ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ವಿಜ್ಞಾನಿ, ಗಾಂಧಿವಾದಿ, ಸ್ವದೇಶಿ ಚಿಂತಕ ಪ್ರೊ.ಎ.ಆರ್.ವಾಸುದೇವಮೂರ್ತಿ

Last Updated 25 ಜನವರಿ 2014, 19:30 IST
ಅಕ್ಷರ ಗಾತ್ರ

ವಿಜ್ಞಾನಿಗಳ ಸಂಶೋಧನೆ ಎಂದರೆ ಅದು ಜನರಿಗೆ ಸುಲಭವಾಗಿ ಅರ್ಥವಾಗದ್ದು; ವಿಜ್ಞಾನಿಗಳು ದಂತಗೋಪುರದಲ್ಲಿ ಕುಳಿತು ತಮ್ಮ ಪಾಡಿಗೆ ಸಂಶೋಧನೆಯಲ್ಲಿ ತೊಡಗುತ್ತಾರೆ ಅನ್ನುವ ಮಾತು ಇದೆ. ಈ ಅನಿಸಿಕೆಗೆ ತದ್ವಿರುದ್ಧವಾಗಿ ಬದುಕಿದವರು ಜನಪರ ಕಾಳಜಿ ಹೊಂದಿದ ವಿಜ್ಞಾನಿ ಪ್ರೊ.ಎ.ಆರ್.ವಾಸುದೇವಮೂರ್ತಿ.

ಸಿಲಿಕಾನ್ ವಸ್ತುವಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ ಪ್ರಮುಖ ವಿಜ್ಞಾನಿ ಅವರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಜನರ ಕಲ್ಯಾಣಕ್ಕಾಗಿ ಇರಬೇಕು, ಜನಸಾಮಾನ್ಯರಿಗೆ ಇದರ ಫಲ ಸಿಗಬೇಕು, ಕನ್ನಡದಲ್ಲಿ ವಿಜ್ಞಾನ ಬೆಳೆಯಬೇಕು, ವೈಜ್ಞಾನಿಕ ಸಂಶೋಧನೆಯಲ್ಲಿ ನಾವು ಸ್ವಾವಲಂಬಿಗಳಾಗಬೇಕು ಎನ್ನುವುದು ಇತ್ತೀಚೆಗೆ ನಿಧನರಾದ ಅವರ ಆಶಯವಾಗಿತ್ತು.

ಅದಕ್ಕಾಗಿಯೇ ಪ್ರೊ.ಎಂ.ಎ.ಸೇತುರಾವ್ ಅವರೊಂದಿಗೆ ಕೂಡಿಕೊಂಡು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಅದರ ಚಟುವಟಿಕೆಗಳು, ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಅವರು ಎಲ್ಲೇ ಹೋಗಲಿ, ಮಾತನಾಡುವ ವಿಷಯ ಮಾತ್ರ ಸಿಲಿಕಾನ್‌ಗೆ ಸಂಬಂಧಿಸಿರುತ್ತಿತ್ತು. ಸಿಲಿಕಾನ್ ವಸ್ತುವನ್ನು ಪ್ರದರ್ಶಿಸುತ್ತಾ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆಯನ್ನು ಸಾಧಿಸಲು ಅದು ಹೇಗೆ ಸಹಕಾರಿ ಎಂಬುದನ್ನು ತನ್ಮಯತೆಯಿಂದ ಅವರು ವಿವರಿಸುತ್ತಿದ್ದರು.

ಗಾಂಧೀಜಿ ಹಾಗೂ ಅವರ ಚಿಂತನೆಗಳ ಬಗ್ಗೆ ಪ್ರೊ.ವಾಸುದೇವಮೂರ್ತಿಯವರಿಗೆ ಅಪಾರವಾದ ಆಸಕ್ತಿ ಇತ್ತು. ಸಿಲಿಕಾನ್ ವಸ್ತುವಿಗೆ ಇತರ ವಸ್ತುವನ್ನು ಸಣ್ಣ ಪ್ರಮಾಣದಲ್ಲಿ ಡೋಪಿಂಗ್ ಮಾಡಿದಾಗ ಅದರ ಗುಣಮಟ್ಟ ಉತ್ತಮಗೊಳ್ಳುತ್ತದೆ. ಹಾಗೆಯೇ ಒಬ್ಬ ಗಾಂಧಿ ದೇಶವನ್ನು ಡೋಪಿಂಗ್ ವಸ್ತುವಿನ ಮಾದರಿಯಲ್ಲಿ ದೇಶವನ್ನೇ ಬದಲಿಸಿದರು ಎಂದು ಮೂರ್ತಿ ಅವರು ಹೇಳುತ್ತಿದ್ದರು.

ಅತ್ತಿಗನಾಳ ರಾಮರಾವ್ ವಾಸುದೇವಮೂರ್ತಿ ಅವರು ಹುಟ್ಟಿದ್ದು ೧೯೨೫ರ ಡಿಸೆಂಬರ್ ೨೯ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ. ಅವರ ತಂದೆ ರಾಮರಾವ್, ತಾಯಿ ಗೌರಮ್ಮ. ಅವರದು ತುಂಬ ದೊಡ್ಡ ಕುಟುಂಬ.

ಚಿತ್ರದುರ್ಗದಲ್ಲಿ ಶಾಲಾ ಶಿಕ್ಷಣವನ್ನು ಪಡೆದು ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ ಪ್ರೊ.ಸಂಜೀವರಾವ್ ಅವರ ಮಾರ್ಗದರ್ಶನದಲ್ಲಿ, ಗಂಧಕದ ಕುರಿತು ಆಳವಾದ ಅಧ್ಯಯನ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಡಿ.ಎಸ್.ಸಿ ಪದವಿ ಪಡೆದರು. ೧೯೬೨ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗ(Inorganic and Physical Chemistry)ದಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದರು.

೧೯೭೧ ರಿಂದ ೭೭ರವರೆಗೆ ವಿಭಾಗದ ಮುಖ್ಯಸ್ಥರಾಗಿ ಮತ್ತು ೭೭ ರಿಂದ ೮೧ರವರೆಗೆ ರಸಾಯನ ಮತ್ತು ಜೈವಿಕ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ೧೯೮೬ರಲ್ಲಿ ನಿವೃತ್ತರಾದರೂ ತಮ್ಮ ಆರೋಗ್ಯ ಸಹಕರಿಸುವವರೆಗೆ ಅವರು ಐ.ಪಿ.ಸಿ ವಿಭಾಗದ ಜೊತೆಗೆ ಸಂಪರ್ಕ ಇರಿಸಿಕೊಂಡು ತಮ್ಮ ಕೆಲಸವನ್ನು ಮುಂದುವರೆಸಿದರು.

ಮೂಲಭೂತ ರಸಾಯನಶಾಸ್ತ್ರದಲ್ಲಿ ಸಂಶೋಧನೆ ಮಾಡುವುದರ ಜೊತೆಗೆ ಸಂಶೋಧನಾ ಸಂಸ್ಥೆಗಳು ಮತ್ತು ಕಾರ್ಖಾನೆಗಳ ನಡುವಿನ ಸಂಬಂಧವನ್ನು ಬೆಸೆಯುವ ಪ್ರಮುಖ ಕೆಲಸವನ್ನು ವಾಸುದೇವಮೂರ್ತಿ ಮಾಡಿದರು. ಭೌತಶಾಸ್ತ್ರ ವಿಭಾಗದ ಪ್ರೊ.ಜಿ.ಸೂರ್ಯನ್ ಅವರ ಸಹ ಭಾಗಿತ್ವದಲ್ಲಿ ದ್ಯುತಿವಿದ್ಯುಜ್ಜನಕ ಯೋಜನೆಗೆ ಅಗತ್ಯವಾದ ಸಿಲಿಕಾನ್ ಆಧಾರಿತ ವಸ್ತುಗಳಾದ ಸಿಲಿಕಾನ್ ಟೆಟ್ರಕ್ಲೋರೈಡ್, ಇಥೈಲ್ ಸಿಲಿಕೇಟ್, ಫ್ಯೂಮ್ಡ್ ಸಿಲಿಕ ಮತ್ತು ಸಿಲಿಕಾನ್ ಬಿಲ್ಲೆಗಳ ಉತ್ಪಾದನೆಗೆ ಅಗತ್ಯವಾದ ತಂತ್ರಜ್ಞಾನವನ್ನು ಅವರು ಅಭಿವೃದ್ಧಿಪಡಿಸಿದರು.

ಈ ತಂತ್ರಜ್ಞಾನವನ್ನು ಅವರು ಮೆಟ್ಟೂರು ಕೆಮಿಕಲ್ಸ್ ಮತ್ತು ಇಂಡಸ್ಟ್ರಿಯಲ್ ಕಾರ್ಪೊರೇಷನ್‌ಗೆ ಒದಗಿಸಿದರು. ಜೊತೆಗೆ ಸ್ಪಟಿಕ ಮತ್ತು ಇತರ ಆಕ್ಸೈಡ್‌ಗಳ ಜಲೋಷ್ಣೀಯ (Hydrothermal) ಸಂಶ್ಲೇಷಣೆಯ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿದರು. ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಹಿಂದೂಸ್ತಾನ್ ಏನೋನಾಟಿಕ್ಸ್‌ಲಿಮಿಟೆಡ್ ಮತ್ತು ಕಾರೈಕುಡಿಯಲ್ಲಿರುವ ಕೇಂದ್ರೀಯ ವಿದ್ಯುದ್ರಾಸಾಯನಿಕ (Electro chemical) ಸಂಶೋಧನಾ ಸಂಸ್ಥೆ, ಸೇರಿದಂತೆ ಅನೇಕ ಸಂಸ್ಥೆಗಳಿಗೆ ಅವರು ಸಮಾಲೋಚಕರಾಗಿ ಕೆಲಸ ಮಾಡಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಐ.ಪಿ.ಸಿ ವಿಭಾಗ ಮತ್ತು ಲಂಡನ್ನಿನ ಬರ್ಬೆಕ್ ಕಾಲೇಜಿನ ನಡುವಿನ ಸಹಕಾರಿ ಸಂಶೋಧನೆಯನ್ನು ಅವರು ಪ್ರಾರಂಭಿಸಿದರು. ಇನ್ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಅವರು ರಚಿಸಿದ್ದಾರೆ.    ಎ.ಆರ್.ವಾಸುದೇವಮೂರ್ತಿಯವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ.ಎಚ್.ನರಸಿಂಹಯ್ಯನವರ ಸಹಪಾಠಿಯಾಗಿದ್ದರು.

ನರಸಿಂಹಯ್ಯನವರು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿದ್ದ ಸಂದರ್ಭದಲ್ಲಿ(೧೯೭೬)ಪವಾಡ ಮತ್ತು ಮೂಢನಂಬಿಕೆಗಳನ್ನು ಪರೀಕ್ಷೆ ಮಾಡಿ ಸತ್ಯಾನ್ವೇಷಣೆ ಮಾಡುವ ಉದ್ದೇಶದಿಂದ ಒಂದು ಸಮಿತಿಯನ್ನು ರಚಿಸಿದರು. ಡಾ.ಎಚ್.ನರಸಿಂಹಯ್ಯ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ವಾಸುದೇವಮೂರ್ತಿ ಈ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

ಅವರು ಸಂಸ್ಕೃತದಲ್ಲಿ ಅಪಾರ ಜ್ಞಾನವನ್ನು ಪಡೆದಿರುವುದರ ಜತೆಗೆ ವೇದಾಧ್ಯಯನವನ್ನು ಮಾಡಿದ್ದರು. ಭಾರತೀಯ ಇತಿಹಾಸದಲ್ಲಿ ರಸಾಯನ ಶಾಸ್ತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆ ಕುರಿತು ಅಧ್ಯಯನ ಮಾಡುವುದು ಅವರ ಆಸಕ್ತಿಯ ವಿಷಯವಾಗಿತ್ತು.

ಪಿ.ಕೆ.ಮಿಶ್ರ ಅವರ ಜೊತೆಗೂಡಿ ಭಾರತೀಯ ಪರಂಪರೆಯಲ್ಲಿ ರಸಾಯನ ಶಾಸ್ತ್ರ ಮತ್ತು ರಾಸಾಯನಿಕ ತಂತ್ರಜ್ಞಾನ ಎಂಬ ಕಿರುಪುಸ್ತಕವನ್ನು ಅವರು ರಚಿಸಿದ್ದರು. ಬೆಂಗಳೂರಿನ ಸಂಸ್ಕೃತ ಭಾರತಿ ಇದನ್ನು ಪ್ರಕಟಿಸಿತ್ತು. ಅವರದು ಅತ್ಯಂತ ಶಿಸ್ತಿನ ಜೀವನ. ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು  ಅಧ್ಯಯನ ನಡೆಸುತ್ತಿದ್ದರು.

ಮೂರ್ತಿಯವರಿಗೆ ೧೯೮೧ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಹಿರಿಯ ವಿದ್ಯಾರ್ಥಿ ಪ್ರಶಸ್ತಿ, ೧೯೮೧ರಲ್ಲಿ ಪ್ರತಿಷ್ಠಿತ ವಾಸ್ವಿಕ್ ಪ್ರಶಸ್ತಿ ಮತ್ತು ೧೯೯೮ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾಮಂಡಳಿಯಿಂದ ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಲಲಿತ ಅವರ ಪತ್ನಿ. ಅವರಿಗೆ ಇಬ್ಬರು ಪುತ್ರಿಯರು. ಮೊದಲ ಮಗಳು ಗೌರಿ ಸಂಸ್ಕೃತ ಅಧ್ಯಯನ ಮಾಡಿದ್ದು ಎರಡನೆಯ ಮಗಳು ಇಂದ್ರಾಣಿ ಭಾರತೀಯ ವಿಜ್ಞಾನ ಮಂದಿರದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಸದ್ಯ ಬೆಲ್ಜಿಯಂನಲ್ಲಿದ್ದಾರೆ. ಮೂರ್ತಿ ಅವರ ನಿಧನದಿಂದ ಒಬ್ಬ ದೂರದೃಷ್ಠಿಯುಳ್ಳ, ಸ್ವದೇಶಿ ಚಿಂತನೆಯ ಶ್ರೇಷ್ಠವಿಜ್ಞಾನಿಯನ್ನು ಕಳೆದುಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT