ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕ ಶಿಲೆ ಸ್ಥಳಾಂತರಕ್ಕೆ ಮೀನಮೇಷ

Last Updated 16 ಜನವರಿ 2014, 10:38 IST
ಅಕ್ಷರ ಗಾತ್ರ

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ತಾಲ್ಲೂಕಿನ ಬನವಾಸಿಯ ಇತಿಹಾಸದ ಪುಟಗಳನ್ನು ತೆರೆದಿರುವ ಪ್ರಾಚೀನ ಶಾಸನ, ಶಿಲ್ಪ, ವೀರಗಲ್ಲುಗಳು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ದೇವಾಲಯದ ಆವರಣದಲ್ಲಿರುವ ಸಾಮಾನ್ಯ ಕೊಠಡಿಯಲ್ಲಿ ವಿಶೇಷ ರಕ್ಷಣೆ ಇಲ್ಲದೆ ಬೋರಲಾಗಿ ಬಿದ್ದಿವೆ. ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ದೊರೆತಿರುವ ಪ್ರತ್ಯೇಕ ಕಟ್ಟಡಕ್ಕೆ ಈ ಸ್ಮಾರಕ ಶಿಲೆಗಳನ್ನು ಸ್ಥಳಾಂತರಿಸಲು ಪುರಾತತ್ವ ಇಲಾಖೆ ಮೀನಮೇಷ ಎಣಿಸುತ್ತಿದೆ. 

ಅಂದಿನ ಜಯಂತಿಪುರ ಇಂದಿನ ಬನವಾಸಿಯಲ್ಲಿ ಸುಮಾರು ಕ್ರಿ.ಶ. 2ನೇ ಶತಮಾನದಲ್ಲಿ ಆಳ್ವಿಕೆ ಮಾಡಿದ ಸಾತವಾಹನರು, ಚುಟುಗಳು, ಕದಂಬ ಮನೆತನದ ಕುರುಹುಗಳು ಉತ್ಖನನದ ವೇಳೆಗೆ ದೊರೆತಿವೆ. 1974ರಲ್ಲಿ ಬ್ರಾಹ್ಮಿಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಕ್ರಿ.ಶ. 2ನೇ ಶತಮಾನದ ಸಿವಸಿರಿ ಪುಳುಮಾವಿಯ ಶಾಸನಶಿಲೆ ಬನವಾಸಿಯಲ್ಲಿ ದೊರೆತಿತ್ತು. ಈ ಶಾಸನ ಸೇರಿದಂತೆ, ಗಣಪತಿ, ನರಸಿಂಹ ಮೂರ್ತಿ, ವೀರಗಲ್ಲುಗಳು, 12ನೇ ಶತಮಾನದ ಪೂರ್ವದ 180ಕ್ಕೂ ಹೆಚ್ಚು ಸ್ಮಾರಕ ಶಿಲೆಗಳನ್ನು ಮಧುಕೇಶ್ವರ ದೇವಾಲಯದ ಎದುರಿನಲ್ಲಿರುವ ಸಾಮಾನ್ಯ ಕೊಠಡಿಯಲ್ಲಿ ವಿಶೇಷ ರಕ್ಷಣೆ ಇಲ್ಲದೆ ಸಂಗ್ರಹಿಸಿಡಲಾಗಿದೆ. ಕಾವಲುಗಾರರ ರಕ್ಷಣೆ ಈ ಕೊಠಡಿಗೆ ಇದ್ದರೂ ಕೊಠಡಿಯೇ ರಕ್ಷಣೆ ಇಲ್ಲದ ಸ್ಥಿತಿಯಲ್ಲಿದೆ!

ದೇವರು ಕೊಟ್ಟರೂ ಪೂಜಾರಿ ಕೊಡುವನೇ?: ಕರ್ನಾಟಕ ಗೆಜೆಟಿಯರ್ ಮುಖ್ಯಸ್ಥರಾಗಿದ್ದ ಕೆ.ಅಭಿಶಂಕರ್ ಅವರ ದೂರದರ್ಶಿತ್ವದ ಫಲವಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು 1984ರಲ್ಲಿ ₨ 18 ಲಕ್ಷ ವೆಚ್ಚದಲ್ಲಿ ಅಧ್ಯಯನ ಕೊಠಡಿ, ವಸತಿಗೃಹ, ಉಪಾಹಾರ ಗೃಹ ಸಹಿತ ಪ್ರವಾಸಿ ಮಂದಿರವೊಂದನ್ನು ಬನವಾಸಿ ಪೇಟೆಯ ಹೊರವಲಯದಲ್ಲಿ ನಿರ್ಮಿಸಿತ್ತು. ಐದು ಎಕರೆ ಪ್ರದೇಶದಲ್ಲಿ ಉದ್ಯಾನವನ, ರಸ್ತೆ ಸೇರಿದಂತೆ ವ್ಯವಸ್ಥಿತ ಯೋಜನೆ ರೂಪಿಸಿ ನಿರ್ಮಾಣವಾಗಿದ್ದ ಕಟ್ಟಡ ಒಮ್ಮೆಯೂ ಪ್ರವಾಸಿಗರ ವಸತಿಗೆ ಬಳಕೆಯಾಗಿರಲಿಲ್ಲ!

ಸುತ್ತ ಗಿಡಗಂಟಿಗಳು ಬೆಳೆದು ಬೀಗ ಜಡಿದ ಸ್ಥಿತಿಯಲ್ಲಿದ್ದ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯಿಂದ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಯಿತು. ದೇವಾಲಯದ ಆವರಣದಲ್ಲಿದ್ದ ಪ್ರಾಚೀನ ಸ್ಮಾರಕ ಶಿಲೆಗಳನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಿ ಬನವಾಸಿಗೆ ಬರುವ ಪ್ರವಾಸಿಗರಿಗೆ ಪ್ರಾಚ್ಯವಸ್ತು ಸಂಗ್ರಹಾಲಯ ವೀಕ್ಷಿಸುವ ಅವಕಾಶ ಕಲ್ಪಿಸಲು ಪುರಾತತ್ವ ಇಲಾಖೆ ಯೋಜನೆ ರೂಪಿಸಿತು. ಅಂತೆಯೇ ಸುಮಾರು ₨ 20 ಲಕ್ಷ ವೆಚ್ಚದಲ್ಲಿ ಪಾಳುಬಿದ್ದ ಕಟ್ಟಡದ ನವೀಕರಣ ಕಾಮಗಾರಿ ನಡೆಯಿತು. ಆದರೆ ನವೀಕರಣಗೊಂಡು ಅನೇಕ ವರ್ಷಗಳು ಗತಿಸಿದರೂ ದೇವಾಲಯದ ಆವರಣದಲ್ಲಿರುವ ಸ್ಮಾರಕ ಶಿಲೆಗಳನ್ನು ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲು ಪುರಾತತ್ವ ಇಲಾಖೆ ಮೀನಮೇಷ ಎಣಿಸುತ್ತಿದೆ. 

ನವೀಕರಣದ ವೇಳೆಗೆ ಅಳವಡಿಸಿದ್ದ ವಿದ್ಯುತ್‌ ದೀಪಗಳು, ಕಿಟಕಿಯ ಗಾಜನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಕಟ್ಟಡದ ಸುತ್ತ ಮತ್ತೆ ಮೊದಲಿನಂತೆಯೇ ಗಿಡಗಂಟಿಗಳು ಬೆಳೆದಿವೆ. ಸಂಜೆ ಹೊತ್ತಿಗೆ ಅಕ್ರಮ ಚಟುವಟಿಕೆಗಳು ಈ ಸ್ಥಳದಲ್ಲಿ ನಡೆಯುತ್ತವೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಸದ್ಯದಲ್ಲಿ ಸ್ಥಳಾಂತರ: ಬನವಾಸಿ ದೇವಾಲಯದ ಆವರಣದಲ್ಲಿರುವ ಶಾಸನ, ಶಿಲ್ಪಗಳು ಅತ್ಯಮೂಲ್ಯವಾಗಿದ್ದು, ಇವುಗಳ ದಾಖಲೀಕರಣ, ಅಧ್ಯಯನ ಕಾರ್ಯ ಮುಗಿದಿದೆ. ವಸ್ತು ಸಂಗ್ರಹಾಲಯದ ಆವರಣದಲ್ಲಿ ಉದ್ಯಾನವನ, ಬೋರವೆಲ್‌ ನಿರ್ಮಾಣ ಮಾಡಿ ಇನ್ನಷ್ಟು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಅನುದಾನದ ಅಗತ್ಯವಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದ್ದು, ಹಿಂದೆ 20ರಷ್ಟು ಸಿಬ್ಬಂದಿ ಇದ್ದ ಹಾವೇರಿ ಉಪವೃತ್ತದಲ್ಲಿ ಇಂದು ಕೇವಲ ಆರು ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳು ನೀಡುವ ವಿವರಣೆ.

ಶಿರಸಿ ತಾಲ್ಲೂಕಿನಲ್ಲಿ ಬನವಾಸಿ, ಗುಡ್ನಾಪುರ, ಸೋಮಸಾಗರ, ಸೋದೆ ಕೋಟೆ ಪುರಾತತ್ವ ಇಲಾಖೆ ಅಡಿಯಲ್ಲಿದ್ದು, ಕೇವಲ ಇಬ್ಬರು ಸಿಬ್ಬಂದಿ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗಿದೆ. ಇದೇ ತಿಂಗಳ ಕೊನೆಯಲ್ಲಿ ಒಬ್ಬರು ನಿವೃತ್ತರಾಗಲಿದ್ದು, ಒಬ್ಬ ಖಾಯಂ ಸಿಬ್ಬಂದಿ ನಾಲ್ಕು ಕ್ಷೇತ್ರಗಳ ಹೊಣೆ ಹೊರಬೇಕಾಗಿದೆ. ಇಲಾಖೆಯಲ್ಲಿ ಹೊಸ ನೇಮಕಾತಿ ಆಗುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT