ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಊರಾಗಿ, ಯಲ್ಲಾಪುರವಾಗಿ...

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ನನಗೆ ಪ್ರವಾಸಿ ಸ್ಥಳವಾಗಿ ಹೆಚ್ಚು ಆಪ್ತವಾದ ಮತ್ತು ಮನಸ್ಸಿಗೆ ಹಿತ ನೀಡುವ ನೆಲೆ ಯಲ್ಲಾಪುರ. ಸಮೃದ್ಧ ಕಾಡು, ನೀರು ಮತ್ತು ಕಲ್ಲನ್ನು ಒಂದೇ ಕಡೆ ಕಾಣುವುದು ಅಪರೂಪ. ಅದು ಡೆಡ್ಲಿ ಕಾಂಬಿನೇಷನ್ ಸಹ. ಆ ಅಪರೂಪದ ಸಮೀಕರಣದ ಕಾರಣಕ್ಕೆ ಯಲ್ಲಾಪುರ ನನಗೆ ಇಷ್ಟವಾಗುತ್ತದೆ. ಜನತಾದಳದಿಂದ 1999ರಲ್ಲಿ ನಮ್ಮೂರು ಗೌರಿಬಿದನೂರಿನಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತ ನಂತರ ನಾನು ಯಲ್ಲಾಪುರಕ್ಕೆ ಹೋಗಿದ್ದು. ನನ್ನ ಮೊದಲ ಭೇಟಿ ಅದು. ಯಲ್ಲಾಪುರಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದು ಗೆಳೆಯ ಪ್ರಮೋದ್ ಹೆಗಡೆ, ರಾಮಕೃಷ್ಣ ಹೆಗಡೆಯವರ ಹತ್ತಿರ ಸಂಬಂಧಿ.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಸ್ವಲ್ಪ ದಿನಗಳ ಮುಂಚೆ ಪ್ರಮೋದ್ ಹೆಗಡೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅವರು ಒಮ್ಮೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪರಿಷತ್ ಅಧ್ಯಕ್ಷರೂ ಆಗಿದ್ದವರು. ಚುನಾವಣೆಯಲ್ಲಿನ ಸೋಲು ನನಗೆ ಭಾರಿ ಮುಖಭಂಗ, ಅವಮಾನ ಮತ್ತು ತೀವ್ರ ಬೇಸರಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಅವರು ನನ್ನನ್ನು ಯಲ್ಲಾಪುರಕ್ಕೆ ಕರೆದರು. ಆ ಸ್ಥಳದ ಸಂಪರ್ಕಕ್ಕೆ ನನ್ನನ್ನು ಹೆಚ್ಚು ಒಳಗುಮಾಡಿದ್ದೂ ಅವರೇ. ಕಾಡಿನ ನಡುವೆ ಅವರು ಕೊಠಡಿಗಳನ್ನು ಇಟ್ಟುಕೊಂಡಿದ್ದಾರೆ. ಅದರ ಹೆಸರು ‘ನಿಸರ್ಗ’.

ಅಲ್ಲಿಗೆ ಸ್ನೇಹಿತರ ಜತೆ ತೆರಳಿದೆ. ಆ ಸ್ನೇಹಿತರು ಸಂಗೀತಗಾರರು. ಅದರಲ್ಲೂ ಮುಕೇಶ್ ಅವರಂಥ ಪ್ರಸಿದ್ಧರ ಹಾಡುಗಳನ್ನು ಚೆನ್ನಾಗಿ ಬಲ್ಲವರು. ರಾತ್ರಿಯ ನೀರವ, ಕಾಡು, ನೀರು; ಜತೆಗೆ ಮುಕೇಶ್ ಹಾಡುಗಳು ಮನಸ್ಸಿಗೆ ಆಹ್ಲಾದದ ಅನುಭೂತಿಯನ್ನು ದಕ್ಕಿಸಿಕೊಟ್ಟಿತು. ಅರೆಬೈಲು ಘಟ್ಟ ಸೇರಿದಂತೆ ಯಲ್ಲಾಪುರದ ಕಾನನ, ಶಿರ್ಲೆ, ಮಾಗೋಡು ಜಲಪಾತಗಳು, ಝರಿ ತೊರೆಗಳು ಸೇರಿದಂತೆ ಆ ಪರಿಸರದಲ್ಲಿ ಏನೇನು ನೋಡಲು ಸಾಧ್ಯವೋ ಎಲ್ಲೆಡೆಯೂ ಸುತ್ತಾಟ ನಡೆಸಿದೆ. ಮನಸ್ಸು ತಂಪಾಯಿತು.

ಮೊದಲ ಭೇಟಿಯ ನಂತರ ಯಲ್ಲಾಪುರ ಪದೇ ಪದೇ ಸೆಳೆಯುವ ನೆಲೆಯಾಗಿ ಮನಸ್ಸಿನಲ್ಲಿ ಉಳಿದಿದೆ. ಪಶ್ಚಿಮ ಘಟ್ಟವನ್ನು ಹೊದ್ದಿರುವ ಈ ತಾಲ್ಲೂಕಿಗೆ ಇಲ್ಲಿಯವರೆಗೂ ಹನ್ನೆರಡು ಬಾರಿ ಭೇಟಿ ನೀಡಿದ್ದೇನೆ. ಹಸಿರು ವನಸಿರಿ, ಝರಿಗಳ ಮೈ ಸಿರಿಯನ್ನು ಆಹ್ಲಾದಿಸಿದ್ದೇನೆ;

ಪ್ರೀತಿಸಿದ್ದೇನೆ. ಒಮ್ಮೆ ಭೇಟಿ ನೀಡಿದರೆ ಕನಿಷ್ಠ ಐದು ದಿನ ಉಳಿದುಕೊಳ್ಳುವೆ. ಹೊಸತು–ಹಳತು ಎನ್ನದೇ ಪ್ರತಿ ಬಾರಿಯ ಭೇಟಿಯಲ್ಲಿ ಎಲ್ಲ ಸ್ಥಳಗಳನ್ನೂ ಸುತ್ತುವೆ. ಮಾಗೋಡು ಜಲಪಾತಕ್ಕೆ ಸಾಗುವ ಹಾದಿಯಲ್ಲಿ ಸ್ವಲ್ಪ ಒಳಹೊಕ್ಕರೆ ಕಾಣುವ ಕವಡಿಕೆರೆ ಮತ್ತು ಅಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದ ಸುತ್ತಲಿನ ಪರಿಸರದಲ್ಲಿ ಐದು ದಿನಗಳ ಕಾಲ ‘ಮುಕ್ತ’ ಧಾರಾವಾಹಿಯ ಚಿತ್ರೀಕರಣ ನಡೆಸಿದ್ದೇನೆ. ‘ಮುಕ್ತ’ದಲ್ಲಿ ಒಂದು ಕೊಲೆಯ ಸನ್ನಿವೇಶ ಬರುತ್ತದೆ. ಆ ಸಂದರ್ಭದಲ್ಲಿ ನನಗೆ ಸೂಕ್ತವಾಗಿ ಕಂಡಿದ್ದು ಆ ಸ್ಥಳ. ಅಪ್ಪಟ ಮಲೆನಾಡಿನ ಆ ಪ್ರದೇಶದಲ್ಲಿ ತುಸು ಬಯಲು ಇರುವುದರಿಂದ ಚಿತ್ರೀಕರಣಕ್ಕೆ ಅನುಕೂಲವಾಯಿತು. ಮಾಗೋಡು ಜಲಪಾತದ ಬಳಿ ‘ಮತದಾನ’ ಚಿತ್ರದ ಚಿತ್ರೀಕರಣ ನಡೆಸಿದ್ದೇನೆ.

ಒಟ್ಟಾರೆ ಚಿತ್ರೀಕರಣಕ್ಕಾಗಿ ಅಲ್ಲಿಗೆ ತೆರೆಳಿದ್ದು ಎರಡು ಬಾರಿ ಅಷ್ಟೇ. ನಾನು ಕಿರುತೆರೆಯಲ್ಲಿ ತೊಡಗಿರುವುದರಿಂದ ಯಲ್ಲಾಪುರದಲ್ಲಿ ಹೆಚ್ಚು ಚಿತ್ರೀಕರಣ ಮಾಡಲು ಸಾಧ್ಯವಾಗಿಲ್ಲ.

ಯಲ್ಲಾಪುರ ಕಣ್ಣು ಕೋರೈಸುವ ದಟ್ಟ ಕಾಡಿನ ಪ್ರದೇಶ. ಸಾಮಾನ್ಯವಾಗಿ ಎಲ್ಲ ಕಾಡುಗಳನ್ನು ನೋಡುತ್ತಾ ನೋಡುತ್ತಾ ಹೋದಂತೆ ಚಿರಪರಿಚಿತವಾಗುತ್ತವೆ. ಎಲ್ಲ ಕಾಡುಗಳಿಗೂ ಒಂದೇ ಗುಣ. ಪರಿಚಿತವಾದ ಸ್ಥಳಗಳಿಗೆಯೇ ಹೆಚ್ಚು ಹೆಚ್ಚು ತೆರಳಬೇಕು ಎಂದು ನನಗೆ ಅನಿಸುತ್ತದೆ. ಹಸಿರು–ನೀರಿನ ಹೊರತಾಗಿ ಅಲ್ಲಿನ ಜನರ ಬಾಂಧವ್ಯ ಹೆಚ್ಚು ಆಪ್ತವಾಗಿವೆ. ಜನರು ನನ್ನೊಂದಿಗೆ ಆತ್ಮೀಯವಾಗಿ ಬೆರೆಯುವರು. ಗಾಂಧಿ ಬಜಾರಿನ ಗೋವಿಂದಪ್ಪ ರಸ್ತೆಯಲ್ಲಿ ಲಂಕೇಶ್ ಸಿಗುವರು ಎನ್ನುವ ಕಾರಣಕ್ಕೆ ಆ ರಸ್ತೆ ನನಗೆ ಹೆಚ್ಚು ಪ್ರಿಯವಾಗುತ್ತಿತ್ತು. ಆದರೆ ಲಂಕೇಶ್ ಸಾವಿನ ನಂತರ ಆ ರಸ್ತೆ ಆಪ್ತವಾಗಲಿಲ್ಲ. ಎಂ.ಜಿ. ರಸ್ತೆಯಲ್ಲೂ ಲಂಕೇಶ್ ಸಿಗುತ್ತಿದ್ದರು. ಆದರೆ ಗಾಂಧಿ ಬಜಾರಿನಲ್ಲಿ ಅವರು ಸಿಗುತ್ತಿದ್ದ ಕ್ಷಣಗಳೇ ಹೆಚ್ಚು ಇಷ್ಟವಾಗುತ್ತಿದ್ದುದು. ಈ ರೀತಿ ಮನುಷ್ಯ ಸಂಬಂಧಗಳ ಆತ್ಮೀಯತೆ ಮತ್ತು ಪ್ರೀತಿಯನ್ನು ಯಲ್ಲಾಪುರ ನನಗೆ ಕೊಟ್ಟಿದೆ.

ಅಲ್ಲಿ ಸಾಹಿತ್ಯದ ಘಮ ಹೆಚ್ಚಿದೆ. ಅಲ್ಲಿನ ಜನರು ಸಾಹಿತ್ಯದ ಸಂಪರ್ಕಕ್ಕೆ ಬೇಗ ಸಿಗುವರು. ಸಂಗೀತದ ಆಸಕ್ತಿಯೂ ಅಪಾರವಾಗಿಯೇ ಇದೆ. ಆದ್ದರಿಂದ ಅವರ ಜತೆ ಸಂವಹನವೂ ಇಷ್ಟವಾಗುತ್ತದೆ ಮತ್ತು ಸುಲಭವಾಗುತ್ತದೆ. ಸಾಮಾನ್ಯವಾಗಿ ಈ ಪ್ರಾಕೃತಿಕ ಬೀಡಿಗೆ ಅಕ್ಟೋಬರ್ ಅವಧಿಯಲ್ಲಿ ಭೇಟಿ ನೀಡಿದ್ದೇನೆ. ಆಗ ಒಂದು ದಿನ ಮಳೆ ಇದ್ದರೆ ಮತ್ತೊಂದು ದಿನ ಮೋಡ ಕಟ್ಟುವುದಿಲ್ಲ. ಮಳೆಗಾಲದಲ್ಲಿ ಸ್ನೇಹಿತರು ಜತೆಗಿದ್ದರೆ ಹೋಗುವೆ. ಇಲ್ಲದಿದ್ದರೆ ಮಳೆ ಮುಗಿದ ನಂತರ ಪಯಣ.

ಪದೇ ಪದೇ ಅಲ್ಲಿಗೆ ಹೋಗಬೇಕು, ನೀರು ಮತ್ತು ಕಾಡಿನ ನೀರವವನ್ನು ಅನುಭವಿಸಬೇಕು ಎನ್ನುವ ಅಪೇಕ್ಷೆ ಮೂಡುತ್ತದೆ. ಸಮಯ ಮತ್ತು ಬಿಡುವು ಸಿಕ್ಕಾಗ ಅಲ್ಲಿಗೆ ಹೋಗುವೆ. ಅಲ್ಲಿನ ಪ್ರಾಕೃತಿಕ ಸ್ಥಳಗಳಿಗೆ ಪ್ರವಾಸಿತಾಣದ ಸ್ಪರ್ಶ ಹೆಚ್ಚು ಸಿಕ್ಕಿಲ್ಲ. ಹಾಗೇ ಇದ್ದರೆ ವಾಸಿ ಅನಿಸುತ್ತದೆ.
ಯಲ್ಲಾಪುರದ ಪ್ರವಾಸಿ ಆಕರ್ಷಣೆಗಳು

ಶಿರ್ಲೆ ಜಲಪಾತ, ಮಾಗೋಡು ಜಲಪಾತ

ಸಾತೊಡ್ಡಿ ಜಲಪಾತ, ಲಾಲ್‌ಗುಳಿ ಜಲಪಾತ
ಅರೆಬೈಲು ಘಟ್ಟ, ಕವಡಿಕೆರೆ
ಜೇನುಕಲ್ಲು ಗುಡ್ಡ, ಕಳಚೆಯ ಕಲ್ಲುಬಂಡೆ
ಬ್ರಹ್ಮಕುಮಾರಿ ತಪೋವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT