ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಎಲ್ಲೆಗಳ ಶೋಧ

Last Updated 25 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಹಾರುವ ಹಕ್ಕಿಗಳನ್ನು ತಂದು ಮಾತು ಕಲಿಸಿ ಮತ್ತೆ ಅವುಗಳ ರೆಕ್ಕೆಗಳಿಗೆ ಕಸುವನ್ನು ತುಂಬುವುದು ಕಲೆಯ ಮಾಂತ್ರಿಕತೆ. ಅತುಲ್‌ ತಿವಾರಿ ನಿರ್ದೇಶನದ ನಾಟಕ ‘ತಾವೂಸ್‌ ಚಮನ್‌ ಕಿ ಮೈನಾ’ ಇಂಥದ್ದೊಂದು ಮಾಂತ್ರಿಕ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದ ರಂಗಕೃತಿ.

ಇತ್ತೀಚೆಗೆ ಗುರುನಾನಕ ಭವನದಲ್ಲಿ ಎನ್‌ಎಸ್‌ಡಿ ಆಯೋಜಿಸಿದ್ದ ದಕ್ಷಿಣ ಭಾರತ ರಂಗೋತ್ಸವದಲ್ಲಿ ‘ತಾವೂಸ್‌ ಚಮನ್‌ ಕಿ ಮೈನಾ’ ಪ್ರದರ್ಶಿತಗೊಂಡಿತು. ಈಗಾಗಲೇ ಅನೇಕ ಪ್ರದರ್ಶನಗಳನ್ನು ಕಂಡಿರುವ ಈ ನಾಟಕ ಪ್ರಸ್ತುತಪಡಿಸಿದ್ದು ಗಿಲ್ಲೋ ಥಿಯೇಟರ್‌. ಇದರ ಉದ್ದೇಶವೇ ಇಡೀ ಸಮುದಾಯವನ್ನು ರಂಗ ಕಲೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಮಕ್ಕಳು, ಯುವಕರು, ಶಿಕ್ಷಕರು ಹಾಗೂ ಪೋಷಕರನ್ನು ಒಳಗೊಂಡು ತರಬೇತಿ ಶಿಬಿರವನ್ನು ನಡೆಸುವುದಾಗಿದೆ.

ಲಖನೌ ಒಂದು ಐತಿಹಾಸಿಕ ನಗರಿ. ಅದಕ್ಕೆ ಹಿಂದೂ ಮುಸ್ಲಿಮರ, ಬ್ರಿಟಿಷರ ಆಳ್ವಿಕೆಯ ದಟ್ಟ ನೆನಪುಗಳಿವೆ. ಇಂಥ ಮಿಶ್ರ ನೆನಪುಗಳನ್ನು ಮೈನಾ ಹಕ್ಕಿಯ ಮಾತುಗಳನ್ನಾಗಿ ಕಥೆಗಾರ ನಯ್ಯರ್‌ ಮಸೂದ್‌ ಸಮರ್ಥವಾಗಿ ಕಟ್ಟಿಕೊಟ್ಟರೆ, ಅದನ್ನು ನಿರ್ದೇಶಕ ಅತುಲ್‌ ತಿವಾರಿ ರಂಗಕ್ಕೆ ತಂದು ರಸಗವಳವನ್ನಾಗಿಸಿ ತಟ್ಟೆಗಿಟ್ಟು ಉಣಬಡಿಸಿದ್ದಾರೆ.

ಕಥಕ್‌ ಝಲಕ್‌ಗಳಲ್ಲಿ ಸೆಳೆಯುವ ಚಲನಾತ್ಮಕ ಆಂಗಿಕ ಅಭಿನಯ, ಹಕ್ಕಿಯ ಹಾಗೂ ವ್ಯಕ್ತಿಗಳ ಅಥವಾ ಎಲ್ಲ ಜೀವಿಗಳ ಆಂತರ್ಯವನ್ನು ಕಟ್ಟಿಕೊಟ್ಟರೆ, ಗಟ್ಟಿದನಿಯ ಸಂಗೀತ, ಮೇಳ ಇಡೀ ನಾಟಕವನ್ನು ಪ್ರೇಕ್ಷಕರ ಎದೆಗೆ ದಾಟಿಸುತ್ತದೆ. ಅದರೊಳಗೆ ಸೃಜನಾತ್ಮಕವಾಗಿ ಸ್ವಾತಂತ್ರ್ಯದ ಅನುಭವವನ್ನು ಎತ್ತಿ ತೋರಿಸುವಲ್ಲಿ ನಾಟಕ ಯಶಸ್ವಿಯಾಯಿತು.

ಬದುಕುವುದಕ್ಕಾಗಿಯೇ ಬಡಿದಾಡುವ ಒಬ್ಬ ಬಡವ ಮಸೂದ್‌ ಸಾಬರ ಮನೆಯ ವಾತಾವರಣ ಪಂಜರಕ್ಕೆ ಸಿಕ್ಕಿಕೊಂಡ ಗಿಳಿಯಂತೆ ಇರುತ್ತದೆ. ಹಿಮಾಲಯದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮಾತನಾಡುವ ಮೈನಾಹಕ್ಕಿಗಳನ್ನು ಸಾಕಲು ಆಸೆಪಡುವ ಮಸೂದ್‌ ಸಾಬರ ಹೆಂಡತಿಯ ಬೇಡಿಕೆ ಹಾಗೂ ಅವಳ ಸಾವು ನಮ್ಮ ಕಣ್ಣಮುಂದಿನ ಬದುಕಿನ ನಿದರ್ಶನದಂತೆ ಹಾದು ಹೋಗುತ್ತದೆ.

ನಡುಬಾಗಿದ ತಾಯಿಯ ತೀರದ ಕೆಮ್ಮು ಅದಕ್ಕೊಂದು ನೆಮ್ಮದಿ ಹಾಗೂ ಮುಂದಿನ ಚಿಗುರಾದ ಮಗಳ ಉಲ್ಲಾಸವನ್ನು ಹಿಡಿದು ತರಲು ಪರದಾಡುವ ಮಸೂದ್‌ ಸಾಬರ ಸಾಲದ ಆರ್ಥಿಕ ಪರಿಸ್ಥಿತಿ. ಸಾಲಕ್ಕೆ ಬಲಿಯಾದ ಮನದ ಆಶಯಗಳು, ದೇಹದ ಪರಿಶ್ರಮ, ಮಾರುಕಟ್ಟೆಯ ಜಾಲ, ಅವನಿಗೆ ಆಗುವ ಅವಮಾನ ಎಲ್ಲವೂ ಜನರಿಗೆ ಸಮರ್ಥವಾಗಿ ತಲುಪುತ್ತವೆ.

ಮಾಡಿದ ಕಳ್ಳತನವನ್ನು ಎಂದೂ ಬಚ್ಚಿಡಲಾಗದು. ಇದು ಮಗಳ ಸಾಥಿಯಾದ ಮುದ್ದು ಹಕ್ಕಿಯ ಮಾತಿನಿಂದ ಬಯಲಾಗುವುದು. ಚಿನ್ನದ ಪಂಜರದಲ್ಲಿಟ್ಟು ಹಕ್ಕಿಯನ್ನು ನವಾಬರು ಇವರ ಕರುಣಾಜನಕ ಕಥೆ ಕೇಳಿ ವಾಪಸು ಮಗಳಿಗೆ ಕಳುಹಿಸಿಕೊಟ್ಟರೂ ಅದನ್ನು ಪ್ರಪಂಚದ ಲಾಲಸೆಗಳ ಒತ್ತಡದಿಂದ ಉಳಿಸಿಕೊಳ್ಳಲಾರದ ಆಸೆಗಳಾಗಿ ಗರಿಗೆದರಿ ಅನೇಕ ತಿರುವುಗಳಲ್ಲಿ ಕಥೆ ಹಾದು ಮನುಷ್ಯನ ಮೂಲ ಆಶಯವಾದ ಸ್ವಾತಂತ್ರ್ಯವನ್ನು ಹುಡುಕಿ ಹಾರಿಹೋಗುವುದು ಎಲ್ಲರ ಮನಸ್ಸನ್ನು ಹಿಡಿದಿಡುತ್ತದೆ.

‘ಮೈನಾ ನಹೀ ಬೆಹನಾ’ ಎನ್ನುವ ಮುಗ್ಧಭಾವದ ಮಾತು ಪ್ರಕೃತಿಯ ಜತೆಗಿನ ಸಂಬಂಧವನ್ನು ತಿಳಿಸುವಂತೆ ಮಗುವಿನ ಮುಗ್ಧ ಸಹಜ ಮಾತಾಗಿ ಹೊರಳುತ್ತದೆ. ಎರಡೂ ಮಕ್ಕಳ ಹಾರಾಟ, ಹಾಡು, ಪಂಜರದೊಳಗಿನ ಹಕ್ಕಿಗಳ ಕಲರವದ ಅಭಿನಯ, ನವಿಲಿನ ಆಂಗಿಕ ನಿರೂಪಣೆ ಮನದಲ್ಲಿ ಉಳಿದು ಹೋಗುವಷ್ಟರ ಮಟ್ಟಿಗಿದೆ. ಬದುಕಲು ಒದ್ದಾಡುವ, ನಂಬಿಕೆ ಉಳಿಸಿಕೊಳ್ಳಲು ಪಾಡು ಬೀಳುವ ಕೆಲಸಗಾರರ ನಿರ್ವಹಣೆಯಲ್ಲಿ ಕಾಲೇಖಾನ್‌ ಹಾಗೂ ಅವರ ಮೇಲ್ವಿಚಾರಕರ ಪಾತ್ರಗಳಲ್ಲಿ ಬಿಂಬಿತವಾಗಿದೆ.

ಅರಸೊತ್ತಿಗೆಯಲ್ಲಿನ ಹಾಗೂ ಅದರಾಚೆಗಿನ ವೈಭವ, ತಿಕ್ಕಲುತನ, ಒಬ್ಬರನ್ನೊಬ್ಬರು ಓಲೈಸುವ ದೃಶ್ಯಗಳು ಚೆನ್ನಾಗಿವೆ.
ಇಡೀ ಪಂಜರದ ನಿರ್ವಹಣೆ ಸೆಟ್‌ ಮೇಲೆ ಜೋಡಿಸುವುದು ಹಾಗೂ ಅದನ್ನು ಶಿಸ್ತಾಗಿ ಪಡೆದು ಖಾಲಿ ಮಾಡುವ ನಿರ್ವಹಣೆಯೇ ಸಾಂಕೇತಿಕವಾಗಿ ಕಥೆಯನ್ನು ಹೇಳುತ್ತ ಹೋಗುತ್ತದೆ.

ಪಂಜರಗಳ, ಹಕ್ಕಿಗಳ, ಮಾರುಕಟ್ಟೆ, ಅವುಗಳ ಬೆಲೆ, ನೆಲೆಗಾಗಿ ಪರದಾಡುವ ಮನುಷ್ಯನನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತವೆ. ಹಕ್ಕಿಯ ಹೆಸರಿಡುವ ದೃಶ್ಯವಂತೂ ಒಂದೊಂದು ಜೀವಿಗೂ ಇರುವ ಒಂದೊಂದು ವಿಶೇಷತೆಯನ್ನು ತೋರಿಸಿಕೊಟ್ಟಂತಿದೆ.

ಮಧ್ಯಂತರದ ನಂತರ ಕೆಲವು ಕಡೆ ದೃಶ್ಯಗಳನ್ನು ಹೆಚ್ಚಿಗೆ ಎಳೆದಂತೆ ತೋರುತ್ತದೆ. ಇದನ್ನು ಬಿಟ್ಟರೆ ಅತ್ಯಂತ ಸಮರ್ಥ ನಾಟಕವಿದು. ಈ ನಾಟಕ ಮಕ್ಕಳ ಹಾಗೂ ಯುವಕರ ಹಾಗೂ ಬೆಳೆದವರ ನಡುವಿನ ಬ್ರಿಡ್ಜ್‌ ನಾಟಕವಾಗಿಯೂ ಕಾಣಿಸುತ್ತದೆ.

ಹಿರಿಯ ರಂಗಕರ್ಮಿ  ಎಂ.ಎಸ್‌. ಸತ್ಯು ಅವರ ರಂಗವಿನ್ಯಾಸ, ಆಮೋದ ಭಟ್‌ ಸಂಗೀತ, ಪೂಜಾಪಂತ್‌ ಅವರ ನೃತ್ಯ ಸಂಯೋಜನೆ ಎಲ್ಲವೂ ನಾಟಕದ ಸತ್ವವನ್ನು ಹೆಚ್ಚಿಸುವಂತಿದ್ದವು. ನಜೀರ್‌ ಹಾಗೂ ತಿವಾರಿ ಬರೆದ ಹಾಡುಗಳೂ ನಾಟಕದ ಮೌಲ್ಯ ವರ್ಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT