ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ಬಾನಾಡಿಗೆ ನಗರದಲ್ಲಿ ಆರೈಕೆ

ಮರದ ಪ್ರತಿಬಿಂಬಕ್ಕೆ ಮತ್ತೆ ಮತ್ತೆ ಡಿಕ್ಕಿ: ಗಾಜಿನ ಗೋಡೆಯಿಂದ ನಿತ್ಯ 5–6 ಪಕ್ಷಿಗಳ ಸಾವು
Last Updated 26 ಏಪ್ರಿಲ್ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಂದಾಪುರದ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಆ ವಿದ್ಯಮಾನವನ್ನು ನೋಡಲು ಹಲವರು ಸೇರಿದ್ದರು. ಪುಟ್ಟ ಪಕ್ಷಿಯೊಂದು ಹಾರಿಬಂದು ಆ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿತ್ತು! ಪೆಟ್ಟು ತಿಂದು ಬಿದ್ದರೂ ಮತ್ತೆ ರೆಕ್ಕೆ ಬಿಚ್ಚಿ ಆ ಕಟ್ಟಡದತ್ತ ಹಾರುತ್ತಿತ್ತು. ಲಗಾಟೆ ಹೊಡೆದು ಬೀಳುತ್ತಿತ್ತು. ಅದು ಹಿಮಾಲಯದಿಂದ ಬಂದ ನವರಂಗಿ ಪಕ್ಷಿ (ಇಂಡಿಯನ್‌ ಪಿಟ್ಟಾ).

ಬಿರು ಬಿಸಿಲಿನಲ್ಲಿ ಕಟ್ಟಡದ ಗೋಡೆ ತುಂಬಾ ಹರಡಿಕೊಂಡಿದ್ದ ಗ್ಲಾಸ್‌ನಲ್ಲಿ ಮರದ ಪ್ರತಿಬಿಂಬ ಕಂಡು, ಅದು ನಿಜವಾದ ಮರ ಎಂಬ ಭ್ರಮೆಯಲ್ಲಿ ಅದರ ಎಲೆ ಮರೆಯೊಳಗೆ ಅಡಗಿಕೊಳ್ಳಲು ಅದು ಮತ್ತೆ ಮತ್ತೆ ಯತ್ನಿಸುತ್ತಿತ್ತು. 2–3 ಸಲ ಪ್ರಯತ್ನ ನಡೆಸಿ ಸುಸ್ತು ಹೊಡೆದು ಬಿದ್ದ ಆ ಬಾನಾಡಿಯನ್ನು ಕೊನೆಗೆ ರಕ್ಷಿಸಿದ್ದು ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ.

‘ಗೋಡೆಗೆ ಮತ್ತೆ ಮತ್ತೆ ಡಿಕ್ಕಿ ಹೊಡೆದು ಕಾಲಿಗೆ ಪೆಟ್ಟು ಮಾಡಿಕೊಂಡು, ಬಾಯಾರಿ ಬಳಲಿದ್ದ ಆ ನವರಂಗಿಯನ್ನು ಅದೇ ಮಾರ್ಗವಾಗಿ ಹೊರಟಿದ್ದ ಶಿವಕುಮಾರ್‌ ಎಂಬುವವರು ಕಾರಿನಲ್ಲಿ ಎತ್ತಿಕೊಂಡು ಬಂದರು. ಮಾರ್ಗಮಧ್ಯೆ ಆ ಪಕ್ಷಿಗಾಗಿ ಕಾಯುತ್ತಿದ್ದ ನಾವು, ಶಿವಕುಮಾರ್‌ ಅವರಿಂದ ಆ ಪಕ್ಷಿಯನ್ನು ಪಡೆದುಕೊಂಡು ಆರೈಕೆ ಮಾಡಿದೆವು. ಮತ್ತೆ ಚೇತರಿಸಿಕೊಂಡ ಆ ಬಾನಾಡಿಯನ್ನು ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟುಬಂದೆವು’ ಎಂದು ವಿವರಿಸುತ್ತಾರೆ ಬಿಬಿಎಂಪಿ ಅರಣ್ಯ ಘಟಕದ ವನ್ಯಜೀವಿ ಸಂರಕ್ಷಕ ಪ್ರಸನ್ನಕುಮಾರ್‌.

‘ಹೊರಗಿನಿಂದ ಬರುವ ಪಕ್ಷಿಗಳಿಗೆ ನಗರದ ವಾತಾವಾರಣ ದಿಕ್ಕು ತಪ್ಪಿಸುತ್ತದೆ. ಗಾಜಿನ ಗೋಡೆಗೆ ಡಿಕ್ಕಿ ಹೊಡೆದು ಪ್ರತಿದಿನ ನಾಲ್ಕಾರು ಪಕ್ಷಿಗಳಾದರೂ ಸಾಯುತ್ತಿವೆ. ಅದೇ ಕಾಗೆ ಹಾಗೂ ಪಾರಿವಾಳ ನಗರದ ವಾತಾವರಣಕ್ಕೆ ಹೊಂದಿಕೊಂಡುಬಿಟ್ಟಿವೆ. ಅವುಗಳು ಗಾಜಿನ ಗೋಡೆಗೆ ಡಿಕ್ಕಿ ಹೊಡೆಯುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

ನಿರ್ಜಲೀಕರಣದಿಂದ ಬೇಸಿಗೆಯಲ್ಲಿ ಪಕ್ಷಿಗಳು ಜೀವ ಕಳೆದುಕೊಳ್ಳುವುದು ಹೆಚ್ಚು. ಬೇಸಿಗೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹದ್ದುಗಳು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತವೆ. ಮಣ್ಣಿನ ಮಡಿಕೆಗಳಲ್ಲಿ ನೀರಿಟ್ಟರೆ ಅವುಗಳು ಜೀವ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ’ ಎಂದು ಹೇಳುತ್ತಾರೆ.

ಆಕಾಶ ಸುಂದರಿ: ನವರಂಗಿ ಪಕ್ಷಿ ಚಳಿಗಾಲದಲ್ಲಿ ಹಿಮಾಲಯದಿಂದ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ಕಾಡುಗಳಿಗೆ ವಲಸೆ ಬರುತ್ತದೆ. ಹಾಗೆ ವಲಸೆ ಬರುವಾಗ ಈ ‘ಆಕಾಶ ಸುಂದರಿ’ ಒಬ್ಬಂಟಿ ಆಗಿರುತ್ತದೆ. ಬಾನಾಡಿಗಳಲ್ಲೇ ಅತ್ಯಂತ ಸುಂದರವಾದ ಈ ಪಕ್ಷಿ, ನವರಂಗಗಳಿಂದ ಕಂಗೊಳಿಸುತ್ತದೆ. ಆದರೆ, ಈ ಸುಂದರಿಯದು ತುಂಬಾ ಸಂಕೋಚದ ಸ್ವಭಾವ. ಆದ್ದರಿಂದಲೇ ದಟ್ಟವಾದ ಪೊದೆಗಳಲ್ಲಿ ಅಡಗಿ ಕುಳಿತಿರುತ್ತದೆ.

ಪೊದೆಗಳ ಕೆಳಗೆ ತರಗೆಲೆಗಳನ್ನು ಎತ್ತಿಹಾಕುತ್ತಾ ಅದರಡಿ ಹುದುಗಿರುವ ಕೀಟಗಳನ್ನು ಅದು ಹಿಡಿಯುತ್ತದೆ. ದೇಹದ ಆಕಾರಕ್ಕೆ ಹೋಲಿಸಿದರೆ ಉದ್ದನೆಯ ಕಾಲು ಹೊಂದಿರುವ ನವರಂಗಿ ಹಾರುವುದಕ್ಕಿಂತ ನೆಲದಲ್ಲಿ ಓಡಾಡುವುದೇ ಹೆಚ್ಚು. ದಣಿವಿಲ್ಲದೆ ಸಾವಿರಾರು ಕಿ.ಮೀ.ವರೆಗೆ ಅದು ಕುಪ್ಪಳಿಸಿಕೊಂಡು ಹೋಗುತ್ತದೆ!

ಬಿಂಬವ ಕಂಡು...: ನಗರ ಪ್ರದೇಶಗಳಲ್ಲಿನ ದೊಡ್ಡ ಕಟ್ಟಡಗಳ ಮೇಲಿರುವ ಕನ್ನಡಿಗಳಲ್ಲಿ ಮೂಡಿರುವ ಮರಗಳ ಬಿಂಬವನ್ನು ಮರ ಎಂದು ಭಾವಿಸಿ ಅವುಗಳ ಮೇಲೆ ಕೂರಲು ಹೋಗಿ ಬಹಳಷ್ಟು ಹಕ್ಕಿಗಳು ಅಪಘಾತಕ್ಕೀಡಾಗುತ್ತವೆ. ಕಾಲು, ಮುಖ, ರೆಕ್ಕೆ ಎಲ್ಲೆಂದರಲ್ಲಿ ಪೆಟ್ಟು ಮಾಡಿಕೊಳ್ಳುತ್ತವೆ.

‘ಅಪಘಾತಕ್ಕೀಡಾಗಿ ಬಿದ್ದಿರುವ ಈ ಹಕ್ಕಿಗಳು ತುರ್ತು ಚಿಕಿತ್ಸೆ ಹಾಗೂ ಆಹಾರ ಸಿಗದೆ ಮರಣ ಹೊಂದುತ್ತವೆ. ಜನಗಳು ಯಾವುದೋ ಒಂದು ಹಕ್ಕಿ ಬಿದ್ದಿದೆ ಎಂದು ನಿರ್ಲಕ್ಷ್ಯ ತೋರುವುದರಿಂದ ಅಪಘಾತಕ್ಕೆ ಸಿಲುಕಿದ ಹೆಚ್ಚಿನ ಬಾನಾಡಿಗಳನ್ನು ಉಳಿಸಲಾಗುವುದಿಲ್ಲ. ಇಂತಹ ಅಪರೂಪದ ಹಕ್ಕಿಯನ್ನು ರಕ್ಷಿಸಲು ಶಿವಕುಮಾರ್ ಅವರಂತಹ ಕೆಲವು ಕಾಳಜಿಯುಳ್ಳ ಕೆಲವೇ ನಾಗರಿಕರು ಕರೆಮಾಡಿ ಸಮಯಪ್ರಜ್ಞೆ ತೋರುತ್ತಾರೆ’ ಎಂದು ಪ್ರಸನ್ನಕುಮಾರ್‌ ಹೇಳುತ್ತಾರೆ.

ರಂಗು ರಂಗಿನ ನವರಂಗಿ
ಉಜ್ವಲ ಬಣ್ಣಗಳುಳ್ಳ, ಗಿಡ್ಡ ಕತ್ತಿನ ಪಕ್ಷಿ. ಇದು ಗಟ್ಟಿಯಾದ ತುಸು ಬಾಗಿದ ಕೊಕ್ಕನ್ನೂ ನೀಳವಾದ ಬಲಿಷ್ಠ ಕಾಲುಗಳನ್ನೂ ಹೊಂದಿರುತ್ತದೆ. ಅದರ ಎದೆ ಮತ್ತು ಹೊಟ್ಟೆ ಕಂದು ಹಳದಿ ಬಣ್ಣವನ್ನು ಹೊಂದಿದ್ದು, ರೆಕ್ಕೆಯು ಹಸಿರು ವರ್ಣ ಹೊಂದಿದೆ. ಕಣ್ಣಿನಿಂದ ಕತ್ತಿನ ಮೇಲ್ಭಾಗದವರೆಗೆ ಕಪ್ಪು ಪಟ್ಟಿ ಇರುತ್ತದೆ.

ನೀಲಿ ಬಾಲದ ತುದಿಯಲ್ಲಿ ಕಪ್ಪು ಅಂಚು ಇರುತ್ತದೆ. ಕತ್ತಿನ ಮುಂಭಾಗದಲ್ಲಿ ಬಿಳಿ ಬಣ್ಣವಿರುತ್ತದೆ. ನೆತ್ತಿಯಲ್ಲಿ ಕಪ್ಪು ಬಣ್ಣ, ಬಾಲದ ಕೆಳಭಾಗದಲ್ಲಿ ರಕ್ತಗೆಂಪು ಬಣ್ಣವಿರುತ್ತದೆ. ಹಾರುವಾಗ ರೆಕ್ಕೆಗಳ ತುದಿಯಲ್ಲಿ ಬಿಳಿ ಮಚ್ಚೆಗಳು ಸ್ಪಷ್ಟವಾಗಿ ಕಾಣುತ್ತವೆ ಎಂದು ಅದರ ಬಣ್ಣನೆಗೆ ನಿಲ್ಲುತ್ತಾರೆ ಪ್ರಸನ್ನಕುಮಾರ್‌.

ಉತ್ತರ ಪಾಕಿಸ್ತಾನದಿಂದ ನೇಪಾಳ ಮತ್ತು ಸಿಕ್ಕಿಂವರೆಗೂ ನವರಂಗಿ ಪಕ್ಷಿಗಳ ಆವಾಸಸ್ಥಾನ ವ್ಯಾಪಿಸಿದೆ. ಕೆಲವೊಮ್ಮೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟಗಳಲ್ಲಿಯೂ ಅವು ಸಂತಾನೋತ್ಪತ್ತಿ ನಡೆಸುತ್ತವೆ. ಚಳಿಗಾಲದಲ್ಲಿ ದಕ್ಷಿಣ ಭಾರತ ಮತ್ತು ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ವಲಸೆ ಹೋಗುವ ಸಮಯದಲ್ಲಿ ನಗರ ಪ್ರದೇಶಗಳಲ್ಲಿನ ಉದ್ಯಾನವನಗಳಲ್ಲಿ ತಂಗಿ ಪ್ರಯಾಣ ಮುಂದುವರೆಸುವುದು ಇವುಗಳ ಅಭ್ಯಾಸ.

ಪಕ್ಷಿಗಳ ರಕ್ಷಣೆಗೆ ಸಂಪರ್ಕಿಸಬೇಕಾದ ಸಂಖ್ಯೆ: 99027 94711

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT