ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಪದರಗಳ ಪ್ರಕೃತಿ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಬೇಕು ಎಂಬ ಇಚ್ಛೆ ಇಟ್ಟುಕೊಂಡೇ ಮನುಷ್ಯ ಅದೇ ಪ್ರಕೃತಿಯನ್ನು ಗೆಲ್ಲುವ ಬಯಕೆ ವ್ಯಕ್ತಪಡಿಸುತ್ತಾನೆ. ಆತನಿಗೆ ಈ ಹಿಂದೆ ತನ್ನವರು ಪ್ರಕೃತಿಯನ್ನು ಗೆದ್ದ ಕಥೆಗಳು ಅಥವಾ ಕಣ್ಣೆದುರಿಗೆ ನಡೆದ ದೃಷ್ಟಾಂತಗಳು ಸ್ಫೂರ್ತಿಯಾಗಿರುತ್ತದೆ. ಆತನ ಈ ಹೋರಾಟ ಕಾಲಾತೀತ. ಅದು ನಿರಂತರ’– ಹೀಗೆ, ತಮ್ಮ ಮಹತ್ವಾಕಾಂಕ್ಷೆಯ ಸಿನಿಮಾದ ಒಳಸುಳಿಯ ಒಂದು ಮಗ್ಗುಲನ್ನು ತೆರೆದಿಟ್ಟರು ನಿರ್ದೇಶಕ ಪಂಚಾಕ್ಷರಿ.

2013ನೇ ಸಾಲಿನ ಅತ್ಯುತ್ತಮ ಚಿತ್ರಕಥೆ (ರೂಪಾಂತರ) ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ‘ಪ್ರಕೃತಿ’ ಚಿತ್ರ ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಹಿನ್ನೆಲೆಯದು. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಯನ್ನು ಪ್ರಕೃತಿ ಮತ್ತು ಮಾನವ ಸಂಬಂಧ, ಮಾನಸಿಕ ಸಂಘರ್ಷಗಳ ಮೂಲಕ ಕಟ್ಟಿಕೊಡುವ ಚಿತ್ರವಿದು. ಕಳೆದ 10 ವರ್ಷಗಳಿಂದ ಚಿತ್ರರಂಗದಲ್ಲಿರುವ ಪಂಚಾಕ್ಷರಿ, ಗಿರೀಶ್‌ ಕಾಸರವಳ್ಳಿ ಅವರ ‘ಹಸೀನಾ’, ‘ನಾಯಿ ನೆರಳು’, ‘ದ್ವೀಪ’, ‘ಗುಲಾಬಿ ಟಾಕೀಸ್‌’ ಮುಂತಾದ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದವರು.

ಸಾಹಿತ್ಯ ಮತ್ತು ಸಿನಿಮಾ ಎರಡರ ಗಂಭೀರ ಅಧ್ಯಯನದಲ್ಲಿ ತೊಡಗಿದ್ದ ಅವರು ಯು.ಆರ್‌. ಅನಂತಮೂರ್ತಿ ಅವರ ‘ಪ್ರಕೃತಿ’ ಕಥೆಯಲ್ಲಿ ಸಿನಿಮಾ ರೂಪ ತಾಳಲು ಅಗತ್ಯವಾದ ಗುಣಗಳನ್ನು ಗ್ರಹಿಸಿದ್ದರು. ಹಲವು ವರ್ಷಗಳ ಹಿಂದೆಯೇ ಸಿನಿಮಾಕ್ಕೆ ಪೂರಕವಾಗಿ ಕಥೆಯನ್ನು ಹೊಂದಿಸುವ ಕೆಲಸ ನಡೆಸಿದ್ದರು. ಇದರ ನಡುವೆ ಒಮ್ಮೆ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಚಿತ್ರಕಥೆ ಬರವಣಿಗೆ ಕೋರ್ಸ್‌ನಲ್ಲಿ ಭಾಗವಹಿಸಿದ್ದಾಗ ಮಹಾತ್ಮ ಗಾಂಧಿ ಎಂಬ ಕಥೆಯನ್ನು ಚಿತ್ರಕಥೆಗೆ ಹಿಗ್ಗಿಸಿದ್ದರು. ಹೆಚ್ಚು ಬಜೆಟ್‌ ಬೇಡುವ ಕಾರಣಕ್ಕೆ ಆ ಯೋಜನೆಯನ್ನು ಮುಂದಕ್ಕೆ ಹಾಕುವಂತಾಯಿತು. ಆಗ ಅವರನ್ನು ಮತ್ತೆ ಕಾಡಿದ್ದು ‘ಪ್ರಕೃತಿ’ ಕಥೆ. ನಿರ್ದೇಶನದ ಜೊತೆ ಎಸ್‌. ಲಕ್ಷ್ಮೀದೇವಿ ಮತ್ತು ವಿ. ಅಶೋಕ್‌ ಕುಮಾರ್‌ ಅವರೊಂದಿಗೆ ಸೇರಿ ಬಂಡವಾಳ ಹೂಡಿದರು.

ವಿಸ್ತರಿಸಲು ಮತ್ತು ಪಾತ್ರಗಳನ್ನು ಸೃಷ್ಟಿಸಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿರುವ ಕಥೆ ‘ಪ್ರಕೃತಿ’ಯದ್ದು. ಎಂದಿಗೂ ಪ್ರಸ್ತುತವಾಗಬಲ್ಲ ಕಥೆಯನ್ನು ಅವರು ಮೂರು ಪದರಗಳಲ್ಲಿ ತೆರೆದಿಟ್ಟಿದ್ದಾರೆ. 1930–47ರ ಕಾಲಘಟ್ಟದಲ್ಲಿ ನಡೆಯುವ ಕಥನವಾದ್ದರಿಂದ ಅದಕ್ಕೆ ಕರ ವಿರೋಧ ಚಳವಳಿಯ ಸಂಗತಿಗಳನ್ನು ಅಳವಡಿಸಿದ್ದಾರೆ. ಪ್ರಕೃತಿಗೆ ವಿರುದ್ಧವಾಗಿ ಮಲೆನಾಡಿನಲ್ಲಿ ಕಿತ್ತಳೆ ಬೆಳೆಯುತ್ತೇನೆ ಎನ್ನುವ ಪ್ರಯತ್ನದಲ್ಲಿ ಮನೆಯವರ ಮತ್ತು ಊರಿನವರ ಅಭಿಪ್ರಾಯಗಳನ್ನು ಮೀರಿ ಸಾಧಿಸಲು ಹೋಗುವ ಮತ್ತು ದೇಹವೂ ಒಂದು ಪ್ರಕೃತಿ ಎನ್ನುವುದನ್ನು ಮರೆತು ಮಗಳ ಬಯಕೆಗಳನ್ನು ನಿಯಂತ್ರಿಸುವ ಪಾತ್ರ ಪ್ರಕೃತಿಯನ್ನು ಗೆಲ್ಲುವ ಜನರ ಉಮೇದನ್ನು ಪ್ರತಿನಿಧಿಸುತ್ತದೆ.

ತಂದೆಯ ಮೇಲಿನ ನಂಬಿಕೆಯ ನಡುವೆ ಸಹಜ ಹೆಣ್ತನವನ್ನು ಸಾಬೀತುಪಡಿಸುವ ಮಗಳು ಪ್ರಕೃತಿಯನ್ನು ಸಂಕೇತಿಸುತ್ತಾಳೆ. ತಂದೆಯ ನಡೆಯನ್ನು ವಿರೋಧಿಸಿ ಪೇಟೆಯತ್ತ ಮುಖ ಮಾಡುವ ಮಗನ ಪಾತ್ರದ ಮೂಲಕ ಪ್ರಕೃತಿ ಮೇಲಿನ ನಂಬಿಕೆ ಕಳೆದುಕೊಂಡ ಯುವ ಪೀಳಿಗೆಯ ಪಲ್ಲಟಗಳನ್ನು ಮತ್ತೊಂದು ಆಯಾಮದಲ್ಲಿ ಕಟ್ಟಿಕೊಡುತ್ತದೆ ಎಂದು ‘ಪ್ರಕೃತಿ’ ಕಥನದ ಚಿತ್ರಣ ನೀಡುತ್ತಾರೆ ಪಂಚಾಕ್ಷರಿ.

‘ಮೂಲ ಕಥೆಯಲ್ಲಿ ಸಿನಿಮಾಕ್ಕೆ ಅಗತ್ಯವಾದ ಅಂಶಗಳನ್ನು ಅಳವಡಿಸಲು ಅವಕಾಶವಿತ್ತು. ಸೂಕ್ಷ್ಮ ವಸ್ತುವಿನ ಕಥೆಯಾಗಿದ್ದರಿಂದ ಸಿನಿಮಾಕ್ಕೆ ಹೊಂದಿಸುವುದು ಮುಂದಿದ್ದ ಸವಾಲು. ಕಥೆಯಲ್ಲಿದ್ದ ಈ ಅವಕಾಶಗಳ ಕಾರಣದಿಂದಲೇ ಸಿನಿಮಾ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಲು ಸಾಧ್ಯವಾಗಿದೆ ಎನ್ನುವುದು ಅವರ ಅಭಿಪ್ರಾಯ.

ಅನಂತಮೂರ್ತಿ ಕೂಡ ವಿಸ್ತೃತ ಚಿತ್ರಕಥೆ ಮತ್ತು ಪಾತ್ರಗಳ ಸ್ವರೂಪವನ್ನು ಇಷ್ಟಪಟ್ಟರು. ಇಡೀ ಸಿನಿಮಾ ಮಲೆನಾಡಿನ ಸೀಮೆಯಲ್ಲಿ ಸಾಗುವುದರಿಂದ ದೃಶ್ಯಾತ್ಮಕವಾಗಿಯೂ ಶ್ರೀಮಂತವಾಗಿ ಮೂಡಿಬಂದಿದೆ. ಇತ್ತೀಚಿನ ಸಿನಿಮಾಗಳಲ್ಲಿ ಮಲೆನಾಡಿನ ಸೊಗಡನ್ನು ಇಷ್ಟು ವರ್ಣಮಯವಾಗಿ ಯಾರೂ ಚಿತ್ರಿಸಿಲ್ಲ. ಪ್ರಕೃತಿ ಮತ್ತು ಪಲ್ಲಟಗಳ ದ್ವಂದ್ವಗಳನ್ನು ಸಾಂಕೇತಿಕವಾಗಿ ಪ್ರತಿಪಾದಿಸಿದ್ದೇನೆ. ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವವರಿಗೆ ಅದರ ಒಳದನಿ ತಿಳಿಯುತ್ತದೆ’ ಎನ್ನುವ ಅವರು, ದೇವರ ಅಸ್ತಿತ್ವದ ಕುರಿತ ಜಿಜ್ಞಾಸೆಯನ್ನೂ ತಮ್ಮ ಸಿನಿಮಾ ಮೂಡಿಸುತ್ತದೆ ಎನ್ನುತ್ತಾರೆ.

ಚಿತ್ರಕಥೆಯ ವಿಭಾಗದಲ್ಲಿ ದೊರೆತ ಪ್ರಶಸ್ತಿ ಅವರಲ್ಲಿ ಸಂತಸ ತಂದಿದ್ದರೆ, ಇನ್ನೂ ದೊಡ್ಡ ಪ್ರಶಸ್ತಿಗೆ ಇದು ಅರ್ಹವಾಗಿತ್ತು ಎಂಬ ಚಿಕ್ಕ ಬೇಸರವೂ ಇದೆ. ಇದು ಆರಂಭವಷ್ಟೇ, ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ‘ಪ್ರಕೃತಿ’ ಹೆಚ್ಚಿನ ಗೌರವಗಳನ್ನು ಪಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಅವರದು. ತಾವು ನೆಚ್ಚಿಕೊಂಡ ಸಿದ್ಧಾಂತಗಳ ನೆಲೆಯಲ್ಲಿಯೇ ಸಿನಿಮಾ ಮಾಡಿದ್ದು ಅವರಿಗೆ ಖುಷಿ ನೀಡಿದೆ.

ಅನಂತಮೂರ್ತಿ, ಗಿರೀಶ್‌ ಕಾಸರವಳ್ಳಿ ಅವರ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡು ಬೆಳೆದ ಹೆಮ್ಮೆ ಅವರದು. ಈ ಇಬ್ಬರು ಸಿನಿಮಾವನ್ನು ಮೆಚ್ಚಿಕೊಂಡಿದ್ದೂ ಅವರ ಸಿನಿಮಾ ಪ್ರೀತಿಯನ್ನು ಇಮ್ಮಡಿಗೊಳಿಸಿದೆ. ‘ಪ್ರಕೃತಿ’ ಸಿನಿಮಾ ಮಾಡಿದ ಅನುಭವದ ಖುಷಿ ಅದು ಕೊಟ್ಟ ಪ್ರಶಸ್ತಿಯನ್ನೂ ಮೀರಿದ್ದು ಎನ್ನುವ ಪಂಚಾಕ್ಷರಿ ಹೊಸ ಸಿನಿಮಾ ಸೃಷ್ಟಿಯ ಸಿದ್ಧತೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT