ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿ ರಾಮ್‌ ಜ್ಞಾಪಕ ಚಿತ್ರಶಾಲೆ

ನಿಗೂಢ ನೇತಾಜಿ-15
Last Updated 26 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

1944ರ ಮಾರ್ಚ್‌ 31ರಂದು ಇಂಡಿಯನ್‌  ನ್ಯಾಷನಲ್‌ ಆರ್ಮಿ (ಐಎನ್‌ಎ) ಮಣಿಪುರ ಪ್ರವೇಶಿಸಿತು. ಬ್ರಿಟಿಷರಿಂದ ಸ್ವತಂತ್ರಗೊಂಡ ಪಡೆ ಅದು. ಸುಮಾರು 4000 ಚದರ ಕಿ.ಮೀ.ನಷ್ಟು ಭಾರತೀಯ ವಲಯವನ್ನು ಬ್ರಿಟಿಷರು ಮುಕ್ತಗೊಳಿಸಿದರು. ಆಜಾದ್‌ ಹಿಂದ್‌ ಸರ್ಕಾರ ಅದರ ಆಡಳಿತವನ್ನು ವಹಿಸಿಕೊಂಡಿತು. 1944ರ ಏಪ್ರಿಲ್‌ 14ರಂದು ನೇತಾಜಿ ಭಾರತದ ಧ್ವಜಾರೋಹಣ ಮಾಡಿದರು. ಮೊದಲ ಬಾರಿಗೆ ತ್ರಿವರ್ಣ ಧ್ವಜವು ಆ ಸ್ವತಂತ್ರ ಭಾರತದ ಭಾಗದಲ್ಲಿ ಹಾರಾಡಿತು.

ಆಜಾದ್‌ ಹಿಂದ್‌ ಸರ್ಕಾರಕ್ಕೆ ಸ್ವತಂತ್ರ ಪ್ರದೇಶದ ಆಡಳಿತವನ್ನು ವಹಿಸಿಕೊಡುತ್ತಿರುವುದಾಗಿ ನೇತಾಜಿ ಹಾಗೂ ಜಪಾನೀ ಕಮಾಂಡರ್‌ ಮಸಕಜು ಕವಬೆ  ಜಂಟಿಯಾಗಿ ಘೋಷಿಸಿದರು. ಕರ್ನಲ್‌ ಚಟರ್ಜಿ ಅವರನ್ನು ಗವರ್ನರ್‌ ಆಗಿ ನೇಮಿಸಿದರು. ಬ್ರಿಟಿಷರಿಂದ ವಶಪಡಿಸಿಕೊಳ್ಳಲಾದ ಎಲ್ಲಾ ಆಸ್ತಿಪಾಸ್ತಿ ಆಜಾದ್‌ ಹಿಂದ್‌ ಸರ್ಕಾರಕ್ಕೆ ಸೇರುತ್ತದೆ ಎನ್ನುವುದೂ ಘೋಷಣೆಯಲ್ಲಿ ಸೇರಿತ್ತು. ಈ ಘೋಷಣೆ ಕೇಳಿ ಐ.ಎನ್‌.ಎ. ಯೋಧರ ಉತ್ಸಾಹ ಹೆಚ್ಚಾಯಿತು. ತಾವೆಲ್ಲಾ ನಿಜಕ್ಕೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದು, ಜಪಾನೀಯರ ಬಳಕೆಯ ಸಾಧನಗಳಲ್ಲ ಎನ್ನುವುದು ಮನವರಿಕೆ ಆಯಿತು.

ಇಂಫಾಲ–ಕೊಹಿಮ ನಡುವಿನದ್ದು ಎರಡನೇ ವಿಶ್ವಯುದ್ಧದ ಪ್ರಮುಖ ಕದನ ಎಂದು ಘೋಷಿಸಲಾಯಿತು. ಅದರ ಇತಿಹಾಸವು ರೋಚಕವಾಗಿದೆ. ಚುರುಕಾದ ಸೇನಾ ಕಾರ್ಯಾಚರಣೆಯಿಂದ ಬರ್ಮಾವನ್ನು ಜಪಾನ್‌ ವಶಪಡಿಸಿಕೊಂಡಿತು. 1942ರ ಮೇ ಹೊತ್ತಿಗೆ ಭಾರತದ ಗಡಿ ಬಳಿ ಇದ್ದ ಚಿಂದ್ವಿನ್‌ ನದಿಯನ್ನು ಅತಿಕ್ರಮಿಸಿತ್ತು. ಆ ಹೊತ್ತಿಗೆ ಇನ್ನೂ ಯುದ್ಧ ಸನ್ನದ್ಧರಾಗದ, ಭಾರತದಲ್ಲಿದ್ದ ಬ್ರಿಟಿಷರಿಗೆ ಇನ್ನೇನು ತಮ್ಮ ಮೇಲೆಯೂ ದಾಳಿ ನಡೆಯಲಿದೆ ಎಂಬ ಆತಂಕವಿತ್ತು. ಆದರೆ, ಜಪಾನೀಯರು ಅದಾಗಲೇ ಅಳುಕುತ್ತಿದ್ದ ಬ್ರಿಟಿಷರ ಬೆನ್ನುಹತ್ತಲಿಲ್ಲ. ಭಾರತದಲ್ಲಿ ಜಪಾನ್‌ ವಿರೋಧಿ ಭಾವನೆ ಬಿತ್ತುವುದು ಸೇನಾಪಡೆಗಳಿಗೆ ಇಷ್ಟವಿರಲಿಲ್ಲ. ಬುದ್ಧನ ಜನ್ಮಸ್ಥಳ ಭಾರತ ಎಂದೇ ಅವರೆಲ್ಲಾ ಭಾವಿಸಿದ್ದರು.

ಇದರಿಂದ ಬ್ರಿಟಿಷರಿಗೆ ಸೇನಾ ಮರುಸಂಯೋಜನೆಗೆ ಅವಕಾಶ ಸಿಕ್ಕಂತಾಯಿತು. ಈ ಕಹಿ ಘಟನೆಯಿಂದ ಬ್ರಿಟಿಷರು ಪಾಠ ಕಲಿತಿದ್ದೇ ಅಲ್ಲದೆ ಯುದ್ಧಕ್ಕಾಗಿ ಸೂಕ್ತ ರೀತಿಯ ಸಿದ್ಧತೆಗಳನ್ನು ನಡೆಸಲಾರಂಭಿಸಿದರು. ಕೊಹಿಮಾ ವಲಯವು ಬೆಟ್ಟಗುಡ್ಡಗಳು ಹಾಗೂ ಗಮಿಸಲು ಕಷ್ಟವಾಗುವಂಥ ಕಾಡುಗಳಿಂದ ಆವರಿಸಿತ್ತು. ಒತ್ತೊತ್ತಾದ ಮುಳ್ಳಿನ ಪೊದೆಗಳನ್ನು ಹಾದು ಕಾಡನ್ನು ಹೊಕ್ಕುವುದು ಕಷ್ಟವಿತ್ತು. ವಿಪರೀತ ಮಳೆಯಾಗುವ ಪ್ರದೇಶವೂ ಅದಾಗಿತ್ತು. ಐ.ಎನ್‌.ಎ. ಯೋಧರು ಅರಣ್ಯದಲ್ಲಿ ಕಾದಾಡುವುದರಲ್ಲಿ ನಿಷ್ಣಾತರಾಗಿದ್ದರು.

ಬರ್ಮಾದಲ್ಲಿದ್ದ ಜಪಾನಿನ ಕಮಾಂಡರ್‌ ಜನರಲ್‌ ರೆನ್ಯ ಮುಟಗುಚಿ ಭಾರತದಲ್ಲಿನ ಬ್ರಿಟಿಷರ ಮೇಲೆ ದಾಳಿ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದರು. ಆಗ ಇಂಫಾಲದ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ನೇತಾಜಿ ಅವರ ತಲೆಗೆ ತುಂಬಿದರು. ಕಾರ್ಯತಂತ್ರದ ವಿಷಯದಲ್ಲಿ ನೇತಾಜಿ ಅವರಿಗೆ ಅಷ್ಟು ದೃಢ ನಿಶ್ಚಯವಿತ್ತು. ಮೊದಲಿಗೆ ಅರಕನ್‌ನಲ್ಲಿ ಬ್ರಿಟಿಷರಿಗೆ ಪೆಟ್ಟು ನೀಡಿ, ಪೂರ್ವ ಬಂಗಾಲದ ಚಿತ್ತಗಾಂಗ್‌ನಲ್ಲಿ ಯುದ್ಧಸನ್ನದ್ಧವಾಗಿದ್ದ ಬ್ರಿಟಿಷ್‌ ಪಡೆಗಳ ಗಮನವನ್ನು ಅತ್ತ ಸೆಳೆಯುವುದು. ಆಮೇಲೆ 1944ರ ಏಪ್ರಿಲ್‌ ಹೊತ್ತಿಗೆ ಚಿತ್ತಗಾಂಗ್‌, ಕೊಹಿಮಾ, ಇಂಫಾಲ ಮೂರನ್ನೂ ವಶಕ್ಕೆ ತೆಗೆದುಕೊಳ್ಳುವುದು ನೇತಾಜಿ ಅವರ ಕಾರ್ಯಯೋಜನೆ ಆಗಿತ್ತು.

1943ರ ಜುಲೈನಲ್ಲಿ ಅರಕನ್‌ನಲ್ಲಿದ್ದ ಬ್ರಿಟಿಷ್‌ ಪಡೆಗಳು ಹಿಮ್ಮೆಟ್ಟುವಂತೆ ಮಾಡಿದರು. ಐ.ಎನ್‌.ಎ. ಅದರಲ್ಲಿ ಸಾಧಿಸಿದ ಸಂಪೂರ್ಣ ಗೆಲುವಿನಿಂದ ಬ್ರಿಟಿಷ್‌ ಸೇನೆ ಕಂಗಾಲಾಯಿತು. ಸುಮಾರು 10,000 ಬ್ರಿಟಿಷ್‌ ಯೋಧರಲ್ಲಿ ಅನೇಕರ ಜೀವತೆಗೆಯಲಾಯಿತು. ಕೆಲವರು ಬಂಧನಕ್ಕೂ ಒಳಗಾದರು. ಗ್ವಾಲಿಯರ್‌ ರೆಜಿಮೆಂಟ್‌ನ ಅಷ್ಟೂ ಯೋಧರು ಐ.ಎನ್‌.ಎ. ಸೇರಿಕೊಂಡರು. ಇಂಫಾಲದ ಮೇಲೆ ಜಪಾನ್‌ ಯೋಜಿತ ದಾಳಿ ನಡೆಸುವುದನ್ನು ಖಾತರಿಪಡಿಸಿಕೊಂಡ ಬ್ರಿಟಿಷರು ಅಲ್ಲಿಗೆ ಎಲ್ಲಾ ಸೇನಾಪಡೆಗಳನ್ನು ಕರೆಸಿಕೊಂಡರು.

ಇನ್ನು ಬ್ರಿಟಿಷರ ಮೇಲೆ ಅಚ್ಚರಿಯ ದಾಳಿ ನಡೆಸುವುದು ಐ.ಎನ್‌.ಎ.ಗೆ ಸಾಧ್ಯವಿರಲಿಲ್ಲ. 1944ರ ಮಾರ್ಚ್‌ನಲ್ಲಿ ಇಂಫಾಲದ  ಮೇಲೆ ದಾಳಿ ಮಾಡಬೇಕೆಂದುಕೊಂಡಿದ್ದ ಹೊತ್ತಿಗೆ ಬ್ರಿಟಿಷ್‌ ಪಡೆಗಳು ಅಲ್ಲಿ ಸನ್ನದ್ಧವಾಗಿದ್ದವು. ಜಪಾನ್‌ ಪಡೆಗಳು ಹಾಗೂ ಐ.ಎನ್‌.ಎ. ತುಕಡಿಗಳಿಗೆ ಹೋಲಿಸಿದರೆ ಬ್ರಿಟಿಷ್‌ ಸೇನಾಬಲ ಸಂಖ್ಯಾ ದೃಷ್ಟಿಯಿಂದ ದೊಡ್ಡದಾಗಿತ್ತು. ಐ.ಎನ್‌.ಎ.ಯ ಗುಪ್ತ ಸೇವಾ ವಿಭಾಗದಲ್ಲಿ ಮುಂಚೂಣಿಯಲ್ಲಿ ಹೋರಾಡಿದ ಯೋಧರಲ್ಲಿ ಒಬ್ಬರು ಕ್ಯಾಪ್ಟನ್‌ ಹರಿ ರಾಮ್‌. ಕೊಹಿಮಾ ಹಾಗೂ ಇಂಫಾಲ ಹೋರಾಟದಲ್ಲಿ ಅವರಿಗೆ ಹಲವು ಬಾರಿ ಗಾಯಗಳಾದವು. ‘ಬ್ರಿಟಿಷ್‌ ಇಂಡಿಯನ್‌ ಆರ್ಮಿ’ಯಲ್ಲಿ ಮೊದಲು ಕೆಲಸ ಮಾಡಿದ್ದ ಅವರು 1942ರಲ್ಲಿ ಸಿಂಗಪುರದಲ್ಲಿ ಬಂಧನಕ್ಕೆ ಒಳಗಾದ ನಂತರ ಐ.ಎನ್‌.ಎ.ಗೆ ಸೇರಿದರು. ಈಗ ಅವರಿಗೆ 94 ವರ್ಷ ವಯಸ್ಸು.

ದೈಹಿಕವಾಗಿ ಈಗಲೂ ಚುರುಕಾಗಿ ಇರುವ ಅವರಿಗೆ ನೆನಪಿನ ಶಕ್ತಿಯೂ ಚೆನ್ನಾಗಿಯೇ ಇದೆ. ಯೋಧನಾಗಿದ್ದ ಸಂದರ್ಭದ ಎಲ್ಲಾ ಘಟನಾವಳಿಗಳನ್ನು ದಿನಾಂಕಗಳ ಸಹಿತ ಸಣ್ಣ ಸಣ್ಣ ವಿವರಗಳೊಂದಿಗೆ ಅವರು ನೆನಪಿಸಿಕೊಳ್ಳಬಲ್ಲರು. ‘ಜರ್ಮನಿಯಿಂದ ರೇಡಿಯೊದಲ್ಲಿ ಸುಭಾಷ್‌ ಮಾತಾಡುತ್ತಿದ್ದುದನ್ನು ನಾವು ಕೇಳಿಸಿಕೊಂಡೇ ಅವರಿಗೆ ಇದ್ದ ಬದ್ಧತೆ ಎಂಥದೆಂದು ಅರ್ಥ ಮಾಡಿಕೊಳ್ಳುತ್ತಿದ್ದೆವು. ಐ.ಎನ್‌.ಎ.ಗೆ ಸೇರಿದ ಮೇಲೆ ನಾನು ಕಾರ್ಯತಂತ್ರ, ಯುದ್ಧತಂತ್ರ, ಕಾಲಾಳು ಪಡೆಯ ಕಾದಾಟ, ಕಡಲಿನಾಳದಲ್ಲಿ ಈಜಾಡುವ ವಿಷಯಗಳಲ್ಲಿ ತರಬೇತಿ ಪಡೆದೆ’ ಎನ್ನುತ್ತಲೇ ಅವರು ಮಾತಿಗೆ ಶುರುವಿಟ್ಟುಕೊಂಡರು. ಆಗ ಏನು ನಡೆಯಿತೆಂದು ಅವರು ಹೇಳಿದ ದಟ್ಟ ವಿವರಗಳು ಇಲ್ಲಿವೆ...

‘1943ರ ಡಿಸೆಂಬರ್‌ನಲ್ಲಿ ನಾವು ಚಿಂದ್ವಿನ್‌ ಯುದ್ಧಭೂಮಿಯನ್ನು ತಲುಪಿದೆವು. ನಾನು ಆಗ ಬೇಹುಗಾರಿಕಾ ವಿಭಾಗದಲ್ಲಿ ಇದ್ದೆ. ನಕ್ಷೆಗಳನ್ನು ಸೂಕ್ಷ್ಮವಾಗಿ ಓದುವುದರಲ್ಲಿ ನಾನು ಪಳಗಿದ್ದೆ. ಅದರಿಂದಲೇ ಶತ್ರುಪಡೆಗಳ ಚಲನವಲನಗಳನ್ನು ಅಂದಾಜು ಮಾಡುತ್ತಿದ್ದೆ. ಯೋಧನಾಗಿ ಹೋರಾಡುವುದರ ಜೊತೆಗೆ ಇಂಫಾಲದಲ್ಲಿ ಶತ್ರುಪಡೆಗಳ ಕುರಿತು ಮಾಹಿತಿ ನೀಡುವುದು, ಅಲ್ಲಿನ ಮೇಲ್ಮೈ ಲಕ್ಷಣ ತಿಳಿಸುವ ಜವಾಬ್ದಾರಿ ನನ್ನ ಮೇಲೆ ಇತ್ತು. ನಾನು ಖಚಿತವಾಗಿ ಶತ್ರುಪಡೆಗಳು ಎಲ್ಲಿ ಇವೆ ಎಂದು ಹೇಳುತ್ತಿದ್ದೆ.

1944ರ ಮಾರ್ಚ್‌ನಲ್ಲಿ ತಮುವಿನ ಬ್ರಿಟಿಷ್‌ ನೆಲೆಯ ಮೇಲೆ ನಾವು ಯಶಸ್ವಿಯಾಗಿ ದಾಳಿ ನಡೆಸಿ, ಅದನ್ನು ವಶಪಡಿಸಿಕೊಂಡೆವು. ವೇಯ್ನ್‌ಗ್ಯಾಂಗ್‌ನಲ್ಲಿ ಸೇತುವೆಯೊಂದನ್ನು ಸ್ಫೋಟಿಸುವ ಯೋಜನೆಯಲ್ಲಿ ನಾವು ಮುಳುಗಿದ್ದಾಗ ದಿಢೀರನೆ ಹತ್ತಿರದ ಸ್ಥಳದಿಂದ ಶತ್ರುಪಡೆಯನ್ನು ಎದುರಿಸಬೇಕಾಗಿ ಬಂತು. ಅವರು ಹಾರಿಸಿದ ಒಂದು ಗುಂಡು ನನ್ನ ತಲೆಯನ್ನು ಹಾದು ಹೋಯಿತು. ನನಗೆ ಗಾಯವಾಯಿತು. ಅದೃಷ್ಟವಶಾತ್‌ ಮೆದುಳಿನ ಕೋಶಕ್ಕೆ ಹಾನಿಯಾಗಲಿಲ್ಲ. ನನ್ನ ಹಿಂದೆ ಇದ್ದ ಜಪಾನ್‌ನ ಯೋಧನಿಗೆ ಅದೇ ಗುಂಡು ಹೊಕ್ಕಿತು. ಅವನು ಮೃತಪಟ್ಟ. ನಾವು ನಾಲೆಯೊಂದಕ್ಕೆ ಜಿಗಿದು, ಅಲ್ಲಿಂದ ಸೇನಾ ನೆಲೆ ಇದ್ದ ಕಡೆಗೆ ಚಾರಣ ಮಾಡಿಕೊಂಡು ಹೋದೆವು. 

ಇನ್ನೊಮ್ಮೆ ನಾವು ಬರೀ 31 ಜನ 200ಕ್ಕೂ ಹೆಚ್ಚು ಯೋಧರಿದ್ದ ಶತ್ರುಸೇನೆಯ ತುಕಡಿ ಮೇಲೆ ದಾಳಿ ಇಟ್ಟು, ಅವರಿದ್ದ ನೆಲೆಯನ್ನು ವಶಪಡಿಸಿಕೊಂಡೆವು. ನಮ್ಮ ಬಳಿ ಹೆಚ್ಚು ಮದ್ದುಗುಂಡುಗಳು ಇರಲಿಲ್ಲವಾದ್ದರಿಂದ ಆ ನೆಲೆಯನ್ನು ಹೆಚ್ಚು ಕಾಲ ನಮ್ಮ ವಶದಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ. ಶತ್ರು ವಿಮಾನಗಳಿಂದ ಸದಾ ದಾಳಿ ನಡೆಯುತ್ತಿತ್ತು. ರಾತ್ರಿ ಹೊತ್ತು ಮಾತ್ರ ಸಂಚರಿಸುವುದು ಸಾಧ್ಯವಿತ್ತು. ಮಿತಿಗಳ ನಡುವೆಯೇ ಐ.ಎನ್‌.ಎ. ಪಡೆಗಳ ಕಾರ್ಯಾಚರಣೆ ಶ್ಲಾಘನೀಯ ಎನ್ನುವಂತೆ ಇತ್ತು. ಅರಕನ್‌ನಲ್ಲಿ ಗುಂಡುಗಳು ಸಾಲದೇಹೋದಾಗ ಕರ್ನಲ್‌ ಪಿ.ಎಸ್‌. ರತೂರಿ, ಬಂದೂಕಿನ ಅಲಗುಗಳಿಂದಲೇ ರಾತ್ರಿ ಹೊತ್ತು ಬ್ರಿಟಿಷರ ಮೇಲೆ ದಾಳಿ ಇಡುವಂತೆ ಆದೇಶಿಸಿದರು. ಮಲಗಿದ್ದ ಶತ್ರುಪಡೆಯ ಮೇಲೆ ದಾಳಿ ಇಟ್ಟು, ಪಶ್ಚಿಮ ಆಫ್ರಿಕಾದ ಸುಮಾರು 350 ಯೋಧರನ್ನು ನಮ್ಮವರು ಕೊಂದರು.

ಅವರನ್ನು ಬಹುದೂರ ಅಟ್ಟಿಸಿಕೊಂಡು ಹೋಗಿದ್ದರು. ಎಷ್ಟೋ ಶತ್ರುಗಳು ಪಾರಾಗುವ ಭರದಲ್ಲಿ ಚಿಂದ್ವಿನ್‌ ನದಿಯಲ್ಲಿ ಮುಳುಗಿಹೋದರು. ಬ್ರಿಟಿಷ್‌ ಕಮಾಂಡಿಂಗ್‌ ಅಧಿಕಾರಿ ಜನರಲ್‌ ಮಸರ್ವಿ ರಾತ್ರಿ ಉಡುಗೆಯಲ್ಲೇ ಓಡಿಹೋದರು. ಅವರನ್ನು ಐ.ಎನ್‌.ಎ. ಯೋಧರು 25 ಕಿ.ಮೀ.ನಷ್ಟು ದೂರ ಅಟ್ಟಿಸಿಕೊಂಡು ಹೋಗಿದ್ದರು. ಮೊವ್‌ಡೊಕ್‌ ಪೋಸ್ಟ್‌ ಅನ್ನು ಐ.ಎನ್‌.ಎ. ವಶಪಡಿಸಿಕೊಂಡಿತು. ಮೂರು ತಿಂಗಳಾದರೂ ಜಪಾನ್‌ ಯೋಧರಿಗೆ ಅದನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜಪಾನ್‌ ಅಧಿಕಾರಿಗಳು ಇಂಡಿಯನ್‌ ಕಮಾಂಡರ್‌ ಅಧೀನದಲ್ಲಿ ಕಾರ್ಯಾಚರಣೆ ನಡೆಸಿದ್ದರು. ವಿಶ್ವ ಚರಿತ್ರೆಯಲ್ಲಿಯೇ ಇಂಥ ಪ್ರಸಂಗ ಅಪರೂಪ ಎನ್ನಬಹುದು. ಇನ್ನೇನು ಇಂಫಾಲ ಐ.ಎನ್‌.ಎ. ಕೈವಶವಾಗಿಯೇಬಿಟ್ಟಿತು ಎನ್ನುವ ಸ್ಥಿತಿ ಇತ್ತು. ಅಷ್ಟರಲ್ಲಿ ಜೋರಾಗಿ ಮಳೆ ಬಂತು. ಅದು ಬ್ರಿಟಿಷರಿಗೆ ವರವಾದರೆ, ಐ.ಎನ್‌.ಎ.ಗೆ ಶಾಪವಾಗಿ ಪರಿಣಮಿಸಿತು.

ಜಪಾನ್‌ ಹಾಗೂ ಐ.ಎನ್‌.ಎ. ಪಡೆಗಳು ಬ್ರಿಟಿಷರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಬ್ರಿಟನ್ನರ ವಿಮಾನ ಪಡೆಗಳ ಬಲ ಹೆಚ್ಚಾಗಿತ್ತು. ಅದಕ್ಕೆ ಜಪಾನ್‌ಗೆ ಸಾಟಿಯಾಗಲು ಸಾಧ್ಯವಿರಲಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದ ತನ್ನ ಯೋಧರನ್ನೆಲ್ಲ ವಿಮಾನಗಳಿಂದಲೇ ಹೊತ್ತೊಯ್ದರು. ಜಪಾನ್‌ ಹಾಗೂ ಐ.ಎನ್‌.ಎ. ಯೋಧರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಏಪ್ರಿಲ್‌ ಕೊನೆಯ ಹೊತ್ತಿಗೆ ಅಕಾಲಿಕ ಮಳೆಯಿಂದಾಗಿ ಸಂವಹನದ ಮಾರ್ಗಗಳೆಲ್ಲಾ ಬಂದ್‌ ಆಗಿಹೋದವು. ಇದರಿಂದ ಐ.ಎನ್‌.ಎ.ಗೆ ಹಿನ್ನಡೆ ಉಂಟಾಯಿತು. ಮಳೆಯಿಂದಾಗಿ ತೀವ್ರವಾದ ರೋಗಗಳು ಹರಡಿದವು. ಹಂತಹಂತವಾಗಿ ಯೋಧರ ಆಕ್ರಮಣಶೀಲ ಧೋರಣೆಯು ರಕ್ಷಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿಗೆ ತಿರುಗಿತು.

ದುರದೃಷ್ಟವಶಾತ್‌ ನಮ್ಮ ರೆಜಿಮೆಂಟ್‌ನ ಮೇಜರ್‌ ಪ್ರಭು ದಯಾಳ್‌ ತಪ್ಪಿಸಿಕೊಂಡು ಹೋಗಿ, ಶತ್ರುಗಳಿಗೆ ನಮ್ಮ ಎಲ್ಲಾ ಕಾರ್ಯತಂತ್ರಗಳನ್ನು ಹೇಳಿಬಿಟ್ಟರು. ನಾವು ಯಾವ್ಯಾವ ಸ್ಥಳಗಳಲ್ಲಿ ಇದ್ದೆವು, ನಮ್ಮ ಮಿತಿಗಳೇನು ಎನ್ನುವುದನ್ನೂ ಬ್ರಿಟಿಷರಿಗೆ ತಿಳಿಸಿಬಿಟ್ಟರು. ಅಲ್ಲಿಂದಾಚೆಗೆ ವಿಮಾನದಿಂದ ನಮ್ಮ ಮೇಲೆ ನಿರಂತರವಾಗಿ ದಾಳಿ ಶುರುವಾಗಿ, ನಮಗೆ ಹಿನ್ನಡೆ ಉಂಟಾಯಿತು. 1944ರ ಸೆಪ್ಟೆಂಬರ್‌ ಹೊತ್ತಿಗೆ ಚಿಂದ್ವಿನ್‌ ಸೇನಾ ಮುನ್ನೆಲೆಗೆ ನಾವೆಲ್ಲಾ ಬಂದೆವು. ಮಾರ್ಚ್‌ನಲ್ಲಿ ನಮ್ಮ ಹೋರಾಟ ಶುರುವಾದದ್ದು ಎಲ್ಲೋ, ಕೊನೆಗೆ ಬಂದದ್ದು ಎಲ್ಲಿಗೋ ಎಂಬಂತಾಯಿತು. ಪ್ರಭು ದಯಾಳ್‌ ನಮಗೆ ಮೋಸ ಮಾಡದೇ ಹೋಗಿದ್ದರೆ ಇಂಫಾಲವನ್ನು ವಶಕ್ಕೆ ಪಡೆದಿರುತ್ತಿದ್ದೆವು.

ಹಗಲಿನಲ್ಲಿ ನಾವು ಕಾಡಿನಲ್ಲಿ ಅಡಗಿರುತ್ತಿದ್ದೆವು. ರಾತ್ರಿ ಹೊತ್ತು ಮಾತ್ರ ಸಂಚರಿಸಲು ಸಾಧ್ಯವಿತ್ತು. ಅನ್ನ, ನೀರು ಇಲ್ಲದ ದಿನಗಳವು. ನನಗೆ ಹತ್ತು ದಿನ ತಿನ್ನಲು ಏನೂ ಸಿಕ್ಕಿರಲಿಲ್ಲ. ತೀರಾ ಕೆಟ್ಟ ಪರಿಸ್ಥಿತಿಗಳಲ್ಲಿ ಐ.ಎನ್‌.ಎ. ಪಡೆಗಳು ಹೋರಾಡಿದವು. ಕಾಡುಭತ್ತ ಹಾಗೂ ಹುಲ್ಲೇ ಅವರಿಗೆ ಆಹಾರವಾಯಿತು. ಶತ್ರುಗಳ ನೆಲೆಗಳಲ್ಲಿ ಸಿಕ್ಕಿದ್ದಷ್ಟೇ ಇದಕ್ಕಿಂತ ಉತ್ತಮವಾದ ಆಹಾರ. ಅನೇಕರು ಉಪವಾಸದಿಂದಲೇ ಮೃತಪಟ್ಟರು. ಒಮ್ಮೆ ಬ್ರಿಟಿಷ್‌ ಸೇನೆಯು ಹಿಮ್ಮೆಟ್ಟುವ ಸಂದರ್ಭ ಒದಗಿಬಂದಾಗ ತಮ್ಮಲ್ಲಿದ್ದ ಹಿಟ್ಟಿನ ಮೂಟೆಗಳಿಗೆ ಬೆಂಕಿಇಟ್ಟರು. ಕೆಲವು ಮೂಟೆಗಳು ಸುಡದೆ ಹಾಗೇ ಸಿಕ್ಕವು. ಅವುಗಳಲ್ಲಿ ಸೀಮೆಎಣ್ಣೆ ಬೆರೆತಿತ್ತು.

ಒಂದಿಷ್ಟು ದಿನ ಅದೇ ನಮ್ಮ ಪಾಲಿಗೆ ಆಹಾರವಾಯಿತು. ನಾನು ಸಸ್ಯಾಹಾರಿ. ಆದರೆ, ಅನಿವಾರ್ಯ ಪರಿಸ್ಥಿತಿಯಿಂದ ಮಾಂಸಾಹಾರವನ್ನೂ ಸೇವಿಸಬೇಕಾಯಿತು. ಜಪಾನ್‌ನ ಕಮಾಂಡರ್‌ ಒಬ್ಬರು ಕಾಡುಹಂದಿಯನ್ನು ಹೊಡೆದರು. ಅದರ ಹಿಂದಿನ ಕಾಲುಗಳನ್ನು ಭಾರತದ ಯೋಧರಿಗೆ ಕೊಟ್ಟರು. ಹಾಕಲು ಮಸಾಲೆಯಾಗಲೀ ಹುರಿಯಲು ಎಣ್ಣೆಯಾಗಲೀ ಇರಲಿಲ್ಲ. ಅರೆಬೆಂದ ಆ ಮಾಂಸವನ್ನೇ ಎಲ್ಲರೂ ತಿಂದರು. ನಾನು ಮಾಂಸ ತಿಂದಿದ್ದು ಅದೇ ಮೊದಲು. ಅದಾದ ಮೂರು ದಿನಗಳ ನಂತರ ನನ್ನ ತಲೆಗೆ ಗುಂಡು ತಗುಲಿದ್ದು. ಮಾಂಸ ತಿಂದಿದ್ದಕ್ಕೆ ಆದ ಶಿಕ್ಷೆ ಅದು ಎಂದು ನಾನು ಭಾವಿಸಿದ್ದೆ. ಗುಂಡು ತಗುಲಿದ ಮೇಲೆ ನನಗೆ ಗಂಭೀರವಾದ ಗಾಯವಾಯಿತು. ಅದು ವ್ರಣವಾಯಿತು. ಕ್ರಮೇಣ ಭೇದಿ ಶುರುವಾಯಿತು. ಮಲೇರಿಯಾ ಬಾಧಿಸಿತು. ಹೊಟ್ಟೆಯೊಳಗೆ ಹುಳುಗಳು.

ಅವು ಎಷ್ಟಿದ್ದವೆಂದರೆ ಒಂದು ಲಾಡಿ ಹುಳು ಬಾಯಿಯಿಂದ ಹೊರಬಂತು. ಇಷ್ಟೆಲ್ಲಾ ಕಷ್ಟ ಎದುರಾದರೂ ನಾವು ಕಾಡಿನಲ್ಲಿ ಏಗಿದೆವು. ನಾನು ಪ್ರಜ್ಞೆ ಕಳೆದುಕೊಂಡೆ. ಸತ್ತೇಹೋದೆ ಎಂದು ಭಾವಿಸಿದ ಸಹಚರರು ನನ್ನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು, ನನ್ನನ್ನು ಅಲ್ಲಿಯೇ ಬಿಟ್ಟು ಹೋದರು. ಎಷ್ಟೋ ಗಂಟೆಗಳ ನಂತರ ನನಗೆ ಪ್ರಜ್ಞೆ ಬಂತು.  ಹಳ್ಳವೊಂದರಲ್ಲಿ ಬಿದ್ದಿದ್ದೆ. ಜಿಗಣೆಗಳು ದೇಹದ ಅಲ್ಲಲ್ಲಿ ರಕ್ತಹೀರಿದ್ದ ಗಾಯಗಳು ಇದ್ದವು. ಇನ್ನೆರಡು ದಿನ ನಾನು ಗೊತ್ತಿರದ ದಾರಿಯಲ್ಲಿ ನಡೆದೆ. ಯಾರೂ ಇಲ್ಲದ ಕೆಲವು ಹಳ್ಳಿಗಳನ್ನು ಹಾದುಹೋದೆ. ಯುದ್ಧದ ಆ ಸಂದರ್ಭದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದ ಒಬ್ಬ ನನಗೆ ಸಿಕ್ಕಿದ. ಅವನು ನನಗೆ ಸಹಾಯ ಮಾಡಿದ. ಅರ್ಧ ಭಾರತೀಯ, ಅರ್ಧ ಬರ್ಮೀಯನಾಗಿದ್ದ ಅವನ ಹೆಸರು ಜೈದಾಬಾಯಿ.

ಅವನಿಗೆ ಸಾಕಷ್ಟು ಆಸ್ತಿಪಾಸ್ತಿ ಇತ್ತು. ತನ್ನ ಮಗನಂತೆ ಇದ್ದು, ಅದಕ್ಕೆ ವಾರಸುದಾರನಾಗುವಂತೆ ಅವನು ಬೇಡಿಕೊಂಡ. ಅಲ್ಲಿ ನಾನು ಸುರಕ್ಷಿತವಾಗಿ ಇರುತ್ತೇನೆಂದು ಖಾತರಿಯನ್ನೂ ನೀಡಿದ. ನನಗೆ ನನ್ನ ರೆಜಿಮೆಂಟ್‌ ತಲುಪುವುದಷ್ಟೇ ಆಗ ಗುರಿಯಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಮರಳುವುದಾಗಿ ಹೇಳಿ ಅಲ್ಲಿಂದ ಹೊರಟೆ. ನೇತಾಜಿ ಹಾಗೂ ತಾಯ್ನೆಲದ ಕುರಿತು ನನಗೆ ಅಷ್ಟು ಪ್ರೇಮವಿತ್ತು. ಆಸ್ತಿ, ಸವಲತ್ತುಗಳು ಎಂದಿಗೂ ನನಗೆ ಆಕರ್ಷಕ ಎನಿಸಿರಲಿಲ್ಲ. ಒಬ್ಬನೇ ಒಂದು ವಾರ ಕಾಡಿನಲ್ಲಿ ನಡೆದು, ಐ.ಎನ್‌.ಎ. ಶಿಬಿರ ಸೇರಿಕೊಂಡೆ. ಹೆಚ್ಚುವರಿ ಚಿಕಿತ್ಸೆಗಾಗಿ ನನ್ನನ್ನು ರಂಗೂನ್‌ಗೆ ಕಳುಹಿಸಿಕೊಟ್ಟರು.

1945ರ ಏಪ್ರಿಲ್‌ನಲ್ಲಿ ನಾನು ಚಿಕಿತ್ಸಾಲಯದ ಹೊರಗೆ ಕುಳಿತಿದ್ದೆ. ಅಲ್ಲಿಗೆ ನೇತಾಜಿ ಬಂದರು. ನಾನು ಎಲ್ಲರಿಗೂ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದೆ. ನೇತಾಜಿ ಮುಖದಲ್ಲಿ ಬೇಸರವಿತ್ತು. ‘ಇನ್ನು ಯಾರೂ ಸಾಲಿನಲ್ಲಿ ನಿಲ್ಲುವುದು ಬೇಡ. ಜಪಾನೀಯರು ಶರಣಾಗಿಬಿಟ್ಟಿದ್ದಾರೆ. ಯುದ್ಧ ಮುಗಿದುಹೋಗಿದೆ. ನೀವು ಹೊರಡಬಹುದು’ ಎಂದು ಹೇಳಿದರು. ನಾವ್ಯಾರೂ ಶತ್ರುಗಳ ಕೈಗೆ ಸಿಲುಕುವುದು ಅವರಿಗೆ ಇಷ್ಟವಿರಲಿಲ್ಲ. ‘ದೊಡ್ಡ ಕರ್ತವ್ಯ ನನಗಾಗಿ ಕಾಯುತ್ತಿದೆ. ನನ್ನ ಕೊನೆಯುಸಿರು ಇರುವವರೆಗೂ ತಾಯ್ನೆಲದ ಸ್ವಾತಂತ್ರ್ಯಕ್ಕಾಗಿ ಹೋರಾಡುವೆ’ ಎಂದು ಅವರು ಆಡಿದ್ದ ಕೊನೆಯ ಮಾತು ನೆನೆದರೆ ಈಗಲೂ ಮೈಜುಮ್ಮೆನ್ನುತ್ತದೆ.’ ಹರಿ ರಾಮ್‌ ಈಗ ದೆಹಲಿಯಲ್ಲಿ ಇದ್ದಾರೆ. ‘ಈಗ ದೇಶವನ್ನು ನೋಡಿ. ಇದಕ್ಕಾಗಿ ನಾವು ಹೋರಾಡಿದೆವೆ? ನಾವು ಇದಕ್ಕಾಗಿ ರಕ್ತ ಸುರಿಸಲಿಲ್ಲ. ನೇತಾಜಿ ಕನಸಿನ ಭಾರತ ಇದಲ್ಲವೇ ಅಲ್ಲ’ ಎಂದು ನಾನು ಅಲ್ಲಿಂದ ಹೊರಡುವಾಗ ಅವರು ವಿಷಾದದಿಂದ ನುಡಿದರು.

ಮುಂದಿನ ವಾರ: ಐ.ಎನ್‌.ಎ. ಪತನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT