ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಗಳದ್ದೇ ಸಮಸ್ಯೆ: ವಿಷ್ಣುವರ್ಧನ್‌

Last Updated 24 ಮೇ 2015, 19:30 IST
ಅಕ್ಷರ ಗಾತ್ರ

ಭರವಸೆಯ ಆಟಗಾರ ಜೆ. ವಿಷ್ಣುವರ್ಧನ್‌ ಡೇವಿಸ್‌ ಕಪ್‌ ತಂಡದಲ್ಲಿ ಭಾರತ ತಂಡ ಪ್ರತಿನಿಧಿಸಿದ್ದವರು. 2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಕಂಚು ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಬೆಳ್ಳಿ ಪದಕ ಜಯಿಸಿದ ಆಟಗಾರ.

2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಹಿರಿಯ ಆಟಗಾರ ಲಿಯಾಂಡರ್‌ ಪೇಸ್‌ ಜೊತೆಗೂಡಿ ಆಡಿ ಗಮನ ಸೆಳೆದಿದ್ದರು. 8ನೇ ವಯಸ್ಸಿನಲ್ಲಿ ಟೆನಿಸ್‌ ಅಂಗಳಕ್ಕೆ ಕಾಲಿಟ್ಟ ಅವರು, ಇಪ್ಪತ್ತು ವರ್ಷಗಳಿಂದ ದೇಶ, ವಿದೇಶಗಳಲ್ಲಿ ಹಲವಾರು ಟೂರ್ನಿಗಳಲ್ಲಿ ಆಡುತ್ತಾ ಬಂದಿದ್ದಾರೆ.

ಜುವಾರಿ ಗಾರ್ಡನ್‌ ಸಿಟಿ–ಐಟಿಎಫ್‌ ಟೂರ್ನಿ, ಬೆಂಗಳೂರು ಓಪನ್‌ ಐಟಿಎಫ್‌ ಟೂರ್ನಿ ಸೇರಿದಂತೆ ಹಲವೆಡೆ ಪ್ರಶಸ್ತಿ ಗೆದ್ದಿದ್ದಾರೆ. ಆರಡಿ ಎರಡಿಂಚು ಎತ್ತರ ನಿಲುವಿನ ಆಟಗಾರನ ಸರ್ವ್‌ ನೋಡುವುದೇ ಸೊಗಸು.

2012ರಲ್ಲಿ ಸಿಂಗಲ್ಸ್‌ನಲ್ಲಿ 262, ಡಬಲ್ಸ್‌ನಲ್ಲಿ 180ನೇ ರ‍್ಯಾಂಕಿಂಗ್‌ಹೊಂದಿದ್ದರು. ಆದರೆ, ಎರಡು ವರ್ಷಗಳಿಂದ ಗಾಯದ ಕಾರಣದಿಂದಾಗಿ ಆಟದಿಂದ ದೂರ ಉಳಿದಿದ್ದರು. ಬಹಳ ದಿನಗಳ ಕಾಲ ಹೊರಗುಳಿದಿದ್ದರಿಂದ ರ‍್ಯಾಂಕಿಂಗ್‌ನಲ್ಲಿ 868ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಐಟಿಎಫ್‌ ಟೂರ್ನಿಯಲ್ಲಿ ಆಡುವ ಮೂಲಕ ರ‍್ಯಾಂಕಿಂಗ್‌ಉತ್ತಮಪಡಿಸಿಕೊಳ್ಳಲು ಐಟಿಎಫ್‌ ಮಂಡ್ಯ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

* ದೇಶದಲ್ಲಿ ಟೆನಿಸ್‌ ಆಟದ ಬೆಳವಣಿಗೆ ಹೇಗಿದೆ. ಅದರಲ್ಲೂ ದಕ್ಷಿಣ ಭಾರತದ ಪರಿಸ್ಥಿತಿ ಕುರಿತು ಏನೆನ್ನಿಸುತ್ತದೆ?
ದೇಶದಲ್ಲಿ ಉತ್ತಮವಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಚೆನ್ನೈನಲ್ಲಿ ನಡೆಯುವ ಎಟಿಪಿ ಟೂರ್ನಿ ಸೇರಿದಂತೆ ದೊಡ್ಡ ಟೂರ್ನಿಗಳು ದಕ್ಷಿಣ ಭಾರತದಲ್ಲಿ ನಡೆಯುತ್ತಿವೆ. ಇದರಿಂದ ಆಟಗಾರರಿಗೆ ಬಹಳಷ್ಟು ಪ್ರೋತ್ಸಾಹ ಸಿಗುತ್ತಿದೆ. ಹತ್ತು ವರ್ಷಗಳ ನಂತರ ಭಾರತದ ಮೂವರು ಆಟಗಾರರು ವಿಶ್ವ ರ‍್ಯಾಂಕಿಂಗ್‌ಪಟ್ಟಿಯಲ್ಲಿ 200ರ ಒಳಗಿನ ಸ್ಥಾನ ಪಡೆದಿದ್ದಾರೆ.

* ನಿಮ್ಮ ಅನುಭವಕ್ಕೆ ಬಂದಂತೆ ಐಟಿಎಫ್‌ ಟೂರ್ನಿಯಲ್ಲಿ ಆಡುವುದಕ್ಕೂ ಡೇವಿಸ್‌ ಕಪ್‌ನಲ್ಲಿ ಆಡುವುದಕ್ಕೂ ವ್ಯತ್ಯಾಸ ಇದೆ ಎನಿಸುತ್ತದಾ?
ಅಂತಹ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಎಲ್ಲ ಟೂರ್ನಿ ಗಳಲ್ಲಿಯೂ ಗೆಲ್ಲಲೆಂದೇ ಆಟಗಾರರು ಬಂದಿರುತ್ತಾರೆ. ಆದರೆ, ಏಷ್ಯನ್‌ ಕ್ರೀಡಾಕೂಟ, ಡೇವಿಸ್‌ ಕಪ್‌ ಆಡುವಾಗ ದೇಶಕ್ಕಾಗಿ ಆಡುತ್ತಿದ್ದೇವೆ ಎಂಬ ಹೆಮ್ಮೆ ಇರುತ್ತದೆ. ಐಟಿಎಫ್‌ ಟೂರ್ನಿಗಳಲ್ಲಿ ವೈಯಕ್ತಿಕ ಸಾಧನೆಗಾಗಿ ಮತ್ತು ರ‍್ಯಾಂಕಿಂಗ್‌ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಆಡುತ್ತೇವೆ. ಆದರೆ, ಹೊಸ ಆಟಗಾರರಿಗೆ ಇಲ್ಲಿ ಬಹಳಷ್ಟು ಕಲಿಯಲು ಇರುತ್ತದೆ. ವಿದೇಶಿ ಆಟಗಾರರೊಂದಿಗೂ ಆಡುವ ಅವಕಾಶ ಸಿಗುತ್ತದೆ.

* ಟೆನಿಸ್‌ ಶ್ರೀಮಂತರ ಆಟ ಎನ್ನುತ್ತಾರೆ. ಖರ್ಚು ಹೇಗೆ ನಿಭಾಯಿಸುತ್ತೀರಿ?
ಬಹುತೇಕ ಟೆನಿಸ್‌ ಆಟಗಾರರಿಗೆ ಆರ್ಥಿಕ ವಿಷಯವೇ ಬಹುದೊಡ್ಡ ಸವಾಲಾಗಿರುತ್ತದೆ. ನನಗೆ ಈಗ ಒಎನ್‌ಜಿಸಿ ಕಂಪೆನಿಯ ಪ್ರಾಯೋಜಕತ್ವ ಸಿಕ್ಕಿದೆ. ಆದರೆ, ಕ್ರಮಾಂಕ ಪಟ್ಟಿಯಲ್ಲಿ ಇನ್ನೂರರ ಹತ್ತಿರ ಬರುವವರೆಗೂ ಬಹಳ ಕಷ್ಟಪಟ್ಟಿದ್ದೇನೆ.

ಉತ್ತಮ ರ‍್ಯಾಂಕಿಂಗ್‌ಪಡೆಯಬೇಕು ಎಂದರೆ ಒಬ್ಬ ಆಟಗಾರ ವರ್ಷಕ್ಕೆ 30 ಟೂರ್ನಿಗಳಲ್ಲಿ ಆಡಬೇಕು. 25 ರಿಂದ 30 ವಾರ ಆಟದಲ್ಲಿಯೇ ಕಳೆಯಬೇಕು. ಇಷ್ಟು ಟೂರ್ನಿಗಳನ್ನು ದೇಶದಲ್ಲಿ ಆಡಿದರೆ ₹25 ಲಕ್ಷ ಬೇಕಾಗುತ್ತದೆ. ಒಂದೆರಡು ಟೂರ್ನಿಗಳನ್ನು ವಿದೇಶದಲ್ಲಿ ಆಡಿದರೆ ಖರ್ಚು ಇನ್ನೂ ಹೆಚ್ಚಾಗುತ್ತದೆ.

ಟೆನಿಸ್‌ ಟೂರ್ನಿಗಳು ಹೆಚ್ಚು, ಹೆಚ್ಚು ನಡೆದರೆ ಆಟಕ್ಕೆ ಪ್ರಚಾರ ಸಿಗುತ್ತದೆ. ಆಗ ಪ್ರಯೋಜಕರೂ ಮುಂದೆ ಬರುತ್ತಾರೆ. ಆ ದಿಕ್ಕಿನಲ್ಲಿ ಒಂದಷ್ಟು ಪ್ರಯತ್ನಗಳು ನಡೆದಿವೆ. ದೇಶದಲ್ಲಿ ಈಗ ವರ್ಷಕ್ಕೆ 24 ಐಟಿಎಫ್‌ ಟೂರ್ನಿಗಳು ನಡೆಯುತ್ತಿವೆ.

* ಟೆನಿಸ್‌ ಆಟಗಾರರನ್ನು ಗಾಯದ ಸಮಸ್ಯೆ ಪದೇ ಪದೇ ಕಾಡುತ್ತಿರುತ್ತದೆ. ನಿಮಗೂ ಆ ಅನುಭವ ಆಗಿದೆಯೇ?
ಮೊಣಕಾಲಿನ ತೊಂದರೆಯಿಂದಾಗಿ ಎರಡು ವರ್ಷ ಗಳ ಕಾಲ ಆಟದಿಂದ ದೂರ ಇದ್ದೆ. ದೈಹಿಕ ಕಸರತ್ತಿನ ಆಟವಾಗಿರುವುದರಿಂದ ಗಾಯವಾಗುವುದು ಸಾಮಾನ್ಯ. ಗಾಯದಿಂದ ದೂರ ಇರಬೇಕು ಎಂದರೆ ಪ್ರತಿಯೊಬ್ಬ ಆಟಗಾರನೂ ಫಿಸಿಯೋಥೆರೆಪಿಸ್ಟ್‌ ಹೊಂದಿರಬೇಕು. ಎಷ್ಟು ಆಟಗಾರರಿಗೆ ಅವರನ್ನು ನೇಮಿಸಿಕೊಳ್ಳಲು ಸಾಧ್ಯ? ಸರಿಯಾದ ಮಾರ್ಗದರ್ಶನದ ಕೊರತೆ ಯಿಂದ ಆಗಾಗ ಗಾಯದ ಸಮಸ್ಯೆಗೆ ಸಿಲುಕುತ್ತೇವೆ.

* ಗ್ರಾಂಡ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಭಾರತೀಯರು ಏಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತಿಲ್ಲ?
ಸೌಲಭ್ಯಗಳ ಕೊರತೆಯೇ ಪ್ರಮುಖ ಕಾರಣ. ದೇಶದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಹಲವು ದೇಶಗಳಲ್ಲಿ ಆಟಗಾರರಿಗೆ ಎಲ್ಲ ಸೌಲಭ್ಯ ಒಂದೇ ಕಡೆಗೆ ಸಿಗುತ್ತದೆ. ನಮಗೆ ಹಾಗಾಗುವುದಿಲ್ಲ. ಒಂದು ಹಂತಕ್ಕೆ ಬರುವವರೆಗೂ ಪ್ರಾಯೋಜಕರೇ ಸಿಗು ವುದಿಲ್ಲ. ಅವರು ಸಿಗುವ ವೇಳೆಗೆ ಆಟದ ಶಕ್ತಿ ಕುಂದಿರುತ್ತದೆ.

ಉತ್ತಮ ಮೈದಾನ, ಜಿಮ್‌ ತರಬೇತುದಾರ, ಆಟದ ತರಬೇತುದಾರ, ಫಿಸಿಕಲ್‌ ಟ್ರೇನರ್‌, ಫಿಸಿಯೋಥೆರೆಪಿಸ್ಟ್‌ ಒಂದೇ ಕಡೆಗೆ ದೊರಕಬೇಕು.

ಈ ಟೂರ್ನಿಗೆ ಆಟವಾಡಲು ಬಂದಿರುವ ವಿದೇಶಿ ಆಟಗಾರರು, ನಮ್ಮ ದೇಶದ ಆಟಗಾರರು ಆಡುವ ರ‍್ಯಾಂಕಿಂಗ್‌ಅನ್ನೇ ಹೊಂದಿದ್ದಾರೆ. ಅವರಿಗೆ ಪ್ರಾಯೋ ಜಕತ್ವ ಇದೆ. ಅವರೊಂದಿಗೆ ತರಬೇತುದಾರರನ್ನು ಕರೆದುಕೊಂಡು ಬಂದಿದ್ದಾರೆ. ಇಲ್ಲಿರುವ ಬಹಳಷ್ಟು ಭಾರತೀಯ ಆಟಗಾರರಿಗೆ ಪ್ರಾಯೋಜಕತ್ವ ಸಿಕ್ಕಿಲ್ಲ. ನಮ್ಮೊಂದಿಗೆ ತರಬೇತುದಾರರನ್ನು ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

* ಮಂಡ್ಯದಲ್ಲಿ ಆಡುತ್ತಿರುವ ಅನುಭವ ಹೇಗಿದೆ?
ಮೊದಲ ಬಾರಿ ಇಲ್ಲಿ ಆಡುತ್ತಿದ್ದೇನೆ. ಕೋರ್ಟ್‌ ತುಂಬಾ ಚೆನ್ನಾಗಿದೆ. ಸೌಲಭ್ಯಗಳೂ ಇವೆ. ಕರ್ನಾಟಕದ ಆಟಗಾರ ಸೂರಜ್‌ ಪ್ರಬೋಧ ಚೆನ್ನಾಗಿ ಆಡುತ್ತಿದ್ದಾರೆ. ಇಲ್ಲಿನ ಆಟಗಾರರಿಗೆ ಎಲ್ಲ ಸೌಲಭ್ಯ ಒದಗಿಸಿದರೆ ಐದು ವರ್ಷಗಳಲ್ಲಿ ಒಬ್ಬ ಅಂತರರಾಷ್ಟ್ರೀಯ ಆಟಗಾರ ಮೂಡಿ ಬರುವ ಎಲ್ಲಾ ಸಾಧ್ಯತೆಗಳಿವೆ.

ಮಂಡ್ಯದಲ್ಲಿ ಪ್ರೋತ್ಸಾಹದ ಕೊರತೆ
ಮಂಡ್ಯದಲ್ಲಿ ಮೂರನೇ ಬಾರಿಗೆ ಐಟಿಎಫ್‌ ಟೂರ್ನಿ ಆಯೋಜಿಸಲಾಗಿದೆ. ಈ ಹಿಂದೆ 2009, 2012ರಲ್ಲಿ ನಡೆದಿತ್ತು. ಮೂರೂ ಟೂರ್ನಿಗಳು ಪ್ರೇಕ್ಷಕರ ಕೊರತೆ ಎದುರಿಸಿವೆ. ಆಟಗಾರರ ಪೋಷಕರನ್ನು ಹೊರತುಪಡಿಸಿದರೆ ಬೆರಳೆಣಿಕೆಯಷ್ಟೂ ಪ್ರೇಕ್ಷಕರು ಇರುವುದಿಲ್ಲ.

ದೇಶ, ವಿದೇಶಗಳ ಆಟಗಾರರು ಮಂಡ್ಯದಲ್ಲಿ ತಮ್ಮ ಆಟದ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಆಟ ವೀಕ್ಷಿಸಲು ಪ್ರೇಕ್ಷಕರೇ ಇಲ್ಲ. ಪೋಷಕರು ಹೋಗಲಿ, ಟೆನಿಸ್‌ ತರಬೇತಿ ಪಡೆಯುತ್ತಿರುವ ಬಹುತೇಕ ಉಪಯೋನ್ಮುಖ ಆಟಗಾರರೂ ಇತ್ತ ಮುಖ ಮಾಡುತ್ತಿಲ್ಲ.ಮಂಡ್ಯದ ಪಿಇಟಿ ಕ್ರೀಡಾಂಗಣದಲ್ಲಿ ಟೆನಿಸ್‌ ತರಬೇತಿ ನಡೆಯುತ್ತಿದೆ. 45 ಮಂದಿ ಆಟಗಾರರು ಪ್ರತಿನಿತ್ಯ ತರಬೇತಿಗೆ ಬರುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವವರು ಸದ್ಯಕ್ಕೆ ಯಾರು ಇಲ್ಲ.

ಪೋಷಕರಿಂದ ಈ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಇಲ್ಲ. ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಇಲ್ಲಿ ತರಬೇತಿ ನೀಡುತ್ತಿರುವ ಸುಮುಖ್‌. ಸ್ಥಳೀಯ ಪ್ರತಿಭೆಗಳಾದ ತನುಶ್ರೀ, ಪುನೀತ್‌, ಚಂದ ನಾಮ ಸುಧನ್ವಾ ಎನ್ನುವ ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ಈಗ ಉನ್ನತ ವ್ಯಾಸಂಗಕ್ಕಾಗಿ ಹೊರ ಊರುಗಳಿಗೆ ಹೋಗಿದ್ದಾರೆ. ಕೆಲವರು ಅಭ್ಯಾಸದ ಕಾರಣಕ್ಕಾಗಿ ಆಟದಿಂದ ದೂರ ಸರಿದಿದ್ದಾರೆ. ಟೆನಿಸ್‌ ಟೂರ್ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಅಪರೂಪಕ್ಕೊಮ್ಮೆ ನಡೆದರೆ ಪ್ರಯೋಜನ ಆಗುವುದಿಲ್ಲ ಎನ್ನುತ್ತಾರೆ ಸುಮುಖ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT