ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಿಗೆ ಬೆಳಕು ಕೊಡಿ

Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸರ್ಕಾರ ಹಳ್ಳಿ, -ಪಟ್ಟಣ ಎಂಬ ಭೇದ ಮಾಡದೇ ಗುಣ­ಮಟ್ಟದ ವಿದ್ಯುತ್‌ ಪೂರೈಸ­ಬೇಕೆಂ­ಬುದು ರೈತ ಸಂಘದ ಬಹು ಮುಖ್ಯ­ವಾದ ಹಕ್ಕೊ­ತ್ತಾಯ. ಆದರೆ ಯಾವ ಸರ್ಕಾರವೂ ಈ ವಿಚಾರ­­ವಾಗಿ ಗಂಭೀರ­ವಾದ ಚಿಂತನೆ ಮಾಡಿಲ್ಲ. ಸಂಘದ 35 ವರ್ಷಗಳ ಇತಿ­ಹಾಸ­­ದಲ್ಲಿ ಮೂರು ಪ್ರಮುಖ ಪಕ್ಷ­­ಗಳು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿವೆ. ಆದರೆ ಅವೆಲ್ಲವೂ ರೈತರಿಗೆ ವಿದ್ಯುತ್ ನೀಡುವ ಬದಲು, ಶಾಕ್ ಹೊಡೆಸುವುದಕ್ಕೇ ಸೀಮಿತವಾಗಿವೆ.

ಎಂತಹ ಮಳೆ ಬಂದರೂ, ಅಣೆಕಟ್ಟೆ ತುಂಬಿದ್ದರೂ ಮಾರ್ಚ್‌, -ಏಪ್ರಿಲ್‌­ನಲ್ಲಿ ಬೆಳೆ ಒಣಗುವುದು ತಪ್ಪಿಲ್ಲ. ನಾಲ್ಕೈದು ವರ್ಷಕ್ಕೊಮ್ಮೆ ಆವ­ರಿಸಿ­ಕೊಳ್ಳುವ ಬರ­ವಂತೂ ರೈತರನ್ನು ಸಾಲಗಾರರನ್ನಾಗಿ ಮಾಡು­ತ್ತಿದೆ. ಹೀಗಾಗಿ  ರೈತರ ಬದುಕಿನ ಆಸರೆಗೆ ಪಂಪ್‌­ಸೆಟ್‌­ಗಳ ಅಗತ್ಯ ಇದ್ದೇ ಇದೆ.

ಗುಣಮಟ್ಟ ಇಲ್ಲ: ಸರ್ಕಾರ ಹಳ್ಳಿ­ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡದೇ ಇರು­ವು­ದ­ರಿಂದ  ಪ್ರತಿ ವರ್ಷ ಲಕ್ಷಾಂ­ತರ ವಿದ್ಯುತ್ ಮೀಟರ್‌ಗಳು ಸುಟ್ಟು ಹೋಗು­ತ್ತಿವೆ. ಇದರಿಂದ ರೈತ ಸಮು­­ದಾಯ ನೂರಾರು ಕೋಟಿ ನಷ್ಟ­ವನ್ನು ಅನುಭವಿಸುತ್ತಿದೆ. ಆರ್ಥಿಕ­ವಾಗಿ  ಹಿಂದುಳಿದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.

ರಾತ್ರಿ ವೇಳೆ ಸಹ 3 ಫೇಸ್ ಅಥವಾ 2 ಫೇಸ್ ವಿದ್ಯುತ್‌ ಅನ್ನು ಸರಿಯಾಗಿ  ಸರಬ­ರಾಜು ಮಾಡುತ್ತಿಲ್ಲ (ಹಗಲು 4 ಗಂಟೆ ಮತ್ತು ರಾತ್ರಿ 2 ಗಂಟೆ) ಇದ­ರಿಂದ ಬಹಳ ಸಮಸ್ಯೆ­ಯಾ­ಗಿದೆ. ರಾತ್ರಿ ನಿದ್ರೆ­ಗೆಟ್ಟು ಜಮೀನಿಗೆ ನೀರು ಹಾಯಿ­ಸಲು ಹೋಗುವ ರೈತರು ಹಲವು ಬಗೆಯ ತೊಂದರೆಗಳನ್ನು ಎದು­ರಿ­ಸುತ್ತಿದ್ದಾರೆ. ವೋಲ್ಟೇಜ್ ಇಲ್ಲದ ವಿದ್ಯುತ್ ಸರಬರಾಜಿ­ನಿಂದ ವಿದ್ಯಾರ್ಥಿ­ಗಳ ವಿದ್ಯಾಭ್ಯಾಸವೂ ಕುಂಠಿತ­­ವಾಗುತ್ತಿದೆ.  ರಾಜ್ಯದ ಒಟ್ಟಾರೆ ವಿದ್ಯುತ್‌­ನಲ್ಲಿ ಬಹುಪಾಲನ್ನು ರೈತರ ಪಂಪ್‌ಸೆಟ್‌ಗಳಿಗೇ ಸರಬರಾಜು ಮಾಡ ಲಾ­ಗು­ತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಕೊಟ್ಟು ವಿದ್ಯುತ್‌ ಖರೀ­ದಿ­ಸಲಾಗುತ್ತಿದೆ, ಹೀಗಾಗಿ ವಿದ್ಯುತ್ ಇಲಾಖೆ ನಷ್ಟದಲ್ಲಿದೆ ಎಂದು ಹೇಳು­ವು­ದನ್ನು ಸರ್ಕಾರ ಮೊದಲು ಬಿಡಬೇಕು. ಸರಿಯಾದ ಅಂಕಿ­ಸಂಖ್ಯೆಯನ್ನು ಜನರ ಮುಂದೆ ಇಡಬೇಕು.

ನಮ್ಮ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಕಟ್ಟಲಿಲ್ಲವೆಂದು ಸಂಪರ್ಕ ಕಡಿತಗೊಳಿಸಿ, ಪಂಪ್‌ಸೆಟ್‌ ಕಾರ್ಯ ನಿರ್ವಹಿಸಲು ಸಾಧ್ಯವಾ­ಗದೇ ಇರುವ ಸ್ಥಿತಿ ನಮ್ಮಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಆದರೆ ಪಂಚಾಯಿತಿ ಅನುದಾನದಲ್ಲಿ ಗಣನೀಯ ಪ್ರಮಾಣದ ಹಣ ಈ ಕಾರಣಕ್ಕೆ ಮತ್ತು ಬೀದಿ ದೀಪಗಳ ಬಾಬ್ತಿಗೇ ಹೋಗುತ್ತಿದೆ ಎಂಬುದೂ ನಿಜ. ಈ ರೀತಿ ವಿದ್ಯುತ್ ಹಳ್ಳಿಗರ ಬದುಕನ್ನು ಹಲವು ರೀತಿಯಲ್ಲಿ ಹಿಂಡುತ್ತಿದೆ.

ಸರ್ಕಾರಕ್ಕೆ ಅಭಿವೃದ್ಧಿ ವಿಷಯದಲ್ಲಿ ಬದ್ಧತೆ ಇದ್ದರೆ ಕಡ್ಡಾಯವಾಗಿ ರೈತರಿಗೆ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಪಂಪ್‌ಸೆಟ್‌ಗಳನ್ನೂ ಹನಿ ನೀರಾವರಿಗೆ ಒಳಪಡಿಸಬೇಕು. ತಮಿಳುನಾಡು ಸರ್ಕಾರ ಹನಿ ನೀರಾ­ವರಿ ಪದ್ಧತಿಗೆ ನೂರಕ್ಕೆ ನೂರರಷ್ಟು ಸಹಾಯಧನ ನೀಡುತ್ತಿದೆ. ಅದರಂತೆ ಇಲ್ಲೂ ಸಹಾಯಧನ ನೀಡಿ ಇದರ ನಿರ್ವಹಣೆ ಸರ್ಕಾರ ಮತ್ತು ರೈತರ ಸಹಯೋಗದಲ್ಲಿ ನಡೆಯುವಂತೆ ಮಾಡಬೇಕು. ಎಲ್ಲ ಪಂಪ್‌­ಸೆಟ್‌ಗಳಿಗೂ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದೇ ಆದರೆ, ದಿನಕ್ಕೆ ನಾಲ್ಕೈದು ಗಂಟೆ ಗುಣಮಟ್ಟದ ವಿದ್ಯುತ್ ವಿತರಿಸಿದರೂ ಸಾಕಾಗುತ್ತದೆ.
(ಲೇಖಕರು ರೈತ ಸಂಘದ ಮಂಡ್ಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT