ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ನಲಿವ ನವಿಲು

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಮಳೆಗಾಲ ಆರಂಭವಾದ ಗಳಿಗೆಯಿಂದ ಹಂಪಿಯಲ್ಲಿ ನವಿಲುಗಳ ಕಾರುಬಾರು ಹೆಚ್ಚಾಗಿದೆ. ಎಲ್ಲಿ ನೋಡಿದರಲ್ಲಿ ಮಯೂರಗಳೇ ಕಣ್ಣಿಗೆ ಗೋಚರಿಸುತ್ತಿವೆ. ಇದರಿಂದ ಪ್ರವಾಸಿಗರು ಸ್ಮಾರಕಗಳ ಜೊತೆ ‘ಮಯೂರ ನಾಟ್ಯ’ವನ್ನೂ ಕಣ್ತುಂಬಿಕೊಳ್ಳುತ್ತಿದ್ದಾರೆ.

ಹಂಪಿಯಲ್ಲಿರುವ ಅಕ್ಕ–ತಂಗಿಯರ ಗುಡ್ಡ, ವಿಜಯ ವಿಠಲ ದೇವಸ್ಥಾನದ ಪರಿಸರ, ಉದ್ದಾನ ವೀರಭದ್ರೇಶ್ವರ ದೇಗುಲ, ಬಸವಣ್ಣ ಸ್ಮಾರಕ ಬಳಿಯ ಸಾಲುಮಂಟಪ, ಪ್ರಸನ್ನ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ನವಿಲುಗಳು ಹಿಂಡುಹಿಂಡಾಗಿ ಓಡಾಡುತ್ತಿವೆ, ಕುಣಿಯುತ್ತಿವೆ.

ಬೆಳಿಗ್ಗೆ ಹಾಗೂ ಸಂಜೆ ಪ್ರಶಾಂತ ವಾತಾವರಣ ಇರುವುದರಿಂದ ಅಕ್ಕ–ತಂಗಿಯರ ಗುಡ್ಡದ ಬಳಿಯಿಂದ ಹಾದು ಹೋಗಿರುವ ರಸ್ತೆ ಮೇಲೆಲ್ಲಾ ಓಡಾಡುತ್ತಿರುತ್ತವೆ. ಕಲ್ಲು, ಬಂಡೆಗಳ ಮೇಲೆ ಬೀಡು ಬಿಟ್ಟಿರುತ್ತವೆ. ವಾಹನಗಳ ಸದ್ದು ಕೇಳಿಸಿದ ತಕ್ಷಣ ಬಂಡೆಗಳ ಮಧ್ಯೆ ಕಣ್ಮರೆಯಾಗುತ್ತವೆ. ಈ ವಿಷಯ ತಿಳಿದು ಪಕ್ಷಿ ಪ್ರಿಯರು ಹಾಗೂ ಛಾಯಾಗ್ರಾಹಕರು ನಸುಕಿನಲ್ಲೇ ಹಂಪಿಗೆ ದೌಡಾಯಿಸುತ್ತಿದ್ದಾರೆ. ನವಿಲುಗಳ ಪ್ರತಿಯೊಂದು ಚಲನವಲನಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ತವಕಿಸುತ್ತಿದ್ದಾರೆ.

ಮಳೆಗಾಲದ ಆರಂಭದಲ್ಲಿ ಕಾಣಿಸಿಕೊಳ್ಳುವುದು ಏಕೆ?
ನವಿಲುಗಳ ಮಿಲನಕ್ಕೆ ಮಳೆಗಾಲದ ಆರಂಭ ಸೂಕ್ತ ಕಾಲ. ಅದರಲ್ಲೂ ಜೂನ್‌, ಜುಲೈ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗಂಡು ನವಿಲು, ಹೆಣ್ಣನ್ನು ಆಕರ್ಷಿಸಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.

‘ಮಳೆಗಾಲ ಆರಂಭವಾಗುತ್ತಿದ್ದಂತೆ ನವಿಲುಗಳ ಮಿಲನ ಶುರುವಾಗುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ಮಾಡಬಾರದ ಕಸರತ್ತು ಮಾಡುತ್ತದೆ. ಈ ಸಂದರ್ಭದಲ್ಲೇ ಗರಿ ಬಿಚ್ಚಿ ಕುಣಿಯುತ್ತದೆ’ ಎಂದು ಪಕ್ಷಿ ತಜ್ಞ ಸಮದ್‌ ಕೊಟ್ಟೂರು ಹೇಳುತ್ತಾರೆ. ಈಗ ನವಿಲುಗಳು ಪರಸ್ಪರ ಸೇರಿದರೆ, ಮೊಟ್ಟೆ ಇಟ್ಟು ಮರಿಮಾಡುವ ಪ್ರಕ್ರಿಯೆ ಸೆಪ್ಟೆಂಬರ್‌ ಕೊನೆಯಲ್ಲಿ ಶುರುವಾಗುತ್ತದೆ. ಪ್ರತಿ ಹೆಣ್ಣು ನವಿಲು ನಾಲ್ಕರಿಂದ ಐದು ಮೊಟ್ಟೆಗಳನ್ನು ಇಡುತ್ತದೆ ಎಂದು ವಿವರಿಸಿದರು.

ಹಂಪಿಯ ಇಡೀ ಪರಿಸರ ನವಿಲುಗಳಿಗೆ ಹೇಳಿ ಮಾಡಿಸಿದ ಸ್ಥಳ. ರೈತನ ಮಿತ್ರ ಕೂಡ ಹೌದು. ಆದರೆ ಕೆಲವು ರೈತರು ತಪ್ಪಾಗಿ ಭಾವಿಸಿ ಅವುಗಳನ್ನು ಸಾಯಿಸುತ್ತಾರೆ.ಬೆಳೆಗಳಲ್ಲಿರುವ ಕೀಟ, ವಿಷಕಾರಿ ಹಾವುಗಳನ್ನು ತಿನ್ನುತ್ತವೆ. ಅವುಗಳು ಜಮೀನಿಗೆ ಬರುತ್ತವೆ ಎಂದರೆ ರೈತರು ಖುಷಿಪಡಬೇಕು ಎಂದರು.

‘ಹಂಪಿ ಸುತ್ತಮುತ್ತಲಿನ ಹೆಚ್ಚಿನ ರೈತರು ಬಾಳೆ, ಕಬ್ಬು ಬೆಳೆಯುತ್ತಾರೆ. ಹಾಗಾಗಿ ನವಿಲುಗಳಿಂದ ಬೆಳೆಗೆ ಹಾನಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಹಂಪಿಗೆ ಹೊಂದಿಕೊಂಡಿರುವ ಕಡ್ಡಿರಾಂಪುರದ ರೈತ ಬಸಯ್ಯ ಸ್ವಾಮಿ ಅವರು ಹೇಳಿದರು.

ನವಿಲುಗಳಿಗೆ ಹಂಪಿ ಸೂಕ್ತ ಸ್ಥಳವೇ?
ಕಲ್ಲು ಬಂಡೆಗಳು ಹಾಗೂ ಕುರುಚಲು ಕಾಡು ನವಿಲುಗಳಿಗೆ ಹೇಳಿ ಮಾಡಿಸಿದ ಸ್ಥಳ. ಹಂಪಿ ಪರಿಸರದಲ್ಲಿ ಇವೆರಡೂ ಇವೆ. ತುಂಗಭದ್ರಾ ನದಿಯೂ ಸಮೀಪದಲ್ಲೇ ಹರಿಯುತ್ತದೆ. ಅದಕ್ಕೆ ಹೊಂದಿಕೊಂಡಂತೆ ಫಲವತ್ತಾದ ಕೃಷಿ ಭೂಮಿ ಇದೆ. ರೈತರ ಜಮೀನುಗಳಿಗೆ ಲಗ್ಗೆ ಇಟ್ಟು, ಕ್ರಿಮಿ–ಕೀಟಗಳನ್ನು ತಿಂದು ಬದುಕುತ್ತವೆ.

ಹಂಪಿ ಪರಿಸರಕ್ಕೆ ಹೊಂದಿಕೊಂಡಂತೆ ಈ ಹಿಂದೆ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ನವಿಲುಗಳ ಸಂಖ್ಯೆ ಕ್ಷೀಣಿಸಿತ್ತು. ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಅದಕ್ಕೆ ಕಡಿವಾಣ ಹಾಕಿದ ನಂತರ ಅವುಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಪಕ್ಷಿ ತಜ್ಞರ ಪ್ರಕಾರ, ಹಂಪಿ ಪರಿಸರದಲ್ಲಿ ಸದ್ಯ 150ರಿಂದ 200 ನವಿಲುಗಳಿವೆ. ಬರುವ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT