ಛಾಯಾಗ್ರಾಹಕ ವಾಸಿಮ್ ಖಾನ್ ಹಾಗೂ ಸಿಎಎ ಕ್ವಾನ್‌ನ ಅನಿರ್ಬನ್ ದಾಸ್ ಬ್ಲಾ.
ರೂಪದರ್ಶಿಗಳ ಪ್ರತಿಯೊಂದು ನಡೆ–ನುಡಿ, ಹಾವ–ಭಾವವನ್ನು ನೋಟದ ತಕ್ಕಡಿಗೆ ಹಾಕಿ ತೂಗುತ್ತಿದ್ದ ಅವರಿಗೂ ಅರೆಕ್ಷಣ ಗೊಂದಲ ಕಾಡಿತ್ತು. ಆಗಾಗ ಅವರಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಭಂಗಿ, ರೂಪ, ಮೈಕಟ್ಟು ಇವೆಲ್ಲವನ್ನೂ ಅಳೆದೂ ತೂಗಿ ಕೊನೆಗೆ ಏಳು ಹುಡುಗಿಯರನ್ನು ಆರಿಸಿದರು.

ನಿಧಿ ಅಗರ್‌ವಾಲ್, ರಕ್ಷಿತಾ ಹರಿಮೂರ್ತಿ, ನೊಯನಿತ ಲೋಧ್, ವೀಣಾ ಸಿಂಗ್, ಆಶಾ ಭಟ್, ಮೋನಿಷಾ ರಮೇಶ್ ಹಾಗೂ ಜೀವನ ವಿಶ್ವನಾಥನ್ ಇವರು ಬೆಂಗಳೂರಿನಿಂದ ಆಯ್ಕೆಯಾದ ರೂಪದರ್ಶಿಯರು. ‘ರೂಪದರ್ಶಿ ಆಗಬೇಕೆಂದರೆ ತುಂಬಾ ಶ್ರದ್ಧೆ ಬೇಕು. ಅಂಗಾಲಿನಿಂದ ಹಿಡಿದು ತಲೆವರೆಗೂ ಎಲ್ಲವೂ ಒಪ್ಪವಾಗಿರುವಂತೆ ಕಾಯ್ದುಕೊಳ್ಳಬೇಕು. ಈ ಸ್ಪರ್ಧೆ ತುಂಬಾ ಕಠಿಣ ಎನಿಸಿತು. ಎಲ್ಲರೂ ಸುಂದರ. ಆದರೆ ಎಲ್ಲ ದೃಷ್ಟಿಯಿಂದಲೂ ಅಳೆಯುವುದು ಮುಖ್ಯವಲ್ಲವೇ?’ ಎಂದು ರೂಪದರ್ಶಿಗಳ ಆಯ್ಕೆ ನಂತರ ಮಾತನಾಡಿದರು ಪಾರ್ವತಿ ನಾಯರ್. ಇಲ್ಲಿ ಆಯ್ಕೆಯಾದವರು ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ನಡೆಯಲಿರುವ ಅಂತಿಮ ಆಡಿಷನ್‌ನಲ್ಲಿ ಭಾಗವಹಿಸಲಿದ್ದು, ಅವರು ಇನ್ನಷ್ಟು ಪಳಗಬೇಕು ಎಂದು ಕಿವಿ ಮಾತೂ ಹೇಳಿದರು.

ಸೋತ ಹುಡುಗಿಯರ ಮುಖದಲ್ಲಿ ಮುಂದಿನ ಬಾರಿ ಗೆಲ್ಲಬಹುದೆಂಬ ಆತ್ಮವಿಶ್ವಾಸ ತುಂಬುವುದರೊಂದಿಗೆ ಮುಂದಿನ ಆಡಿಷನ್‌ಗೆ ಆಯ್ಕೆಯಾಗಿರುವವರಿಗೆ ಹುರುಪನ್ನೂ ತುಂಬಿತ್ತು ಸ್ಪರ್ಧೆ. ಸೌಂದರ್ಯವೆಂದರೆ ಇಷ್ಟೆಲ್ಲಾ ಉಂಟೆ ಎಂದು ಆಶ್ಚರ್ಯದ ಕಂಗಳಿಂದ ನೋಡುತ್ತಾ ಕುಳಿತಿದ್ದರು ಅಲ್ಲಿದ್ದವರು.
–ಸುಮಲತಾ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT