ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೈ ಡೈವಿಂಗ್‌ನಲ್ಲಿ ಗೂಗಲ್ ಉಪಾಧ್ಯಕ್ಷ ವಿಶ್ವ ದಾಖಲೆ

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಸಾಧನೆ ಮತ್ತು ಸಾಹಸಕ್ಕೆ ವಯಸ್ಸು ಸೇರಿ ಯಾವುದೂ ಅಡ್ಡಿಯಾ­ಗದು ಎಂಬು­ದನ್ನು ಅಂತರ್ಜಾಲದ ಬೃಹತ್‌  ಸಂಸ್ಥೆ ‘ಗೂಗಲ್‌’ನ ಹಿರಿಯ ಉಪಾ­ಧ್ಯಕ್ಷ ಅಲನ್ ಯೂಸ್ಟೇಸ್ (57) ಸಾಬೀತು ಮಾಡಿದ್ದಾರೆ. ಅವರು 1.35 ಲಕ್ಷ ಅಡಿ ಎತ್ತರ­ದಿಂದ  (ಭೂಮಿ­ಯಿಂದ ಸುಮಾರು 40 ಕಿ.ಮೀ. ಮೇಲಿಂದ) ಜಿಗಿಯುವ ಮೂಲಕ  ‘ಸ್ಕೈಡೈವಿಂಗ್’ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ.

‘ಪ್ಯಾರಗಾನ್ ಸ್ಪೇಸ್ ಡೆವಲ­ಪ್‌ಮೆಂಟ್ ಕಾರ್ಪೊರೇಷನ್’ ಈ ಸಾಹಸವನ್ನು ಆಯೋಜಿಸಿತ್ತು. ಭೂಮಿ­ಯಿಂದ ಒಂದು ಲಕ್ಷ ಅಡಿಗಿಂತ  ಮೇಲಿನ ವಾಯು­ಗೋಳ­ವನ್ನು ಅರಿಯುವ ಮಾನವ ಸಹಿತ ಯೋಜನೆ ಅಂಗವಾಗಿ ಅಲನ್ ಈ ಸಾಹಸ ಕೈಗೊಂಡಿ­ದ್ದರು. ಅಲನ್ 4 ಗಂಟೆಯಲ್ಲಿ ಈ ಸಾಹಸ­­ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿ­ಸಿದ್ದಾರೆ.

ವಿಶೇಷವಾಗಿ ನಿರ್ಮಿಸಿದ ಬಾಹ್ಯಾ­ಕಾಶ ದಿರಿಸು (ಸ್ಪೇಸ್ ಸೂಟ್) ಧರಿ­ಸಿದ್ದ ಅವರು ಹೀಲಿಯಂ ಬಲೂನಿ­ನಲ್ಲಿ ಕುಳಿತು ನ್ಯೂ ಮೆಕ್ಸಿಕೊದ ರೋಸ್‌­ವೆಲ್‌ನಿಂದ ನಭಕ್ಕೆ ಹಾರಿದ್ದರು.  ನಿಮಿಷಕ್ಕೆ  ಸಾವಿರ ಅಡಿ­ಗಿಂತಲೂ ಹೆಚ್ಚಿನ ವೇಗದಲ್ಲಿ ಎತ್ತರಕ್ಕೆ ಚಲಿಸಿದ ಬಲೂನು 1.35 ಲಕ್ಷ ಅಡಿ ಎತ್ತರ ತಲುಪಲು ಎರಡು ಗಂಟೆ 30 ನಿಮಿಷ ತೆಗೆದು­ಕೊಂಡಿತ್ತು. ಆ ಎತ್ತರ­ದಲ್ಲಿ ಅರ್ಧ ಗಂಟೆ ಕಳೆದ ಅಲನ್, ವಾಯು­ಗೋಳದಿಂದ ಕಾಣುವ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡರು ಎಂದು ಪ್ಯಾರಗಾನ್ ತಿಳಿಸಿದೆ.

ನಂತರ ಅವರು ಬಲೂನಿನಿಂದ ತಮ್ಮನ್ನು ಬಿಡಿಸಿ­ಕೊಂಡು ಹೊರಗೆ ಜಿಗಿದರು. ‘ಸೂಪರ್ ಸಾನಿಕ್’ ವೇಗದಲ್ಲಿ (ಗಂಟೆಗೆ ಸುಮಾರು 1200 ಕಿ.ಮಿ)  ಅವ­ರನ್ನು ವಾಯುಮಂಡಲ­ದಿಂದ ಭುವಿ­ಯತ್ತ ತಳ್ಳಲು ಸ್ಪೇಸ್ ಸೂಟ್‌ನಲ್ಲಿ ಸಣ್ಣಪ್ರಮಾಣದ ಸ್ಫೋಟಕ ಸಾಧನ­ ಅಳವಡಿಸಲಾಗಿತ್ತು. ಮುಂದಿನ 5 ನಿಮಿಷದಲ್ಲಿ ಸುಮಾರು 18 ಸಾವಿರ ಅಡಿಯ­ವರೆಗೆ  ಇಳಿದರು. ನಂತರ ಪ್ಯಾರಾ­ಷೂಟ್ ಬಿಡಿಸಿ, ಸುರಕ್ಷಿತವಾಗಿ ನೆಲಮುಟ್ಟಿದರು ಎಂದು ಪ್ಯಾರಗಾನ್‌ ತಿಳಿಸಿದೆ. ‘ಆ ಅನುಭವ ಅದ್ಭುತವಾಗಿತ್ತು. ಅಲ್ಲಿ ನೀವು ಬಾಹ್ಯಾಕಾಶದ ಕತ್ತಲೆ­ಯನ್ನು ನೋಡಬಹುದು, ವಾಯು­ಗೋಳದ ಪದರಗಳನ್ನು ಅನುಭವಿಸ­ಬಹುದು’ ಎಂದು ಅಲನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಹಿಂದಿನ ದಾಖಲೆ
ಇದಕ್ಕೂ ಮೊದಲು ಅತಿ ಎತ್ತರದಿಂದ ಜಿಗಿದ ದಾಖಲೆ ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬೌಮ್‌ಗಾರ್ನರ್ ಹೆಸರಿನ­ಲ್ಲಿತ್ತು. ಅವರು 2012ರಲ್ಲಿ 1.28 ಲಕ್ಷ ಅಡಿ ಎತ್ತರದಿಂದ ಜಿಗಿದು ಅವರು ದಾಖಲೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT