ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಕ ಸಭೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮಕ್ಕೆ ಒತ್ತಾಯ

Last Updated 6 ಜೂನ್ 2016, 19:31 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಅಖಿಲ ಹವ್ಯಕ ಒಕ್ಕೂಟ ಭಾನುವಾರ ಆಯೋಜಿಸಿದ್ದ ಸಭೆಗೆ ಅಡ್ಡಿಪಡಿಸಿ ಕೆಲವರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಒಕ್ಕೂಟದ ಪ್ರಮುಖರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿ ಒಕ್ಕೂಟ ಕರೆದಿದ್ದ ಸಭೆಗೆ ಪೊಲೀಸ್ ಇಲಾಖೆ­ಯಿಂದ ಪೂರ್ವಾನುಮತಿ ಪಡೆಯ­ಲಾಗಿತ್ತು. ಆದರೆ ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಕೆಲವರು ಸಭೆ ಆಯೋಜಿ­ಸಿದ್ದ ಸ್ಥಳಕ್ಕೆ ಆಗಮಿಸಿ ಸಂಘಟಕರಿಗೆ ಚಪ್ಪಲಿ, ಪೊರಕೆ ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾನೂನು ಉಲ್ಲಂಘಿಸಿದ್ದಾರೆ. ಇಂತಹವರ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಶ್ರೀಗಳ ಬೆಂಬಲಿಗರ ಹೆಸರಿನಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಈ ಸಂಬಂಧ ವಿಡಿಯೊ ಚಿತ್ರೀಕರಣ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸಾಕ್ಷ್ಯಾಧಾರಗಳು ಲಭ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಘವೇಶ್ವರ ಶ್ರೀಗಳ ಪರವಾಗಿ ನಡೆಸಿದ ಸಭೆಗೆ ಯಾರೂ ಅಡ್ಡಿ ಉಂಟುಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಭೆ ನಡೆಸಿ ಅಭಿಪ್ರಾಯ ಹಂಚಿಕೊಳ್ಳಲು ಪ್ರತಿಯೊಬ್ಬ­ರಿಗೂ ಅವಕಾಶವಿದೆ. ಹವ್ಯಕ ಒಕ್ಕೂಟದ ಸಭೆಗೆ ಅಡ್ಡಿಪಡಿಸಿರುವ  ವ್ಯಕ್ತಿಗಳು ಪ್ರಜಾಪ್ರಭುತ್ವದಲ್ಲಿ ತಮಗೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಅಖಿಲ ಹವ್ಯಕ ಒಕ್ಕೂಟದ ಪ್ರಮುಖರಾದ ಎಂ.ಆರ್.ಶ್ರೀನಿವಾಸ್, ಶೈಲೇಂದ್ರ ಬಂದಗದ್ದೆ, ಜಯರಾಂ ತಲವಾಟ, ಮಹಾಬಲಗಿರಿಯಪ್ಪ ಖಂಡಿಕಾ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಬಸೆ ಅಶೋಕಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT