ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀವಾದಿ ವಾಸ್ತವಕ್ಕೊಂದು ಪುರುಷಾರ್ಥ

Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹುದುಗಲಾರದ ದುಃಖ
ಮೂಲ: ವಸಂತ ಕಣ್ಣಬಿರನ್
ಅನುವಾದ ಸಂಯೋಜಕರು:
ಡಾ. ಎಂ.ಎಸ್. ಆಶಾದೇವಿ
ಪು: 376; ಬೆ: ರೂ. 310
ಪ್ರ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್‌ ಎದುರು, ವಿದ್ಯಾನಗರ, ಶಿವಮೊಗ್ಗ– 577 203. ಫೋನ್‌: 94491 74662

ಯಾರಾದರೂ ಅಚಾನಕ್ ತೀರಿಕೊಂಡಾಗ ಅವರೊಂದಿಗಿನ ನಮ್ಮ ಕೊನೆಯ ಭೇಟಿಯನ್ನು ವಿವರವಾಗಿ ಮೆಲುಕು ಹಾಕುವುದು, ಮತ್ತು ಅವರ ಸಾವಿನ ಸುದ್ದಿಯನ್ನು ನಮಗೆ ತಲುಪಿಸಿದವರೊಂದಿಗೆ ಅದನ್ನು ಸುವಿಸ್ತಾರಗೊಳಿಸುವುದು, ನಮ್ಮ ಸಂಸ್ಕೃತಿಯ ಮುಖ್ಯ ಚಟಗಳಲ್ಲೊಂದು. ನಾವೊಬ್ಬರೇ ಇದ್ದಾಗ ಹಾಗೆ ನೆನಪಿಸಿಕೊಳ್ಳುವುದು, ನಮಗೆ ನಾವೇ ಶೋಕಾಚರಣೆಯನ್ನು ಕಥಿಸುವ ಮೌನಧ್ಯಾನ ಅತಿವಿರಳ. ಮತ್ತೊಬ್ಬರಿರಬೇಕು, ಅವರಿಗೂ ನಮಗೂ ತೀರಿಕೊಂಡವರ ಪರಿಚಯವಿರಬೇಕು, ನಾವಿಬ್ಬರೂ ಕೂಡಿ ಶ್ರದ್ಧಾಂಜಲಿಯನ್ನು ವಿವರಪೂರ್ಣ ಕಥಾನಕ (ನರೇಟಿವ್) ಮೂಲಕವೇ ಮಾಡಬೇಕು. ಸತ್ತವರನ್ನು ನಾವು ಬೀಳ್ಕೊಡುವ, ಅವರಿಂದ ನಮ್ಮ ಭಾವನಾತ್ಮಕ ಬಾಕಿವಸೂಲಿ ಮಾಡಿಕೊಳ್ಳುವ ಅತ್ಯಂತ ಪರಿಣಾಮಕಾರಿ ವಿಧಾನ ಇದು.

ಇಂಗ್ಲೀಷಿನಲ್ಲಿ ವಸಂತ ಕಣ್ಣಬಿರನ್ ಅವರು ಹದಿಮೂರು ಮಂದಿ ಮಹಿಳೆಯರೊಂದಿಗೆ ಅಗಲಿದ ಅವರುಗಳ ಬಾಳಸಂಗಾತಿಗಳ ಬಗ್ಗೆ ಸಂವಾದಿಸಿರುವ ಈ ಪುಸ್ತಕದ (ಅ ಗ್ರೀಫ್ ಟು ಬರಿ) ಅನೇಕ ಅಧ್ಯಾಯಗಳನ್ನು ಅನೇಕರು ಕನ್ನಡಕ್ಕೆ ಅನುವಾದಿಸಿದ್ದು ಎಂ.ಎಸ್. ಆಶಾದೇವಿ ಇದರ ಅನುವಾದ ಸಂಯೋಜಕರಾಗಿ ಪುನರಾರ್ಥ ಉದ್ದೀಪನಾ ಮುನ್ನುಡಿಯನ್ನೂ ಬರೆದಿದ್ದಾರೆ. ಮೂಲದಲ್ಲಿ ಪ್ರಶ್ನೆಗಳನ್ನು ಕೇಳಿರುವ ವಸಂತ ಅವರು, ಸ್ವತಃ ತಮ್ಮ ಪತಿ ಬದುಕಿದ್ದಾಗ ಆರಂಭಿಸಿದ ಈ ಪುಸ್ತಕದ ಯೋಜನೆ, ಅವರನ್ನು ಕಳೆದುಕೊಂಡಾಗ ಪೂರೈಸಿದ್ದು, ತಮ್ಮ ಕಥೆಯನ್ನೂ ಇದರಲ್ಲಿ ಸೇರಿಸಿದ್ದಾರೆ.

ಇವರ ಪ್ರಶ್ನೆಗಳಲ್ಲಿ ಮುಖ್ಯವಾಗಿರುವ, ಮರುಕಳಿಸುವ ಒಂದಂಶವೆಂದರೆ ಗಂಡಂದಿರು ತೀರಿಕೊಂಡ ಸಂದರ್ಭದ ವಿವರಣೆಯನ್ನು ಅವರ ಪತ್ನಿಯರಿಂದ ಕೇಳಿ ಬರೆದುಕೊಳ್ಳುವ ಕುತೂಹಲ! ಇನ್ನಿತರ ಹಲವಾರು ಸಾಧ್ಯತೆ, ಸಾಧನೆಗಳ ಮೊತ್ತವಾಗಿದ್ದಾಗ್ಯೂ ಈ ಪುಸ್ತಕವು ಕುಟುಂಬದಲ್ಲಿನ ಆತ್ಮೀಯರ ಸಾವು ಹೇಗೆ ಹತ್ತಿರದವರನ್ನು ಅಧೀರಗೊಳಿಸಿದರೂ ಅದೂರಗೊಳಿಸಲಾರದು/ಬಾರದು ಎಂಬ ಇತ್ಯಾತ್ಮಕ ತಾತ್ವಿಕತೆಗೆ ಒತ್ತು ನೀಡುವ ಸಾವಿನ ಚೇತೋಹಾರಿ ಯತ್ನವೆನಿಸುತ್ತದೆ.

* * * 

ಇದೊಂದು ಗಾಢವಾಗಿ ಓದಿಸಿಕೊಳ್ಳುತ್ತ, ಕ್ರಮೇಣ ನಮ್ಮೊಳಗೆ ಹುದಗಿರುವ ವ್ಯಕ್ತಿಗತ ಶೋಕವನ್ನೂ ಧ್ಯಾನಿಸುವಂತೆ ಮಾಡುವ ಕೃತಿ. ಪ್ರಜ್ಞಾವಂತ ಹಾಗೂ ಅನುಭವಿ, ವೃತ್ತಿನಿರತ ಹಾಗೂ ವಯೋವೃದ್ಧ ಹೆಂಗಸರು ಗಂಡನ್ನು ಭಾವಿಸುವ ಕಥನವೂ ಹೌದು. ಗಂಡನ್ನು ತಮ್ಮ ಪತಿಯ ರೂಪದಲ್ಲಿ ಭಾವಿಸುವಾಗ ಇಲ್ಲಿನ ಹದಿಮೂರು ಹೆಂಗಸರಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಕಥೆಗಳನ್ನು ಹೇಳುವ ಯತ್ನದಲ್ಲಿ ಗಂಡಿನ ಅನಿವಾರ್ಯ ಇರುವಿಕೆಯ ಪ್ರಸ್ತುತಿಯ ನೆನಪುಗಳಿಲ್ಲಿವೆ. ವೈಧವ್ಯದ ಆವರಣದಿಂದ ಮಾತನಾಡುವ ಇವರೆಲ್ಲರೂ, ಈಗ ಇಲ್ಲವಾಗಿರುವ ತಮ್ಮ ತಮ್ಮ ಪತಿಯರ ಅನುಪಸ್ಥಿತಿಯ ಅನುಪಲಬ್ಧತೆಯಿಂದಾಗಿ ಉಂಟಾಗಿರುವ ಮಾನಸಿಕ ಅಂಗವೈಕಲ್ಯತೆಯ ಚಿತ್ರಣವನ್ನು ಇಲ್ಲಿ ನೀಡುತ್ತಾರೆ. ಆ ವೈಕಲ್ಯತೆ ಒಂದರ್ಥದಲ್ಲಿ ಪತಿಯ ಸಾವಿನ ಮುನ್ನ ಹಾಗೂ ನಂತರ ಎಂಬ ಎರಡು ವ್ಯಕ್ತಿತ್ವಗಳನ್ನಾಗಿ ಇಲ್ಲಿನ ಪ್ರತಿಯೊಬ್ಬ ಮಾತುಗಾರ್ತಿಯರನ್ನೂ ಸಹ ವಿಭಜಿಸಿಬಿಡುತ್ತದೆ. ಅಗಲಿಕೆಯ ಅನಿವಾರ್ಯ ನೋವು ಇಲ್ಲಿನ ಸ್ಥಾಯಿಭಾವವಾಗಿದೆ. ಹಲವು ಧ್ವನಿಗಳ ಏಕತ್ರ ಸ್ವರವಿದು, ನಮ್ಮ ನಿಮ್ಮೆಲ್ಲರದ್ದು. ಒಂದರ್ಥದ ‘ಡೇಜಾವು’ (ಎಲ್ಲರ ಕಥಗಳೂ ಒಂದೇ ಎನ್ನಿಸಿಬಿಡುವುದು ದುಃಖದಲ್ಲಿ ಮಾತ್ರವೇ!) ಇದು.

ಇವುಗಳಲ್ಲಿ ಬಹುಪಾಲು ಹಲವು ರೀತಿಯ ‘ದೀರ್ಘಾಯುಷ್ಯ’ದ ಕಥೆಗಳಾಗಿವೆ. ಸ್ವತಃ ವಸಂತ (ಮೂಲ ಸಂದರ್ಶಕಿ) ತಮ್ಮ ಪತಿ ಕಣ್ಣಬಿರನ್ ಅವರೊಂದಿಗೆ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಬಾಳುವೆ ಮಾಡಿದ್ದಾರೆ. ಇಳಾ ಭಟ್ ಅವರ ಗಾಂಧಿವಾದಿ ನಂಬಿಕೆಯ ಶಿಸ್ತಿನಿಂದಾಗಿ ಇಪ್ಪತ್ತು ವರ್ಷವಾದರೂ ಗಾಜಿನ ಲೋಟಗಳು ಒಡೆಯದೆ ಉಳಿದಿರುತ್ತವೆ. ಮದುವೆಯಾದ ಕೂಡಲೇ ಶ್ರೀಧರ್ ಅವರನ್ನು ಕಳೆದುಕೊಳ್ಳುವ ಕ್ಯಾಥಿ, ಆ ನೆನಪನ್ನೂ ಶ್ರೀಧರರನ್ನೂ ಒಟ್ಟಾಗಿ ಜೀವಂತವಿಡುವ ಸಲುವಾಗಿ ಭಾರತದ ಮಗುವೊಂದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ ಮಾರನೇ ದಿನವೇ ಆ ಮಗು ತೀರಿಕೊಳ್ಳುತ್ತದೆ.

ಗಂಡ-ಮಗುವನ್ನು ಹೀಗೆ ಕಳೆದುಕೊಳ್ಳುವ ಆಕೆ ಮತ್ತೆ ಶ್ರೀಧರನನ್ನೇ ಹೋಲುವ ಮತ್ತೊಂದು ಮಗುವನ್ನು ದತ್ತು ಪಡೆವ ಮೂಲಕ; ರಾಮೇಶ್ವರಿದೇವಿ ತಾನು ಒಲ್ಲದ ಗಂಡನಿಗೆ ಬೇರೊಂದು ಮದುವೆ ಮಾಡಿ, ಆತನಿಂದ ಬೇರ್ಪಟ್ಟು, ತಾನು ಬಯಸಿದ ಬಾಲನ್‍ರೊಂದಿಗೆ ವಿವಾಹವಾಗುವಂತಹ ಯತ್ನ; ಕೊಯ್ಲಿ ರಾಯ್ ತನ್ನ ಗಂಡನ ಶವಸಂಸ್ಕಾರವನ್ನು ಅಪರಿಚಿತ ಸ್ಥಳದಲ್ಲಿ ಏರ್ಪಡಿಸಿದ ರೀತಿಯನ್ನು ಸುದೀರ್ಘವಾಗಿ ವಿವರಿಸುವ ಪರಿ– ಇವೆಲ್ಲವೂ ಕಾಲವನ್ನು ವಿಸ್ತರಿಸುವ ಮನುಷ್ಯ ಯತ್ನ. ಅದು ಕಾಲವನ್ನು ಉದ್ದೀಪಿಸಿ, ನೆನಪುಗಳನ್ನೂ ಮೂಳೆ-ಮಾಂಸಗಳಿಂದ ಆವೃತ್ತವಾದ ವ್ಯಕ್ತಿತ್ವವೊಂದನ್ನಾಗಿಸುವ ಅಪರೂಪದ ರೂಪಕದ ಯತ್ನಗಳ ಸರಮಾಲೆ ಈ ಪುಸ್ತಕ. ‘ಸ್ತ್ರೀವಾದಿ ಕಾಲ’ ಅಥವಾ ಕಾಲವನ್ನು ಸ್ತ್ರೀತನ ಹೇಗೆ ಅನನ್ಯವಾಗಿ ಕೂಡಿಡಬಲ್ಲದು ಎಂಬುದಕ್ಕೆ ಇಲ್ಲಿ ಹಲವಾರು ಸಾಕ್ಷಗಳಿವೆ. ‘ಗಂಡು ಕಾಲ’ಕ್ಕಿಂತಲೂ ಇದು ಭಿನ್ನ, ಸುದೀರ್ಘ ಹಾಗೂ ನಿಗೂಢ.

ಪತಿಯ ಇರುವಿಕೆಯ ಕಾಲಕ್ಕೆ ತಮ್ಮ ಬದುಕು ಪೂರ್ಣಪ್ರಮಾಣದ್ದಾಗಿದ್ದು, ಈಗ ಅದು ಊನಗೊಂಡಿದೆ, ಅದರೊಂದಿಗೆ ಅನಿವಾರ್ಯ ಒಪ್ಪಂದ ಮಾಡಿಕೊಂಡೇ ಬದುಕು ಸಾಗಿಸಲಾಗುತ್ತಿದೆ ಎಂಬರ್ಥದ ಧ್ವನಿಯನ್ನು ಇಲ್ಲಿನ ಕಥನಗಳಲ್ಲಿ ಸುಲಭವಾಗಿ ಓದಿಬಿಡುವ ಅಪಾಯವೂ ಇದೆ. ಆತ್ಮಕಥನದ ವೈವಿಧ್ಯಮಯ ಮಾದರಿಯು ಕಥನಕ್ರಮದ ಮಾಯೆಯಲ್ಲಿ ಸಿಲುಕಿಕೊಂಡಾಗ ಆಗಬಹುದಾದ ಅಪಾಯ ಮತ್ತು ಸಾಧ್ಯತೆ ಇದು. ಜೊತೆಗೆ ಎಲ್ಲವೂ ಸಹ ಅಗಲಿಕೆಯ ಸ್ಥಾಯಿಭಾವದ ನೆಲೆಯಿಂದಲೇ ಆರಂಭಗೊಂಡಿರುವುದರಿಂದ, ಒಂದಿಡೀ ವೈಶಿಷ್ಟಪೂರ್ಣ ಕುತೂಹಲವು ಪ್ರತಿಯೊಂದರ ಆರಂಭದಲ್ಲಿ ನಮ್ಮನ್ನು ಗಾಢವಾಗಿ ತಟ್ಟುತ್ತದೆ ಮತ್ತು ಕುತೂಹಲಕರ ಘಟನೆಗಳ ಆಶ್ವಾಸನೆಯನ್ನೂ ನೀಡುತ್ತ ಹೋಗುತ್ತದೆ.

ಅಂದರೆ ಹದಿಮೂರು ಮಹಿಳೆಯರು, ನಿರ್ದಿಷ್ಟ ರಂಗಗಳಲ್ಲಿ ಸಾಧನೆ ಮಾಡಿರುವವರು, ತಮ್ಮ ಜೊತೆಗಾರನ ಅಗಲಿಕೆ ಹಾಗೂ ವೃದ್ಧಾಪ್ಯ ಎರಡನ್ನೂ ಒಟ್ಟಿಗೆ ನಿಭಾಯಿಸುವ ಪರಿಯ ವಿವರಣೆಯು ಏಕತಾನತೆಯೆಂಬ ವೈವಿಧ್ಯತೆಯಾಗಿ ಇಲ್ಲಿ ಪರಿಣಮಿಸಿದೆ. ಪ್ರಸ್ತುತವು ಭೂತದ ಅನಿವಾರ್ಯ ಮುಂದುವರಿಕೆ ಅಥವ ಅದರೊಂದಿಗಿನ ಒಡಂಬಡಿಕೆ ಎಂದು ಈ ಪುಸ್ತಕ ಸಾರಿ ಹೇಳುತ್ತದೆ. ತನ್ಮೂಲಕ ಸ್ತ್ರೀವಾದವು ‘ಆತ್ಮಕಥನ’, ‘ಪಿತೃಪ್ರಧಾನ್ಯತೆ’, ‘ಹಿನ್ನೆನಪು’ (ನಾಸ್ಟಾಲ್ಜಿಯ) ಹಾಗೂ ‘ಹುದುಗಲಾರದ ದುಃಖ’ (ಮೆಲಾಂಕಲಿ)ಗಳ ಸಮ್ಮಿಶ್ರಣದಲ್ಲಿ ವಾಚ್ಯ ರೂಪದಲ್ಲಿ ಅಭಿವ್ಯಕ್ತಿಸುವ ಶೈಕ್ಷಣಿಕ ಮಾದರಿಗೆ ಈ ಗುಚ್ಛವು ಒಂದು ಒಳ್ಳೆಯ ಮಾದರಿ. ಸಮಕಾಲೀನ ಎನ್ನಬಹುದಾದ, ಗೆಳತಿಯರನ್ನು ಕಳೆದುಕೊಂಡ ಗಂಡಸರ ನೈಜಕಥೆಗಳು ಈ ಪುಸ್ತಕದಲ್ಲಿದ್ದಿದ್ದರೆ (ಆಶಾದೇವಿಯವರು ತುಂಬ ಮಾರ್ಮಿಕವಾಗಿ ಗಂಡು-ತರ್ಜುಮೆಗಾರರಿಂದಲೂ ಕನ್ನಡೀಕರಿಸಿರುವುದರಿಂದಾಗಿ ಈ ಉಪಾಯ ಹೊಳೆದದ್ದು), ಪ್ರಾಯಶಃ ಸ್ತ್ರೀವಾದದೊಳಗಣ ಸೀಮಿತ ಬಾಟಲ್‍ನೆಕ್ ಓದುವಿಕೆಯಿಂದ ಈ ಪುಸ್ತಕವನ್ನು ಮುಕ್ತಗೊಳಿಸುವ ಹೆಚ್ಚು ವಿಸ್ತಾರ ಸಾಧ್ಯತೆ ಇರುತ್ತಿತ್ತು. ಮೂಲದ ಈ ಸಮಸ್ಯೆಯನ್ನು ಭಾಷಾಂತರದಲ್ಲಿ ಆಶಾದೇವಿ ಅವರು ಒಂದರ್ಥದಲ್ಲಿ ನಿವಾರಿಸಿರುವುದು ಅರ್ಥಪೂರ್ಣವಾಗಿದೆ.

* * *

ದಾಖಲಾತಿ ಅಥವ ಡಾಕ್ಯುಮೆಂಟರಿ ನೆಲೆಯ ಕಥನಕ್ಕಿರುವ ಮಾಂತ್ರಿಕ ಶಕ್ತಿಯೆಂದರೆ ಅದು ನೈಜತೆಯನ್ನು ಅನಿವಾರ್ಯವಾಗಿ ಆಧರಿಸುವ ಪರಿ. ಇಲ್ಲಿನ ‘ನೈಜತೆ’ ಮತ್ತು ‘ಅಗಲಿಕೆ’ಯ ಸಮ್ಮಿಶ್ರಣವು ಭಾವೋದ್ವೇಗದ ಪ್ರತಿಫಲದ ದೆಸೆಯಿಂದಾಗಿ ಕಲಾತ್ಮಕ ಸಿನಿಮಾಗಳಿಗೆ, ರೋಚಕ ನಾಟಕೀಯ ಅಭಿವ್ಯಕ್ತಿಗಳಿಗೆ ಮೂಲಸಾಮಗ್ರಿಯೂ ಆಗಿಬಿಡುತ್ತದೆ. ಸುಮಾರು ಮುನ್ನೂರು ಪುಟಗಳಷ್ಟು ಸುದೀರ್ಘವಾಗಿರುವ ಈ ಪುಸ್ತಕದ ನಿರ್ಮಿತಿಗೆ ಕಾರಣಕರ್ತರಾದ ವಸಂತ ಕಣ್ಣಬಿರನ್ ಅವರ ಕಥೆಯೂ ಇದರಲ್ಲಿ ಸೇರಿಕೊಂಡಿದೆ. ಇದು ಸಮಾನ ಮನಸ್ಕರ ಕಥೆಯೂ ಹೌದು, ವಸಂತರ ವೈಯಕ್ತಿಕ ಆತ್ಮಚರಿತ್ರೆಯ ವಿರಾಟ್ ಸ್ವರೂಪವೂ ಹೌದು. ಗಂಡಿನ ಬಗ್ಗೆ ಆತನನ್ನು ಹತ್ತಿರದಿಂದ, ಸುದೀರ್ಘ ಕಾಲ ಕುಟುಂಬವೆಂಬ ನಿರ್ಮಿತಿಯ ಒಳಗಿನಿಂದ ಭಾರತೀಯ ಹೆಣ್ಣು ಕಂಡ ಅನುಭವದ ಮೊತ್ತವೂ ಹೌದು.

ಮಾತನ್ನು ಪದಗಳಿಗೆ ಇಳಿಸುವಾಗ ಅದು ಪಡೆದ ಮೂರ್ತರೂಪದ ಜೊತೆಗೆ, ಪಕ್ಕದಲ್ಲಿ ಕಣ್ಣಬಿರನ್ ಅವರು ಕೇಳುವ ಪ್ರಶ್ನೆಗಳು ಬಹಳ ಒರಟಾಗಿಯೂ, ಉಗ್ರ ಸ್ತ್ರೀಪರ ನಿಲುವಿನಿಂದಲೇ ಮಾತನಾಡುವ ಸೂಚನೆಯನ್ನೂ, ಪದೇ ಪದೇ ಒತ್ತಾಯಿಸುವುದೂ ಇರುಸುಮುರಿಸಿನದಾದರೂ, ಸ್ವತಃ ವಸಂತರೇ ಇದನ್ನು ತಮ್ಮ ಮುನ್ನುಡಿಯಲ್ಲಿ ಬೊಟ್ಟುಮಾಡಿ ತೋರಿಸಿರುವುದರಿಂದಾಗಿ ಅವರದ್ದೇ ಎನ್ನಬಹುದಾದ ಆತ್ಮವೃತ್ತಾಂತದ ನಿರ್ಮಿತಿಗೆ ಭಾಷಾಭಿವ್ಯಕ್ತಿಯ ಅನಿವಾರ್ಯತೆ, ಅಸಹಾಯಕತೆ ಹಾಗೂ ಅಸಹಜತೆಗಳ ಆಯಾಮಗಳನ್ನೂ ಸೇರಿಸಿದಂತಾಯಿತು.

ಇತರರ ಕಥೆಗಳನ್ನು ಹಗೇವಿನಿಂದ ರಾಗಿ ತೋಡಿದಂತೆ ತೋಡಿ ತೆಗೆದಿರುವ ವಸಂತರು, ತಮ್ಮದೇ ಬದುಕಿನ ಯಾವ್ಯಾವುದೋ ಅವಾಚ್ಯ ಅನುಭವ ಹಾಗೂ ಸ್ಮೃತಿಗಳನ್ನು ತುಂಬಿಕೊಳ್ಳಲೋ ಎಂಬಂತೆ ಈ ಹದಿಮೂರು ಮಂದಿಯ ಒಂದು ಹೆಣ್ತನದ ಕಥನವನ್ನು ಚಾಪೆಯಂತೆ ಹೆಣೆದುಬಿಟ್ಟಿದ್ದಾರೆ. ಅದರ ವಿನ್ಯಾಸ, ವ್ಯಾಖ್ಯಾನ, ಅಳತೆ ಎಷ್ಟೇ ವಿಭಿನ್ನವಾಗಿರಬಹುದು ಎನ್ನಿಸಿದರೂ, ಚಾಪೆ ನಮ್ಮ ಗ್ರಹಿಕೆಯ ಅನುಭವದ ಹಾಸಿಗೆ ಒದಗಿಬರುವುದಂತೂ ದಿಟ.

ಕನ್ನಡದಲ್ಲಿ ಅತ್ಯುತ್ತಮವಾಗಿ ಎಲ್ಲರೂ ಭಾಷಾಂತರಿಸಿರುವ ಕ್ರಮದ ಹಿಂದೆಯೂ ಈ ಧ್ವನಿ ಹಾಗೆಯೇ ಪ್ರಸ್ತುತಪಡಿಸಲಾಗಿದೆ. ಒಮ್ಮೊಮ್ಮೆ ಇಲ್ಲಿನ ವ್ಯಕ್ತಿತ್ವಗಳ ಕಥೆಗಳು ಅಲ್ಲಲ್ಲಿಯೇ ತುಂಡಾಗಿ, ಆದರೂ ಮುಂದುವರಿದಂತೆ ಕಂಡು, ಕಾಲಾನುಕ್ರಮದ ಏರುಪೇರಾಗಿದ್ದಂತೆಯೂ ಅನ್ನಿಸುತ್ತದೆ; ಕ್ಷೀಣವಾಗಿರುವುದರಿಂದಲೇ ಓದಲು ಕಷ್ಟವಾಗುವ ಈ ಪುಸ್ತಕದ ಬ್ಲರ್ಬಿನಂತೆ, ಸುರೇಖರ ಮುಖಪುಟದ ಸೂಚಿತ-ವಾಚ್ಯದಂತೆ. ಆದರೆ, ಅಂತಲ್ಲೆಲ್ಲ ಕಥೆಯು ಅಪಾರವಾದ ಸೂಚಿತ ಅನುಭವಗಳಿಗೆ ದಾರಿಮಾಡಿಕೊಡುವುದರಿಂದಾಗಿ, ಒಬ್ಬರ ವ್ಯಥೆಯು ಮತ್ತೊಬ್ಬರದೊಂದಿಗೆ ಅನಿವಾರ್ಯವಾಗಿಯೋ ಎಂಬಂತೆ ಬೆರೆತುಹೋಗಿಬಿಡುತ್ತದೆ. ಆಶಾದೇವಿ ಹೇಳುವಂತೆ, ಈ ತೊಡಕುಗಳು ಈ ಪುಸ್ತಕದ ಕಾರ್ಯಕ್ಷಮತೆಯ ಬಗ್ಗೆಯಾಗಿರದೆ, “ಸ್ವನಿರೂಪಣೆಯ ಮೂಲಕ ಪಿತೃಸಂಸ್ಕೃತಿಯ ಮರುನಿರೂಪಣೆಯ ಹರಿಕಾರ”ರಾಗುವ ಹೊಸ ಪ್ರಯತ್ನದಿಂದಾದದ್ದು.

* * *

ಮೂಲ ಲೇಖಕಿಯ ಒತ್ತಡಕ್ಕೆ ಮಣಿಯದೆ, ಅವರ ಸೂಚನೆಯನ್ನು ಸೂಕ್ಷ್ಮವಾಗಿ ಬದಿಗೆ ಸರಿಸಿ ಕಥೆ ಹೇಳುವುದು ಇಲ್ಲಿನ ಹೆಂಗಸರ ಆತ್ಮವಿಶ್ವಾಸದ ಸಂಕೇತ. ವೈವಾಹಿಕ ಬದುಕು ‘ಅರ್ಧ’ಗೊಂಡಾಗಲೂ ಆರ್ದ್ರತೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಲಾರದ ಹೆಂಗಸರಿವರಾದರೂ, ಅದೇ ಪ್ರಸ್ತುತ ಬದುಕಿನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವರ ಪ್ರಯತ್ನ ಮಾತ್ರ ಧೀಮಂತಿಕೆಯದ್ದು. ಲಂಡನ್ನಿನ ಇಂಪೀರಿಯಲ್ ವಾರ್ ಮ್ಯೂಸಿಯಮ್ಮಿನ ಜರ್ಮನ್ ನಾಜಿಗಳ ಹಾಲೋಕಾಸ್ಟ್ ಸಂಗ್ರಹವನ್ನು ಮೂರನೇ ತಲೆಮಾರಿನ ಯುರೋಪಿಯನ್ನರು ನೋಡಿಬಂದಾಗ ಭಾವತೀವ್ರತೆಗೊಳಗಾಗುವಂತೆ, ಈ ಹದಿಮೂರು ಹೆಂಗಸರ ಕಥೆಗಳು ನಮ್ಮೆಲ್ಲರಿಗೂ ಗೊತ್ತಿರುವವರೊಬ್ಬರ ವಿಷಯವೇ ಎನ್ನಿಸಿಬಿಡುವ ಆರ್ದ್ರತೆ ಈ ಪುಸ್ತಕದ ಪ್ಲಸ್ ಪಾಯಿಂಟ್.

ಈಗ ಎಪ್ಪತ್ತರ ಆಸುಪಾಸಿನಲ್ಲಿರುವವರಿಗೆ ಜನಪ್ರಿಯ ಮಾಧ್ಯಮಗಳು ಹಿಡಿದಿರಿಸಲು ಸೋತ, ಈಗ ಅವರದ್ದೇ/ಅವರದ್ದೂ (ಓದುಗರದ್ದು) ಆಗಿಬಿಟ್ಟಿರುವ ಅನುಭವದ ಬುತ್ತಿ ಈ ಪುಸ್ತಕ. ಅಪರೂಪಕ್ಕೆಂಬಂತೆ, ಸ್ವಾತಂತ್ರದ ಆರಂಭಿಕ ದಶಕಗಳಲ್ಲಿ ಭಾರತೀಯ ಸಮಾಜೋ-ರಾಜಕೀಯ ನೆಲೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಉಪ-ಎಳೆಯೂ ಈ ಪುಸ್ತಕದಲ್ಲಿದೆ. ಕರ್ತವ್ಯ ಹಾಗ ಕುಟುಂಬಕ್ಕೆ ಮಹಿಳೆಯರ ಬದ್ಧತೆಯ ಘರ್ಷಣೆಯ ಜಲಕುಗಳೂ ಇಲ್ಲಿದ್ದು, ಕನ್ನಡದ ಇತರೆ ಮಾಧ್ಯಮಗಳಲ್ಲಿ (ಚಿತ್ರ, ಸಿನಿಮಾ, ನಾಟಕ ಸಹ) ಹಿಡಿದಿರಿಸಲಾಗದ ಅಪರೂಪದ ಈ ಅಂಶವು, ಬಾದರಾಯಣ ಸಂಬಂಧವೆನ್ನಿಸಿದರೂ ಸಹ, ಡಬ್ಬಿಂಗ್‌ನ ತಾತ್ವಿಕತೆಗೆ ಹೇಗೆ ಭಾಷಾಂತರವು ನಿರ್ವಚನದ ಶಕ್ತಿಯನ್ನು ದೊರಕಿಸಿಕೊಡಬಹುದೆಂಬುದಕ್ಕೂ ಈ ಪುಸ್ತಕದಲ್ಲಿ ಸಾಕ್ಷಿಗಳಿವೆ! ಕನ್ನಡಿಗರದ್ದೇ ಆದ, ಕನ್ನಡಿಗರಿಗೆ ಪರಿಚಯವಿರುವ, ಮೂಲದಲ್ಲಿ ಕನ್ನಡದಲ್ಲೇ ಇಂತಹ ಪುಸ್ತಕ ಬಂದಿದ್ದರೆ ಚೆನ್ನಿತ್ತು ಎನ್ನಿಸದಿರಲೂ ಈ ಅಂಶ ಈ ಪುಸ್ತಕದಲ್ಲಿ ಕೆಲಸ ಮಾಡಿದೆ. ಈ ಪುಸ್ತಕವನ್ನು ಕನ್ನಡೀಕರಿಸಿರುವ ರೀತಿಯಿಂದಾಗಿ ಈ ಪುಸ್ತಕವೂ ಪಕ್ಕಾ ಕನ್ನಡಿಗರದ್ದೇ ಎನ್ನಿಸಿಬಿಡಲು ಕಾರಣ ಇಲ್ಲಿ ಯು.ಆರ್. ಅನಂತಮೂರ್ತಿ, ಎಂ.ಎನ್. ಶ್ರೀನಿವಾಸನ್, ಅಶೋಕ್ ಚಟರ್ಜಿ ಮುಂತಾದವರ ಸಂಗತಿಗಳು ಬಂದುಹೋಗುವುದೂ ಒಂದು ನೆಪವಷ್ಟೇ.

* * *

ಒಟ್ಟಾರೆಯಾಗಿ ಇದು ಒಂದು ಅಪರೂಪದ ಸಮಗ್ರತೆಯ ಆದರ್ಶವುಳ್ಳ ಕಾತ್ಯಾಯನಿ ಮಾದರಿಯ ಸ್ತ್ರೀವಾದದ ಗ್ರಂಥವೂ ಆಗಿಬಿಟ್ಟಿದೆ. ಇದೊಂದು ವಾಸ್ತವತೆಯ ಮೌನ-ದುಃಖದ ಪದಕೋಶ. ಸ್ತ್ರೀವಾದೀ ನೆಲೆಯಿಂದ ಆಚೆ, ರೂಢಿಬದ್ಧ ಹೆಣ್ಣಿಗೆ ಆತ್ಮೀಯ ಗಂಡನ್ನು ಸ್ಮರಿಸಿಕೊಳ್ಳುವ ಪರಿಯು ಸಬಾಲ್ಟರ್ನ್ ತತ್ವವನ್ನೂ, ಮೊದಲ ತಲೆಮಾರಿನ ಉದ್ಯೋಗಸ್ಥ ಮಹಿಳೆಯ ಕಥೆಯಾಗಿ ಸ್ವತಂತ್ರ ಭಾರತದ ಆರಂಭಿಕ ಚರಿತ್ರೆಯ ಚಿತ್ರಣವನ್ನೂ, ಭಾಷಾಂತರದ ಸೊಗಡಿನಲ್ಲಿ ನಮ್ಮತನದ ಸ್ಥಾಪನೆಯ ಸಾಧ್ಯತೆಗೆ ಡೀ ಕೊಡುವ ಡಬ್ಬಿಂಗ್ ವಿವಾದದ ಸಣ್ಣತನವನ್ನೂ, ಹಲವು ಧ್ವನಿಗಳ ಏಕತ್ರ ಆತ್ಮಚರಿತ್ರೆಯ ಹೊಸ ಮಾದರಿಯನ್ನೂ ಕಟ್ಟಿಕೊಡುವ, ಆಕಸ್ಮಿಕ ಅನಿವಾರ್ಯತೆಗಳ ಹಿನ್ನೆಲೆಯಲ್ಲಿ ಬದುಕನ್ನು ಪುನರ್-ಸ್ಥಾಪಿಸಿಕೊಳ್ಳುವ ಮಾನುಷಿಯ ಧೀಮಂತ ಯತ್ನ ದಾಖಲೆಯಾಗಿ, ಹಲವು ತೆರನಾದ ಕನ್ನಡಿಯನ್ನು ಓದುಗರಿಗೆ ಮನಮುಟ್ಟುವಂತೆ ಮಾಡುವ ಪುಸ್ತಕವಿದು. ಧೋ ಎಂದು ಸುರಿವ ಖಿನ್ನತೆಯ, ದುಃಖದ ಮಳೆಯ ಸ್ವಾದಿಷ್ಟ ಅನುಭವವನ್ನು ಇಲ್ಲಿ ನೆನಪಿಸಿಕೊಳ್ಳದಿದ್ದರೆ, ಇಂತಹವಕ್ಕೆಲ್ಲ ಮತ್ತೆಲ್ಲೂ ತಾವಿಲ್ಲದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT